ಯಾದಗಿರಿ| 16 ಸಾವಿರ ಗರ್ಭಧಾರಣೆ ಪ್ರಕರಣಗಳ ಮಾಹಿತಿ ನಾಪತ್ತೆ: ತಜ್ಞರ ಸಮಿತಿ ವರದಿಯಲ್ಲಿ ಆತಂಕಕಾರಿ ಅಂಶ

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳ ಗರ್ಭಧಾರಣೆ ದಾಖಲೆಗಳ ಪರಿಶೀಲನೆಯಲ್ಲಿ ಆರೋಗ್ಯ ಇಲಾಖೆಯ ಮೇಲ್ವಿಚಾರಣಾ ವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಜಿಲ್ಲೆಯಲ್ಲಿ ದಾಖಲಾಗಿರುವ 53,595 ಗರ್ಭಧಾರಣೆ ಪ್ರಕರಣಗಳ ಪೈಕಿ 16,116 ಪ್ರಕರಣಗಳ ಅಂತಿಮ ಫಲಿತಾಂಶ ಅಥವಾ ಮುಂದಿನ ಮಾಹಿತಿಗಳು ದಾಖಲೆಗಳಲ್ಲಿ ಲಭ್ಯವಾಗಿಲ್ಲ ಎಂಬ ಅಂಶ ತಜ್ಞರ ಸಮಿತಿ ವರದಿಯಲ್ಲಿ ಬೆಳಕಿಗೆ ಬಂದಿದೆ.

ಹೆಣ್ಣು ಭ್ರೂಣ ಹತ್ಯೆ ಹಾಗೂ ಗರ್ಭಧಾರಣೆ ಮೇಲ್ವಿಚಾರಣೆಯಲ್ಲಿ ಲೋಪಗಳ ಕುರಿತು ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಅಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯಮಟ್ಟದ ಬಹುಶಿಸ್ತೀಯ ತಜ್ಞರ ಸಮಿತಿಯನ್ನು ರಚಿಸಿದ್ದರು. ಸಮಿತಿ ಏಪ್ರಿಲ್ 6ರಿಂದ 10ರವರೆಗೆ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿ, 74 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ವರದಿ ಪ್ರಕಾರ, 2019ರಿಂದ 2024ರವರೆಗೆ ಜಿಲ್ಲೆಯಲ್ಲಿ 53,595 ಮಹಿಳೆಯರು ಗರ್ಭಧಾರಣೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 35,424 ಮಹಿಳೆಯರಿಗೆ ಹೆರಿಗೆ ಆಗಿದ್ದು, 2,055 ಪ್ರಕರಣಗಳಲ್ಲಿ ಗರ್ಭಪಾತ ದಾಖಲಾಗಿದೆ. ಆದರೆ 16,116 ಗರ್ಭಧಾರಣೆಗಳ ಮುಂದಿನ ಬೆಳವಣಿಗೆ ಅಥವಾ ಅಂತಿಮ ಸ್ಥಿತಿ ಕುರಿತು ಯಾವುದೇ ಮಾಹಿತಿ ದಾಖಲಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸೋಲಿನ ಭಯದಿಂದ GBA ಚುನಾವಣೆ ವಿಳಂಬ: ಬಿಜೆಪಿ ಟೀಕೆ

ಹೆಣ್ಣು ಭ್ರೂಣ ಹತ್ಯೆ ಶಂಕೆ

ತಜ್ಞರ ಸಮಿತಿ ವರದಿಯಲ್ಲಿ ಕೆಲವು ಕಡೆ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಾಧ್ಯತೆಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಲಾಗಿದೆ. ಗರ್ಭಧಾರಣೆಯ 12 ವಾರಗಳ ನಂತರ ಅಕ್ರಮವಾಗಿ ಭ್ರೂಣದ ಲಿಂಗ ಪತ್ತೆ ಪರೀಕ್ಷೆಗಳು ನಡೆಯುತ್ತಿರುವ ಸಾಧ್ಯತೆ, ಗರ್ಭಪಾತ ಮಾತ್ರೆಗಳ ದುರ್ಬಳಕೆ ಹಾಗೂ ನೋಂದಣಿ ದಾಖಲೆಗಳ ನಿರ್ವಹಣೆಯಲ್ಲಿ ಲೋಪಗಳಿರುವ ಬಗ್ಗೆ ವರದಿ ಉಲ್ಲೇಖಿಸಿದೆ.

ಬಾಲ ಗರ್ಭಧಾರಣೆ, ಶಿಶು ಮರಣ ಪ್ರಮಾಣ ಹೆಚ್ಚಳ ಹಾಗೂ ಗರ್ಭಿಣಿಯರ ನಿರಂತರ ಆರೋಗ್ಯ ಮೇಲ್ವಿಚಾರಣೆಯಲ್ಲಿ ಕೊರತೆಯ ಬಗ್ಗೆಯೂ ಸಮಿತಿ ಗಮನ ಸೆಳೆದಿದೆ.

ಬಾಲ್ಯ ವಿವಾಹದ ಆತಂಕ

ಜಿಲ್ಲೆಯಲ್ಲಿ 18 ವರ್ಷ ತುಂಬುವ ಮುನ್ನವೇ ಶೇ 33.2ರಷ್ಟು ಮಹಿಳೆಯರ ವಿವಾಹವಾಗುತ್ತಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಇದರಿಂದ ಬಾಲ್ಯ ಗರ್ಭಧಾರಣೆ ಪ್ರಕರಣಗಳು ಹೆಚ್ಚುತ್ತಿರುವ ಸಾಧ್ಯತೆಯಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಅವಿವಾಹಿತೆಯರ ಗರ್ಭಪಾತ ಪ್ರಕರಣಗಳಲ್ಲಿ ಕುಟುಂಬ ಸದಸ್ಯರು ಮಾಹಿತಿ ನೀಡದಿರುವುದರಿಂದ ಪರಿಶೀಲನೆಗೆ ತೊಂದರೆಯಾಗುತ್ತಿದೆ ಎಂದು ವರದಿ ತಿಳಿಸಿದೆ.

ಆರೋಪ ತಳ್ಳಿಹಾಕಿದ ಆರೋಗ್ಯ ಇಲಾಖೆ

ಆದರೆ, ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಬಿರಾದಾರ್ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಜಿಲ್ಲೆಯಲ್ಲಿ ದಾಖಲಾಗಿರುವ ಗರ್ಭಪಾತ ಪ್ರಕರಣಗಳು ವೈದ್ಯಕೀಯ ಕಾರಣಗಳಿಂದ ನಡೆದಿವೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಗರ್ಭಪಾತ ಪ್ರಮಾಣ ಶೇ 4.6ರಷ್ಟಿದ್ದರೆ, ಯಾದಗಿರಿ ಜಿಲ್ಲೆಯಲ್ಲಿ ಅದು ಶೇ 2.7 ಮಾತ್ರ ಇದೆ. ಹೀಗಾಗಿ ಜಿಲ್ಲೆಯಲ್ಲಿ ಅಕ್ರಮ ಗರ್ಭಪಾತ ಹೆಚ್ಚಾಗಿದೆ ಎಂಬ ಆರೋಪ ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಜ್ಞರ ಸಮಿತಿ ವರದಿ ಹಾಗೂ ಆರೋಗ್ಯ ಇಲಾಖೆಯ ಸ್ಪಷ್ಟೀಕರಣದ ನಡುವೆ ವ್ಯತ್ಯಾಸ ಕಂಡುಬಂದಿದ್ದು, ಈ ಕುರಿತು ಸರ್ಕಾರ ಕೈಗೊಳ್ಳುವ ಮುಂದಿನ ಕ್ರಮ ಕುತೂಹಲ ಮೂಡಿಸಿದೆ.

ಇದನ್ನೂ ನೋಡಿ: ರಾಮ ಮಂದಿರ ಟ್ರಸ್ಟ್‌ ಹಗರಣ: ಭಕ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ? ಹೊಣೆ ಹೊರುವರೇ ಮೋದಿ? MG ಹೆಗಡೆ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *