ಇಟಾನಗರ: ಅರುಣಾಚಲ ಪ್ರದೇಶದ ಕ್ರಾ ದಾದಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಕುಮೇ ನದಿಯ ಮೇಲಿನ 84 ಮೀಟರ್ ಉದ್ದದ ಸೇತುವೆ ಕೊಚ್ಚಿಹೋಗಿದ್ದು, ಎಂಟು ಗ್ರಾಮಗಳು ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಳೆದುಕೊಂಡಿವೆ. ಕುಮೇ
ಜುಲೈ 13ರಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ರಾಜ್ಯಾದ್ಯಂತ ಇದುವರೆಗೆ ಏಳು ಮಂದಿ ಮೃತಪಟ್ಟಿದ್ದು, 29 ಜನರು ಗಾಯಗೊಂಡಿದ್ದಾರೆ.
ರಾಜ್ಯದ 26 ಜಿಲ್ಲೆಗಳ 425 ಗ್ರಾಮಗಳಲ್ಲಿ ಒಟ್ಟು 97,182 ಮಂದಿ ಪ್ರವಾಹದಿಂದ ಬಾಧಿತರಾಗಿದ್ದಾರೆ. ಪ್ರವಾಹದಿಂದ ಕೃಷಿ ಮತ್ತು ಸಾರ್ವಜನಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ ಬಜೆಟ್: ಭ್ರಷ್ಟಾಚಾರದ ಆರೋಪ, ಖಾಸಗೀಕರಣದ ದಾರಿ ಮತ್ತು ಅಭಿವೃದ್ಧಿ ಮಾದರಿಯ ಪ್ರಶ್ನೆಗಳು
ಪಿಪ್ಸೊರಾಂಗ್ ಉಪ ವಿಭಾಗಾಧಿಕಾರಿ ಯುಮ್ಲಾಮ್ ಪುಲು ಮತ್ತು ತಾಲಿ ಈಸ್ಟ್ ಜಿಲ್ಲಾ ಪಂಚಾಯತ್ ಸದಸ್ಯ ರುಗು ತಾಮಾ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಸೇತುವೆ ಮಾತ್ರವಲ್ಲದೆ ನದಿ ತೀರದಲ್ಲಿದ್ದ 20ಕ್ಕೂ ಹೆಚ್ಚು ಮನೆಗಳು ಕೂಡ ಪ್ರವಾಹಕ್ಕೆ ಕೊಚ್ಚಿಹೋಗಿವೆ ಎಂದು ಪುಲು ಮಾಹಿತಿ ನೀಡಿದ್ದಾರೆ. ನದಿ ಸಮೀಪ ತೆರಳದಂತೆ ಹಾಗೂ ಜಿಲ್ಲಾಡಳಿತ ನೀಡಿರುವ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ತಕ್ಷಣ ಪರಿಹಾರ ಮತ್ತು ಪುನರ್ವಸತಿ ನೆರವು ಒದಗಿಸುವಂತೆ ಜಿಲ್ಲಾ ಪಂಚಾಯತ್ ಸದಸ್ಯ ರುಗು ತಾಮಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜತೆಗೆ, ಸಂಪರ್ಕ ಕಡಿತಗೊಂಡಿರುವ ಎಂಟು ಗ್ರಾಮಗಳಿಗೆ ತುರ್ತು ನೆರವು ತಲುಪಿಸಲು ಕೊಚ್ಚಿಹೋದ ಸೇತುವೆಯನ್ನು ಶೀಘ್ರ ಮರು ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: “ವೋಟ್ ಬೇಕಾದಾಗ ನಾವು ಬೇಕು, ವ್ಯಾಪಾರಕ್ಕೆ ಜಾಗ ಕೇಳಿದರೆ ಬೇಡವೇ?” Janashakthi Media
