ಹಾಸನ: ನಿಮ್ಮಂತಹ ಜಾಗೃತ ಯುವಜನತೆಯ ನಡುವೆ ಇರಲು ಅವಕಾಶ ಸಿಕ್ಕಿರುವುದು ನನಗೆ ಸಂತೋಷ ಮತ್ತು ಆಶಾದಾಯಕವಾಗಿದೆ. ಈ ಜಾಗರಣೆ ಕೇವಲ ಒಂದು ರಾತ್ರಿಯ ಕಾರ್ಯಕ್ರಮವಲ್ಲ; ಇದು ಪ್ರಜಾಪ್ರಭುತ್ವದಲ್ಲಿ ನಾಗರಿಕರ ಜಾಗೃತಿಯ ಸಂಕೇತವಾಗಿದೆ. ಅನ್ಯಾಯದ ಎದುರು ಮೌನವಾಗಿರದೆ, ಸಂವಿಧಾನಬದ್ಧ ಮತ್ತು ಶಾಂತಿಯುತ ರೀತಿಯಲ್ಲಿ ತಮ್ಮ ಧ್ವನಿಯನ್ನು ಎತ್ತುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಬೂಕರ್ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಬಾನು ಮುಷ್ತಾಕ್ ತಿಳಿಸಿದರು. ನೀಟ್
ದೆಹಲಿಯಲ್ಲಿ ಪ್ರತಿಭಟನಾ ನಿರತರ ಮೇಲೆ ಅಮಾನುಷ ಪೊಲೀಸ್ ದಾಳಿ ಖಂಡಿಸಿ, NEET ಅಕ್ರಮ ವಿರೋಧಿಸಿ, ವಿದ್ಯಾರ್ಥಿ ಯುವಜನರ ಹೋರಾಟವನ್ನು ಬೆಂಬಲಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿ ಹಾಸನದಲ್ಲಿ ನಡೆದ “ರಾತ್ರಿ ಎಚ್ಚರವಿರಿ ದೇಶವನ್ನು ಎಚ್ಚರಿಸಿ” ಸಾಂಸ್ಕೃತಿಕ ಪ್ರತಿರೋಧ – ಪ್ರತಿಭಟನೆಯನ್ನು ಉದ್ಘಾಟಿಸಿದರು. ನೀಟ್
ಒಂದು ರಾಷ್ಟ್ರದ ಭವಿಷ್ಯ ಅದರ ಕಟ್ಟಡಗಳಲ್ಲಿ ಅಥವಾ ಸಂಪತ್ತಿನಲ್ಲಿ ಇರುವುದಿಲ್ಲ; ಅದರ ಯುವಜನತೆಯ ಕನಸುಗಳಲ್ಲಿ ಇರುತ್ತದೆ. ಆ ಕನಸುಗಳಿಗೆ ನ್ಯಾಯ ಸಿಗದಿದ್ದರೆ, ದೇಶದ ಭವಿಷ್ಯವೇ ಪ್ರಶ್ನಾರ್ಥಕವಾಗುತ್ತದೆ. ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ; ಅದು ಸ್ವಾತಂತ್ರ್ಯ, ಸಮಾನತೆ ಮತ್ತು ಆತ್ಮಗೌರವದ ದಾರಿಯಾಗಿದೆ ಎಂದರು. ನೀಟ್
ಇದನ್ನೂ ಓದಿ: ‘ಸಂಸದ್ ಚಾಲೋ’ ಪ್ರತಿಭಟನೆಯಲ್ಲಿ ಹಿಂಸಾಚಾರ?: ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
1. ಜಾಗತಿಕ ಯುವಜನಸಂಖ್ಯೆಯ ಸ್ಥಿತಿಗತಿ ಮತ್ತು ಭಾರತದ ಸವಾಲು ಯುವಜನಸಂಖ್ಯೆ ಕಡಿಮೆ ಇರುವ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪರಿಸ್ಥಿತಿಗಳು ಇವು: ನೀಟ್
• ಜಪಾನ್: ಜನನ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ವೃದ್ಧರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಕಾರ್ಮಿಕರ ಕೊರತೆಯಿಂದ ಕೈಗಾರಿಕೆ, ಕೃಷಿ ಮತ್ತು ಸೇವಾ ಕ್ಷೇತ್ರಗಳು ಸಂಕಷ್ಟ ಎದುರಿಸುತ್ತಿವೆ. ಅನೇಕ ಗ್ರಾಮಗಳು ಜನರಿಲ್ಲದೆ ಖಾಲಿಯಾಗುತ್ತಿವೆ. ನೀಟ್
• ದಕ್ಷಿಣ ಕೊರಿಯಾ: ವಿಶ್ವದಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣ ಹೊಂದಿರುವ ದೇಶಗಳಲ್ಲಿ ಒಂದು. ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿವೆ. ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಸರ್ಕಾರ ಜನನ ಪ್ರಮಾಣ ಹೆಚ್ಚಿಸಲು ಅಪಾರ ಹಣ ಖರ್ಚು ಮಾಡುತ್ತಿದೆ.
• ಇಟಲಿ: ವೃದ್ಧರ ಪ್ರಮಾಣ ಹೆಚ್ಚಿರುವುದರಿಂದ ಪಿಂಚಣಿ ಮತ್ತು ಆರೋಗ್ಯ ವೆಚ್ಚ ಸರ್ಕಾರಕ್ಕೆ ದೊಡ್ಡ ಹೊರೆ ಆಗಿದೆ. ಉದ್ಯೋಗಕ್ಕೆ ಯುವಜನರ ಕೊರತೆಯಿಂದ ವಲಸಿಗ ಕಾರ್ಮಿಕರ ಮೇಲೆ ಅವಲಂಬನೆ ಹೆಚ್ಚುತ್ತಿದೆ.
• ಜರ್ಮನಿ: ಕೈಗಾರಿಕೆಗಳಿಗೆ ನುರಿತ ಕಾರ್ಮಿಕರ ಕೊರತೆ ಎದುರಾಗುತ್ತಿರುವುದರಿಂದ ವಿದೇಶಿ ವಲಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲಾಗುತ್ತಿದೆ.
ಭಾರತದ ಪರಿಸ್ಥಿತಿ ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಭಾರತದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಯುವಜನಸಂಖ್ಯೆ ಇದೆ. ಇದನ್ನೇ “ಜನಸಂಖ್ಯಾ ಲಾಭಾಂಶ” (Demographic Dividend) ಎಂದು ಕರೆಯಲಾಗುತ್ತದೆ. ಆದರೆ ಈ ಯುವಜನರಿಗೆ ಉತ್ತಮ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗಾವಕಾಶಗಳು ಸಿಗದಿದ್ದರೆ ಇದೇ ಲಾಭಾಂಶವು “ಜನಸಂಖ್ಯಾ ಹೊರೆ” (Demographic Burden) ಆಗುವ ಅಪಾಯವಿದೆ. ನೀಟ್
ಭಾಷಣದ ವಿಶೇಷ ಸಾಲುಗಳು:
“ಇಂದು ಜಪಾನ್, ದಕ್ಷಿಣ ಕೊರಿಯಾ, ಇಟಲಿಯಂತಹ ದೇಶಗಳು ಯುವಜನರ ಕೊರತೆಯಿಂದ ಬಳಲುತ್ತಿವೆ. ಅವರಿಗೆ ಕೆಲಸ ಮಾಡಲು ಯುವಕರು ಬೇಕು. ಆದರೆ ಭಾರತಕ್ಕೆ ಅದರ ವಿರುದ್ಧದ ವರವಿದೆ ವಿಶ್ವದಲ್ಲೇ ಅತಿ ದೊಡ್ಡ ಯುವಜನಸಂಖ್ಯೆ ನಮ್ಮದು. ಈ ಯುವಶಕ್ತಿಯನ್ನು ಗುಣಮಟ್ಟದ ಶಿಕ್ಷಣ, ಸಮಾನ ಅವಕಾಶ ಮತ್ತು ಉದ್ಯೋಗದ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಬೇಕಾದ ಸರ್ಕಾರ, ಶಿಕ್ಷಣವನ್ನೇ ದುಬಾರಿಗೊಳಿಸಿ, ಅವಕಾಶಗಳನ್ನು ಸೀಮಿತಗೊಳಿಸಿದರೆ ಅದು ಕೇವಲ ವಿದ್ಯಾರ್ಥಿಗಳ ನಷ್ಟವಲ್ಲ; ದೇಶದ ಭವಿಷ್ಯದ ಮೇಲಿನ ದೊಡ್ಡ ಅನ್ಯಾಯವಾಗುತ್ತದೆ. ಭಾರತದ ನಿಜವಾದ ಸಂಪತ್ತು ಚಿನ್ನವಲ್ಲ, ತೈಲವಲ್ಲ, ನಮ್ಮ ಯುವಜನರು. ಅವರನ್ನು ಕಳೆದುಕೊಂಡರೆ ದೇಶದ ಭವಿಷ್ಯವನ್ನೇ ಕಳೆದುಕೊಂಡಂತಾಗುತ್ತದೆ.” ನೀಟ್
2. ಭಾರತದ ಜನಸಂಖ್ಯಾ ಲಾಭಾಂಶ ಮತ್ತು ವಸ್ತುಸ್ಥಿತಿ
ಭಾರತವು ವಿಶ್ವದಲ್ಲೇ ಅತಿ ದೊಡ್ಡ ಯುವಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಸುಮಾರು 1.46 ಬಿಲಿಯನ್ (146 ಕೋಟಿ) ಜನಸಂಖ್ಯೆಯಲ್ಲಿ 15-29 ವರ್ಷದ ವಯೋಮಾನದವರು ಸುಮಾರು 27% (ಸುಮಾರು 37-38 ಕೋಟಿ) ಇದ್ದಾರೆ. 15-64 ವರ್ಷದ ಕೆಲಸ ಮಾಡುವ ವಯೋಮಾನದ ಜನಸಂಖ್ಯೆ ಸುಮಾರು 68% ಇರುವುದರಿಂದ ಭಾರತವು “ಜನಸಂಖ್ಯಾ ಲಾಭಾಂಶ” ಹೊಂದಿರುವ ದೇಶವೆಂದು ಪರಿಗಣಿಸಲಾಗಿದೆ.
ಪ್ರತಿವರ್ಷ ಲಕ್ಷಾಂತರ ಯುವಕರು ಉನ್ನತ ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ. ಆದರೆ ನಿರುದ್ಯೋಗ, ಅರೆ ಉದ್ಯೋಗ, ಕೌಶಲ್ಯದ ಕೊರತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅನಿಶ್ಚಿತತೆಗಳು ಯುವಜನತೆಯ ಪ್ರಮುಖ ಸವಾಲುಗಳಾಗಿವೆ. ಈ ಅಪಾರ ಯುವಶಕ್ತಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶಗಳು ಮತ್ತು ಪಾರದರ್ಶಕ ಆಡಳಿತವನ್ನು ಒದಗಿಸಲು ಸಾಧ್ಯವಾದರೆ, ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಈ ಯುವಜನತೆ ಅತ್ಯಂತ ದೊಡ್ಡ ಶಕ್ತಿಯಾಗಿ ರೂಪುಗೊಳ್ಳಬಹುದು.
3. ಯುವಜನತೆ ಎದುರಿಸುತ್ತಿರುವ ಗಂಭೀರ ಸವಾಲುಗಳು
ಭಾರತದ ಯುವಜನತೆ ಇಂದು ಅನೇಕ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಪ್ರಮುಖ ಸಮಸ್ಯೆಗಳು ಇಂತಿವೆ:
• ನಿರುದ್ಯೋಗ ಮತ್ತು ಅರೆ ಉದ್ಯೋಗ: ವಿದ್ಯಾರ್ಹತೆ ಇದ್ದರೂ ಸೂಕ್ತ ಉದ್ಯೋಗ ದೊರೆಯದಿರುವುದು.
• ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳು: ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗಳ ರದ್ದು, ನೇಮಕಾತಿಯಲ್ಲಿ ವಿಳಂಬ.
• ಕೌಶಲ್ಯ-ಉದ್ಯೋಗ ಅಂತರ: ಶಿಕ್ಷಣದಲ್ಲಿ ಕಲಿತ ಕೌಶಲ್ಯಗಳು ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದಿಕೆಯಾಗದಿರುವುದು.
• ಶಿಕ್ಷಣದ ದುಬಾರಿ ವೆಚ್ಚ: ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಎಲ್ಲರಿಗೂ ಕೈಗೆಟುಕದಿರುವುದು.
• ಮಾನಸಿಕ ಆರೋಗ್ಯ ಸಮಸ್ಯೆಗಳು: ಪರೀಕ್ಷೆಯ ಒತ್ತಡ, ನಿರುದ್ಯೋಗ ಮತ್ತು ಭವಿಷ್ಯದ ಅನಿಶ್ಚಿತತೆಯಿಂದ ಆತಂಕ, ಖಿನ್ನತೆ.
• ಗುತ್ತಿಗೆ ಮತ್ತು ತಾತ್ಕಾಲಿಕ ಉದ್ಯೋಗಗಳ ಹೆಚ್ಚಳ: ಶಾಶ್ವತ ಉದ್ಯೋಗಗಳ ಕೊರತೆ ಮತ್ತು ಉದ್ಯೋಗ ಭದ್ರತೆಯ ಅಭಾವ.
• ಗ್ರಾಮ-ನಗರ ಅಸಮಾನತೆ: ಗ್ರಾಮೀಣ ಯುವಕರಿಗೆ ಗುಣಮಟ್ಟದ ಶಿಕ್ಷಣ, ತರಬೇತಿ ಮತ್ತು ಉದ್ಯೋಗಾವಕಾಶಗಳ ಕೊರತೆ.
• ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ: ಬಡತನ, ಜಾತಿ, ಲಿಂಗ ಮತ್ತು ಪ್ರಾದೇಶಿಕ ಅಸಮಾನತೆಗಳು ಅವಕಾಶಗಳನ್ನು ಸೀಮಿತಗೊಳಿಸುವುದು.
ವಲಸೆ ಮತ್ತು ಮೆದುಳಿನ ವಲಸೆ (Brain Drain): ಉತ್ತಮ ಅವಕಾಶಗಳಿಗಾಗಿ ದೇಶದೊಳಗೆ ಅಥವಾ ವಿದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ.
• ಸಾರ್ವಜನಿಕ ಸಂಸ್ಥೆಗಳ ಮೇಲಿನ ವಿಶ್ವಾಸ ಕುಸಿತ: ನೇಮಕಾತಿ ವಿಳಂಬ, ಭ್ರಷ್ಟಾಚಾರದ ಆರೋಪಗಳು ಮತ್ತು ಆಡಳಿತದ ಮೇಲಿನ ಅನುಮಾನಗಳು ಯುವಕರಲ್ಲಿ ನಿರಾಸೆ ಮೂಡಿಸುವುದು.
ಈ ಸಮಸ್ಯೆಗಳು ಕೇವಲ ಯುವಕರ ವೈಯಕ್ತಿಕ ಬದುಕಿನ ಮೇಲೆ ಮಾತ್ರವಲ್ಲ, ದೇಶದ ಆರ್ಥಿಕ ಬೆಳವಣಿಗೆ, ಸಾಮಾಜಿಕ ಸ್ಥಿರತೆ ಮತ್ತು ಪ್ರಜಾಪ್ರಭುತ್ವದ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತವೆ.
4. ಯುವ ಜನತೆಯ ಮೇಲೆ ನಿರುದ್ಯೋಗದ ಪರಿಣಾಮ
ಭಾರತದ ಯುವಜನತೆಯಲ್ಲಿ ನಿರುದ್ಯೋಗವು ಇಂದು ಅತ್ಯಂತ ಗಂಭೀರ ಸಾಮಾಜಿಕ- ಆರ್ಥಿಕ ಸವಾಲುಗಳಲ್ಲಿ ಒಂದಾಗಿದೆ.
ಅಧಿಕೃತ ಅಂಕಿ-ಅಂಶಗಳು (PLFS):
2025ರ ವಾರ್ಷಿಕ PLFS ವರದಿಯ ಪ್ರಕಾರ, 15-29 ವರ್ಷದ ಯುವಕರ ನಿರುದ್ಯೋಗ ಪ್ರಮಾಣ 9.9% ಆಗಿದೆ. ಇದರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ೮.೩% ಮತ್ತು ನಗರ ಪ್ರದೇಶಗಳಲ್ಲಿ 13.6%ನಿರುದ್ಯೋಗ ದಾಖಲಾಗಿದೆ.
ಮಾಸಿಕ PLFS ಅಂಕಿ-ಅಂಶಗಳಲ್ಲಿ (Current Weekly Status) ಈ ಪ್ರಮಾಣವು ಕೆಲ ತಿಂಗಳುಗಳಲ್ಲಿ 14-15% ರವರೆಗೆ ಏರಿಳಿತ ಕಂಡಿದೆ.
ನಿರುದ್ಯೋಗದ ಸಾಮಾಜಿಕ ಪರಿಣಾಮಗಳು:
• ಯುವಕರಲ್ಲಿ ನಿರಾಶೆ, ಆತಂಕ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತದೆ.
• ಕುಟುಂಬಗಳ ಆರ್ಥಿಕ ಹೊರೆ ಹೆಚ್ಚಾಗಿ, ಮದುವೆ, ಮನೆ ನಿರ್ಮಾಣ ಮತ್ತು ಜೀವನದ ಯೋಜನೆಗಳು ಮುಂದೂಡಲ್ಪಡುತ್ತವೆ.
• ಪ್ರತಿಭಾವಂತ ಯುವಕರು ಉತ್ತಮ ಅವಕಾಶಗಳಿಗಾಗಿ ವಿದೇಶಗಳಿಗೆ ಅಥವಾ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ.
• ದೀರ್ಘಕಾಲ ಉದ್ಯೋಗವಿಲ್ಲದಿರುವುದು ಅಪರಾಧ, ಮಾದಕ ವ್ಯಸನ, ಹಿಂಸಾಚಾರ ಮತ್ತು ಸಮಾಜವಿರೋಧಿ ಚಟುವಟಿಕೆಗಳ ಅಪಾಯವನ್ನು ಹೆಚ್ಚಿಸಬಹುದು.
ಶಿಕ್ಷಣದ ಮೇಲೆ ಮತ್ತು ಸಾರ್ವಜನಿಕ ನೇಮಕಾತಿ ವ್ಯವಸ್ಥೆಯ ಮೇಲೆ ವಿಶ್ವಾಸ ಕುಸಿಯುವ ಸಾಧ್ಯತೆ ಉಂಟಾಗುತ್ತದೆ.
5. ರಾಷ್ಟ್ರೀಯ ಮಾದರಿ ಸಮೀಕ್ಷೆ ವರದಿ (NSSO) ಮತ್ತು ಆಡಳಿತಾತ್ಮಕ ಜವಾಬ್ದಾರಿ
ದೇಶದಲ್ಲಿ ನಿರುದ್ಯೋಗವು ಹಲವು ದಶಕಗಳಲ್ಲೇ ಅತ್ಯಂತ ಗಂಭೀರ ಮಟ್ಟ ತಲುಪಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ವರದಿ ಸೂಚಿಸಿದಾಗ ಆ ವರದಿಯ ಪ್ರಕಟಣೆಯನ್ನು ಸರ್ಕಾರ ತಡೆಹಿಡಿದಿತೆಂಬ ಟೀಕೆ ವ್ಯಕ್ತವಾಗಿತ್ತು. ಅದೇ ರೀತಿ, 2016ರ ನಂತರ ರೈತರ ಆತ್ಮಹತ್ಯೆಗಳ ಕುರಿತು ಅಧಿಕೃತ ಅಂಕಿ-ಅಂಶಗಳ ಪ್ರಕಟಣೆಯಲ್ಲಿಯೂ ಪಾರದರ್ಶಕತೆಯ ಕೊರತೆ ಇದೆ ಎಂಬ ಆರೋಪಗಳೂ ಕೇಳಿಬಂದವು.
ಆದರೆ ಕೃಷಿ ಕಾನೂನುಗಳ ವಿರುದ್ಧ ನಡೆದ ಪಂಜಾಬ್-ಹರಿಯಾಣ ರೈತರ ಐತಿಹಾಸಿಕ ಹೋರಾಟವು ಸರ್ಕಾರವನ್ನು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು. ಇದರಿಂದ ಅಧಿಕಾರ ಎಷ್ಟೇ ಪ್ರಬಲವಾಗಿದ್ದರೂ, ಸಂಘಟಿತ ಜನಶಕ್ತಿಯ ಮುಂದೆ ಅದು ತಲೆಬಾಗಬೇಕಾಗುತ್ತದೆ ಎಂಬ ಸಂದೇಶ ಹೊರಬಂದಿತು.
ಆದ್ದರಿಂದ “ಸಬ್ಬಾ ವಿಕಾಸ್’ ಎಂಬ ಘೋಷಣೆ ಎಲ್ಲರ ಅಭಿವೃದ್ಧಿಗೆ ಕಾರಣವಾಗದೆ, ಅನೇಕ ವರ್ಗಗಳಲ್ಲಿ ನಿರಾಶೆ ಮತ್ತು ಅಸಮಾಧಾನವನ್ನು ಹುಟ್ಟಿಸಿತು ಎಂಬುದು ಈ ಅಭಿಪ್ರಾಯದ ಮೂಲ ವಾದವಾಗಿದೆ.
6. ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಜಗತ್ತಿನಲ್ಲಿ ಯುವಶಕ್ತಿ
2014ರ ಚುನಾವಣೆಯು ಭಾರತದ ರಾಜಕೀಯ ಸಂವಹನದಲ್ಲಿ ಒಂದು ದೊಡ್ಡ ತಿರುವಾಗಿತ್ತು. ಆ ಸಂದರ್ಭದಲ್ಲಿ ಹೊಸದಾಗಿ ಜನಪ್ರಿಯವಾಗುತ್ತಿದ್ದ ಸಾಮಾಜಿಕ ಮಾಧ್ಯಮಗಳನ್ನು ರಾಜಕೀಯ ಪ್ರಚಾರಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಆದರೆ ಒಂದು ದಶಕದ ನಂತರ ಚಿತ್ರ ಬದಲಾಗಿದೆ.
ಈಗ ಅದೇ ಸಾಮಾಜಿಕ ಮಾಧ್ಯಮವು ಕೇವಲ ರಾಜಕೀಯ ಪ್ರಚಾರದ ಸಾಧನವಲ್ಲ; ಅದು ಪ್ರಶ್ನೆ ಕೇಳುವ, ಮಾಹಿತಿ ಹಂಚಿಕೊಳ್ಳುವ ಮತ್ತು ಸಾರ್ವಜನಿಕ ಅಭಿಪ್ರಾಯ ರೂಪಿಸುವ ವೇದಿಕೆಯಾಗಿದೆ.
ವಿಶೇಷವಾಗಿ ಜೆನ್-ಝೀ (Gen Z) ಯುವಕರು ರೀಲ್ಸ್, ಮೀಮ್ಸ್, ಯೂಟ್ಯೂಬ್, ಇನ್ಸ್ಟಾಗ್ರಾಂ, ಎಕ್ಸ್ ಹಾಗೂ ಇತರ ಡಿಜಿಟಲ್ ವೇದಿಕೆಗಳನ್ನು ಕೇವಲ ಮನರಂಜನೆಗೆ ಮಾತ್ರವಲ್ಲ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಚರ್ಚೆಗೂ ಬಳಸುತ್ತಿದ್ದಾರೆ.
ಒಮ್ಮೆ ಏಕಮುಖ ಪ್ರಚಾರದ ಸಾಧನವಾಗಿದ್ದ ಸಾಮಾಜಿಕ ಮಾಧ್ಯಮ ಇಂದು ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಪ್ರತಿಕ್ರಿಯೆ, ಪ್ರಶ್ನೆ ಮತ್ತು ವಿಮರ್ಶೆಯನ್ನು ತಲುಪಿಸುವ ಪ್ರಜಾಸತ್ತಾತ್ಮಕ ವೇದಿಕೆಯಾಗಿ ರೂಪುಗೊಂಡಿದೆ.
7. ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಪ್ರಶ್ನಿಸುವ ಹಕ್ಕು
ಯಾವ ತಂತ್ರಜ್ಞಾನ ಹಿಂದೆ ಪ್ರಚಾರದ ಆಯುಧವಾಗಿತ್ತೋ, ಇಂದು ಅದೇ ತಂತ್ರಜ್ಞಾನ ಪ್ರಶ್ನಿಸುವ ಆಯುಧವಾಗಿದೆ. ಸದಾ ರೀಲ್ಸ್, ಮೀಮ್ಸ್ ಮತ್ತು ಶಾರ್ಟ್ ವಿಡಿಯೊಗಳಲ್ಲಿ ತೊಡಗಿರುವ ಹೊಸ ತಲೆಮಾರಿನ ಯುವಜನರ ಕೈಯಲ್ಲೇ ಈಗ ಆಡಳಿತದ ಹೇಳಿಕೆಗಳು, ಸಚಿವರ ಭಾಷಣಗಳು, ಹಳೆಯ ಭರವಸೆಗಳು ಮತ್ತು ಇಂದಿನ ವಾಸ್ತವಗಳ ನಡುವಿನ ವ್ಯತ್ಯಾಸವನ್ನು ತೋರಿಸುವ “ಸ್ಟ್ರಾಂಗ್ ಕಂಟೆಂಟ್” ಸಿದ್ಧವಾಗುತ್ತಿದೆ.
ಇದಕ್ಕೆ ಮತ್ತೊಂದು ಗಮನಾರ್ಹ ಬೆಳವಣಿಗೆ ಮುಖ್ಯವಾಹಿನಿಯ ಮಾಧ್ಯಮಗಳ ಮೇಲಿನ ಯುವಜನರ ವಿಶ್ವಾಸ ಕುಸಿದಿರುವುದು. ಪ್ರತಿಭಟನಾ ಸ್ಥಳಗಳಲ್ಲಿ ಮಾಧ್ಯಮ ವರದಿಗಾರಿಕೆಯನ್ನು ಯುವಜನರು ತಕ್ಷಣವೇ ಹೋಲಿಕೆಗಳು, ವಿಡಿಯೊ ತುಣುಕುಗಳು ಮತ್ತು ಫ್ಯಾಕ್ಟ್ಚೆಕ್ಗಳ ಮೂಲಕ ಪ್ರಶ್ನಿಸುತ್ತಿದ್ದಾರೆ. ಹಿಂದೆ ಕಥೆಯನ್ನು ಮಾಧ್ಯಮವೇ ನಿರ್ಧರಿಸುತ್ತಿತ್ತು; ಇಂದು ಅದರ ವಿಶ್ವಾಸಾರ್ಹತೆಯನ್ನೇ ಸಾರ್ವಜನಿಕರು ಪರೀಕ್ಷಿಸುತ್ತಿದ್ದಾರೆ.
8. ಪ್ರಜಾಪ್ರಭುತ್ವ, ಭಿನ್ನಾಭಿಪ್ರಾಯ ಮತ್ತು ಸತ್ಯಾಗ್ರಹ
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವು ರಾಷ್ಟ್ರವಿರೋಧವಲ್ಲ; ಅದು ಪ್ರಜಾಪ್ರಭುತ್ವದ ಜೀವಂತಿಕೆಯ ಸಂಕೇತ. ಚಳವಳಿಯೆಂದರೆ ಸರ್ಕಾರವನ್ನು ಉರುಳಿಸುವ ಪ್ರಯತ್ನವಲ್ಲ; ಆಡಳಿತದ ಗಮನಕ್ಕೆ ಜನರ ನೋವು, ಅಸಮಾಧಾನ ಮತ್ತು ಬೇಡಿಕೆಗಳನ್ನು ತರುವ ಸಂವಿಧಾನಬದ್ಧ ಮಾರ್ಗ. ಸತ್ಯಾಗ್ರಹವೆಂದರೆ ಹಿಂಸೆಯ ವಿರುದ್ಧ ಸತ್ಯ ಮತ್ತು ಅಹಿಂಸೆಯ ಶಕ್ತಿಯಿಂದ ಅಧಿಕಾರವನ್ನು ಆತ್ಮಾವಲೋಕನಕ್ಕೆ ಒತ್ತಾಯಿಸುವ ನೈತಿಕ ಹೋರಾಟ.

ಪ್ರತಿಭಟನಾಕಾರರಿಗೆ “ತುಕ್ಲ ಗ್ಯಾಂಗ್”, “ರಾಷ್ಟ್ರವಿರೋಧಿ”, “ದೇಶದ್ರೋಹಿ”, “ಖಾಲಿಸ್ತಾನಿ”, “ಜಿಹಾದಿ” ಎಂಬಂತಹ ಲೇಬಲ್ಗಳನ್ನು ಅಂಟಿಸುವ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಯುವಜನರ ಧ್ವನಿಯನ್ನು ದಮನಿಸುವುದರಿಂದ ಅಸಮಾಧಾನ ಮಾಯವಾಗುವುದಿಲ್ಲ; ಅದು ಇನ್ನಷ್ಟು ಆಳವಾಗುತ್ತದೆ. ಪ್ರಜಾಪ್ರಭುತ್ವದ ಶಕ್ತಿಯು ಲಾಠಿ, ಅಶ್ರುವಾಯು ಅಥವಾ ಅಪಪ್ರಚಾರದಲ್ಲಿ ಅಲ್ಲ; ಭಿನ್ನಾಭಿಪ್ರಾಯವನ್ನು ಗೌರವದಿಂದ ಆಲಿಸಿ, ಅದರೊಂದಿಗೆ ಸಂವಾದ ನಡೆಸುವ ಪ್ರಬುದ್ಧತೆಯಲ್ಲಿದೆ. ನೀಟ್
ಈ ಪ್ರಶ್ನೆಗಳನ್ನು ಎತ್ತುವುದು ದೇಶವಿರೋಧವಲ್ಲ; ಅದು ಉತ್ತಮ ಭಾರತವನ್ನು ಕಟ್ಟುವ ಜವಾಬ್ದಾರಿಯಾಗಿದೆ.
9. ನೀಟ್, ಶಿಕ್ಷಣದ ವ್ಯಾಪಾರೀಕರಣ ಮತ್ತು ವಿದ್ಯಾರ್ಥಿಗಳ ಭವಿಷ್ಯ
ನಮ್ಮ ಹೋರಾಟ ಕೇವಲ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧವಲ್ಲ; ನಮ್ಮ ಹೋರಾಟ ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ. ನೀಟ್ ಜಾರಿಯಾದ ನಂತರ ಅತಿ ದೊಡ್ಡ ಲಾಭ ಪಡೆದಿರುವುದು ಖಾಸಗಿ ಕೋಚಿಂಗ್ ಉದ್ಯಮ, ಇಂದು ಖಾಸಗಿ ಕೋಚಿಂಗ್ ಉದ್ಯಮವು ಲಕ್ಷಾಂತರ ಕೋಟಿ ರೂಪಾಯಿಗಳ ಮೌಲ್ಯದ (ಸುಮಾರು 780,000 ಕೋಟಿಯಿಂದ 1 ಲಕ್ಷ ಕೋಟಿ) ಉದ್ಯಮವಾಗಿ ಬೆಳೆಯುತ್ತಿದೆ.

ಇಂದು ಸುಮಾರು 23 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ದೇಶದಾದ್ಯಂತ ಎಂಬಿಬಿಎಸ್ ಸೀಟುಗಳು ಸುಮಾರು 1.36 ಲಕ್ಷ ಮಾತ್ರ. ಅದರಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 63 ಸಾವಿರ ಸೀಟುಗಳಿದ್ದು, ಉಳಿದವು ಖಾಸಗಿ ಕಾಲೇಜುಗಳಲ್ಲಿವೆ. ಹಣವಿಲ್ಲದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಇನ್ನೂ ದೂರದ ಕನಸಾಗಿಯೇ ಉಳಿದಿದೆ.
ನಮ್ಮ ಸ್ಪಷ್ಟ ಬೇಡಿಕೆಗಳು:
• ನೀಟ್ ವ್ಯವಸ್ಥೆಯ ಸಮಗ್ರ ಮರುಪರಿಶೀಲನೆ ನಡೆಯಬೇಕು.
• ಶಿಕ್ಷಣವನ್ನು ವ್ಯಾಪಾರವಾಗಿಸಿರುವ ಕೋಚಿಂಗ್ ಮಾಫಿಯಾದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ತರಬೇಕು.
• ದೇಶಾದ್ಯಂತ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹಾಗೂ ಸೀಟುಗಳನ್ನು ಗಣನೀಯವಾಗಿ ಹೆಚ್ಚಿಸಬೇಕು.
• ವೈದ್ಯಕೀಯ ಶಿಕ್ಷಣವು ಹಣವಿರುವವರ ಹಕ್ಕಾಗದೆ, ಪ್ರತಿಭೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲರಿಗೂ ಲಭ್ಯವಾಗಬೇಕು.
• ರಾಜ್ಯಗಳಿಗೆ ತಮ್ಮದೇ ಪ್ರವೇಶ ವ್ಯವಸ್ಥೆ ರೂಪಿಸಿಕೊಳ್ಳುವ ಹಕ್ಕಿನ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯಬೇಕು.
• ಶಿಕ್ಷಣವನ್ನು ಮಾರುಕಟ್ಟೆಯ ವಸ್ತುವಾಗಿಸದೆ, ಸಂವಿಧಾನ ನೀಡಿರುವ ಸಮಾನ ಅವಕಾಶದ ಹಕ್ಕಾಗಿ ರಕ್ಷಿಸಬೇಕು.
10. ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಚಳವಳಿಯ ಮುಂದಿನ ದಾರಿ
ನಿಮ್ಮ ಹೋರಾಟ ಯಾವುದೇ ಒಬ್ಬ ವ್ಯಕ್ತಿಯ ವಿರುದ್ಧವಲ್ಲ; ಅದು ನ್ಯಾಯ, ಪಾರದರ್ಶಕತೆ ಮತ್ತು ಸಮಾನ ಅವಕಾಶಗಳ ಪರವಾಗಿರಬೇಕು. ನಿಮ್ಮ ಧ್ವನಿ ಸಂವಿಧಾನದ ಮೌಲ್ಯಗಳನ್ನು ಬಲಪಡಿಸುವಂತಿರಲಿ. ನಿಮ್ಮ ಕೋಪವನ್ನು ಸೃಜನಶೀಲ ಶಕ್ತಿಯನ್ನಾಗಿ ಪರಿವರ್ತಿಸಿ. ನಿಮ್ಮ ಪ್ರತಿಭಟನೆ ಶಾಂತಿಯುತವಾಗಿದ್ದರೆ ಅದರ ನೈತಿಕ ಬಲ ಇನ್ನಷ್ಟು ಹೆಚ್ಚಾಗುತ್ತದೆ.
ಭಾರತದ ಸಂವಿಧಾನದ ಪ್ರಸ್ತಾವನೆ “ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ” ಎಂಬ ನಾಲ್ಕು ಮೌಲ್ಯಗಳನ್ನು ನಮಗೆ ನೀಡಿದೆ. ಈ ನಾಲ್ಕು ಮೌಲ್ಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರಕ್ಕಿರುವಷ್ಟೇ ನಾಗರಿಕರಿಗೂ ಇದೆ.
ಸೋನಂ ವಾಂಗ್ಲುಕ್ ಆಗಲಿ, ಅಭಿಜಿತ್ ದಿಪ್ಕೆ ಆಗಲಿ, ಅವರು ಈ ಹೋರಾಟದ ನಿಮಿತ್ತ ಮಾತ್ರ. ನಿಜವಾದ ಶಕ್ತಿ ವ್ಯಕ್ತಿಗಳಲ್ಲ, ಜನರಲ್ಲಿದೆ. ಇಂದು ಭಾರತದಾದ್ಯಂತ ವ್ಯಾಪಿಸಿರುವ ಲಕ್ಷಾಂತರ ವಿದ್ಯಾರ್ಥಿಗಳ ನೋವು, ಆತಂಕ ಮತ್ತು ಭವಿಷ್ಯದ ಕುರಿತ ಕಳವಳವೇ ಈ ಸತ್ಯಾಗ್ರಹದ ಜೀವಾಳವಾಗಿದೆ.
ಈ ಜಾಗರಣೆ ಬೆಳಗಿಸುವುದು ಕೇವಲ ದೀಪಗಳಲ್ಲ; ಯುವಕರ ಮನಸ್ಸಿನಲ್ಲಿರುವ ಆಶೆಯ ಬೆಳಕು. ಈ ಬೆಳಕು ನಾಳೆಯ ಭಾರತವನ್ನು ಹೆಚ್ಚು ನ್ಯಾಯಯುತ, ಹೆಚ್ಚು ಸಮಾನ ಮತ್ತು ಹೆಚ್ಚು ಮಾನವೀಯ ರಾಷ್ಟ್ರವನ್ನಾಗಿ ರೂಪಿಸಲಿ.
ಇದನ್ನೂ ನೋಡಿ: ಯುವಜನತೆ ಪ್ರತಿಭಟನೆ: ಜೆನ್ ಜಿಫಿಕೇಶನ್ Janashakthi Media
