ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಬಹುತೇಕ ಒಪ್ಪಿಗೆ ದೊರೆತಿದ್ದು, ಸೋಮವಾರ ಸಂಜೆ 5 ಗಂಟೆಗೆ ಬೆಂಗಳೂರಿನ ರಾಜಭವನದ ಗ್ಲಾಸ್ ಹೌಸ್‌ನಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಗುರುವಾರ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಖರ್ಗೆ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಭಾಗವಹಿಸಿದ್ದರು.
ಸಚಿವ ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಸದ್ಯಕ್ಕೆ ಭರ್ತಿ ಮಾಡುವ ಸಾಧ್ಯತೆ ಇದೆ. ಉಳಿದ ಎರಡು ಸ್ಥಾನಗಳನ್ನು ಮುಂದಿನ ಬೆಳವಣಿಗೆಗಳು ಮತ್ತು ಪಕ್ಷದೊಳಗಿನ ಅಸಮಾಧಾನಗಳನ್ನು ಗಮನದಲ್ಲಿಟ್ಟುಕೊಂಡು ಖಾಲಿ ಉಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಇಬ್ಬರು ಮಹಿಳಾ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯೂ ಇದೆ.
ಮಂಗಳವಾರ ನಡೆದ ಚರ್ಚೆಯಲ್ಲಿ 15 ಶಾಸಕರನ್ನು ಸಚಿವರನ್ನಾಗಿ ಮಾಡುವ ಬಗ್ಗೆ ಒಮ್ಮತ ಮೂಡಿತ್ತು. ಆದರೆ ಉಳಿದ ಐದು ಸ್ಥಾನಗಳ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದು, ಹೈಕಮಾಂಡ್ ಭಾನುವಾರದೊಳಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವ ನಿರೀಕ್ಷೆಯಿದೆ. ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟಕ್ಕೆ ಸೇರಿಸುವ ವಿಚಾರವೂ ಚರ್ಚೆಗೆ ಬಂದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಜೀತದಿಂದ ತಪ್ಪಿಸಿಕೊಂಡ ಮೊಗಳ್ಳಿ ಗಣೇಶ್; ಹಳ್ಳಿಯ ಹಿಂಸೆಯೇ ಕಥೆಗಾರನನ್ನು ರೂಪಿಸಿತು: ನಟರಾಜ ಹುಳಿಯಾರ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಭಾನುವಾರ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದ್ದು, ಅಂತಿಮ ಪಟ್ಟಿಯಲ್ಲಿರುವ ಹೆಸರುಗಳು ಪ್ರಮಾಣವಚನ ಸ್ವೀಕಾರದವರೆಗೂ ಬಹಿರಂಗವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ದಿನಾಂಕವನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದನ್ನು ಬಿಜೆಪಿ ಟೀಕಿಸಿತ್ತು. ರಾಜ್ಯದ ಕಾವೇರಿ ನೀರಿನ ವಿಚಾರ ಸೇರಿದಂತೆ ಪ್ರಮುಖ ಸಮಸ್ಯೆಗಳಿರುವಾಗ ಸರ್ಕಾರದ ನಾಯಕತ್ವ ದೆಹಲಿಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ರಾಜಕೀಯ ಒತ್ತಡದ ನಡುವೆಯೇ ಇದೀಗ ಸಂಪುಟ ವಿಸ್ತರಣೆಗೆ ವೇಗ ಸಿಕ್ಕಿದೆ.
ಸೋಮವಾರ ಸಚಿವರ ಪ್ರಮಾಣವಚನ ನಡೆದರೆ, ಹಲವು ವಾರಗಳಿಂದ ನಡೆಯುತ್ತಿದ್ದ ಸಂಪುಟ ವಿಸ್ತರಣೆಯ ಕುರಿತ ಚರ್ಚೆ ಮತ್ತು ಆಕಾಂಕ್ಷಿಗಳಿಗೆ ಕಾದಾಟಕ್ಕೆ ತೆರೆ ಬೀಳಲಿದೆ.
ಇದನ್ನೂ ನೋಡಿ : NEET ಹೋರಾಟದ ಒಳನೋಟ | ಗೋದಿ ಮೀಡಿಯಾ ನ್ಯೂಸ್‌ರೂಮ್‌ನಲ್ಲಿ ಸ್ಕ್ರಿಪ್ಟ್ ಹೇಗೆ ರೂಪುಗೊಳ್ಳುತ್ತಿತ್ತು? | ಗುರುರಾಜ
