ಶ್ರದ್ಧಾನಂಬಿಕೆಗಳು ಸಾಂಸ್ಥೀಕರಣಕ್ಕೊಳಗಾದಾಗ ವ್ಯಕ್ತಿಗತ ಪ್ರಜ್ಞೆ ಅಸ್ತಿತ್ವ ಕಳೆದುಕೊಳ್ಳುತ್ತದೆ
“ಮಹಾಕವಿ ವಾಲ್ಮೀಕಿಯ ಸೃಷ್ಟಿಯಾಗಿ, ನಾನು ಶತಮಾನಗಳಿಂದಲೂ ಜನಮಾನಸದಲ್ಲಿ ಗೌರವಾದರದ ಸ್ಥಾನ ಪಡೆದಿದ್ದೆ. ಆಗಮ ಶಾಸ್ತ್ರಗಳಿಂದ ಬಹುತೇಕ ಮುಕ್ತವಾಗಿದ್ದೆ. ಸಮಾಜದ ತಳವರ್ಗಗಳ ಎದೆಯಾಳದಲ್ಲೂ ಪ್ರತಿಷ್ಟಾಪಿತವಾಗಿದ್ದೆ. ಏಕಾಏಕಿ ನನ್ನನ್ನು ಶಿಲಾರೂಪಕ್ಕೆ ಬದಲಿಸಿಬಿಟ್ಟರು. ನನ್ನ ಸೌಮ್ಯ ಚಹರೆಗೆ ಹೊಸ ರೂಪ ನೀಡಿದರು. ಉತ್ಸವ ಮೂರ್ತಿಯಾಗುತ್ತಿದ್ದ ನನ್ನನ್ನು ಮೆರವಣಿಗೆಯ ಪ್ರತಿಮೆ ಮಾಡಿಬಿಟ್ಟರು. ವಾಲ್ಮೀಕಿ ಕವಿ ರಿಪು ಸಂಹಾರಕ್ಕಾಗಿ ನನಗೆ ಕೊಟ್ಟಿದ್ದ ಧನಸ್ಸು ರಾಜಕೀಯ ಅಸ್ತ್ರವಾಗಿ ರೂಪಾಂತರಗೊಂಡಿತು. ಶಿಲಾವಸ್ಥೆಯಲ್ಲಿದ್ದ ನನಗೆ ಜೀವವನ್ನೂ ತುಂಬಿದರು. ಮಹಾಕವಿಯ ರಾಮರಾಜ್ಯದಿಂದ ನನ್ನನ್ನು ಪ್ರಜಾರಾಜ್ಯದ ಸ್ವಾರ್ಥದ ಬಯಲಲ್ಲಿ ನಿಲ್ಲಿಸಿಬಿಟ್ಟರು. ಬಳಕೆಯ ವಸ್ತುವಾಗಿಬಿಟ್ಟೆ. ಈಗ ನಾನು ನಿಮಿತ್ತ ಮಾತ್ರ ಆಗಿದ್ದೇನೆ. ಸುತ್ತಲೂ ಧನರಾಶಿ ಮಳೆಗರೆಯುತ್ತಿದೆ. ಭ್ರಷ್ಟ ವ್ಯವಸ್ಥೆಯ ವಾರಸುದಾರರು ನನ್ನ ನೈಜ ಭಕ್ತಾದಿಗಳನ್ನೇ ದೋಚಿದ್ದಾರೆ. ಈ ದೋಚಿತರೂ (ದೋಚಲ್ಪಟ್ಟವರು) ಮೌನವಾಗಿದ್ದಾರೆ. ನಾನು ಪುನಃ ಮೌನ ಶಿಲೆಯಾಗಿ ನಿಂತಿದ್ದೇನೆ. ” (ಕಾಲ್ಪನಿಕ ರಾಮನ ಕಲ್ಪಿತ ಸ್ವಗತ). ನಿಷ್ಠೆ
– ನಾ ದಿವಾಕರ
ಭಾರತದಲ್ಲೇ ಅಲ್ಲ ಯಾವುದೇ ದೇಶದಲ್ಲಾದರೂ ಸ್ಥಾಪಿತ ಮತಗಳು, ಸಾಂಸ್ಥಿಕ ಧರ್ಮಗಳು ಆಯಾ ಸಮಾಜಗಳ ಬಲಾಢ್ಯ ವರ್ಗಗಳ ಆಧಿಪತ್ಯಕ್ಕೊಳಗಾಗಿರುತ್ತವೆ. ಈ ಸಮಾಜದಲ್ಲಿ ಉತ್ಪಾದಿಸಲಾಗುವ ನಿರೂಪಣೆಗಳೇ (Narratives) ಶ್ರದ್ಧೆ, ಭಕ್ತಿ, ನಂಬಿಕೆ, ಆಚರಣೆ ಇತ್ಯಾದಿಗಳ ಸಂಕೋಲೆಗಳಲ್ಲಿ ಜನಸಾಮಾನ್ಯರನ್ನು ಬಂಧಿಸಿಬಿಡುತ್ತವೆ. ಸ್ಥಾಪಿತ ಧರ್ಮಗಳು (ಮತಗಳು) ಸಾಂಸ್ಥೀಕರಣಗೊಳ್ಳುವ ಹಂತದಲ್ಲೇ ಸಮಾಜದ ಮೇಲ್‌ಸ್ತರವನ್ನು ಪ್ರತಿನಿಧಿಸುವ ಮೇಲ್ಜಾತಿಯ, ಮೇಲ್ವರ್ಗದ, ಮೇಲ್ಪದರದ ಗಣ್ಯ ವರ್ಗಗಳು ಈ ಸಂಕೋಲೆಗಳ ಕೀಲಿ ಕೈಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುತ್ತಾರೆ. ಆರ್ಥಿಕವಾಗಿ ಸಮಾಜಗಳು ಮುಂದುವರೆಯುತ್ತಿದ್ದಂತೆ ಸಾಂಸ್ಥಿಕ ನೆಲೆಗಳೆಲ್ಲವೂ ಸ್ಥಾವರಗಳಾಗಿ ರೂಪಾಂತರ ಹೊಂದುತ್ತವೆ. ಭಾರತದಲ್ಲಿ ಈ ಸ್ಥಾವರಗಳಿಗೆ ಧರ್ಮ-ಆಚರಣೆಯ ಲೇಪ ನೀಡುವುದರಿಂದ ಸಹಜವಾಗಿ ಮೇಲ್ಜಾತಿಯ ಪಾರಮ್ಯಕ್ಕೊಳಗಾಗಿರುತ್ತವೆ. ನಿಷ್ಠೆ
ಈ ಸ್ಥಾವರಗಳನ್ನು ನಾವು ಗುಡಿ, ಮಂದಿರ, ದೇವಾಲಯ, ಚರ್ಚು, ಮಸೀದಿ, ಗುರುದ್ವಾರ ಹೀಗೆ ಹಲವು ಹೆಸರುಗಳಿಂದ ಕರೆಯುತ್ತೇವೆ. ವರ್ತಮಾನದ ಸನ್ನಿವೇಶದಲ್ಲಿ ಈ ಪಟ್ಟಿಗೆ ಮಠಗಳನ್ನೂ ಸೇರಿಸಬಹುದು. ವೈದಿಕಶಾಹಿ ಆಗಮ ಶಾಸ್ತ್ರಗಳು ಅನ್ವಯಿಸದೆ ಹೋದರೂ, ಸ್ಥಾವರದಲ್ಲಿ ಸಿಲುಕುವ ಶಿಲೆಗಳು ಅಥವಾ ಅಮೂರ್ತ ರೂಪದ ಅತೀತ ಶಕ್ತಿಗಳು, ಪ್ರವಾದಿ-ಸಂತರ ವಿಶ್ವಾಸಗಳು ಜನರ ಭಕ್ತಿ ಭಾವನೆಗಳನ್ನು ಆಕರ್ಷಿಸುತ್ತಲೇ ಇರುತ್ತವೆ. ಮನದೊಳಗೇ ಆರಾಧಿಸಬಹುದಾದ ಅತೀತ ಶಕ್ತಿಗಳನ್ನು ಸ್ಥಾವರಗಳಲ್ಲಿ ಬಂಧಿಸುವ ಈ ಪ್ರಕ್ರಿಯೆಯೇ ಇಸ್ಲಾಂ, ಕ್ರೈಸ್ತ, ಸಿಖ್, ಹಿಂದೂ ಹೀಗೆ ಎಲ್ಲ ಧಾರ್ಮಿಕತೆಗಳನ್ನು (Religiosity) ಸಾಂಸ್ಥೀಕರಿಸುವ ಪ್ರಧಾನ ಕೇಂದ್ರಗಳಾಗುತ್ತವೆ. ಮಾನವ ಸಮಾಜದ ಆಧುನಿಕತೆಗೆ ತೆರೆದುಕೊಂಡಂತೆಲ್ಲಾ ಈ ಧಾರ್ಮಿಕತೆಯೂ ಸಹ ರೂಪಾಂತರ ಹೊಂದುತ್ತಾ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತವೆ. ಇದರ ಅತ್ಯುತ್ತಮ ಉದಾಹರಣೆಯನ್ನು ನಾವು ಅಯೋಧ್ಯೆಯ ರಾಮಮಂದಿರದಲ್ಲಿ ಕಾಣಬಹುದು. ನಿಷ್ಠೆ
ಇದನ್ನೂ ಓದಿ: ರಾಜ್ಯ ಸರ್ಕಾರಿ ಬಸ್ ದರ ಏರಿಕೆ ಸಾಧ್ಯತೆ: BMTCಗೆ 44%, KSRTCಗೆ 33% ಹೆಚ್ಚಳ ಪ್ರಸ್ತಾವನೆ
ಆಧುನಿಕ ಭಾರತದಲ್ಲಿ ರಾಮ
1970ರ ದಶಕದವರೆಗೂ ರಾಮಮಂದಿರ ಅಥವಾ ರಾಮ ದೇವಾಲಯ ಎನ್ನುವುದು ಕೆಲವೇ ಭಕ್ತಾದಿಗಳ ಶ್ರದ್ಧಾ ಕೇಂದ್ರಗಳಾಗಿದ್ದವು. ರಾಮಂದಿರಗಳು ಬಹುಮಟ್ಟಿಗೆ ಭಜನಾ ಕೇಂದ್ರಗಳಾಗಿದ್ದವು. ನಿತ್ಯ ಪೂಜಾ ಕೈಂಕರ್ಯಗಳಿಗೆ ಆಸ್ಪದ ಇರುತ್ತಿರಲಿಲ್ಲ. ಅಪರೂಪಕ್ಕೊಂದು ಕಾಣುತ್ತಿದ್ದ ರಾಮನ ದೇವಸ್ಥಾನಗಳು ರಾಮೋತ್ಸವ, ರಾಮನವಮಿ ಇತ್ಯಾದಿ ಆಚರಣೆಗಳಿಗೊಳಪಟ್ಟು ಸಾಂಸ್ಥಿಕ ಸ್ವರೂಪ ಪಡೆದುಕೊಂಡಿದ್ದವು. ಆದರೆ ಎರಡೂ ನೆಲೆಗಳಲ್ಲಿದ್ದ ʻರಾಮʼ ನ ಕಲ್ಪನೆ ಜನಮಾನಸದಲ್ಲಿ ಬೇರೂರಿದ್ದ ಒಂದು ನಂಬಿಕೆಯಾಗಿತ್ತು. ವಾಲ್ಮೀಕಿಯ ರಾಮನನ್ನು ಕೆಲವು ಮೌಲ್ಯಗಳ ನೆಲೆಯಲ್ಲಿ ಆದರಿಸಲಾಗುತ್ತಿತ್ತು. ಈ ಪುರುಷ ಪ್ರಧಾನ ಮೌಲ್ಯಾದರ್ಶಗಳೇ ಸಾಂಸ್ಥೀಕರಣಕ್ಕೆ ಆಧಾರಶಿಲೆಗಳಾಗುತ್ತಿದ್ದುದು ವಾಸ್ತವ. ಇವುಗಳನ್ನು ನಿರ್ವಹಿಸುವ ಟ್ರಸ್ಟ್‌ಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಸುಳಿವೇ ಕಾಣುತ್ತಿರಲಿಲ್ಲ. ಈಗ ವಿವಾದಕ್ಕೊಳಗಾಗಿರುವ ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನಲ್ಲೂ ಮಹಿಳೆ ಕಾಣುವುದಿಲ್ಲ. ನಿಷ್ಠೆ

ಸಾಮಾನ್ಯವಾಗಿ ಎಲ್ಲ ಮತ-ಧರ್ಮಗಳಲ್ಲೂ ಗುರುತಿಸಬಹುದಾದ ಸಮಾನ ಲಕ್ಷಣ ಎಂದರೆ, ಧರ್ಮನಿಷ್ಠೆ ವೈಯುಕ್ತಿಕ ಸ್ವಭಾವವಾದರೂ ಧಾರ್ಮಿಕತೆಯನ್ನು (Religiosity) ನಿರ್ವಚಿಸುವುದು ಸಾಮಾಜಿಕವಾಗಿ ಪ್ರಬಲವಾಗಿರುವ ಮೇಲ್ವರ್ಗಗಳು. ಭಾರತದಲ್ಲಿ ಸಾಮಾನ್ಯವಾಗಿ ಇದು ಬ್ರಾಹ್ಮಣಶಾಹಿ ನೇತೃತ್ವದ ಮೇಲ್ಜಾತಿಗಳೇ ಆಗಿರುತ್ತದೆ. ಈ ವರ್ಗಗಳ ಒಳಗಿನಿಂದಲೇ ಯಾವುದೇ ಊರಿನಲ್ಲಿ/ನಗರ/ಗ್ರಾಮದಲ್ಲಿ ಸ್ಥಾಪನೆಯಾಗುವ ಮಂದಿರ-ದೇವಾಲಯಗಳನ್ನು ನಿಯಂತ್ರಿಸುವ ʻಧರ್ಮದರ್ಶಿಗಳೂʼ (Trustees) ಮುನ್ನಲೆಯಲ್ಲಿರುತ್ತಾರೆ. ಕೇರಳದ ಚರ್ಚುಗಳು, ಭಾರತದಾದ್ಯಂತ ಇರುವ ಮಸೀದಿಗಳು, ಹಿಂದೂಗಳ ಶಬರಿಮಲೆ, ತಿರುಪತಿ , ಧರ್ಮಸ್ಥಳ, ಈಗ ಅಯೋಧ್ಯೆ ಇವೆಲ್ಲವೂ ಇಂತಹ, ವಿಭಿನ್ನ ರೂಪ ಮತ್ತು ಹೆಸರುಗಳಲ್ಲಿ, ಒಂದು ಕೂಟಗಳಿಂದ ನಿಯಂತ್ರಿಸಲ್ಪಡುತ್ತವೆ. ಅಯೋಧ್ಯೆಯ ವಿಶಿಷ್ಟ ಲಕ್ಷಣ ಎಂದರೆ “ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ” ಎಂಬ ಹೆಸರಿನ ಟ್ರಸ್ಟ್ ಸ್ಥಾಪಿಸಿದ್ದು ಭಾರತೀಯ ಸಂಸತ್ತಿನಲ್ಲಿ.
ಅಯೋಧ್ಯೆ ಮತ್ತು ಅಧಿಕಾರ ರಾಜಕಾರಣ
ಅಯೋಧ್ಯೆಗೂ ಹಿಂದುತ್ವ ರಾಜಕಾರಣಕ್ಕೂ ನೇರ ಸಂಬಂಧ ಇರುವುದನ್ನು ವಿವರಿಸಬೇಕಿಲ್ಲ. ಹಾಗೆಯೇ ಇವೆರಡರ ನಡುವೆ ನಿರ್ಣಾಯಕ ಸ್ಥಾನದಲ್ಲಿರುವ (Decisive Position) ಆರೆಸ್ಸೆಸ್ ಈ ಟ್ರಸ್ಟ್‌ನೊಡನೆ ನೇರ ಸಂಪರ್ಕ, ಹಿತಾಸಕ್ತಿ ಹೊಂದಿರುವುದೂ ಗುಟ್ಟಿನ ಮಾತೇನಲ್ಲ. ಟ್ರಸ್ಟ್‌ನ ಪ್ರಮುಖ ಸದಸ್ಯರೆಲ್ಲರೂ ಆರೆಸ್ಸೆಸ್ ಸಂಪರ್ಕದಲ್ಲಿರುವವರೇ. ಪದನಿಮಿತ್ಯ (Ex Officio) ಗಣ್ಯರೂ ತಾತ್ವಿಕವಾಗಿ ಆರೆಸ್ಸೆಸ್ ಪರ ಇರುವವರೇ. 2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪ್ರಾಣಪ್ರತಿಷ್ಠಾನ (ಶಿಲೆಯಲ್ಲಿ ಜೀವ ತುಂಬುವ ಅವೈಜ್ಞಾನಿಕ ಆಚರಣೆ) ಮಾಡಿದ ನಂತರ, ಚುನಾವಣೆಗಳಲ್ಲಿ ರಾಮನ ಬಳಕೆ ಕಡಿಮೆಯಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬಾಬ್ರಿಯಿಂದ ಅಯೋಧ್ಯೆವರೆಗಿನ ಮೂರೂವರೆ ದಶಕಗಳ ಪಯಣದ ಮೂಲ ಆಶಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಎರಡು ಮೂರು ದಶಕಗಳ ಕಾಲ ಚುನಾವಣೆಯ ಮತಗಳಿಕೆಯ ಅಸ್ತ್ರವಾಗಿದ್ದ ಶ್ರೀರಾಮ ತದನಂತರದಲ್ಲಿ ಹಿನ್ನಲೆಗೆ ಸರಿದಿರುವುದೇ ಅಲ್ಲದೆ, ಅಯೋಧ್ಯೆಯ ಹಗರಣಗಳನ್ನು ಗಮನಿಸಿದರೆ, ಹಣಗಳಿಕೆಯ ಕೇಂದ್ರವಾಗಿ ಮಾರ್ಪಾಟಾಗಿರುವಂತೆ ತೋರುತ್ತದೆ. ನಿಷ್ಠೆ

ಈ ಹಣಗಳಿಕೆ ಅಥವಾ ಧನಸಂಗ್ರಹದ ಕೈಂಕರ್ಯವೇ ಪ್ರಸ್ತುತ ಭ್ರಷ್ಟಾಚಾರ ಹಗರಣಗಳ ಮೂಲವೂ ಆಗಿದೆ. ಮಂದಿರದ ಒಳಗೆ ರಾಮನ ಶಿಲೆಗೆ ಆಗಮ ಶಾಸ್ತ್ರದ ಅನುಸಾರ ಯಾವುದೇ ಪೂಜಾ ಕೈಂಕರ್ಯಗಳು ನಡೆಯುವುದಿಲ್ಲವಾದರೂ, ಲಕ್ಷಾಂತರ ಭಕ್ತಾದಿಗಳು ದರ್ಶನಕ್ಕಾಗಿ ಹಾತೊರೆಯುತ್ತಾರೆ. ಅಧಿಕೃತ ವರದಿಗಳೇ ಹೇಳುವಂತೆ ಪ್ರತಿನಿತ್ಯ 1.5 ಲಕ್ಷದಿಂದ ಎರಡು ಲಕ್ಷ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ವಿಶೇಷ ಉತ್ಸವ ಅಥವಾ ಹಬ್ಬದ ದಿನಗಳಂದು ಇದು ಮೂರು ಲಕ್ಷ ಸಂಖ್ಯೆಯನ್ನೂ ದಾಟುತ್ತದೆ. ಈ ಭಕ್ತಾದಿಗಳಿಗೆ, ಅಥವಾ ಯಾತ್ರಾರ್ಥಿಗಳಿಗೆ ದೈವ (ರಾಮನ) ದರ್ಶನವಾದ ಮೇಲೆ ತೀರ್ಥ ಮಂಗಳಾರತಿ ಇತ್ಯಾದಿಗಳ ಸೌಲಭ್ಯ ಇಲ್ಲವಾದರೂ, ದಕ್ಷಿಣೆ ಸಲ್ಲಿಸುವ ವ್ಯವಸ್ಥೆಯಂತೂ ಇದೆ. ಮಂದಿರದ ಸಂಕೀರ್ಣದೊಳಗೆ (Temple complex) ಫಲತಾಂಬೂಲ, ಅರಿಶಿನ ಕುಂಕುಮದ ವಿತರಣೆ, ಅರ್ಚನೆ ಇತ್ಯಾದಿ ಆಚರಣೆಗಳಿರುವುದಿಲ್ಲ. ಅಂದರೆ ಮೂಲತಃ ಅಯೋಧ್ಯೆಯ ರಾಮಮಂದಿರ ಒಂದು ಹಿಂದೂ ಆಗಮಶಾಸ್ತ್ರದ ಅನುಸಾರ ದೇವಾಲಯ ಎನಿಸಿಕೊಳ್ಳುವುದಿಲ್ಲ. ಶ್ರೀರಾಮನ ಸ್ಮಾರಕವಾಗಿ ಕಾಣುತ್ತದೆ. ನಿಷ್ಠೆ
ಶ್ರದ್ಧಾಕೇಂದ್ರಗಳು ಮತ್ತು ಜನ ವಿಶ್ವಾಸ
ಇಲ್ಲಿಗೆ ಭೇಟಿ ನೀಡುವ ಲಕ್ಷಾಂತರ ಆಸಕ್ತರೆಲ್ಲರೂ ರಾಮಭಕ್ತರೇ ಆಗಿರಬೇಕಿಲ್ಲ. ಯಾವುದೇ ಯಾತ್ರಾಸ್ಥಳಕ್ಕೆ ಭೇಟಿ ನೀಡುವ ಜನರ ಹಾಗೆ ಇಲ್ಲಿಗೂ ಎಲ್ಲ ಜಾತಿ, ಮತ, ಧರ್ಮ, ಭಾಷಿಕ ಜನರೂ ಭೇಟಿ ನೀಡುತ್ತಾರೆ. ಇವರು ತಮ್ಮ ನಗದು ಕಾಣಿಕೆಗಳನ್ನು/ದೇಣಿಗೆಗಳನ್ನು ಹುಂಡಿಯಲ್ಲಿ ಹಾಕಿ ಕೃತಾರ್ಥರಾಗಿ ಹಿಂದಿರುತ್ತಾರೆ. ರಾಮಮಂದಿರದ ಹೊಸ್ತಿಲಲ್ಲಿ ಇವರಿಗೆ ಪ್ರಸಾದ ರೂಪದ ಪದಾರ್ಥವನ್ನು ಡಬ್ಬಿಯಲ್ಲಿ ನೀಡಲಾಗುತ್ತದೆ. ಅಧಿಕೃತ ಮೂಲಗಳ ಪ್ರಕಾರ ಈ ಹುಂಡಿಗಳಲ್ಲಿ ಸಂಗ್ರಹವಾಗುವ ಸರಾಸರಿ ದೈನಂದಿನ ಕಾಣಿಕೆ 8 ರಿಂದ 13 ಲಕ್ಷ ರೂಗಳಷ್ಟಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಇದು 50 ಲಕ್ಷ ರೂಗಳನ್ನೂ ದಾಟುತ್ತದೆ. ಹಣ ಎಣಿಕೆಗಾಗಿಯೇ 35 ಕೇಂದ್ರಗಳಿದ್ದು ಎಲ್ಲವೂ ಸಹ ರಹಸ್ಯ ಕ್ಯಾಮರಾಗಳನ್ನು ಹೊಂದಿವೆ. ಧಾರ್ಮಿಕ ಕಾರ್ಪೋರೇಟೀಕರಣಕ್ಕೊಳಗಗಿರುವ ಎಲ್ಲ ದೊಡ್ಡ ತೀರ್ಥಕ್ಷೇತ್ರಗಳಲ್ಲೂ ಇದು ಸಾಮಾನ್ಯ ಸಂಗತಿಯಾಗಿದೆ. ದೈವ ಸನ್ನಿಧಿಯಲ್ಲಿ ಯಾವುದೇ ಅಪರಾಧ ಮಾಡಲೂ ಮನಸ್ಸು ಹಿಂಜರಿಯುತ್ತದೆ ಎಂಬ ನಂಬಿಕೆ ಬಹುಶಃ ಈಗ ಪ್ರಾಚೀನ ವಿಶ್ವಾಸದಂತೆ ಕಾಣುತ್ತದೆ. ಏಕೆಂದರೆ ಹುಂಡಿಯ ಚಿಲ್ಲರೆ ಹಣ ಎಣಿಸುವುದನ್ನೂ ಎಲ್ಲ ದೇವಾಲಯಗಳಲ್ಲೂ ರಹಸ್ಯ ಕ್ಯಾಮರಾಗಳು ಸೆರೆ ಹಿಡಿಯುತ್ತಿವೆ. ನಿಷ್ಠೆ

ಈ ಡಿಜಿಟಲ್ ದೃಷ್ಟಿಯನ್ನೂ ವಂಚಿಸಿ ಅಯೋಧ್ಯೆಯಲ್ಲಿ ಹಣ ದೋಚಿರುವುದು ವರ್ತಮಾನದ ದುಷ್ಟ ಸಮಾಜದ ಸಂಕೇತ. ಅಯೋಧ್ಯೆಯ ಹಗರಣದಲ್ಲಿ ಎಷ್ಟು ಹಣವನ್ನು ದೋಚಲಾಗಿದೆ ಎನ್ನುವುದು ಅಪ್ರಸ್ತುತ. ಏಕೆಂದರೆ ಯಾವುದೇ ಸ್ಥಾವರದಲ್ಲಾದರೂ ಧನಸಂಗ್ರಹದ ಪ್ರಮಾಣಕ್ಕೆ ಅನುಗುಣವಾಗಿ ಧನಗಾಹಿಗಳ ಲೂಟಿಯ ಪ್ರಮಾಣವೂ ಹೆಚ್ಚಾಗಿರುತ್ತದೆ. ಹಾಗಾಗಿಯೇ ತಿರುಪತಿ, ಶಬರಿಮಲೆಯನ್ನೂ ಮೀರಿ ಅಯೋಧ್ಯೆಯ ರಾಮಮಂದಿರ ಭ್ರಷ್ಟರ ಕೂಟವನ್ನು ಎದುರಿಸಬೇಕಾಗಿದೆ. ಈವರೆಗೆ ವಿಶೇಷ ತನಿಖಾ ತಂಡ (SIT) ಗುರುತಿಸಿರುವ ಎಂಟು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಟ್ರಸ್ಟ್‌ನ ಮುಖ್ಯ ಪದಾಧಿಕಾರಿಗಳು ತಡವಾಗಿಯಾದರೂ ರಾಜೀನಾಮೆ ಸಲ್ಲಿಸಿದ್ದಾರೆ. ನೈಜ ಅಪರಾಧಿಗಳು ಯಾರು ಎನ್ನುವುದಕ್ಕಿಂತಲೂ ಈ ಭ್ರಷ್ಟಾಚಾರ ಹಗರಣಲ್ಲಿ ದೋಚಿತರು ಅಥವಾ ವಂಚಿತರು ಯಾರು ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ನಿಷ್ಠೆ
ಧಾರ್ಮಿಕ ಶ್ರದ್ಧೆ – ಸಾಮಾಜಿಕ ವ್ಯತ್ಯಯಗಳು
1980-90ರ ದಶಕಕ್ಕೆ ಹಿಂತಿರುಗಿ ನೋಡಿದಾಗ ನಮಗೆ ಅಸಂಖ್ಯಾತ ಜನರು ಇಲ್ಲಿ ಕಾಣುತ್ತಾರೆ. “ರಾಮಮಂದಿರ ಅಲ್ಲೇ ಕಟ್ಟುವೆವು ” ಎಂಬ ಘೋಷಣೆಗೆ ಮರುಳಾಗಿ ದೇಶಾದ್ಯಂತ ವಿದ್ಯಾರ್ಥಿಗಳು, ಯುವ ಜನರು, ಕಾರ್ಮಿಕರು ಒಮ್ಮೆಲೆ ಬೀದಿಗಿಳಿದು ಇಟ್ಟಿಗೆಗೆಳ ಹೆಸರಿನಲ್ಲಿ ಸಂಗ್ರಹಿಸಿದ ಹಣ ಕಣ್ಣುಕುಕ್ಕುತ್ತದೆ. ಈ ಹಣಸಂಗ್ರಹ ಪ್ರಕ್ರಿಯೆಯಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ತೊರೆದಿದ್ದಾರೆ ಅಥವಾ ಶಿಕ್ಷಣ ಕುಂಠಿತವಾಗಿದೆ. ಸಣ್ಣ ವ್ಯಾಪಾರಿಗಳು ತಮ್ಮ ವಹಿವಾಟು-ಆದಾಯವನ್ನು ತ್ಯಾಗ ಮಾಡಿದ್ದಾರೆ. ತದನಂತರ ಸಂಭವಿಸಿದ ಕೋಮು ಗಲಭೆಗಳಲ್ಲಿ ಅಸಂಖ್ಯಾತ ಕುಟುಂಬಗಳು ಬೀದಿಪಾಲಾಗಿವೆ. ದಾಳಿಗೊಳಗಾದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಗಳು ಊರುಗಳನ್ನೇ ತೊರೆದು ಹೊಸ ವಸತಿ ನೆಲೆಗಳನ್ನು ಸ್ಥಾಪಿಸಿದ್ದಾರೆ. ಈ ಗಲಭೆಯಲ್ಲಿ ಮಡಿದವರ ಪೈಕಿ, ಆಸ್ತಿಪಾಸ್ತಿ ಕಳೆದುಕೊಂಡವರ ಪೈಕಿ ಹಿಂದೂಗಳೂ ಹೇರಳ ಸಂಖ್ಯೆಯಲ್ಲಿದ್ದಾರೆ. ನಿಷ್ಠೆ

ಈ ದುರಂತಗಳಿಗೊಳಗಾದ ಜನಸಂಖ್ಯೆಯನ್ನು ಒಳಹೊಕ್ಕು ನೋಡಿದಾಗ ಅಲ್ಲಿ ಕಾಣುವುದು ಮುಸ್ಲಿಂ ಅಲ್ಪಸಂಖ್ಯಾತರು, ಹಿಂದೂ ತಳಸಮುದಾಯಗಳು ಅಥವಾ ಹಿಂದುಳಿದ ವರ್ಗಗಳು. ಪ್ರಧಾನವಾಗಿ ಎರಡೂ ಬದಿಗಳಲ್ಲಿ ಕಾಣುವುದು ತಮ್ಮ ಮಕ್ಕಳನ್ನು, ಗಂಡನನ್ನು, ತಂದೆ ತಾಯಿಯನ್ನು ಕಳೆದುಕೊಂಡ ಅಮಾಯಕ ಮಹಿಳೆಯರು. ಕರಸೇವಕರಾಗಿ ಜೀವ ಮತ್ತು ಬದುಕು ತ್ಯಾಗ ಮಾಡಿದ ಹಿಂದೂ ಯುವಕರ ತಾಯಂದಿರು ಅನುಭವಿಸಿರಬಹುದಾದ ಒಳಬೇಗುದಿಯನ್ನು ಯಾರೂ ಯೋಚಿಸಿಯೇ ಇಲ್ಲ. ಏಕೆಂದರೆ ಇಡೀ ಆಂದೋಲನ-ಗಲಭೆಗಳಲ್ಲಿ ಮಹಿಳೆಯ ದನಿಗೆ ಯಾವುದೇ ಮಾನ್ಯತೆ ಇರಲಿಲ್ಲ. ಸಂಪೂರ್ಣವಾಗಿ ಪುರುಷ ಕೇಂದ್ರಿತ ನೆಲೆಯಲ್ಲಿ ಎಲ್ಲವೂ ನಿರ್ಧಾರವಾಗಿತ್ತು. ಈ ಶ್ರದ್ಧಾವಂತ ಜನಸಂಖ್ಯೆಯನ್ನೇ (faithful population) ಪ್ರಸ್ತುತ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ದೋಚಿತರು (ದೋಚಲ್ಪಟ್ಟವರು) ಎಂದು ನಿರ್ವಚಿಸಬಹುದು. ನಿಷ್ಠೆ
ತಲೆಮಾರುಗಳ ಅಂತರದಲ್ಲಿ ರಾಮ
ನಾಲ್ಕು ದಶಕಗಳ ಮುನ್ನ ಮಂದಿರಕ್ಕಾಗಿ ಮುಂದಡಿಯಿಟ್ಟ ಆಗಿನ ವಯಸ್ಕರು ಈಗ ವೃದ್ಧರಾಗಿರುತ್ತಾರೆ. ವಿದ್ಯಾರ್ಥಿ ಯುವಜನರು ಈಗ ವಯಸ್ಕರಾಗಿರುತ್ತಾರೆ, ಇವರ ಪೈಕಿ ನೈಜ ರಾಮಭಕ್ತರೂ ಇದ್ದರು, ರಾಜಕೀಯವಾಗಿ ಬಿಜೆಪಿ ಅನುಯಾಯಿಗಳೂ ಇದ್ದರು, ಸಾಂಸ್ಕೃತಿಕವಾಗಿ ಆರೆಸ್ಸೆಸ್ ಸಮರ್ಥಕರೂ ಇದ್ದರು. 20 ವರ್ಷಗಳಿಗೆ ಒಂದು ಪೀಳಿಗೆ ಎಂದು ಜನಸಂಖ್ಯಾಶಾಸ್ತ್ರ ಹೇಳುತ್ತದೆ. ಅಂದರೆ ಈಗ ಮೂರನೆಯ ಪೀಳಿಗೆಯನ್ನು ಐದಾರು ವರ್ಷದ ವಯೋಮಾನದವರಲ್ಲಿ ಗುರುತಿಸಬಹುದು. ನಿಷ್ಠೆ
ಮೊದಲ ಪೀಳಿಗೆಯಲ್ಲಿ ರಾಮನನ್ನು ಆರಾಧಿಸುವ ಒಂದು ವರ್ಗ ಇತ್ತು. ಸಂಭಾವ್ಯ ರಾಮಮಂದಿರದ ಕನಸಿಗೆ ಮಾರುಹೋದ ಈ ವರ್ಗದಲ್ಲಿ ಹಿರಿಯ ಜೀವಗಳೂ ಇದ್ದವು, ಬ್ರಾಹ್ಮಣಶಾಹಿಯ ಸಮಸ್ತ ಲೋಕವೇ ಇತ್ತು, ವಿದ್ವತ್ ವಲಯದ ದಿಗ್ಗಜರೂ ಇದ್ದರು. ಕನ್ನಡದ ಕೆಲವು ಸಾಹಿತಿಗಳ ಅಂತರ್ ಧ್ವನಿಯೇ ಬದಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವರ್ಗಗಳಿಗೆ ಆರೆಸ್ಸೆಸ್, ರಾಮ ಮಂದಿರದ ಮುಖೇನ ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸುವ ಸಾಂಸ್ಕೃತಿಕ ಸಂಘಟನೆಯಾಗಿ ಕಂಡಿತ್ತು. ಹಿಂದೂ ಧರ್ಮ, ರಾಷ್ಟ್ರೀಯತೆ ಮತ್ತು ರಾಮಮಂದಿರ ಈ ಮೂರೂ ಆಯಾಮಗಳಲ್ಲಿ ಹಂಚಿಹೋದ ಸಮಾಜದಲ್ಲಿ ಕೆಂಬಾವುಟ ಹಿಡಿದ ಕಾರ್ಮಿಕರೂ, ಹಿಂದೂ ಧರ್ಮವನ್ನು ತಿರಸ್ಕರಿಸಿದ ಅಂಬೇಡ್ಕರ್ ಅನುಯಾಯಿಗಳೂ ಸಹ ಅಪಾರ ಸಂಖ್ಯೆಯಲ್ಲಿದ್ದುದು ಚಾರಿತ್ರಿಕ ಸತ್ಯ. ಈ ವರ್ಗ ಇಂದು ವೃದ್ಧಾಪ್ಯ ತಲುಪಿರುತ್ತದೆ.
ಇದೇ ಕಾಲಘಟ್ಟದಲ್ಲೇ ಇದ್ದಂತಹ ಯುವ ಜನಾಂಗಕ್ಕೆ ʼ ರಾಮಮಂದಿರ ʼ ಜಾಗತೀಕರಣ ಸೃಷ್ಟಿಸಿದ ಭ್ರಮಾಲೋಕದ ಸಾಂಸ್ಕೃತಿಕ ಆಯಾಮವಾಗಿ ಕಂಡಿತ್ತು. ಹಿರಿಯ ಪೀಳಿಗೆಯನ್ನೇ ಅನುಕರಿಸಿದ ಈ ಯುವ ಸಮೂಹಕ್ಕೆ ರಾಮಮಂದಿರದ ನಿರ್ಮಾಣ ಉಜ್ವಲ ಭವಿಷ್ಯದ ಸಂಕೇತವಾಗಿ ಕಂಡಿತ್ತು. ಜಾಗತೀಕರಣ ಸೃಷ್ಟಿಸಿದ್ದ ಆರ್ಥಿಕ ಸಂಕಟಗಳು, ನಾಲ್ಕೈದು ದಶಕಗಳ ಅಭಿವೃದ್ಧಿಯನ್ನೇ ಪ್ರಶ್ನಿಸುವ ಮನಸ್ಸುಗಳನ್ನು ಸೃಷ್ಟಿಮಾಡಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಭ್ರಮನಿರಸನಗೊಂಡಿದ್ದ ಒಂದು ಬೃಹತ್ ವರ್ಗವನ್ನು ಈ ಆವರಣದಲ್ಲಿ, ಮಂಡಲ್ ಹೋರಾಟಗಳ ಜೊತೆಗೇ ಕಾಣಬಹುದಾಗಿತ್ತು. ಇಲ್ಲಿದ್ದ ಅತೃಪ್ತ ಯುವ ಸಮೂಹಕ್ಕೆ ಮರುಭೂಮಿಯ ಓಯಸಿಸ್‌ನಂತೆ ಕಂಡಿದ್ದು ಬಿಜೆಪಿ ಅಲ್ಲ, ರಾಮಮಂದಿರದ ಅಮೂರ್ತ ಕಲ್ಪನೆ. ಈ ಕಲ್ಪನೆಗೆ ಜೀವ ತುಂಬಿದ್ದು ಆರೆಸ್ಸೆಸ್-ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಫಲ. ನಿಷ್ಠೆ
ಈ ಜನಸಂಖ್ಯೆ ಇಂದು ವಯಸ್ಕ ಸಮಾಜದ ಪ್ರಾತಿನಿಧಿತ್ವ ಪಡೆದಿರುತ್ತದೆ. ಎಡಪಂಥೀಯ ಕಾರ್ಮಿಕ ಸಂಘಗಳಲ್ಲೂ, ಅಂಬೇಡ್ಕರ್‌ವಾದಿ ಸಂಘಟನೆಗಳಲ್ಲೂ, ಲೋಹಿಯಾ ಸಮಾಜವಾದಿ ಗುಂಪುಗಳಲ್ಲೂ ಹಂಚಿಹೋಗಿದ್ದ ಈ ಅತೃಪ್ತ ಮನಸ್ಸುಗಳಿಗೆ ಹೊಸ ಕಿಟಕಿಗಳನ್ನು ತೆರೆದಿದ್ದು ಮಂದಿರ-ಮಸೀದಿ ರಾಜಕೀಯ ಮತ್ತು ರಾಮಮಂದಿರ ನಿರ್ಮಾಣದ ಕನಸು. ಈ ಅವಧಿಯಲ್ಲೇ ರಾಜಕೀಯವಾಗಿಯೂ ಸಹ ಭಾರತದ ಲೋಹಿಯಾ ಸಮಾಜವಾದಿ ಗುಂಪುಗಳು ತಮ್ಮ ಸಿದ್ದಾಂತಗಳನ್ನು ಬದಿಗೊತ್ತಿ, ಬಿಜೆಪಿಯೊಡನೆ ಕೈಜೋಡಿಸಲಾರಂಭಿಸಿದ್ದವು. ಸಹಜವಾಗಿ ಬಿಜೆಪಿಯ ಒಳ ಆವರಣದಲ್ಲಿದ್ದುಕೊಂಡು ರಾಮಮಂದಿರವನ್ನು ವಿರೋಧಿಸುವುದು ಊಹಿಸಲೂ ಸಾಧ್ಯವಿಲ್ಲ. ವಾಜಪೇಯಿಯವರ ಸೌಮ್ಯ ಚಹರೆ ಮತ್ತು ಮೃದುನುಡಿ ಲೋಹಿಯಾ ಸಮಾಜವಾದಿಗಳ ಅಸ್ತಿತ್ವವನ್ನೇ ಅಪ್ರಸ್ತುತಗೊಳಿಸಿದ್ದನ್ನು ಈಗಲೂ ಕಾಣಬಹುದು. ನಿಷ್ಠೆ
ನವಶತಮಾನದಲ್ಲಿ ಜನಿಸಿದ ಮಿಲೆನಿಯಲ್ ಸಮಾಜಕ್ಕೆ ರಾಮಮಂದಿರ ಒಂದು ರೋಚಕ ಇತಿಹಾಸವಾಗಿ ಕಾಣುತ್ತದೆ. ಒಂದೆಡೆ ಡಿಜಿಟಲ್ ಜಗತ್ತು ಸೃಷ್ಟಿಸುವ ಸುಂದರ ಲೋಕ ಮತ್ತೊಂದೆಡೆ ರಾಮಮಂದಿರ ನಿರ್ಮಾಣ ಸಾಕಾರಗೊಂಡ 2024ರ ಸಂಭ್ರಮ ಈ ಯುವ ಪೀಳಿಗೆಯನ್ನು ಭ್ರಮಾಧೀನಗೊಳಿಸಿದೆ. ಅಯೋಧ್ಯೆಯಲ್ಲಿ ದೋಚಲಾಗಿರುವ ಹಣ ನಮ್ಮದೆ, ಅದು ನಮ್ಮವರಿಂದಲೇ ಲೂಟಿಯಾಗಿದೆ ಎಂಬ ಜಿಜ್ಞಾಸೆ ಈ ಯುವ ಸಮುದಾಯದಲ್ಲಿ ಮೂಡಬೇಕಿತ್ತು. ಆದರೆ ಈ ಪ್ರಶ್ನೆಯೇ ಉದ್ಭವಿಸದ ಹಾಗೆ ಯುವ ಪೀಳಿಗೆಯ ಮನಸ್ಸುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಪೀಳಿಗೆಯನ್ನು ಉತ್ತೇಜಿಸಿ, ಪ್ರಚೋದಿಸಿದ ಬೌದ್ಧಿಕ ಪಡೆಗಳು ಪ್ರಶ್ನಿಸುವ ಮನೋಭಾವವನ್ನೂ ಹೊಸಕಿ ಹಾಕಿವೆ. ಭವಿಷ್ಯದ ಇತಿಹಾಸ ಪಠ್ಯಗಳಲ್ಲಿ ಈ ಕರಾಳ ಅಧ್ಯಾಯ ಪ್ರಸ್ತಾಪವೇ ಆಗದಂತೆ ಮಾಡಲು ಈಗಾಗಲೇ ಸಿದ್ಧತೆಗಳು ನಡೆದಿವೆ. ನಿಷ್ಠೆ
ಇದನ್ನೂ ನೋಡಿ: ಒಂದು ಕೋಟಿ ಕುಟುಂಬಗಳ ಬದುಕಿನ ಮೇಲೆ ಹೊಡೆತ; ಕನಿಷ್ಠ ವೇತನ ಹಿಂಪಡೆದರೆ ಬೀದಿಗಿಳಿಯುತ್ತೇವೆ: ಕಾರ್ಮಿಕ ಸಂಘಟನೆಗಳು
