ಕನಿಷ್ಠ ವೇತನ ಹಿಂಪಡೆದರೆ ರಾಜ್ಯಾದ್ಯಂತ ಹೋರಾಟ: ಸರ್ಕಾರಕ್ಕೆ ಕಾರ್ಮಿಕ ಸಂಘಟನೆಗಳ ಎಚ್ಚರಿಕೆ

ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ಪ್ರಕಟಗೊಂಡಿರುವ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲನೆ ಅಥವಾ ಹಿಂಪಡೆಯುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿರುವ ವಿವಿಧ ಕಾರ್ಮಿಕ ಸಂಘಟನೆಗಳು, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ನಗರದಲ್ಲಿ ಜೆಸಿಟಿಯು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಮಾತನಾಡಿ, 2017-18ರಿಂದ ಬಾಕಿ ಉಳಿದಿದ್ದ ಕನಿಷ್ಠ ವೇತನ ಪರಿಷ್ಕರಣೆ ಕಾರ್ಮಿಕರ ದೀರ್ಘ ಹೋರಾಟದ ಫಲವಾಗಿ 2026ರ ಮೇ 22ರಂದು ಅಂತಿಮಗೊಂಡಿದೆ. ಈ ಪರಿಷ್ಕರಣೆಯಿಂದ ರಾಜ್ಯದ ಒಂದು ಕೋಟಿಗೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ನೇರ ಲಾಭವಾಗಲಿದ್ದು, ಅವರ ಖರೀದಿ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ರಾಜ್ಯದ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ ಎಂದು ಹೇಳಿದರು.

ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಹಿಂಪಡೆದರೆ ಒಂದು ಕೋಟಿಗೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಸರ್ಕಾರ ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯಬಾರದು. ಒಂದು ವೇಳೆ ಹಿಂಪಡೆಯಲು ಮುಂದಾದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋರಾಟಗಳನ್ನು ಸಂಘಟಿಸಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಅವರು ಎಚ್ಚರಿಸಿದರು.

ಇದನ್ನೂ ಓದಿ: ಅರಾಜಕ ಸಮಾಜದ ಅನಾಗರಿಕ ಮನಸ್ಥಿತಿಗಳು

ಎಐಟಿಯುಸಿ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯೂ ಮಾತನಾಡಿ, 39 ನಿಗದಿತ ಉದ್ಯೋಗಗಳ ಕನಿಷ್ಠ ವೇತನವನ್ನು ಎಂಟು ವರ್ಷಗಳ ಬಳಿಕ ಪರಿಷ್ಕರಿಸಲಾಗಿದ್ದು, ಈ ವಿಳಂಬವೇ ಕನಿಷ್ಠ ವೇತನ ಕಾಯ್ದೆ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು. ವೇತನ ಹೆಚ್ಚಳವು ಸುಮಾರು ಶೇ.40ರಷ್ಟಿದ್ದು, ಉದ್ಯೋಗದಾತರು ಹೇಳುತ್ತಿರುವಂತೆ ಶೇ.60ರಷ್ಟು ಅಲ್ಲ ಎಂದು ಸ್ಪಷ್ಟಪಡಿಸಿದರು.

ಎಐಸಿಸಿಟಿಯು ಮುಖಂಡ ಅಪ್ಪಣ್ಣ ಮಾತನಾಡಿ, 2025ರ ಏಪ್ರಿಲ್‌ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿ ಎರಡು ತಿಂಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. 15ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಮಾನದಂಡಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ವೇತನ ದರಗಳನ್ನು ನಿಗದಿಪಡಿಸಲಾಗಿದೆ. ಕಾರ್ಮಿಕ ಸಲಹಾ ಮಂಡಳಿಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕವೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಹಣಕಾಸು ಹಾಗೂ ವಾಣಿಜ್ಯ ಇಲಾಖೆಗಳ ಪ್ರತಿನಿಧಿಗಳೂ ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ ಎಂದು ವಿವರಿಸಿದರು.

ಎಐಯುಟಿಯುಸಿ ಮುಖಂಡ ಸೋಮಶೇಖರ್ ಯಾದಗಿರಿ ಮಾತನಾಡಿ, ವೇತನ ಸಂಹಿತೆ-2019ರ ಸೆಕ್ಷನ್ 69ರ ಅಡಿಯಲ್ಲಿ ಈ ಅಧಿಸೂಚನೆ ಕಾನೂನುಬದ್ಧವಾಗಿ ಜಾರಿಯಾಗಿದೆ. ಇದನ್ನು ಪ್ರಶ್ನಿಸಿ ಕೆಲ ಉದ್ಯೋಗದಾತರು ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ನ್ಯಾಯಾಲಯದ ತೀರ್ಪು ಬರುವ ಮುನ್ನ ಅಂತಿಮ ಅಧಿಸೂಚನೆಯನ್ನು ಹಿಂಪಡೆಯುವುದು ಕಾನೂನುಬಾಹಿರವಾಗಲಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವೂ ತನ್ನ ಹಿಂದಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ ಎಂದು ಹೇಳಿದರು.

ಎಚ್‌ಎಂಕೆಪಿ ಮುಖಂಡ ಕಾಳಪ್ಪ ಮಾತನಾಡಿ, ಕೆಪಿಟಿಸಿಎಲ್ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಹಾಗೂ ಖಾಸಗಿ ಸಂಸ್ಥೆಗಳು ಈಗಾಗಲೇ ಪರಿಷ್ಕೃತ ವೇತನ ಜಾರಿಗೊಳಿಸಿವೆ. ಹೀಗಾಗಿ ಕಾರ್ಮಿಕರಿಗೆ ದೊರೆತಿರುವ ಹಕ್ಕುಗಳನ್ನು ಹಿಂದಕ್ಕೆ ಪಡೆಯುವುದು ಕಾನೂನುಬಾಹಿರವಾಗಲಿದೆ ಎಂದು ಅಭಿಪ್ರಾಯಪಟ್ಟರು. 3.8 ಲಕ್ಷ ಗುತ್ತಿಗೆ ಹಾಗೂ ಹೊರಗುತ್ತಿಗೆ ಸರ್ಕಾರಿ ನೌಕರರಿಗೆ ಈ ಪರಿಷ್ಕರಣೆಯಿಂದ ವಾರ್ಷಿಕ ಸುಮಾರು ₹3,200 ಕೋಟಿ ಹೆಚ್ಚುವರಿ ವೆಚ್ಚವಾಗಲಿದ್ದು, ಇದು 7ನೇ ವೇತನ ಆಯೋಗದ ವೆಚ್ಚಕ್ಕೆ ಹೋಲಿಸಿದರೆ ಅತ್ಯಲ್ಪ ಪ್ರಮಾಣವಾಗಿದೆ ಎಂದು ತಿಳಿಸಿದರು.

ಕನಿಷ್ಠ ವೇತನ ಪರಿಷ್ಕರಣೆಯನ್ನು ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಕ್ರಮವು ಸರ್ಕಾರದ ಮೇಲಿನ ಕಾರ್ಮಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡಲಿದೆ. ಸರ್ಕಾರ ಈ ನಿರ್ಧಾರವನ್ನು ಕೈಗೊಂಡರೆ ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳ ಮುಂದೆ ಪಿಕೆಟ್, ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅಗತ್ಯವಿದ್ದರೆ ರಾಜ್ಯಮಟ್ಟದ ಬಂದ್ ಸೇರಿದಂತೆ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.

ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್‌ಪೋರ್ಟ್‌ ಕಥೆ ಏನು? ಎಸ್‌ಐಆರ್‌ ಸುತ್ತ ಪ್ರಶ್ನೆಗಳ ಹುತ್ತ |

Donate Janashakthi Media

Leave a Reply

Your email address will not be published. Required fields are marked *