ಬೆಂಗಳೂರು: ಒಂದೇ ದಿನ ಹೈದರಾಬಾದ್ ಕರ್ನಾಟಕ ಮತ್ತು ನಾನ್–ಹೈದರಾಬಾದ್ ಕರ್ನಾಟಕ ವಿಭಾಗದ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಗಳನ್ನು ಬರೆಯಬೇಕಿದ್ದ ಅಭ್ಯರ್ಥಿಗಳಿಗೆ ಎದುರಾಗಿದ್ದ ಪರೀಕ್ಷಾ ಕೇಂದ್ರಗಳ ಅಂತರದ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಅಭ್ಯರ್ಥಿಗಳ ಸಮಸ್ಯೆಯನ್ನು ಜನಶಕ್ತಿ ಮೀಡಿಯಾ ವರದಿ ಮಾಡಿದ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ಪೊಲೀಸ್
ಆಗಸ್ಟ್ 2ರಂದು ನಡೆಯಲಿರುವ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಹೈದರಾಬಾದ್ ಕರ್ನಾಟಕ ವಿಭಾಗದ ಅಭ್ಯರ್ಥಿಗಳಿಗೆ ಬೆಳಿಗ್ಗೆ ಒಂದು ಪರೀಕ್ಷೆ ಹಾಗೂ ನಾನ್–ಹೈದರಾಬಾದ್ ಕರ್ನಾಟಕ ವಿಭಾಗದ ಅಭ್ಯರ್ಥಿಗಳಿಗೆ ಅದೇ ದಿನ ಮಧ್ಯಾಹ್ನ ಮತ್ತೊಂದು ಪರೀಕ್ಷೆ ನಿಗದಿಯಾಗಿತ್ತು. ಎರಡೂ ಪರೀಕ್ಷೆಗಳನ್ನು ಬರೆಯಬೇಕಿದ್ದ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ನೀಡಲಾಗಿತ್ತು. ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ನಡುವೆ 100ರಿಂದ 120 ಕಿಲೋಮೀಟರ್‌ವರೆಗೆ ಅಂತರವಿದ್ದ ಹಿನ್ನೆಲೆಯಲ್ಲಿ, ಎರಡು ಪರೀಕ್ಷೆಗಳ ನಡುವೆ ಇದ್ದ ಅಲ್ಪ ಸಮಯದಲ್ಲಿ ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ತಲುಪುವುದು ಸಾಧ್ಯವಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ‘ಕೆಇಎ ಮಹಾ ಎಡವಟ್ಟು: ಒಂದೇ ದಿನ ಎರಡು ಪರೀಕ್ಷೆ; ಕೇಂದ್ರಗಳ ಅಂತರ 100 ಕಿ.ಮೀ! ’ ಎಂಬುದಾಗಿ ಜನಶಕ್ತಿ ಮೀಡಿಯಾ ಸಮಸ್ಯೆಯನ್ನು ವರದಿ ಮಾಡಿತ್ತು. ಒಂದೇ ದಿನ ಎರಡು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಅಥವಾ ಪರೀಕ್ಷೆಗಳ ನಡುವೆ ಸಾಕಷ್ಟು ಸಮಯ ನೀಡಬೇಕು ಎಂಬ ಅಭ್ಯರ್ಥಿಗಳ ಬೇಡಿಕೆಯನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಜನಶಕ್ತಿ ಮೀಡಿಯಾ ವರದಿಯ ಬಳಿಕ ಇದೀಗ ಕೆಇಎ ಪರೀಕ್ಷೆಯ ಸಮಯದಲ್ಲಿ ಬದಲಾವಣೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಕಲ್ಯಾಣ ಕರ್ನಾಟಕ ನಾಗರಿಕ ಪೊಲೀಸ್ ಪೇದೆ ನೇಮಕಾತಿಯ ಮಧ್ಯಾಹ್ನದ ಪರೀಕ್ಷೆಯನ್ನು ಈ ಹಿಂದೆ ನಿಗದಿಯಾಗಿದ್ದ ಮಧ್ಯಾಹ್ನ 2.30ರಿಂದ ಸಂಜೆ 4 ಗಂಟೆಯವರೆಗೆ ನಡೆಸುವ ಬದಲು, ಸಂಜೆ 4ರಿಂದ 5.30ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಬೆಳಗಿನ ಪರೀಕ್ಷೆಯ ಸಮಯದಲ್ಲಿ ಬದಲಾವಣೆ ಮಾಡಲಾಗಿಲ್ಲ.
ಪರೀಕ್ಷಾ ಸಮಯ ಬದಲಾಗಿರುವುದರಿಂದ ಬೆಳಗಿನ ಪರೀಕ್ಷೆ ಮುಗಿಸಿದ ಬಳಿಕ ಮತ್ತೊಂದು ಪರೀಕ್ಷಾ ಕೇಂದ್ರಕ್ಕೆ ತೆರಳಬೇಕಿರುವ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ ದೊರೆಯಲಿದೆ. ಇದರಿಂದ ದೂರದ ಪರೀಕ್ಷಾ ಕೇಂದ್ರಗಳನ್ನು ಹೊಂದಿರುವ ಅಭ್ಯರ್ಥಿಗಳ ಆತಂಕವೂ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ.
ಅಭ್ಯರ್ಥಿಗಳ ಸಮಸ್ಯೆಯನ್ನು ಮೊದಲು ಗುರುತಿಸಿ, ಪರೀಕ್ಷಾ ಪ್ರಾಧಿಕಾರದ ಗಮನಕ್ಕೆ ತರುವಲ್ಲಿ ಜನಶಕ್ತಿ ಮೀಡಿಯಾ ವರದಿ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ಕೆಇಎ ವೇಳಾಪಟ್ಟಿ ಬದಲಿಸಿರುವುದು ಆ ವರದಿಯ ಫಲಶೃತಿಯಾಗಿದೆ. ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಉಳಿದಿರುವ ಗೊಂದಲಗಳನ್ನೂ ಕೆಇಎ ಸ್ಪಷ್ಟಪಡಿಸಬೇಕು ಎಂಬುದು ಅಭ್ಯರ್ಥಿಗಳ ಒತ್ತಾಯವಾಗಿದೆ.
ಇದನ್ನೂ ನೋಡಿ : NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi
