ಸ್ವಿಗ್ಗಿ–ಜೊಮ್ಯಾಟೋ ವಿರುದ್ಧ ರೆಸ್ಟೋರೆಂಟ್‌ಗಳ ಎಚ್ಚರಿಕೆ: ಆಗಸ್ಟ್ 15ರಿಂದ ಆನ್‌ಲೈನ್ ಆರ್ಡರ್‌ಗಳಿಗೆ ಬ್ರೇಕ್?

ಬೆಂಗಳೂರು: ನಗರದಲ್ಲಿನ ರೆಸ್ಟೋರೆಂಟ್‌ಗಳು ಸ್ವಿಗ್ಗಿ ಮತ್ತು ಜೊಮ್ಯಾಟೋ ಅಂತಹ ಆಹಾರ ಡೆಲಿವರಿ ಆ್ಯಪ್‌ಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಆಗಸ್ಟ್ 15ರೊಳಗೆ ಕಮಿಷನ್, ಪ್ಲಾಟ್‌ಫಾರ್ಮ್‌ ನೀಡುವ ಡಿಸ್ಕೌಂಟ್‌ಗಳು ಹಾಗೂ ಇತರೆ ಶುಲ್ಕಗಳ ಕುರಿತು ಸಮಸ್ಯೆಗಳು ಪರಿಹಾರವಾಗದಿದ್ದರೆ ಆನ್‌ಲೈನ್ ಆರ್ಡರ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವ ಎಚ್ಚರಿಕೆ ನೀಡಿವೆ. ಸ್ವಿಗ್ಗಿ

ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್‌ (BHA) ಜುಲೈ 29ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಕಳೆದ ಸುಮಾರು 10 ತಿಂಗಳಿನಿಂದ ಡೆಲಿವರಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ನಡೆದ ಮಾತುಕತೆಗಳು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಈ ಕಠಿಣ ನಿಲುವು ತಾಳಲಾಗಿದೆ.

ರೆಸ್ಟೋರೆಂಟ್‌ ಮಾಲೀಕರು ಹೇಳುವಂತೆ, ಹೆಚ್ಚಿನ ಕಮಿಷನ್ ಮತ್ತು ಪ್ಲಾಟ್‌ಫಾರ್ಮ್‌ ಪ್ರಾಯೋಜಿತ ಡಿಸ್ಕೌಂಟ್‌ಗಳು ಅವರ ಲಾಭಾಂಶವನ್ನು ಕುಗ್ಗಿಸುತ್ತಿವೆ. ದರ ಪರಿಣಾಮವಾಗಿ ಹಲವರು ಡೆಲಿವರಿ ಆ್ಯಪ್‌ಗಳಲ್ಲಿ ಮೆನು ದರಗಳನ್ನು ಹೆಚ್ಚಿಸಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹುದ್ದೆಗಳ ಖಾಲಿ ವಿವರ ಮುಚ್ಚಿಡಲಾಗುತ್ತಿದೆಯೇ? – ಸಂಸದ ವಿ. ಸಿವದಾಸನ್‌ ಆರೋಪ

ಈ ಮಾದರಿ ರೆಸ್ಟೋರೆಂಟ್‌ಗಳಿಗೂ, ಗ್ರಾಹಕರಿಗೂ ಹಾನಿಕಾರಕವಾಗಿದ್ದು, “ಫ್ರೀ ಡೆಲಿವರಿ” ಅಥವಾ “ಡಿಸ್ಕೌಂಟ್” ಎನ್ನಲಾಗಿದ್ದರೂ ಗ್ರಾಹಕರು ಅಂಗಡಿಯಲ್ಲಿ ಪಾವತಿಸುವ ದರಕ್ಕಿಂತ ಹೆಚ್ಚು ಹಣ ಪಾವತಿಸುತ್ತಾರೆ. ಮತ್ತೊಂದೆಡೆ, ರೆಸ್ಟೋರೆಂಟ್‌ಗಳು ತಮ್ಮ ಬೆಲೆ ಮತ್ತು ಲಾಭದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಿವೆ ಎಂದು ಅವರು ವಾದಿಸಿದ್ದಾರೆ.

BHA ಅಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, “ಈ ಸಮಸ್ಯೆಗಳನ್ನು ಸರಿಪಡಿಸಲು ನಾವು ಅವರಿಗೆ 15 ದಿನಗಳ ಗಡುವು ನೀಡಿದ್ದೇವೆ. ಅದಾಗದಿದ್ದರೆ ಇತರೆ ಸಂಘಟನೆಗಳೊಂದಿಗೆ ಸೇರಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ,” ಎಂದು ಹೇಳಿದರು.

ಸಂಘದ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 34,000 ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿದ್ದು, ಅವುಗಳಲ್ಲಿ ಸುಮಾರು 20,000 ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್‌ಗಳಲ್ಲಿ ನೋಂದಾಯಗೊಂಡಿವೆ. ಮಾತುಕತೆ ವಿಫಲವಾದರೆ, ಈ ಸಂಸ್ಥೆಗಳ ಬಹುಪಾಲು ಆಗಸ್ಟ್ 15ರಿಂದ ಆನ್‌ಲೈನ್ ಆರ್ಡರ್‌ಗಳನ್ನು ನಿಲ್ಲಿಸುವ ಸಾಧ್ಯತೆ ಇದೆ.

ಅಮಿಂತಿರಿ ಕಫೆ ಮತ್ತು ಪ್ಯಾಟಿಸ್ಸರಿ ಮಾಲೀಕ ಸುರಜ್ ಮಧ್ನಾನಿ ಎಚ್ಚರಿಕೆ ನೀಡಿ, “ಲಾಭಾಂಶದ ಒತ್ತಡ ಮುಂದುವರಿದರೆ, ರೆಸ್ಟೋರೆಂಟ್‌ಗಳು ಪದಾರ್ಥಗಳ ಗುಣಮಟ್ಟ ಅಥವಾ ಪ್ರಮಾಣದಲ್ಲಿ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು,” ಎಂದು ಹೇಳಿದರು.

ಇದಕ್ಕೂ ಮಧ್ಯೆ, ರಾಪಿಡೋ ಬೆಂಬಲಿತ ‘ಓನ್‌ಲಿ’ ಎಂಬ ಹೊಸ ಆಹಾರ ಡೆಲಿವರಿ ಪ್ಲಾಟ್‌ಫಾರ್ಮ್ ಶೂನ್ಯ ಕಮಿಷನ್ ಮಾದರಿಯನ್ನು ಪರಿಚಯಿಸಿದ್ದು, ರೆಸ್ಟೋರೆಂಟ್‌ಗಳಿಂದ ಯಾವುದೇ ಕಮಿಷನ್ ವಸೂಲಿಸದೆ ಬೆಲೆ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಮುಖ್ಯಸ್ಥ ಅರವಿಂದ್ ಸಂಕ ತಿಳಿಸಿದ್ದಾರೆ.

ವಿದ್ಯಾರ್ಥಿ ಭವನ ರೆಸ್ಟೋರೆಂಟ್‌ ಮಾಲೀಕ ಅರುಣ್ ಅಡಿಗಾ ಮಾತನಾಡಿ, “ಗ್ರಾಹಕರಿಗೆ ಮುಖ್ಯವಾದುದು ಅವರು ಪಾವತಿಸುವ ಮೊತ್ತ. ಕೆಲವು ಡೆಲಿವರಿ ಪ್ಲಾಟ್‌ಫಾರ್ಮ್‌ಗಳಲ್ಲಿ ಮೆನು ದರಗಳು ಅಂಗಡಿಗಿಂತ ಹೆಚ್ಚಾಗಿರುತ್ತವೆ,” ಎಂದು ಹೇಳಿದರು.

ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಪ್ರತಿಕ್ರಿಯೆ ನೀಡಿ, ರೆಸ್ಟೋರೆಂಟ್‌ಗಳ ಆತಂಕವನ್ನು ಬೆಂಬಲಿಸುತ್ತೇವೆ ಎಂದು ಹೇಳಿದರೂ, ಮುಖಾಮುಖಿ ಸಂಘರ್ಷಕ್ಕಿಂತ ಸಂವಾದವೇ ಉತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟಿದೆ. NRAI ಅಧ್ಯಕ್ಷ ಸಾಗರ್ ದರ್ಯಾನಿ ಹೇಳುವಂತೆ, “ರೆಸ್ಟೋರೆಂಟ್‌ಗಳು ಸ್ವಿಗ್ಗಿ ಮತ್ತು ಜೊಮ್ಯಾಟೋ ಬಹಿಷ್ಕಾರವೇ ಏಕೈಕ ಆಯ್ಕೆ ಎಂದು ಭಾವಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದಕರ.”

ಇದನ್ನೂ ನೋಡಿ: NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi

Donate Janashakthi Media

Leave a Reply

Your email address will not be published. Required fields are marked *