ಬೆಂಗಳೂರು: ರಾಜ್ಯದ 178 ತಾಲ್ಲೂಕುಗಳು ಮಳೆಯ ಕೊರತೆಯನ್ನು ಎದುರಿಸುತ್ತಿದ್ದು, ಅವುಗಳಲ್ಲಿ 60 ತಾಲ್ಲೂಕುಗಳು ತೀವ್ರ ಮಳೆಯ ಕೊರತೆಯಿಂದ ಬಳಲುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿಪಡಿಸಿ ಸಂಕಷ್ಟದ ವಲಸೆಯನ್ನು ತಡೆಗಟ್ಟುವ ಉದ್ದೇಶದಿಂದ ವಿಬಿಗ್ರಾಮ್‌ಜಿ ಯೋಜನೆಯಡಿ ಪ್ರತಿ ತಿಂಗಳು 1.25 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ. ವಿಬಿಗ್ರಾಮ್‌ಜಿ
ಸೋಮವಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಕಾಮಗಾರಿಗಳಿಗೆ ವೇಗ ನೀಡುವಂತೆ ಸೂಚಿಸಿದರು. ಮಳೆ ಕೊರತೆಯಿಂದ ಗ್ರಾಮಗಳಿಂದ ನಗರಗಳಿಗೆ ವಲಸೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಉದ್ಯೋಗ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಈಗಾಗಲೇ ₹117 ಕೋಟಿ ಬಿಡುಗಡೆ ಮಾಡಿದೆ. ನೀರಿನ ಮೂಲಗಳು ಬತ್ತಿರುವ ಪ್ರದೇಶಗಳಲ್ಲಿ ಖಾಸಗಿ ಬೋರ್‌ವೆಲ್‌ಗಳು ಮತ್ತು ತೆರೆದ ಬಾವಿಗಳನ್ನು ಬಾಡಿಗೆಗೆ ಪಡೆಯಲು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ತೀವ್ರ ಪರಿಸ್ಥಿತಿಯಲ್ಲಿ ಹೊಸ ಕೊಳವೆಬಾವಿ ಕೊರೆಯಲು ಸಹ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ಮೂರು-ನಾಲ್ಕು ತಿಂಗಳಲ್ಲಿಯೂ ಮಳೆಯ ಸ್ಥಿತಿ ಸುಧಾರಿಸದಿದ್ದರೆ, ಮುಂದಿನ ಮುಂಗಾರು ಹಂಗಾಮಿನವರೆಗೆ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ತುರ್ತು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಇದನ್ನೂ ಓದಿ : ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೊಲೀಸ್ ಹಿಂಸಾಚಾರ-ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡನೆ
ಬೆಳೆ ವಿಮೆ ಯೋಜನೆಯಡಿ ರೈತರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಖಂಡ್ರೆ, ಬಾಕಿ ಸಾಲ ಹೊಂದಿರುವವರು ಹಾಗೂ ಒನ್‌ಟೈಮ್ ಸೆಟಲ್‌ಮೆಂಟ್ ಮೂಲಕ ಸಾಲ ತೀರಿಸಿದ ರೈತರೂ ಸಹ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ವಿಮೆ ಕಂತು ಪಾವತಿಸಿ ಯೋಜನೆಯ ಲಾಭ ಪಡೆಯಬಹುದು ಎಂದು ಹೇಳಿದರು. ವಿಬಿಗ್ರಾಮ್‌ಜಿ
ಕೇಂದ್ರ ಸರ್ಕಾರ ಹಣಕಾಸಿನ ಪಾಲುದಾರಿಕೆ ಅನುಪಾತವನ್ನು 90:10ರಿಂದ 60:40ಕ್ಕೆ ಇಳಿಸಿದ್ದರೂ, ರಾಜ್ಯ ಸರ್ಕಾರ ಜುಲೈ 1ರಿಂದ ವಿಬಿಗ್ರಾಮ್‌ಜಿ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದ ರಾಜ್ಯದ ಮೇಲಿನ ಆರ್ಥಿಕ ಹೊರೆ ಹೆಚ್ಚಾದರೂ ಗ್ರಾಮೀಣ ಉದ್ಯೋಗಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಯೋಜನೆಯಡಿ ಇದುವರೆಗೆ 5 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದ್ದು, ಜುಲೈ ಅಂತ್ಯದ ವೇಳೆಗೆ 10 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಮೊದಲ ತ್ರೈಮಾಸಿಕದಲ್ಲೇ ಯೋಜನೆ ಅನುಷ್ಠಾನಕ್ಕೆ ₹2,900 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ವಿಬಿಗ್ರಾಮ್‌ಜಿ ಯೋಜನೆಯಡಿ ಶಾಲಾ ಕಟ್ಟಡಗಳು, ಆರೋಗ್ಯ ಕೇಂದ್ರಗಳು ಹಾಗೂ ಇತರೆ ಸರ್ಕಾರಿ ಕಟ್ಟಡಗಳ ದುರಸ್ತಿ, ಕೃಷಿ ಹೊಂಡಗಳ ನಿರ್ಮಾಣ, ವಿತರಣಾ ಕಾಲುವೆಗಳು, ಹನಿ ನೀರಾವರಿ ವ್ಯವಸ್ಥೆ, ಮಿನಿ ಅರಣ್ಯ ಅಭಿವೃದ್ಧಿ ಸೇರಿದಂತೆ 318 ಬಗೆಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಗ್ರಾಮ ಪಂಚಾಯಿತಿಗಳು ಹೆಚ್ಚುವರಿ ಕಾಮಗಾರಿ ಯೋಜನೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಯೋಜನೆಯಡಿ ಗ್ರಾಮೀಣ ಉದ್ಯೋಗ ಚೀಟಿ ಹೊಂದಿರುವ ಪ್ರತಿಯೊಬ್ಬ ಅರ್ಹರಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ನೀಡಲಾಗುವುದು ಎಂದು ಖಂಡ್ರೆ ತಿಳಿಸಿದರು.
ಇದನ್ನೂ ನೋಡಿ : ಶೇ.33% ಮಹಿಳಾ ಮೀಸಲಾತಿ ತಕ್ಷಣ ಜಾರಿ ಮಾಡಿ! ಬೆಂಗಳೂರಿನಲ್ಲಿ ಮಹಿಳಾ ಸಂಘಟನೆಗಳ ಪ್ರತಿಭಟನೆ Janashakthi Media
