ಗ್ರೌಂಡ್ ಬೆಳಗ್ಗೆ 7.30ಕ್ಕೆ ಮನೆಗಳತ್ತ, ರಾತ್ರಿ 10ರವರೆಗೆ ಡೇಟಾ ಎಂಟ್ರಿ; SIRನಲ್ಲಿ BLOಗಳ ದಿನಚರಿ ಹೇಗಿದೆ? ಗ್ರೌಂಡ್
ಗುರುರಾಜ ದೇಸಾಯಿ
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದೆ. ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಈ ಮಹತ್ವದ ಕಾರ್ಯದಲ್ಲಿ ಕೇಂದ್ರಬಿಂದುವಾಗಿರುವವರು ಮತಗಟ್ಟೆ ಮಟ್ಟದ ಅಧಿಕಾರಿಗಳು (Booth Level Officers–BLO). ಆದರೆ ಈ ಕೆಲಸ ಅಷ್ಟು ಸುಲಭವಲ್ಲ. ಬೆಳಗ್ಗೆಯಿಂದ ರಾತ್ರಿ ತನಕ ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸುವುದು, ಎಣಿಕೆ ನಮೂನೆಗಳನ್ನು ವಿತರಿಸುವುದು, ದಾಖಲೆಗಳನ್ನು ಪರಿಶೀಲಿಸುವುದು, ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸುವುದು, ಕೊನೆಗೆ ಎಲ್ಲ ಮಾಹಿತಿಯನ್ನು ಡಿಜಿಟಲ್ ವ್ಯವಸ್ಥೆಗೆ ದಾಖಲಿಸುವುದು, ಇವೆಲ್ಲವೂ ಒಂದೇ ದಿನದಲ್ಲಿ ಪೂರ್ಣಗೊಳಿಸಬೇಕಾದ ಜವಾಬ್ದಾರಿ ಅವರ ಮೇಲಿದೆ.
ಕೊಪ್ಪಳ, ಕಲಬುರಗಿ, ಬೆಂಗಳೂರಿನ ಬಸವನಗುಡಿ ಹಾಗೂ ಶ್ರೀರಾಮಪುರದ ಹೆಸರು ಬಹಿರಂಗಪಡಿಸಲು ಇಚ್ಛಿಸದ BLOಗಳೊಂದಿಗೆ ಜನಶಕ್ತಿ ಮೀಡಿಯಾ ಮಾತನಾಡಿದಾಗ, ರಾಜ್ಯದ ವಿವಿಧ ಭಾಗಗಳಲ್ಲಿ ಪರಿಸ್ಥಿತಿ ಭಿನ್ನವಾಗಿದ್ದರೂ ಎದುರಾಗುತ್ತಿರುವ ಸವಾಲುಗಳು ಬಹುತೇಕ ಒಂದೇ ರೀತಿಯದ್ದಾಗಿವೆ ಎಂಬುದು ಗೊತ್ತಾಯಿತು. ಗ್ರೌಂಡ್
ದಿನದ ಆರಂಭವೇ ಮನೆ ಮನೆಗೆ ಭೇಟಿ
ಬಹುತೇಕ BLOಗಳು ಬೆಳಗ್ಗೆ 7.30ರಿಂದ 8 ಗಂಟೆಯೊಳಗೆ ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಲು ಆರಂಭಿಸುತ್ತಾರೆ. ಈ ಸಮಯದಲ್ಲಿ ಮನೆಯ ಸದಸ್ಯರು ಕೆಲಸಕ್ಕೆ ಅಥವಾ ಶಾಲೆಗೆ ತೆರಳುವ ಮೊದಲು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.
ಬಸವನಗುಡಿಯ BLO ಒಬ್ಬರು, “ಬೆಳಗ್ಗೆ ಬೇಗ ಹೋದರೆ ಕೆಲವರು ಸಿಗುತ್ತಾರೆ. ಆದರೆ ಎಲ್ಲರೂ ಅಲ್ಲ. ಹಲವರು ಈಗಾಗಲೇ ಕೆಲಸಕ್ಕೆ ಹೋಗಿರುತ್ತಾರೆ. ಹೀಗಾಗಿ ಮೊದಲ ಸುತ್ತಿನಲ್ಲಿ ಎಣಿಕೆ ನಮೂನೆಗಳನ್ನು ನೀಡಿ, ಯಾವ ದಾಖಲೆಗಳು ಬೇಕು ಎಂಬುದನ್ನು ವಿವರಿಸುತ್ತೇವೆ. ನಂತರ ಮತ್ತೆ ಹೋಗಲೇಬೇಕು,” ಎಣಿಕೆ ನಮೂನೆ ವಿತರಿಸಿದ ತಕ್ಷಣವೇ ಎಲ್ಲರೂ ಅದನ್ನು ಭರ್ತಿ ಮಾಡಿ ಕೊಡುವುದಿಲ್ಲ. ಕೆಲವರು ಸಮಯ ಕೇಳುತ್ತಾರೆ. ಕೆಲವರಿಗೆ ದಾಖಲೆಗಳು ಸಿದ್ಧವಾಗಿರುವುದಿಲ್ಲ. ಕೆಲವರು ಮನೆಯಲ್ಲೇ ಇರುವುದಿಲ್ಲ ಎಂದು ಹೇಳುತ್ತಾರೆ.
ಶ್ರೀರಾಮಪುರದ BLO ಒಬ್ಬರ ಪ್ರಕಾರ, ಅಪಾರ್ಟ್ಮೆಂಟ್ಗಳಲ್ಲಿ ಕೆಲಸ ಇನ್ನಷ್ಟು ಸಂಕೀರ್ಣವಾಗಿದೆ. “ಭದ್ರತಾ ಸಿಬ್ಬಂದಿಯ ಅನುಮತಿ ಪಡೆದು ಒಳಗೆ ಹೋಗಬೇಕು. ಅನೇಕರು ಕಚೇರಿಗೆ ಹೋಗಿರುವ ಕಾರಣ ಸಂಜೆ ಮತ್ತೆ ಬರಬೇಕು. ಕೆಲವೊಮ್ಮೆ ಒಂದೇ ಫ್ಲ್ಯಾಟ್ಗೆ ಮೂರು ಬಾರಿ ಹೋದ ಬಳಿಕವೇ ನಮೂನೆ ಸಿಗುತ್ತದೆ. ಒಂದೇ ದಿನದಲ್ಲಿ ಕೆಲಸ ಮುಗಿಯುವುದಿಲ್ಲ,” ಎಂದು ಅವರು ಹೇಳಿದರು. ಗ್ರೌಂಡ್
ಇದನ್ನೂ ಓದಿ : ಕೇಪ್ ವರ್ಡೆ ನಮ್ಮನ್ನು ತೀವ್ರವಾಗಿ ಪರೀಕ್ಷಿಸಿತು: ಅರ್ಜೆಂಟೀನಾ ಗೆಲುವಿನ ಬಳಿಕ ಮೆಸ್ಸಿ ಪ್ರತಿಕ್ರಿಯೆ
ಗ್ರಾಮೀಣ ಭಾಗದಲ್ಲೂ ಬೇರೆ ರೀತಿಯ ಸವಾಲು
ಕಲಬುರಗಿಯ BLO ಒಬ್ಬರು ಗ್ರಾಮೀಣ ಪ್ರದೇಶದ ಪರಿಸ್ಥಿತಿಯನ್ನು ವಿವರಿಸಿದರು. “ಹಲವು ಮನೆಗಳು ದೂರ ದೂರ ಇರುತ್ತವೆ. ಕೆಲವರು ಹೊಲಗಳಿಗೆ ಹೋಗಿರುತ್ತಾರೆ. ಮನೆಗೆ ಹೋದರೆ ಹಿರಿಯರು ಮಾತ್ರ ಇರುತ್ತಾರೆ. ಬೇಕಾದ ಮಾಹಿತಿ ಸಿಗುವುದಿಲ್ಲ. ಸಂಜೆ ಅಥವಾ ಮರುದಿನ ಮತ್ತೆ ಹೋಗಬೇಕಾಗುತ್ತದೆ. ಕೆಲವು ಮನೆಗಳಿಗೆ ತಲುಪಲು ಸಾಕಷ್ಟು ದೂರ ನಡೆದು ಹೋಗಬೇಕಾಗುತ್ತದೆ,” ಸಂಜೆಯಾದರೂ ಕೆಲಸ ಮುಗಿಯುವುದಿಲ್ಲ ಕ್ಷೇತ್ರದ ಕೆಲಸ ಮುಗಿದ ಬಳಿಕವೂ BLOಗಳ ಕರ್ತವ್ಯ ಮುಂದುವರಿಯುತ್ತದೆ ಎಂದು ತಮಗೆ ಆಗುತ್ತಿರುವ ನೋವುಗಳನ್ನು ತೋಡಿಕೊಂಡರು.
ಕೊಪ್ಪಳದ BLO ಒಬ್ಬರು, “ಸಂಜೆ ಮನೆಗೆ ಬಂದ ನಂತರವೇ ಇನ್ನೊಂದು ಕೆಲಸ ಆರಂಭವಾಗುತ್ತದೆ. ದಿನವಿಡೀ ಸಂಗ್ರಹಿಸಿದ ನಮೂನೆಗಳನ್ನು ಪರಿಶೀಲಿಸಬೇಕು. ದಾಖಲೆಗಳು ಸರಿಹೊಂದಿವೆಯೇ ಎಂದು ನೋಡಬೇಕು. ನಂತರ ಪೋರ್ಟಲ್ಗೆ ಮಾಹಿತಿ ಅಪ್ಲೋಡ್ ಮಾಡಬೇಕು. ಕೆಲವೊಮ್ಮೆ ರಾತ್ರಿ 9 ಅಥವಾ 10 ಗಂಟೆಯಾದರೂ ಕೆಲಸ ಮುಗಿಯುವುದಿಲ್ಲ. ನೆಟ್ವರ್ಕ್ ನಿಧಾನವಾಗಿದ್ದರೆ ಇನ್ನೂ ತಡವಾಗುತ್ತದೆ,” ಎಂದು ವಿವರಿಸಿದರು. ಗ್ರೌಂಡ್
ಕೇವಲ ನಮೂನೆ ವಿತರಿಸುವುದಷ್ಟೇ ಕೆಲಸವಲ್ಲ
BLOಗಳ ಕೆಲಸ ಎಣಿಕೆ ನಮೂನೆ ಹಂಚುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಮತದಾರರ ಪಟ್ಟಿಯಲ್ಲಿ ಮೃತಪಟ್ಟವರ ಹೆಸರುಗಳಿವೆಯೇ, ಶಾಶ್ವತವಾಗಿ ಬೇರೆ ಊರಿಗೆ ಸ್ಥಳಾಂತರಗೊಂಡವರ ವಿವರಗಳು, ಹೊಸದಾಗಿ 18 ವರ್ಷ ಪೂರೈಸಿದ ಮತದಾರರ ಮಾಹಿತಿ, ವಿಳಾಸ ಬದಲಾವಣೆ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಒಂದು ಮಾಹಿತಿ ತಪ್ಪಿದರೂ ಮುಂದಿನ ಹಂತದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಂದು ವಿವರವನ್ನು ಎಚ್ಚರಿಕೆಯಿಂದ ದಾಖಲಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳಿಗೆ ಭೇಟಿ ನೀಡುವಾಗ BLOಗಳು ಕೇವಲ ನಮೂನೆ ಕೊಟ್ಟು ಬರುವುದಿಲ್ಲ. ಸಾರ್ವಜನಿಕರ ಅನುಮಾನಗಳಿಗೂ ಉತ್ತರಿಸಬೇಕಾಗುತ್ತದೆ. “ಯಾವ ದಾಖಲೆ ಬೇಕು? ಆಧಾರ್ ಕಡ್ಡಾಯವೇ? ನಮೂನೆ ಯಾವಾಗ ಕೊಡಬೇಕು? ಆನ್ಲೈನ್ನಲ್ಲಿ ಸಲ್ಲಿಸಬಹುದೇ? ಎಂಬ ಪ್ರಶ್ನೆಗಳನ್ನು ಬಹುತೇಕ ಎಲ್ಲರೂ ಕೇಳುತ್ತಾರೆ. ಪ್ರತಿಯೊಬ್ಬರಿಗೂ ವಿವರಿಸಿ ಹೇಳಲು ಸಮಯ ತೆಗೆದುಕೊಳ್ಳುತ್ತದೆ,” ಎಂದೆನ್ನುತ್ತಾರೆ ಬೆಂಗಳೂರಿನ ಮತ್ತೊಬ್ಬ BLO.
ಶಿಕ್ಷಕರಾಗಿರುವ BLOಗಳಿಗೆ ಕೆಲಸದ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಶಾಲಾ ವೇಳೆಯಲ್ಲಿ ಬೋಧನೆ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದ ಬಳಿಕ ಬೆಳಿಗ್ಗೆ, ಸಂಜೆ ಹಾಗೂ ರಜೆ ಸಮಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸ ಮಾಡಬೇಕಾಗಿದೆ. ಶಿಕ್ಷಕರಿಗೆ ಈ ಹೊರೆಯನ್ನು ಕಡಿಮೆ ಮಾಡುವದಾಗಿ ಸರಕಾರ ಹೇಳುತ್ತಿದೆಯಾದರೂ, ಪರ್ಯಾಯ ದಾರಿಗಳನ್ನು ಸೂಚಿಸುತ್ತಿಲ್ಲ ಎಂಬ ಆರೋಪಗಳು ಇವೆ.
BLOಗಳ ಅಭಿಪ್ರಾಯದಲ್ಲಿ, ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಎಣಿಕೆ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿದರೆ ಪರಿಷ್ಕರಣೆ ಕಾರ್ಯ ಹೆಚ್ಚು ವೇಗವಾಗಿ ಮುಗಿಯಬಹುದು. ಆದರೆ ನಮೂನೆಗಳನ್ನು ವಿಳಂಬವಾಗಿ ನೀಡುವುದು ಅಥವಾ ಮನೆಯಲ್ಲೇ ಸಿಗದಿರುವುದರಿಂದ ಒಂದೇ ಮನೆಗೆ ಹಲವು ಬಾರಿ ಭೇಟಿ ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಚುನಾವಣಾ ಆಯೋಗ ಈ ಬಗ್ಗೆ ಇನ್ನಷ್ಟು ಜಾಗೃತಿಯನ್ನು, ದಾಖಲೆಗಳ ಸರಳ ಕ್ರಮವನ್ನು ಅನುಸರಿಸಬೇಕಿದೆ. ಮತದಾನ ಎಲ್ಲರ ಹಕ್ಕು ಅದನ್ನು ಉಳಿಸುವ, ಕಾಪಾಡುವ ಜವಬ್ದಾರಿಯೂ ಚುನಾವಣಾ ಆಯೋಗದ ಮೇಲಿದೆ ಎಂಬುದನ್ನು ಆಯೋಗ ಮರೆಯಬಾರದು. ಗ್ರೌಂಡ್
ಇದನ್ನೂ ನೋಡಿ : ಆರ್ಎಸ್ಎಸ್ ನೋಂದಣಿ ಸುತ್ತಮುತ್ತ: ಎದ್ದಿರುವ ಪ್ರಶ್ನೆಗಳೇನು?
