ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಹೈಕೋರ್ಟ್ ಮಧ್ಯಂತರ ಜಾಮೀನು

ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಯೋಗೇಶ್

ವಿನಯ್ ಕುಲಕರ್ಣಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟು, ಐದು ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಭದ್ರತಾ ಶರತ್ತುಗಳೊಂದಿಗೆ ಬಿಡುಗಡೆಗೆ ನ್ಯಾಯಾಲಯ ಅನುಮತಿ ನೀಡಿದೆ. ಜೊತೆಗೆ, ಅವರಿಗೆ ದೋಷಿ ಎಂದು ಘೋಷಿಸಿದ್ದ ತೀರ್ಪಿನ ಮೇಲೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಜಿ. ಬಸವರಾಜ ಅವರಿದ್ದ ಪೀಠವು, ಧಾರವಾಡ ಜಿಲ್ಲೆಗೆ ಪ್ರವೇಶ ನಿಷೇಧಿಸುವ ಬೇಡಿಕೆಯನ್ನು ತಿರಸ್ಕರಿಸಿದ್ದು, ವಿದೇಶ ಪ್ರವಾಸಕ್ಕೆ ನಿರ್ಬಂಧ ವಿಧಿಸಿದೆ. ಯೋಗೇಶ್

ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 10 ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಚನ್ನಕೇಶವ ಟಿಂಗರಿಕರ್ ಕೂಡ ಜಾಮೀನಿನ ಪ್ರಯೋಜನ ಪಡೆದಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳ ವಿರುದ್ಧ ಪ್ರತೀಕಾರ ರಾಜಕೀಯ: ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಟೀಕೆ

ಕುಲಕರ್ಣಿ ಪರ ವಕೀಲರು ಪ್ರತಿಕ್ರಿಯಿಸಿ, “ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಎರಡು ಅರ್ಜಿಗಳನ್ನು ಸಲ್ಲಿಸಿದ್ದೆವು. ನ್ಯಾಯಾಲಯ ನಮ್ಮ ವಾದವನ್ನು ಪರಿಗಣಿಸಿ ಜಾಮೀನು ನೀಡಿದೆ. ಕುಲಕರ್ಣಿ ಅವರಿಗೆ ಈ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ ಎಂದು ವಾದಿಸಿದ್ದೇವೆ,” ಎಂದು ತಿಳಿಸಿದ್ದಾರೆ. ಜಾಮೀನಿನ ದೃಢೀಕೃತ ಆದೇಶ ಪತ್ರ ಸಿಕ್ಕ ಬಳಿಕ ಕೆಳ ನ್ಯಾಯಾಲಯದಲ್ಲಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಾನೂನು ಹೋರಾಟ:

ಈ ಹಿಂದೆ ವಿಶೇಷ ನ್ಯಾಯಾಲಯ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪು ವಿರುದ್ಧ ಹೈಕೋರ್ಟ್ ಮೊರೆ ಹೋದ ಅವರು, ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡುವಂತೆ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್ ಶಿಕ್ಷೆಯನ್ನು ಮುಂದುವರೆಸಿದ್ದರೆ, ಅವರ ಶಾಸಕ ಸ್ಥಾನಕ್ಕೂ ಧಕ್ಕೆಯಾಗುವ ಸಾಧ್ಯತೆ ಇತ್ತು. ಆದರೆ ಈಗ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ, ಕುಲಕರ್ಣಿ ಮತ್ತೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

ಪ್ರಕರಣದ ಹಿನ್ನೆಲೆ:

2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಅವರನ್ನು ಸಪ್ತಾಪುರದಲ್ಲಿನ ಜಿಮ್ ಸಮೀಪ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಈ ಘಟನೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

ಮೊದಲಿಗೆ ಸ್ಥಳೀಯ ಪೊಲೀಸರು ತನಿಖೆ ನಡೆಸಿದ ಪ್ರಕರಣವನ್ನು ನಂತರ ಸಿಬಿಐಗೆ ವರ್ಗಾಯಿಸಲಾಯಿತು. ಸಿಬಿಐ ತನಿಖೆಯಲ್ಲಿ ಈ ಹತ್ಯೆ ಪೂರ್ವನಿಯೋಜಿತ ಸಂಚು ಎಂದು ಹೇಳಲಾಗಿದ್ದು, ವಿನಯ್ ಕುಲಕರ್ಣಿ ಸೇರಿದಂತೆ ಹಲವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು.

ಆರೋಪಪಟ್ಟಿಯಲ್ಲಿ ಭಾರತೀಯ ದಂಡ ಸಂಹಿತೆಯ 120ಬಿ, 143, 147, 148, 302, 109, 201 ಮತ್ತು 149 ಸೇರಿದಂತೆ ಹಲವು ಕಲಂಗಳನ್ನು ಸೇರಿಸಲಾಗಿದೆ. ಸಾಕ್ಷಿಗಳ ಹೇಳಿಕೆ, ಕರೆ ವಿವರಗಳು ಹಾಗೂ ಹಣಕಾಸು ವ್ಯವಹಾರಗಳ ಮಾಹಿತಿಯನ್ನು ಸಿಬಿಐ ನ್ಯಾಯಾಲಯದ ಮುಂದೆ ಮಂಡಿಸಿತ್ತು.

ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆ 2020ರ ನವೆಂಬರ್‌ನಲ್ಲಿ ಸಿಬಿಐ ಕುಲಕರ್ಣಿಯನ್ನು ಬಂಧಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಶರತ್ತುಗಳೊಂದಿಗೆ ಜಾಮೀನು ನೀಡಿದ್ದು, ಧಾರವಾಡ ಜಿಲ್ಲೆಗೆ ಪ್ರವೇಶ ಹಾಗೂ ಸಾಕ್ಷಿಗಳ ಸಂಪರ್ಕಕ್ಕೆ ನಿರ್ಬಂಧ ವಿಧಿಸಿತ್ತು.

ಇದನ್ನೂ ನೋಡಿ: ನೀಟ್ ಅಕ್ರಮ ವಿರೋಧಿಸಿ ರಾಜಭವನ ಚಲೋ: ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಎಸ್‌ಎಫ್‌ಐ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *