ಬೆಂಗಳೂರು: ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಆಶ್ರಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣಾರ್ಥ ಪ್ರತಿಭಟನಾ ಸಭೆ ಹಾಗೂ ‘ಜೈ ಭರೋ’ ಚಳುವಳಿಯನ್ನು ಸೋಮವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಯಿತು. ಕ್ವಿಟ್
1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ನಿರ್ಣಾಯಕ ಹೋರಾಟ ನಡೆಸಲಾಗಿತ್ತು. ಆದರೆ ಪ್ರಸಕ್ತ ಸಂದರ್ಭದಲ್ಲಿ ದೇಶದ ಸಂಪನ್ಮೂಲಗಳನ್ನು ಸುಲಿಗೆ ಮಾಡುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನಗಳಿಗೆ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ ನೀಡುವ ಕಾನೂನನ್ನು ಕೇಂದ್ರ ಸರ್ಕಾರ ಇನ್ನೂ ರೂಪಿಸಿಲ್ಲ. ಮತ್ತೊಂದೆಡೆ ವಿವಿಧ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್‌ಟಿಎ) ಮಾಡಿಕೊಳ್ಳುತ್ತಿರುವುದು ಕೃಷಿ ಹಾಗೂ ರೈತ ವಿರೋಧಿ ನೀತಿಯಾಗಿದೆ ಎಂದು ಮುಖಂಡರು ಆರೋಪಿಸಿದರು.
ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಒದಗಿಸುವ ಮಹತ್ವದ ಯೋಜನೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯ ಸ್ವರೂಪದಲ್ಲಿ ಬದಲಾವಣೆಗಳನ್ನು ತರುವ ಮೂಲಕ ಗ್ರಾಮೀಣ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ವಿದ್ಯುತ್ ಮಸೂದೆ–2026 ಹಾಗೂ ಬೀಜ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಸಂಸ್ಥೆಗಳ ಹಿಡಿತಕ್ಕೆ ನೀಡುವ ಹಾಗೂ ರೈತರ ಹಿತಾಸಕ್ತಿಗೆ ಧಕ್ಕೆ ತರುವ ನೀತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಯಿತು. ಕ್ವಿಟ್
ಇದನ್ನೂ ಓದಿ: ಜೈಲು ಭರೋ ಚಳುವಳಿ: ರೈತ-ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ, ಪ್ರತಿಭಟನಾಕಾರರ ಬಂಧನ
ಕಾರ್ಮಿಕ ಪರವಾಗಿ ಲೇಬರ್ ಕೋಡ್ ರೂಪಿಸಲು ಒತ್ತಾಯ
ರಾಜ್ಯ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸುವಾಗ ಕಾರ್ಮಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು. ಈಗಾಗಲೇ ಜಾರಿಗೊಳಿಸಿರುವ ಕನಿಷ್ಠ ವೇತನವನ್ನು ಕೂಡಲೇ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ವಿವಿಧೆಡೆ ಕೃಷಿ ಜಮೀನುಗಳ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವುದನ್ನು ವಿರೋಧಿಸಿದ ಮುಖಂಡರು, ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಕ್ರಮಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ರಸ್ತೆ ತಡೆ; ಮುಖಂಡರ ಬಂಧನ, ಬಿಡುಗಡೆ
ಪ್ರತಿಭಟನಾ ಸಭೆಯ ಬಳಿಕ ರೈತ ಮತ್ತು ಕಾರ್ಮಿಕ ಮುಖಂಡರು ರಸ್ತೆ ತಡೆ ನಡೆಸಿ ಕಾನೂನು ಭಂಗ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಫ್ರೀಡಂ ಪಾರ್ಕ್ ಸಮೀಪ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಪ್ರತಿಭಟನಾ ಸಭೆಯಲ್ಲಿ ಜೆಸಿಟಿಯು ಮುಖಂಡ ಕೆ.ವಿ. ಭಟ್, ಕರ್ನಾಟಕ ಪ್ರಾಂತ ರೈತ ಸಂಘದ ಯಶವಂತ್, ಸಿಐಟಿಯು ಮುಖಂಡ ಉಮೇಶ್, ಎಐಟಿಯುಸಿ ಮುಖಂಡ ಹನುಮಂತಪ್ಪ, ಎಐಯುಟಿಯುಸಿ ಮುಖಂಡ ಹನುಮೇಶ್, ಎಐಸಿಸಿಟಿಯು ಮುಖಂಡ ಅಪ್ಪಣ್ಣ, ಎಚ್‌ಎಂಎಸ್‌ನ ನಾಗನಾಥ್, ಜನಶಕ್ತಿ ಸಂಘಟನೆಯ ರವಿಮೋಹನ್ ಸೇರಿದಂತೆ ವಿವಿಧ ರೈತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿದರು.
ಇದನ್ನೂ ನೋಡಿ : ಅಪರಾಧ ಮತ್ತು ಶಿಕ್ಷೆ… ಯಾವುದು ಅಪರಾಧ… | ಕೆ.ಎಸ್.ವಿಮಲಾ Janashakthi Media
