OMR ದೋಷ ಆರೋಪ: 668 ಅಂಕ ಬದಲು -11!
ಹಾವೇರಿ: ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಡುವೆ ನಡೆದ ಮರುಪರೀಕ್ಷೆಯಲ್ಲಿಯೂ ಅನ್ಯಾಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ವಿದ್ಯಾರ್ಥಿನಿ ಬಿಂದುಶ್ರೀ ಪವಾರ ತಮ್ಮಿಗೆ ಅನ್ಯಾಯವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.
“ನಾನು ಓಎಂಆರ್ ಶೀಟ್‌ನಲ್ಲಿ 160 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ಜೆರಾಕ್ಸ್ ಪ್ರತಿಯಲ್ಲಿ ಕೇವಲ 40 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ತೋರಿಸಲಾಗಿದೆ. ಅಲ್ಲದೆ ಪರೀಕ್ಷಾ ಸಮಯದಲ್ಲೂ ವ್ಯತ್ಯಾಸ ಇದೆ. ಹಲವಾರು ಲೋಪದೋಷಗಳು ಕಾಣಿಸುತ್ತಿವೆ. ಇದರಿಂದ ನನಗೆ 11 ಮೈನಸ್ ಅಂಕಗಳು ಬಂದಿವೆ,” ಎಂದು ಅವರು ಆರೋಪಿಸಿದ್ದಾರೆ.
ಹಾವೇರಿ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮರುಪರೀಕ್ಷೆ ಬರೆದಿದ್ದಾಗಿ ತಿಳಿಸಿದ ಅವರು, “ನನಗೆ 720ರಲ್ಲಿ ಕನಿಷ್ಠ 668 ಅಂಕ ಬರಬೇಕಿತ್ತು. ಆದರೆ -11 ಅಂಕ ಬಂದಿದೆ. ಈ ಬಗ್ಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ ಜುಲೈ 22ರಂದು ದೂರು ಸಲ್ಲಿಸಿದ್ದೇನೆ. ಸಹಾಯವಾಣಿ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ,” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಜವಾದ ನಾಯಕತ್ವ ಅಂದರೆ ಅಧಿಕಾರ ಪಡೆಯುವುದಲ್ಲ; ಜನಪರವಾಗಿ ನಿಲ್ಲುವುದು – ಟಿ. ಸಿ. ಎಂ ಶರೀಫ್
ಎಸ್‌ಎಸ್‌ಎಲ್‌ಸಿಯಲ್ಲಿ 98% ಮತ್ತು ಪಿಯುಸಿಯಲ್ಲಿ 95% ಅಂಕ ಪಡೆದಿರುವ ಬಿಂದುಶ್ರೀ, “ಮೂರು ವರ್ಷಗಳಿಂದ ನಿರಂತರವಾಗಿ ನೀಟ್‌ಗೆ ತಯಾರಿ ಮಾಡಿಕೊಂಡಿದ್ದೇನೆ. ನನ್ನ ಡಾಕ್ಟರ್ ಆಗುವ ಕನಸು ಕುಸಿದಂತಾಗಿದೆ,” ಎಂದು ಭಾವುಕರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯ ತಂದೆ ಜಗದೀಶ್ ಪವಾರ್, “ನನ್ನ ಮಗಳು ಮೂರನೇ ಬಾರಿ ಪರೀಕ್ಷೆ ಬರೆದಿದ್ದಾಳೆ. ಅವಳಿಗೆ 668 ಅಂಕ ಬರಬೇಕಿತ್ತು. ಆದರೆ -11 ಅಂಕ ಬಂದಿದೆ. ಇದು ಹೇಗೆ ಸಾಧ್ಯ? ಮೂಲ OMR ಶೀಟ್ ನೀಡಬೇಕು. ಇಲ್ಲದಿದ್ದರೆ ಹೈಕೋರ್ಟ್‌ಗೆ ಮೊರೆ ಹೋಗುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಮರುಪರೀಕ್ಷೆಯಲ್ಲಿಯೂ ಈ ರೀತಿಯ ಲೋಪದೋಷಗಳು ಕಂಡುಬರುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿಸಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ. ಕೇಂದ್ರದ ಹೊಸ ಶಿಕ್ಷಣ ಮಂತ್ರಿಯ ಲೋಕಸಭಾ ಕ್ಷೇತ್ರದಿಂದ ಕೂಗಳತೆ ದೂರದಲ್ಲಿರುವ ವಿದ್ಯಾರ್ಥಿನಿಯ ಸಮಸ್ಯೆಯನ್ನು ಬಗೆ ಹರಿಸುವರೆ ಕಾದು ನೋಡಬೇಕಿದೆ?
ಇದನ್ನೂ ನೋಡಿ: SIR ಕರ್ನಾಟಕ: ಈಗಲೇ 80 ಲಕ್ಷ ಹೊರಗೆ?! ಮುಂದೆಷ್ಟು? | ವಿಶ್ಲೇಷಣೆ – ಕೆ.ಎಸ್. ವಿಮಲಾ Janashakthi Media
