ಬೆಂಗಳೂರು: ಜೈವಿಕ ವೈವಿಧ್ಯದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ (KSWGCT) ಹೊಸ ‘ರಾಷ್ಟ್ರೀಯ ಪಶ್ಚಿಮ ಘಟ್ಟ ಸಂರಕ್ಷಣಾ ನೀತಿ’ (Master Policy Blueprint) ಕರಡನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ನೀತಿಯು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸುವ ಹೊಸ ಮಾದರಿಯನ್ನು ಮುಂದಿಡುತ್ತದೆ.
ಕಾರ್ಯಪಡೆ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಆಲಂ ಶರೀಫ್ ಅವರ ಪ್ರಕಾರ, ಈ ನೀತಿಯು ಹಿಂದೆ ಚರ್ಚೆಗೆ ಗ್ರಾಸವಾಗಿದ್ದ ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿರಂಗನ್ ವರದಿಗಳಿಗಿಂತ ಭಿನ್ನವಾದ ವಿಧಾನವನ್ನು ಅನುಸರಿಸಿದೆ. ನಿರ್ಬಂಧಗಳ ಮೂಲಕ ಸಂರಕ್ಷಣೆ ಮಾಡುವ ಬದಲು, ಸೂಕ್ಷ್ಮ ವಲಯೀಕರಣ (Micro-zoning), ಕಾನೂನುಬದ್ಧ ಮೇಲ್ವಿಚಾರಣೆ ಹಾಗೂ ಆರ್ಥಿಕ ಪ್ರೋತ್ಸಾಹದ ಮೂಲಕ ಪರಿಸರ ಸಂರಕ್ಷಣೆ ಮಾಡುವ ಮಾದರಿಯನ್ನು ಇದು ಪ್ರಸ್ತಾಪಿಸಿದೆ.
ನೀತಿಯಲ್ಲಿ 100 ಚದರ ಮೀಟರ್ ಮಟ್ಟದ ಅತ್ಯಾಧುನಿಕ ಜಿಐಎಸ್ ಮ್ಯಾಪಿಂಗ್ ಬಳಸಿ ಗ್ರಾಮ ಮಟ್ಟದಲ್ಲೇ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಕೃಷಿಭೂಮಿ, ಜನವಸತಿ ಮತ್ತು ಸಾಂಸ್ಕೃತಿಕ ಪ್ರದೇಶಗಳಿಗೆ ಧಕ್ಕೆಯಾಗದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಸಾಧ್ಯವಾಗಲಿದೆ ಎಂದು ಕಾರ್ಯಪಡೆ ಹೇಳಿದೆ.
ಅರಣ್ಯ ಸಂರಕ್ಷಣೆಗೆ ಆರ್ಥಿಕ ಪ್ರೋತ್ಸಾಹ
ನೀತಿಯಲ್ಲಿ ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಅರಣ್ಯ ಸಂರಕ್ಷಣೆಗೆ ಆರ್ಥಿಕ ಲಾಭ ಒದಗಿಸುವ ವ್ಯವಸ್ಥೆಯನ್ನೂ ಸೂಚಿಸಲಾಗಿದೆ. ಅರಣ್ಯ ನಾಶವನ್ನು ತಡೆಯುವ ಪಂಚಾಯಿತಿಗಳಿಗೆ ‘ಗ್ರೀನ್ ಬೋನಸ್’, ಬಹುಜಾತಿ ಕೃಷಿ-ಅರಣ್ಯ ಪದ್ಧತಿಗೆ (Agro-forestry) ಬರುವ ರೈತರಿಗೆ ಪ್ರೋತ್ಸಾಹಧನ ಹಾಗೂ ಪರಿಸರ ಸೇವೆಗಳಿಗೆ ಪಾವತಿ (Payment for Ecosystem Services – PES) ವ್ಯವಸ್ಥೆ ಜಾರಿಗೆ ತರಲು ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ :ನ್ಯಾಯಬೆಲೆ ಅಂಗಡಿಗಳ ಕಾರ್ಯಾವಧಿ ವಿಸ್ತರಣೆ: ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಪಡಿತರ ವಿತರಣೆ
ಅಭಿವೃದ್ಧಿ ಯೋಜನೆಗಳಿಗೆ ಷರತ್ತುಬದ್ಧ ಅನುಮತಿ
ಜಲವಿದ್ಯುತ್ ಯೋಜನೆಗಳಿಗೆ ಕನಿಷ್ಠ 30 ಶೇಕಡಾ ಪರಿಸರ ಹರಿವು (Ecological Flow) ಕಡ್ಡಾಯಗೊಳಿಸುವುದು, ಪರಿವರ್ತನಾ ವಲಯಗಳಲ್ಲಿ ನಿಯಂತ್ರಿತ ಗಣಿಗಾರಿಕೆಗೆ ಅವಕಾಶ ನೀಡುವುದು ಹಾಗೂ ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನು ವನ್ಯಜೀವಿ ಸಂರಕ್ಷಣಾ ಕ್ರಮಗಳೊಂದಿಗೆ ಅನುಮತಿಸುವ ಪ್ರಸ್ತಾವನೆಯೂ ವರದಿಯಲ್ಲಿದೆ. ಇದರಿಂದ ವಿವಿಧ ರಾಜ್ಯಗಳು ವ್ಯಕ್ತಪಡಿಸಿದ್ದ ಆಕ್ಷೇಪಣೆಗಳಿಗೆ ಪರಿಹಾರ ದೊರೆಯಬಹುದು ಎಂದು ಕಾರ್ಯಪಡೆ ಅಭಿಪ್ರಾಯಪಟ್ಟಿದೆ.
ಐದು ಸಂಪುಟಗಳಲ್ಲಿ ಸಮಗ್ರ ನೀತಿ
ಈ ನೀತಿ ಕರಡನ್ನು ಐದು ಸಂಪುಟಗಳಾಗಿ ಸಿದ್ಧಪಡಿಸಲಾಗಿದ್ದು, ಪರಿಸರ ಮೂಲಾಧಾರ, ಕಾನೂನು ಚೌಕಟ್ಟು, ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆ, ಹಣಕಾಸು ವ್ಯವಸ್ಥೆ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಈ ಸಂಪುಟಗಳನ್ನು ಹಂತ ಹಂತವಾಗಿ ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಕಾರ್ಯಪಡೆ ತಿಳಿಸಿದೆ.
ಗಾಡ್ಗಿಲ್–ಕಸ್ತೂರಿರಂಗನ್ ವರದಿಗಳ ನಂತರದ ಹೊಸ ಪ್ರಯತ್ನ
ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿರಂಗನ್ ವರದಿಗಳನ್ನು ಪಶ್ಚಿಮ ಘಟ್ಟ ವ್ಯಾಪಿಸಿರುವ ಆರು ರಾಜ್ಯಗಳು ಈ ಹಿಂದೆ ವಿರೋಧಿಸಿದ್ದವು. ಆ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಸಿದ್ಧಗೊಂಡಿರುವ ಈ ಹೊಸ ನೀತಿ ಕರಡು, ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಎರಡನ್ನೂ ಸಮನ್ವಯಗೊಳಿಸುವ ಪರ್ಯಾಯ ಮಾದರಿಯಾಗಿ ಪರಿಗಣಿಸಲಾಗುತ್ತಿದೆ.
ಇದನ್ನೂ ನೋಡಿ : ನೀಟ್ ಹಗರಣ | ವಿದ್ಯಾರ್ಥಿಗಳೇ ಎದ್ದೇಳಿ! ಹೋರಾಟಕ್ಕೆ ಜೊತೆಯಾಗಿ — ನಟ ಕಿಶೋರ್ ಮನವಿ Janashakthi Media
