ಬರದ ಛಾಯೆ, ನೀರಿನ ಸಂಕಷ್ಟ: ಬೆಳಗಾವಿ ಸಮಸ್ಯೆಗಳ ಪರಿಶೀಲನೆಗೆ ಕ್ರಮ – ಜಿ ಪರಮೇಶ್ವರ್ ಭರವಸೆ

ಬೆಳಗಾವಿ: ರಾಜ್ಯದ ಬೆಳಗಾವಿ ಭಾಗದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಜೂನ್ ತಿಂಗಳಲ್ಲಿ ನಿರೀಕ್ಷಿತ ಮಳೆ ದಾಖಲಾಗಿಲ್ಲ. ಇದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದರು. ಬೆಳೆ ನಷ್ಟದಿಂದ ಜನರ ಜೀವನದ ಮೇಲೆ ಪರಿಣಾಮ ಬೀರಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು, ಪ್ರತಿ ಜಿಲ್ಲೆಗೆ ಕುಡಿಯುವ ನೀರಿಗಾಗಿ ₹5 ಕೋಟಿ ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸಮಸ್ಯೆಗಳನ್ನು ನಿರ್ವಹಿಸಲು ಕಾರ್ಯಯೋಜನೆ (ಪ್ಲಾನ್ ಆಫ್ ಆ್ಯಕ್ಷನ್) ಸಿದ್ಧಪಡಿಸಲಾಗಿದ್ದು, ಜಿಲ್ಲಾಧಿಕಾರಿಗಳು ಅದನ್ನು ಜಾರಿಗೆ ತರುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಹಾಸನದಲ್ಲಿ ಟಿಕೆಟ್ ಪೈಪೋಟಿ ಸುಳಿವು: ‘ಶಾಸಕರು ವಿಫಲರಾದರೆ ನಾನೇ ಅಭ್ಯರ್ಥಿ’ – ಪ್ರೀತಂ ಗೌಡ

ಕಂದಾಯ ಇಲಾಖೆಯಲ್ಲಿ ಪೌತಿ ಖಾತೆ, ಹಕ್ಕುಪತ್ರ ವಿತರಣೆ, ಆಕಾರ್ ಬಂದ್ ಹಾಗೂ ಕಂದಾಯ ಗ್ರಾಮಗಳ ಘೋಷಣೆ ಪ್ರಕ್ರಿಯೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ಇದನ್ನು ಇನ್ನಷ್ಟು ವೇಗಗೊಳಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಧಾರ್ಮಿಕ ಇಲಾಖೆಗೆ ಸಂಬಂಧಿಸಿ ದೇವಸ್ಥಾನಗಳ ಆಸ್ತಿ ಒತ್ತುವರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರ್ವೇ ನಡೆಸಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇವಸ್ಥಾನಗಳ ಹಣಕಾಸು ವೆಚ್ಚಗಳು ನಿಯಮಬದ್ಧವಾಗಿರಬೇಕು ಹಾಗೂ ಪ್ರಾಧಿಕಾರದ ಅನುಮತಿಯಿಲ್ಲದೆ ಅನಗತ್ಯ ಖರ್ಚು ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕ್ರೀಡಾ ಕ್ಷೇತ್ರಕ್ಕೂ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮೂಲಸೌಕರ್ಯ ಕೊರತೆಯಿರುವ ಶಾಲಾ-ಕಾಲೇಜುಗಳಲ್ಲಿ ಕ್ರೀಡೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು. ಗೃಹ ಇಲಾಖೆಯ ನೇಮಕಾತಿಯಲ್ಲಿ ಶೇ.3 ಮತ್ತು ಇತರ ಇಲಾಖೆಗಳ ನೇಮಕಾತಿಯಲ್ಲಿ ಶೇ.2ರಷ್ಟು ಮೀಸಲಾತಿ ನೀಡಲಾಗುವುದು ಎಂದರು.

ಬರ ಘೋಷಣೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಮಳೆ, ಬೆಳೆ ನಷ್ಟ ಹಾಗೂ ನೀರಿನ ಮಟ್ಟದ ಆಧಾರದ ಮೇಲೆ ಮಾನದಂಡಗಳ ಪ್ರಕಾರ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಮೋಡ ಬಿತ್ತನೆ ಕುರಿತು ಕೂಡ ತಕ್ಷಣಕ್ಕೆ ಯಾವುದೇ ನಿರ್ಧಾರ ಇಲ್ಲ ಎಂದರು.

ಕೇಂದ್ರ ಸರ್ಕಾರದಿಂದ ಬರ ಪರಿಹಾರ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ ಅವರು, ನಾವು ಸಲ್ಲಿಸಿದ ವರದಿಗೆ ಶೇ.10ರಷ್ಟು ಪರಿಹಾರವೂ ದೊರಕಿಲ್ಲ ಎಂದು ಹೇಳಿದರು.

ಇದನ್ನೂ ನೋಡಿ: ದುಡಿಯುವ ಭೂಮಿ ಕಿತ್ತುಕೊಂಡ ಸರಕಾರ – ಯು.‌ಬಸವರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *