ಬಿಸಿ ರೋಡಿನಲ್ಲಿ ಯುವತಿಯ ಬರ್ಬರ ಹತ್ಯೆ ಖಂಡನೀಯ – ಸಿಪಿಐಎಂ

ಮಹಿಳೆಯರ ಮೇಲಿನ ಹಿಂಸಾಚಾರ ತಡೆಯಲು ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು
ಮಂಗಳೂರು: ಬಿಸಿ ರೋಡಿನಲ್ಲಿ ಇಂದು ನಡೆದ ಯುವತಿಯ ಬರ್ಬರ ಹತ್ಯೆ ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದ್ದು, ಈ ಅಮಾನವೀಯ ಕೃತ್ಯವನ್ನು ಸಿಪಿಐ(ಎಂ) ಮಂಗಳೂರು ನಗರ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಯೋಗೀಶ್ ಜಪ್ಪಿನಮೊಗರು ತಿಳಿಸಿದರು. ಯುವತಿ

ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ಹಿಂಸಾಚಾರವನ್ನು ಕೇವಲ ಅಪರಾದ ಕೃತ್ಯವನ್ನಾಗಿ ಮಾತ್ರ ನೋಡದೆ, ಮಹಿಳೆಯನ್ನು ಕೀಳಾಗಿ ಕಾಣುವ ಪುರುಷಪ್ರದಾನ ಸಮಾಜದ ಕೀಳು ಮನೋಭಾವ, ಸಾಮಾಜಿಕ ಅಸಮಾನತೆ ಮತ್ತು ಮಾನವೀಯ ಮೌಲ್ಯಗಳ ಕುಸಿತದ ಪರಿಣಾಮವನ್ನು ಗಂಬೀರವಾಗಿ ಪರಿಗಣಿಸಬೇಕು. ಮಹಿಳೆಯರ ಸ್ವಾತಂತ್ರ್ಯ, ಸಮಾನತೆ ಮತ್ತು ಬದುಕುವ ಹಕ್ಕನ್ನು ಗೌರವಿಸದ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಆದ್ದರಿಂದ ಮಹಿಳಾ ವಿರೋಧಿ ಮನೋಭಾವವನ್ನು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಎದುರಿಸುವುದು ಅತ್ಯಗತ್ಯ. ಜಿಲ್ಲೆಯಲ್ಲಿ ನಿರಂತರವಾಗಿ ಮಹಿಳೆಯರ ಮೇಲಿನ ದಾಳಿಗಳು ಹೆಚ್ಚುತ್ತಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ.

ಇಂತಹ ದುರ್ಘಟನೆಗಳು ಸಂಭವಿಸಿದಾಗ ಸಂತ್ರಸ್ತರು ಅಥವಾ ಆರೋಪಿಗಳ ಧರ್ಮ, ಜಾತಿ ಅಥವಾ ಸಮುದಾಯವನ್ನು ಮುಂದಿಟ್ಟು ನ್ಯಾಯದ ಪ್ರಶ್ನೆಯನ್ನು ದಿಕ್ಕುತಪ್ಪಿಸುವ ಪ್ರಯತ್ನಗಳು ಅತ್ಯಂತ ಖಂಡನೀಯ. ಅಪರಾಧವನ್ನು ಅಪರಾಧವಾಗಿಯೇ ನೋಡುವ ಬದಲು, ಅದನ್ನು ಧಾರ್ಮಿಕ ಮತ್ತು ರಾಜಕೀಯ ಧ್ರುವೀಕರಣಕ್ಕೆ ಬಳಸಿಕೊಂಡು ಸಮಾಜದಲ್ಲಿ ದ್ವೇಷ ಮತ್ತು ಉದ್ವಿಗ್ನತೆ ಸೃಷ್ಟಿಸುವ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ನಿಜವಾದ ಮುಖವನ್ನು ಜನರು ಗುರುತಿಸಬೇಕಾಗಿದೆ.

ಇದನ್ನೂ ಓದಿ: ಮುಂಗಾರು ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್‌ ಅಸ್ತ್ರ: ರಾಮ ಮಂದಿರ ದೇಣಿಗೆ ಹಗರಣ, ಪ್ರಶ್ನೆಪತ್ರಿಕೆ ಸೋರಿಕೆ ಸೇರಿ ಹಲವು ವಿಷಯ ಪ್ರಸ್ತಾಪಕ್ಕೆ ನಿರ್ಧಾರ

ಮಹಿಳೆಯರ ಮೇಲಿನ ಹಿಂಸಾಚಾರವನ್ನು ರಾಜಕೀಯ ಲಾಭದ ಸಾಧನವನ್ನಾಗಿ ಬಳಸುವ ಪ್ರವೃತ್ತಿ ಸಮಾಜದ ಐಕ್ಯತೆ ಮತ್ತು ಸೌಹಾರ್ದತೆಯನ್ನು ಹಾಳುಮಾಡುತ್ತದೆ. ಅಪರಾಧಕ್ಕೆ ಧರ್ಮವಿಲ್ಲ; ಅಪರಾಧಿಗೆ ಕಾನೂನಿನ ಮುಂದೆ ಮಾತ್ರ ಹೊಣೆಗಾರಿಕೆ ಇದೆ. ಆದ್ದರಿಂದ ಧರ್ಮದ ಆಧಾರದ ಮೇಲೆ ನ್ಯಾಯವನ್ನು ಅಳೆಯುವ ಅಥವಾ ಆಯ್ದ ಪ್ರಕರಣಗಳಲ್ಲಿ ಮಾತ್ರ ಧ್ವನಿ ಎತ್ತುವ ದ್ವಂದ್ವ ನೀತಿಯನ್ನು ತಿರಸ್ಕರಿಸಿ, ಪ್ರತಿಯೊಂದು ಮಹಿಳೆಯ ಜೀವಕ್ಕೂ ಸಮಾನ ಮೌಲ್ಯ ನೀಡುವ ಪ್ರಜಾಸತ್ತಾತ್ಮಕ ಮತ್ತು ಮಾನವೀಯ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲಿದೆ.

ಈ ಪ್ರಕರಣದ ತನಿಖೆಯನ್ನು ತ್ವರಿತವಾಗಿ, ನಿಷ್ಪಕ್ಷಪಾತವಾಗಿ ನಡೆಸಿ, ತಪ್ಪಿತಸ್ಥರಿಗೆ ಯಾವುದೇ ಪ್ರಭಾವಕ್ಕೂ ಮಣಿಯದೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು. ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ತಡೆಯಲು ಕಾನೂನು ಜಾರಿಯ ಜೊತೆಗೆ ಸಮಾಜದಲ್ಲಿ ಲಿಂಗ ಸಮಾನತೆಯ ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ಕೂ ಆದ್ಯತೆ ನೀಡಬೇಕು.

ಮೃತ ಯುವತಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಪಿಐ(ಎಂ) ಮಂಗಳೂರು ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇದನ್ನೂ ನೋಡಿ: “19ನೇ ದಿನಕ್ಕೆ ಸೋನಮ್‌ ವಾಂಗ್‌ಚುಕ್‌ ಉಪವಾಸ – ಕೇಂದ್ರಕ್ಕೆ ಎಚ್ಚರಿಕೆಯ ಗಂಟೆ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *