ವಿದ್ಯುತ್ ಕಾರ್ಮಿಕರ ಆಕ್ರೋಶ: ಕನಿಷ್ಠ ವೇತನ ಜಾರಿ, ಗುತ್ತಿಗೆ ಪದ್ಧತಿ ರದ್ದುಪಡಿಸಲು ಆಗ್ರಹ

ಬೆಂಗಳೂರು: ಕನಿಷ್ಠ ವೇತನ ಜಾರಿಗೊಳಿಸಬೇಕು, ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿದ್ಯುತ್ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಗಸ್ಟ್‌ 20 ರಂದು  ಪ್ರತಿಭಟನೆ ನಡೆಸಿದರು. ವಿದ್ಯುತ್

‘ಗುತ್ತಿಗೆ ಪದ್ಧತಿ ಬೇಡವೇ ಬೇಡ, ಕನಿಷ್ಠ ವೇತನ ಜಾರಿಯಾಗಲೇಬೇಕು’, ‘ಕಾರ್ಮಿಕರು ಗುಲಾಮರಲ್ಲ, ಕಾರ್ಮಿಕರನ್ನು ಕಾಯಂಗೊಳಿಸಲೇಬೇಕು’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಮೇ 22ರಂದು ಕನಿಷ್ಠ ವೇತನ ಪರಿಷ್ಕರಣೆ ಘೋಷಿಸಿದ್ದರೂ, ಇದೀಗ ಅದನ್ನು ಮರುಪರಿಶೀಲಿಸಲು ಮತ್ತೊಂದು ಸಮಿತಿ ರಚಿಸಿರುವುದು ಕಾರ್ಮಿಕರ ಶ್ರಮಕ್ಕೆ ಮಾಡಿದ ದ್ರೋಹ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈಗಾಗಲೇ ಈ ಕುರಿತು ಸಮಿತಿ ಇದ್ದರೂ ಮತ್ತೊಂದು ಸಮಿತಿ ರಚಿಸುವ ಮೂಲಕ ವೇತನ ಜಾರಿಯನ್ನು ವಿಳಂಬಗೊಳಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಾವುದೇ ಉದ್ಯಮ ಕನಿಷ್ಠ ವೇತನ ನೀಡಲು ಸಾಧ್ಯವಿಲ್ಲ ಎಂದಾದರೆ ಆ ಉದ್ಯಮವನ್ನು ನಡೆಸಬಾರದು ಎಂಬುದು ಸರ್ಕಾರದ ನಿಯಮ. ಇದೇ ನಿಯಮ ಸರ್ಕಾರಕ್ಕೂ ಅನ್ವಯಿಸಬೇಕು’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಸರ್ಕಾರವೇ ಮಾದರಿ ಉದ್ಯೋಗದಾತನಾಗಿ ಕಾರ್ಮಿಕ ಕಾನೂನುಗಳನ್ನು ಪಾಲಿಸಬೇಕು ಎಂದು ಆಗ್ರಹಿಸಿದರು.

ಹಲವು ವರ್ಷಗಳಿಂದ ಸೇವೆ ಆದರೆ, ಕಾಯಂ ಇಲ್ಲ

ವಿದ್ಯುತ್ ಕ್ಷೇತ್ರದಲ್ಲಿ 20ರಿಂದ 25 ವರ್ಷಗಳವರೆಗೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಾವಿರಾರು ಕಾರ್ಮಿಕರು ಇಂದಿಗೂ ಕಾಯಂ ನೌಕರರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.

ಕೆಪಿಟಿಸಿಎಲ್ ವ್ಯಾಪ್ತಿಯ 220 ಕೆವಿ, 110 ಕೆವಿ, 66 ಕೆವಿ ಮತ್ತು 33 ಕೆವಿ ವಿದ್ಯುತ್ ಕೇಂದ್ರಗಳಲ್ಲಿಯೂ ಗುತ್ತಿಗೆ ಕಾರ್ಮಿಕರು ಅಪಾಯಕಾರಿ ಕೆಲಸ ನಿರ್ವಹಿಸುತ್ತಿದ್ದಾರೆ. ಡಿಪ್ಲೊಮಾ, ಐಟಿಐ ಸೇರಿದಂತೆ ತಾಂತ್ರಿಕ ಶಿಕ್ಷಣ ಪಡೆದ ಯುವಕರೂ ಕಡಿಮೆ ವೇತನದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ವಿದ್ಯುತ್ ವ್ಯವಸ್ಥೆಯ ನಿರ್ವಹಣೆಯಲ್ಲಿ ಗುತ್ತಿಗೆ ಕಾರ್ಮಿಕರ ಪಾತ್ರ ದೊಡ್ಡದಾಗಿದ್ದರೂ, ಅವರಿಗೆ ಉದ್ಯೋಗ ಭದ್ರತೆ ಇಲ್ಲ ಎಂದು ಆರೋಪಿಸಿದರು.

ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಸುಮಾರು ಶೇ.40ರಷ್ಟು ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು. ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆಯ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕಾರಿ ಕೆಲಸಗಳಲ್ಲಿ ತೊಡಗಿರುವ ಈ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಮತ್ತು ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ದೂರಿದರು. ವಿದ್ಯುತ್

ಇದನ್ನೂ ಓದಿ : ಕೆ.ಆರ್. ಮಾರುಕಟ್ಟೆ ಬೀದಿ ವ್ಯಾಪಾರಿಗಳಿಗೆ ಹೈಕೋರ್ಟ್‌ ರಕ್ಷಣೆ: ತೆರವು ಕಾರ್ಯಾಚರಣೆಗೆ ಆತುರ ಬೇಡ

ಗುತ್ತಿಗೆದಾರರಿಂದ ಶೋಷಣೆ ಆರೋಪ

ಸರ್ಕಾರ ವೇತನ ಹೆಚ್ಚಿಸಿದರೂ ಅದರ ಸಂಪೂರ್ಣ ಪ್ರಯೋಜನ ಕಾರ್ಮಿಕರಿಗೆ ತಲುಪುತ್ತಿಲ್ಲ. ಕೆಲವು ಗುತ್ತಿಗೆದಾರರು ಕಾರ್ಮಿಕರಿಂದ ಪ್ರತಿ ತಿಂಗಳು ₹3,000ರಿಂದ ₹4,000ವರೆಗೆ ಹಣ ಪಡೆಯುತ್ತಾರೆ. ಹಣ ನೀಡದಿದ್ದರೆ ವೇತನ ತಡೆಹಿಡಿಯುವುದು ಅಥವಾ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದು ಸಂಘಟನೆಯ ವಿರೇಶ್‌ ಕುಮಾರ್‌ ಆರೋಪಿಸಿದರು.

ಇಎಸ್‌ಐ ಮತ್ತು ಪಿಎಫ್‌ ಹಣವನ್ನು ಸಮರ್ಪಕವಾಗಿ ಪಾವತಿಸದಿರುವುದು, ಪಾವತಿಸಿದರೂ ಅದರ ದಾಖಲೆಗಳನ್ನು ಕಾರ್ಮಿಕರಿಗೆ ನೀಡದಿರುವುದು ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತಿವೆ ಎಂದು ದೂರಿದರು. ಅಪಘಾತ ಸಂಭವಿಸಿದಾಗಲೂ ಗುತ್ತಿಗೆ ಕಾರ್ಮಿಕರಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಮತ್ತು ಪರಿಹಾರ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೊರಟ ಕಾರ್ಮಿಕ ರಾತ್ರಿ ಸುರಕ್ಷಿತವಾಗಿ ಮನೆಗೆ ಮರಳುತ್ತಾನೆ ಎಂಬ ಖಾತರಿಯೇ ಇಲ್ಲ. ಅಷ್ಟು ಅಪಾಯಕಾರಿ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.

ಕನಿಷ್ಠ ವೇತನದ ಜತೆಗೆ ಗ್ರಾಚ್ಯುಟಿ, ಬೋನಸ್, ವೈದ್ಯಕೀಯ ಸೌಲಭ್ಯ ಸೇರಿದಂತೆ ಕಾಯಂ ನೌಕರರಿಗೆ ದೊರೆಯುವ ಮೂಲಭೂತ ಸೌಲಭ್ಯಗಳನ್ನು ಗುತ್ತಿಗೆ ಕಾರ್ಮಿಕರಿಗೂ ನೀಡಬೇಕು ಎಂದು ಆಗ್ರಹಿಸಿದರು.

ಜಾರಿಯಾದ ವೇತನ ಹಿಂಪಡೆಯುವ ಆತಂಕ

2023 ರಿಂದ ತಮ್ಮ ಸಂಘದ ನೇತೃತ್ವದಲ್ಲಿ ನಡೆದ ಹೋರಾಟಗಳ ಪರಿಣಾಮವಾಗಿ ಮೇ 22ರಿಂದ ಪರಿಷ್ಕೃತ ವೇತನ ಜಾರಿಗೆ ಬಂದಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯದ ಬಹುತೇಕ ಶೇ.60ರಷ್ಟು ನೌಕರರಿಗೆ ಪರಿಷ್ಕೃತ ವೇತನ ಪಾವತಿಯಾಗಿದೆ. ಆದರೆ ಇದೀಗ ಸರ್ಕಾರ ವೇತನವನ್ನು ಮರುಪರಿಶೀಲಿಸಲು ಸಮಿತಿ ರಚಿಸಿರುವುದು ನೌಕರರಲ್ಲಿ ಆತಂಕ ಮೂಡಿಸಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌ ವರಲಕ್ಷ್ಮೀ ತಿಳಿಸಿದರು.

ಬೆಲೆ ಏರಿಕೆ, ಮಕ್ಕಳ ಶಿಕ್ಷಣದ ವೆಚ್ಚ ಹಾಗೂ ಕುಟುಂಬ ನಿರ್ವಹಣೆಯ ಒತ್ತಡದ ನಡುವೆ ವೇತನ ಪರಿಷ್ಕರಣೆ ಜಾರಿಯಾದ ಸಂತೋಷದಲ್ಲಿದ್ದ ನೌಕರರಿಗೆ ಮರುಪರಿಶೀಲನೆಯ ನಿರ್ಧಾರ ಆಘಾತ ತಂದಿದೆ ಎಂದು ಅವರು ಹೇಳಿದರು.

ಕೊರೊನಾ  ಸಂದರ್ಭದಲ್ಲಿ ಜನರು ಮನೆಗಳಲ್ಲೇ ಸುರಕ್ಷಿತವಾಗಿದ್ದಾಗಲೂ ವಿದ್ಯುತ್ ನೌಕರರು ಮೂರು ಪಾಳಿಗಳಲ್ಲಿ 24 ಗಂಟೆಯೂ ಕರ್ತವ್ಯ ನಿರ್ವಹಿಸಿದ್ದರು. ಇಂತಹ ಅಪಾಯಕಾರಿ ಕೆಲಸ ಮಾಡುವ ನೌಕರರ ವೇತನವನ್ನು ಮರುಪರಿಶೀಲಿಸುವುದು ಅನ್ಯಾಯ ಎಂದರು.

ಕೆಪಿಟಿಸಿಎಲ್‌ನಿಂದ ವೇತನ ತಡೆಹಿಡಿಯುವಂತೆ ಯಾವುದೇ ಅಧಿಕೃತ ಆದೇಶ ಬಂದಿಲ್ಲದಿದ್ದರೂ, ಹಲವು ಜಿಲ್ಲೆಗಳಲ್ಲಿ ನೌಕರರಿಗೆ ವೇತನ ಪಾವತಿಯಾಗಿಲ್ಲ ಎಂದು ಅವರು ಆರೋಪಿಸಿದರು. ಈ ಕುರಿತು ಕೂಡಲೇ ಸ್ಪಷ್ಟನೆ ನೀಡಿ ರಾಜ್ಯದ ಎಲ್ಲ ನೌಕರರಿಗೂ ಪರಿಷ್ಕೃತ ವೇತನವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.

ಕನಿಷ್ಠ ವೇತನ ಜಾರಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿ ರದ್ದು, ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಕಾಯಂಗೊಳಿಸುವಿಕೆ, ಇಎಸ್‌ಐ–ಪಿಎಫ್ ಸೌಲಭ್ಯಗಳ ಸಮರ್ಪಕ ಜಾರಿ, ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಿಐಟಿಯು ನೇತೃತ್ವದ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಸತ್ಯಬಾಬು, ಜೆ.ಸುರೇಶ್‌, ಉಮಾಶಂಕರ್‌, ಮಲ್ಲೇಶ್‌, ತಮ್ಮಣ್ಣ ಪವಾರ್‌, ಮಹದೇವ್‌ ಹಾಸನ  ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ನೌಕರರು ಭಾಗವಹಿಸಿದ್ದರು. ವಿದ್ಯುತ್

ಇದನ್ನೂ ನೋಡಿ :ಬೆಳಕು ನೀಡುವ ಕೈಗಳಿಗೆ ಕತ್ತಲೆಯ ಬದುಕು: ವಿದ್ಯುತ್ ಕಾರ್ಮಿಕರ ಆಕ್ರೋಶದ ಹೋರಾಟ Janashakthi Media

Donate Janashakthi Media

Leave a Reply

Your email address will not be published. Required fields are marked *