ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಎರಡು ಹೊಸ ತಲೆಮಾರಿನ ಹಸಿರು ಡೇಟಾ ಸೆಂಟರ್ಗಳನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದೆ. ಇದರ ಜೊತೆಗೆ ದೇಶದ ಮೊದಲ ಸರ್ಕಾರದ ಬೆಂಬಲಿತ AI ವಿಶ್ವವಿದ್ಯಾಲಯ ಸ್ಥಾಪನೆಗೂ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜುಲೈ 14ರಂದು ಬೆಂಗಳೂರಿನಲ್ಲಿ ನಡೆದ ‘ಗೂಗಲ್ I/O ಕನೆಕ್ಟ್ ಇಂಡಿಯಾ 2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಕುಮಾರ್, ಬೆಂಗಳೂರಿನ ಸಮೀಪ ಮತ್ತು ಕರಾವಳಿ ಜಿಲ್ಲೆಯಲ್ಲಿ ಗ್ರೀನ್ ಡೇಟಾ ಸೆಂಟರ್ಗಳನ್ನು ಸ್ಥಾಪಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
“ಕರಾವಳಿ ಜಿಲ್ಲೆಯಲ್ಲಿ ಹಾಗೂ ಬೆಂಗಳೂರಿನ ಸಮೀಪ ಹೊಸ ತಲೆಮಾರಿನ ಹಸಿರು ಡೇಟಾ ಸೆಂಟರ್ ಸ್ಥಾಪಿಸಲು ನಾವು ಮುಂದಾಗಿದ್ದೇವೆ. ಈ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ,” ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಬದ್ರಿನಾಥ ದೇಣಿಗೆ ಅಕ್ರಮ: ಪ್ರಮುಖ ಆರೋಪಿ ಬಂಧನ
ಬೆಂಗಳೂರನ್ನು AI ಆವಿಷ್ಕಾರದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಸರ್ಕಾರದ ಬೆಂಬಲದೊಂದಿಗೆ ಪ್ರತ್ಯೇಕ ಎಐ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆಯನ್ನೂ ಮುಖ್ಯಮಂತ್ರಿ ಘೋಷಿಸಿದರು.
“ಸರ್ಕಾರದ ವತಿಯಿಂದ ಮೊದಲ ಮತ್ತು ಅತಿದೊಡ್ಡ AI ವಿಶ್ವವಿದ್ಯಾಲಯಕ್ಕೆ ಅಡಿಪಾಯ ಹಾಕಲು ನಾವು ಬಯಸಿದ್ದೇವೆ. ವಿಶ್ವಮಟ್ಟದ A.I ಪರಿಸರ ವ್ಯವಸ್ಥೆಯನ್ನು ನಿರ್ಮಿಸಿ ಬೆಳೆಸುವುದು ನಮ್ಮ ಗುರಿ,” ಎಂದು ಶಿವಕುಮಾರ್ ಹೇಳಿದರು.
ಕೃತಕ ಬುದ್ಧಿಮತ್ತೆಯನ್ನು ಆಡಳಿತ ಮತ್ತು ಸಾರ್ವಜನಿಕ ಸೇವೆಗಳೊಂದಿಗೆ ಸಂಯೋಜಿಸುವ ಮೂಲಕ ಕರ್ನಾಟಕವನ್ನು ‘A.I-ನೆಟಿವ್ ರಾಜ್ಯ’ವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
“ನಮ್ಮ ಪ್ರತಿಭೆಯೇ ನಮ್ಮ ದೊಡ್ಡ ಶಕ್ತಿ. ಅದನ್ನು ಆಧಾರವಾಗಿಸಿಕೊಂಡು ದೊಡ್ಡ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವು ಬಯಸಿದ್ದೇವೆ,” ಎಂದು ಮುಖ್ಯಮಂತ್ರಿ ತಿಳಿಸಿದರು.
AI ಮೂಲಸೌಕರ್ಯದ ಪ್ರಮುಖ ಭಾಗವಾಗಿರುವ ಡೇಟಾ ಸೆಂಟರ್ಗಳು ಹೆಚ್ಚಿನ ಪ್ರಮಾಣದ ವಿದ್ಯುತ್ ಮತ್ತು ನೀರು ಬಳಕೆ ಮಾಡುವುದರಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಸರ್ಕಾರ ಈ ಯೋಜನೆ ಕೈಗೆತ್ತಿಕೊಂಡಿದೆ.
ಬೆಂಗಳೂರಿನ ಸಮೀಪದ ಹೊಸಕೋಟೆ ಪ್ರದೇಶವನ್ನು ಒಂದು ಡೇಟಾ ಸೆಂಟರ್ಗೆ ಪರಿಗಣಿಸಲಾಗುತ್ತಿದೆ. ಇಲ್ಲಿ 500 ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಸ್ಥಾಪಿಸುವ ಪ್ರಸ್ತಾವನೆ ಇದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ದಿನಕ್ಕೆ 6 ಕೋಟಿ ಲೀಟರ್ ದ್ವಿತೀಯ ಸಂಸ್ಕರಿತ ನೀರು ಹಾಗೂ ಪಾವಗಡದ 2 ಸಾವಿರ ಮೆಗಾವ್ಯಾಟ್ ಸೌರ ವಿದ್ಯುತ್ ಬಳಸುವ ಯೋಜನೆ ಇದೆ.
ಕರಾವಳಿ ಕರ್ನಾಟಕದ ಮಂಗಳೂರನ್ನೂ ಮತ್ತೊಂದು ಡೇಟಾ ಸೆಂಟರ್ ಸ್ಥಳವಾಗಿ ಪರಿಗಣಿಸಲಾಗುತ್ತಿದೆ.
AI ಅಭಿವೃದ್ಧಿಯು ನೇರವಾಗಿ ಜನರ ಜೀವನಕ್ಕೆ ಉಪಯೋಗವಾಗಬೇಕು ಎಂದು ಶಿವಕುಮಾರ್ ಹೇಳಿದ್ದಾರೆ.
“AI ಶಿಕ್ಷಕರಿಗೆ ಉತ್ತಮ ಬೋಧನೆಗೆ, ವೈದ್ಯರಿಗೆ ರೋಗಗಳನ್ನು ಮೊದಲೇ ಪತ್ತೆಹಚ್ಚಲು, ರೈತರಿಗೆ ಉತ್ತಮ ಸಲಹೆ ಪಡೆಯಲು, ನಾಗರಿಕರಿಗೆ ವೇಗವಾಗಿ ಮತ್ತು ಗೌರವಯುತವಾಗಿ ಸರ್ಕಾರಿ ಸೇವೆ ಪಡೆಯಲು ಹಾಗೂ ಸಣ್ಣ ಉದ್ಯಮಗಳಿಗೆ ಸ್ಪರ್ಧಾತ್ಮಕವಾಗಲು ಸಹಾಯ ಮಾಡಬೇಕು,” ಎಂದು ಅವರು ಹೇಳಿದರು.
ಭಾರತದಲ್ಲಿ ಗೂಗಲ್ನ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಪ್ರಮುಖ ಪಾತ್ರವನ್ನೂ ಮುಖ್ಯಮಂತ್ರಿ ಉಲ್ಲೇಖಿಸಿದರು. ದೇಶದಲ್ಲಿರುವ ಗೂಗಲ್ನ 18 ಸಾವಿರ ಉದ್ಯೋಗಿಗಳಲ್ಲಿ 12 ಸಾವಿರ ಮಂದಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಹೆಚ್ಚಿನ ವಿದ್ಯುತ್ ಮತ್ತು ನೀರಿನ ಅಗತ್ಯತೆ ಇರುವ ಡೇಟಾ ಸೆಂಟರ್ಗಳಿಗೆ ಸಂಬಂಧಿಸಿದಂತೆ ಸುಸ್ಥಿರ ಡೇಟಾ ಸೆಂಟರ್ ನೀತಿ ರೂಪಿಸುವ ಬಗ್ಗೆಯೂ ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ.
ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೇ ತಿಂಗಳಲ್ಲಿ ಪರಿಸರ ಸ್ನೇಹಿ ಮತ್ತು ಕಡಿಮೆ ಶಾಖ ಹೊರಸೂಸುವ ತಂತ್ರಜ್ಞಾನಗಳ ಮೂಲಕ ಡೇಟಾ ಸೆಂಟರ್ಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದರು.
ಡೇಟಾ ಸೆಂಟರ್ಗಳಿಗೆ ಸೂಕ್ತ ಸ್ಥಳ ಗುರುತಿಸಲು, ನವೀಕರಿಸಬಹುದಾದ ಇಂಧನ, ವಿದ್ಯುತ್ ಮೂಲಸೌಕರ್ಯ ಮತ್ತು ನೀರಿನ ಲಭ್ಯತೆ ಪರಿಶೀಲಿಸಲು ಹಿರಿಯ ಐಎಎಸ್ ಅಧಿಕಾರಿಗಳ ಸಮಿತಿಯನ್ನೂ ಸರ್ಕಾರ ರಚಿಸಿದೆ.
ಗ್ರೀನ್ ಡೇಟಾ ಸೆಂಟರ್ಗಳು ಮತ್ತು AI ವಿಶ್ವವಿದ್ಯಾಲಯ ಯೋಜನೆಗಳು ಕರ್ನಾಟಕವನ್ನು AI ಸಂಶೋಧನೆ, ಮೂಲಸೌಕರ್ಯ ಮತ್ತು ಆವಿಷ್ಕಾರದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಸರ್ಕಾರದ ದೊಡ್ಡ ಯೋಜನೆಯ ಭಾಗವಾಗಿವೆ.
ಇದನ್ನೂ ನೋಡಿ: ಚೇಳುಗಳ ವಿಸ್ಮಯ ಜಗತ್ತು: ಗೊತ್ತಿಲ್ಲದ ಅಚ್ಚರಿಯ ಸತ್ಯಗಳು | ಡಾ: ಎನ್.ಬಿ.ಶ್ರೀಧರ Janashakthi Media
