ಬೆಂಗಳೂರು| ಪರೀಕ್ಷೆಗೆ ಬಂದ ತಾಯಿಗೆ ಪೊಲೀಸ್ ನೆರವು: ಮಗುವನ್ನು ನೋಡಿಕೊಂಡ ಸಿಬ್ಬಂದಿ

ಬೆಂಗಳೂರು: ರಾಜ್ಯಾದ್ಯಂತ ಆಗಸ್ಟ್‌ 2ರಂದು ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ವೇಳೆ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಮಾನವೀಯತೆ ಎಲ್ಲರ ಗಮನ ಸೆಳೆದಿದೆ. ತಮ್ಮ ಎಂಟು ತಿಂಗಳ ಮಗುವಿನೊಂದಿಗೆ ಪರೀಕ್ಷೆಗೆ ಬಂದಿದ್ದ ಮಹಿಳಾ ಅಭ್ಯರ್ಥಿಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು (ಸಿಆರ್‌ಎಸ್) ಪೊಲೀಸ್ ಠಾಣೆಯ ಸಿಬ್ಬಂದಿ ನೆರವಾಗಿದ್ದು, ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು

ನಗರದ ಕೃಷ್ಣಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ. ಪರೀಕ್ಷೆಗೆ ಕೆಲವೇ ಕ್ಷಣಗಳು ಬಾಕಿ ಇರುವಾಗ ಮಹಿಳಾ ಅಭ್ಯರ್ಥಿಯ ಎಂಟು ತಿಂಗಳ ಮಗು ಜೋರಾಗಿ ಅಳಲು ಪ್ರಾರಂಭಿಸಿತು. ತಾಯಿ ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ಮಗುವಿನ ಅಳು ನಿಲ್ಲಲಿಲ್ಲ. ಇದರಿಂದ ಆಕೆ ಪರೀಕ್ಷೆ ಬರೆಯಬೇಕೋ, ಮಗುವನ್ನು ನೋಡಿಕೊಳ್ಳಬೇಕೋ ಎಂಬ ಸಂಕಟಕ್ಕೆ ಸಿಲುಕಿದರು.

ಇದನ್ನೂ ಓದಿ: CWG 2026: 10ನೇ ದಿನ ಭಾರತಕ್ಕೆ ಬಾಕ್ಸಿಂಗ್ ಚಿನ್ನ, ಟ್ರಿಪಲ್ ಜಂಪ್‌ನಲ್ಲಿ ಡಬಲ್ ಪದಕ

ಈ ವೇಳೆ ಅಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ತಕ್ಷಣವೇ ಪರಿಸ್ಥಿತಿಯನ್ನು ಗಮನಿಸಿದರು. ಅವರು ಆಕೆಯ ಬಳಿ ತೆರಳಿ, “ನೀವು ಚಿಂತಿಸಬೇಡಿ, ನಿಶ್ಚಿಂತೆಯಿಂದ ಒಳಗೆ ಹೋಗಿ ಪರೀಕ್ಷೆ ಬರೆಯಿರಿ. ನಿಮ್ಮ ಮಗುವನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ” ಎಂದು ಧೈರ್ಯ ತುಂಬಿ ಮಗುವನ್ನು ತಮ್ಮ ವಶಕ್ಕೆ ಪಡೆದರು.

ತಾಯಿ ಪರೀಕ್ಷಾ ಕೊಠಡಿಗೆ ತೆರಳಿದ ಬಳಿಕ, ಪೊಲೀಸ್ ಸಿಬ್ಬಂದಿ ಮಗುವನ್ನು ಮುದ್ದಾಡಿ, ಆಟವಾಡಿಸುತ್ತಾ ಕಾಳಜಿಯಿಂದ ನೋಡಿಕೊಂಡರು. ಪರೀಕ್ಷೆ ಮುಗಿದು ಹೊರಬಂದ ತಾಯಿಗೆ ಮಗುವನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಮಾನವೀಯತೆ ಕಂಡು ಭಾವುಕರಾದ ತಾಯಿ ಅವರಿಗೆ ಧನ್ಯವಾದ ಸಲ್ಲಿಸಿದರು.

ಈ ಕುರಿತು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪಿಎಸ್‌ಐ ಮಾಹಿತಿ ಹಂಚಿಕೊಂಡಿದ್ದು, ಖಾಕಿ ಪಡೆಯ ಕರ್ತವ್ಯಪ್ರಜ್ಞೆ ಮತ್ತು ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ನೋಡಿ: ‘ಶ್ರಮಿಕರ ದೈವ – ಯಕ್ಷಗಾನ ಮತ್ತು ಅಳವು ಅರಿಯದ ಭಾಷೆ: ತುಳು ಮತ್ತು ಬ್ಯಾರಿ’ | ಡಾ. ಗಣನಾಥ ಎಕ್ಕಾರು

Donate Janashakthi Media

Leave a Reply

Your email address will not be published. Required fields are marked *