ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ: ಸಮಗ್ರ ವರದಿ ಸಲ್ಲಿಸಲು ಜಿಬಿಎಗೆ ಹೈಕೋರ್ಟ್‌ ಸೂಚನೆ

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಪರಿಹರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವಿವರ ಒಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಸೂಚಿಸಿದೆ. ಬೆಂಗಳೂರು

ಕೋರಮಂಗಲದ ವಿಜಯನ್‌ ಮೆನನ್‌ ಅವರು 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಹೇಮಲೇಖಾ ಅವರ ವಿಭಾಗೀಯ ಪೀಠ, ನಗರದ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ಜಿಬಿಎ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೇಳಿದೆ.

ವಿಚಾರಣೆ ವೇಳೆ ಜಿಬಿಎ ಪರ ವಕೀಲರು, ಏಪ್ರಿಲ್‌ನಿಂದ ಈವರೆಗೆ 10,202 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಸರಿಪಡಿಸಲು ಇನ್ನೂ ಎಷ್ಟು ಸಮಯ ಬೇಕಾಗುತ್ತದೆ ಎಂದು ಪ್ರಶ್ನಿಸಿತು. ಇದುವರೆಗೆ ನಗರದಾದ್ಯಂತ ಎಷ್ಟು ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ ಮತ್ತು ಅವುಗಳಲ್ಲಿ ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂಬ ಸ್ಪಷ್ಟ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಒದಗಿಸುವಂತೆ ಜಿಬಿಎಗೆ ನಿರ್ದೇಶಿಸಿತು.

ಇದನ್ನೂ ಓದಿ : ಶಾಲೆ ಆರಂಭವಾಗಿ ಮೂರು ತಿಂಗಳಾದರೂ ಹೆಚ್ಚುವರಿ ಮಕ್ಕಳಿಗೆ ಪಠ್ಯಪುಸ್ತಕವಿಲ್ಲ: ಪಾಫ್ರೆ ಆಕ್ರೋಶ

ವಾರ್ಷಿಕ ಕಾರ್ಯವಿಧಾನದ ವಿವರ ನೀಡಲು ಸೂಚನೆ

ರಸ್ತೆ ಗುಂಡಿಗಳ ಸಮಸ್ಯೆ ಎದುರಿಸಲು ಪ್ರತಿ ವರ್ಷ ಯಾವ ರೀತಿಯ ಕಾರ್ಯವಿಧಾನವನ್ನು ಅನುಸರಿಸಲಾಗುತ್ತದೆ ಎಂಬುದನ್ನೂ ಪ್ರಮಾಣಪತ್ರದಲ್ಲಿ ದಾಖಲಿಸಬೇಕು ಎಂದು ಹೈಕೋರ್ಟ್‌ ಸೂಚಿಸಿದೆ.

ಅಲ್ಲದೆ, ಹದಗೆಟ್ಟ ರಸ್ತೆಗಳನ್ನು ದುರಸ್ತಿ ಮಾಡಲು ಕೈಗೊಂಡಿರುವ ಕ್ರಮಗಳು, ರಸ್ತೆಗಳ ದುಃಸ್ಥಿತಿ ಕಡಿಮೆ ಮಾಡಲು ರೂಪಿಸಿರುವ ಯೋಜನೆಗಳು ಹಾಗೂ ರಸ್ತೆ ಗುಂಡಿಗಳನ್ನು ಗುರುತಿಸಿ ಅವುಗಳನ್ನು ದುರಸ್ತಿ ಮಾಡಿದ ಕುರಿತಾದ ಸಂಪೂರ್ಣ ಅಂಕಿ-ಅಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಿಳಿಸಿದೆ.

ರಸ್ತೆ ಗುಂಡಿಗಳಿಂದ ಸಾವು, ಗಾಯ: ಎಫ್‌ಐಆರ್‌ ಮಾಹಿತಿ ಕೇಳಿದ ಕೋರ್ಟ್‌

ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳಲ್ಲಿ ಸಾವು ಅಥವಾ ಗಾಯಗಳಾಗಿರುವ ಪ್ರಕರಣಗಳ ಬಗ್ಗೆಯೂ ಹೈಕೋರ್ಟ್‌ ಗಮನ ಹರಿಸಿದೆ.

ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್‌ಐಆರ್‌ಗಳ ಸಂಖ್ಯೆ ಹಾಗೂ ಸಂಬಂಧಿತ ವಿವರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ನ್ಯಾಯಪೀಠ ಸೂಚಿಸಿದೆ.

ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ಹಲವು ವರ್ಷಗಳಿಂದ ಸಾರ್ವಜನಿಕರು ಹಾಗೂ ನ್ಯಾಯಾಲಯದ ಗಮನ ಸೆಳೆಯುತ್ತಿದ್ದು, ಇದೀಗ ಜಿಬಿಎ ಕೈಗೊಂಡಿರುವ ದುರಸ್ತಿ ಕಾರ್ಯದ ಪ್ರಮಾಣ, ಪ್ರಗತಿ ಮತ್ತು ಮುಂದಿನ ಕಾರ್ಯಯೋಜನೆಗೆ ಸಂಬಂಧಿಸಿದ ಸಮಗ್ರ ದಾಖಲೆಗಳನ್ನು ನ್ಯಾಯಾಲಯ ಕೇಳಿರುವುದು ಮಹತ್ವ ಪಡೆದಿದೆ.

ಇದನ್ನೂ ನೋಡಿ : SIR ಕರ್ನಾಟಕ | ಮತದಾನದ ಹಕ್ಕಿಗಾಗಿ ಭಿಕ್ಷೆ ಬೇಡುವಂತೆ ಮಾಡಬೇಡಿ: ನಟ ಪ್ರಕಾಶ್ ರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *