ಗ್ರಾಮೀಣ ಕೋಟಾದಲ್ಲಿ ಬದಲಾವಣೆ ಚರ್ಚೆ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮೀಸಲಾತಿ?

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಪ್ರಸ್ತುತ ಇರುವ ಗ್ರಾಮೀಣ ಮೀಸಲಾತಿಯೊಳಗೆ, ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ.

ಈಗಿರುವ ವ್ಯವಸ್ಥೆಯ ಪ್ರಕಾರ, 1ರಿಂದ 10ನೇ ತರಗತಿವರೆಗೆ ಗ್ರಾಮೀಣ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ CET ಮತ್ತು NEET ಪ್ರವೇಶದಲ್ಲಿ 15% ಮೀಸಲಾತಿ ಲಭ್ಯವಿದೆ. ಆದರೆ ಈ ಮೀಸಲಾತಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಬ್ಬರೂ ಸೇರಿದ್ದಾರೆ.

ಈ ಗ್ರಾಮೀಣ ಅಡ್ಡ ಮೀಸಲಾತಿಯನ್ನು ಮೊದಲಿಗೆ 2000ರಲ್ಲಿ ಜಾರಿಗೆ ತಂದಿದ್ದು, ನಂತರ ವೃತ್ತಿಪರ ಕೋರ್ಸ್‌ಗಳಿಗೆ ವಿಸ್ತರಿಸಲಾಯಿತು. ಆದರೆ, ಪ್ರಸ್ತುತ ವ್ಯವಸ್ಥೆ ಸಮಾನ ಅವಕಾಶ ನೀಡುತ್ತಿಲ್ಲ ಎಂಬ ಅಭಿಪ್ರಾಯ ಶಿಕ್ಷಣ ತಜ್ಞರಿಂದ ವ್ಯಕ್ತವಾಗಿದೆ. ಅವರ ಪ್ರಕಾರ, ಈ ಕೋಟಾದಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿರುವವರು ಖಾಸಗಿ ಶಾಲೆಗಳ ವಿದ್ಯಾರ್ಥಿಗಳೇ.

ಇದನ್ನೂ ಓದಿ: ಅಸ್ಸಾಂ ಪ್ರವಾಹ ತೀವ್ರತೆ ಹೆಚ್ಚಳ: ಮೃತರ ಸಂಖ್ಯೆ 95ಕ್ಕೆ ಏರಿಕೆ, 1.6 ಲಕ್ಷ ಜನ ಸಂಕಷ್ಟದಲ್ಲಿ

ಕರ್ನಾಟಕ ಆಡಳಿತ ಸುಧಾರಣಾ ಆಯೋಗದ (KARC) ವರದಿಯೂ ಈ ಅಸಮಾನತೆಯನ್ನು ಉಲ್ಲೇಖಿಸಿದೆ.

CBSE, ICSE ವಿದ್ಯಾರ್ಥಿಗಳ ಪ್ರಾಬಲ್ಯ

2022ರ NEET ಡೇಟಾವನ್ನು ಉಲ್ಲೇಖಿಸಿರುವ ವರದಿ ಪ್ರಕಾರ, ಗ್ರಾಮೀಣ ಕೋಟಾದಡಿ MBBS ಸೀಟುಗಳ ಅರ್ಧಕ್ಕಿಂತ ಹೆಚ್ಚು ಭಾಗವನ್ನು CBSE ಮತ್ತು ICSE ಶಾಲೆಗಳ ವಿದ್ಯಾರ್ಥಿಗಳು ಪಡೆದಿದ್ದಾರೆ.

ಈ ಹಿನ್ನೆಲೆ, ಪ್ರಸ್ತುತ 15% ಗ್ರಾಮೀಣ ಮೀಸಲಾತಿಯನ್ನು ಎರಡು ಭಾಗಗಳಾಗಿ ವಿಭಜಿಸುವ ಪ್ರಸ್ತಾವನೆ ಮುಂದಿಟ್ಟಿದೆ — 7.5% ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮೀಸಲು ಮಾಡುವುದು, ಉಳಿದ 7.5% ಅನ್ನು ಖಾಸಗಿ (ಸಹಾಯಧನಿತ ಹಾಗೂ ಅನುದಾನರಹಿತ) ಶಾಲಾ ವಿದ್ಯಾರ್ಥಿಗಳಿಗೆ ಬಿಡುವುದು.

KARC ವರದಿ ಪ್ರಕಾರ, ರಾಜ್ಯ ಪಠ್ಯಕ್ರಮ ಅನುಸರಿಸುವ ಗ್ರಾಮೀಣ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಒಟ್ಟು 10ನೇ ತರಗತಿ ಉತ್ತೀರ್ಣರಲ್ಲಿನ ಸುಮಾರು 49% ಇದ್ದರೂ, ಗ್ರಾಮೀಣ ಕೋಟಾದಡಿ MBBS ಸೀಟುಗಳಲ್ಲಿ ಕೇವಲ 23% ಮಾತ್ರ ಪಡೆದಿದ್ದಾರೆ.

ಇದಕ್ಕೆ ವಿರುದ್ಧವಾಗಿ, ಗ್ರಾಮೀಣ CBSE ಮತ್ತು ICSE ಶಾಲೆಗಳ ವಿದ್ಯಾರ್ಥಿಗಳು ಒಟ್ಟು ವಿದ್ಯಾರ್ಥಿಗಳಲ್ಲಿ ಕೇವಲ 5% ಇದ್ದರೂ, 51% ಸೀಟುಗಳನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಆರ್ಥಿಕವಾಗಿ ಬಲಿಷ್ಠ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ ಎಂಬ ವಾದವೂ ಮುಂದಿಡಲಾಗಿದೆ.

“ಕಳೆದ ಆರು ತಿಂಗಳಿಂದ ನಾವು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ. ಶೀಘ್ರದಲ್ಲೇ ಒಳ್ಳೆಯ ನಿರ್ಧಾರ ಬರುತ್ತದೆ ಎಂಬ ನಿರೀಕ್ಷೆಯಿದೆ,” ಎಂದು ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಕಥೆ ಮೊಗಳ್ಳಿ ಗಣೇಶ್‌ ಅವರನ್ನು ಬೆಳೆಸಿತು; ಮೊಗಳ್ಳಿ ಗಣೇಶ್‌ ಕೂಡ ಕಥೆಯನ್ನು ಬೆಳೆಸಿದರು – ಪ್ರೊ.ನಟರಾಜ್ ಹುಳಿಯಾರ್

Donate Janashakthi Media

Leave a Reply

Your email address will not be published. Required fields are marked *