ಹಾಸನ: ಕರ್ನಾಟಕದ ವಿಜ್ಞಾನ ಚಳವಳಿಯ ಪ್ರಮುಖ ಸಂಘಟನೆಯಾದ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಕಳೆದ 25 ವರ್ಷಗಳಿಂದ ಪ್ರಕಟಿಸುತ್ತಿರುವ ‘ಟೀಚರ್’ ಪತ್ರಿಕೆಯ ವಿಜ್ಞಾನ ಬರಹಗಾರರ ರಾಜ್ಯಮಟ್ಟದ ಎರಡು ದಿನಗಳ ಅಧ್ಯಯನ ಕಮ್ಮಟಕ್ಕೆ ಜೂನ್ 28ರಂದು ಹಾಸನದ ಎಂ. ಕೃಷ್ಣ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಹಾಸನ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವಿ. ಶ್ರೀನಿವಾಸ್, ವಿಜ್ಞಾನ ಬರಹಗಳು ಕೇವಲ ಮಾಹಿತಿಯನ್ನು ನೀಡುವುದಷ್ಟೇ ಅಲ್ಲ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ದಾರಿದೀಪವಾಗಬೇಕು ಎಂದರು. ಇಂದಿನ ಸಮಾಜದಲ್ಲಿ ಜನರು ಅನೇಕ ಸಮಸ್ಯೆಗಳ ನಡುವೆ ದಿಕ್ಕೆಟ್ಟಿರುವ ಸಂದರ್ಭದಲ್ಲಿ, ವಿಜ್ಞಾನ ಬರಹಗಾರರು ವೈಜ್ಞಾನಿಕ ದೃಷ್ಟಿಕೋನದಿಂದ ಸಮಸ್ಯೆಗಳನ್ನು ವಿಶ್ಲೇಷಿಸಿ, ಜನಸಾಮಾನ್ಯರಿಗೆ ಪರಿಹಾರದ ಮಾರ್ಗಗಳನ್ನು ತಮ್ಮ ಬರಹಗಳ ಮೂಲಕ ಪರಿಚಯಿಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ‘ಟೀಚರ್’ ಪತ್ರಿಕೆಯ ಸಂಪಾದಕ ಉದಯ ಗಾಂವ್ಕರ್, ಕಳೆದ 25 ವರ್ಷಗಳಿಂದ ‘ಟೀಚರ್’ ಪತ್ರಿಕೆ ಬಿಜಿವಿಎಸ್ನ ಮುಖವಾಣಿಯಾಗಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಪತ್ರಿಕೆಯ ಬರಹಗಾರರಿಗಾಗಿ ವಿಶೇಷ ಎರಡು ದಿನಗಳ ಅಧ್ಯಯನ ಕಮ್ಮಟವನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಿಜ್ಞಾನ ಬರಹಗಾರರು ಸಮಕಾಲೀನ ವಿಜ್ಞಾನ ಬರವಣಿಗೆಯ ಸವಾಲುಗಳು, ಅವಕಾಶಗಳು ಮತ್ತು ಹೊಸ ದೃಷ್ಟಿಕೋನಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ‘ಹ್ಯಾಪಿ ಬರ್ತ್ಡೇ… ರಾಜೀನಾಮೆ ನೀಡಿ’: ಪ್ರಧಾನ್ ವಿರುದ್ಧ ಪ್ರತಿಭಟನೆ ತೀವ್ರ
ವಿಜ್ಞಾನ ಬರಹಗಾರರು ಸಮಾಜದ ಸಮಸ್ಯೆಗಳ ಬಗ್ಗೆ ಸೂಕ್ಷ್ಮ ಸಂವೇದನೆಯೊಂದಿಗೆ ವೈಜ್ಞಾನಿಕ ನೆಲೆಯಲ್ಲಿ ಚಿಂತಿಸಿ ಬರೆಯಬೇಕು. ಮೂಢನಂಬಿಕೆ, ಕಂದಾಚಾರ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಶೋಷಣೆ ಹಾಗೂ ವಂಚನೆಗಳ ವಿರುದ್ಧ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಹೊಣೆಗಾರಿಕೆ ವಿಜ್ಞಾನ ಬರಹಗಾರರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಷಾ ತಜ್ಞ ಅಬ್ದುಲ್ ರೆಹಮಾನ್ ಪಾಷಾ ಹಾಗೂ ವಿಜ್ಞಾನಿ, ‘ಕುತೂಹಲಿ’ ಅಂತರ್ಜಾಲ ವಿಜ್ಞಾನ ಪತ್ರಿಕೆಯ ಸಂಪಾದಕ ಡಾ. ಕೊಳ್ಳೆಗಾಲ ಶರ್ಮ ಭಾಗವಹಿಸಿದ್ದು, ವಿಜ್ಞಾನ ಬರವಣಿಗೆಯ ಇಂದಿನ ದೃಷ್ಟಿಕೋನ, ವಿಧಾನ, ಭಾಷೆ, ವಿಷಯ ವೈವಿಧ್ಯ ಹಾಗೂ ಜನಸಂಪರ್ಕದ ಕುರಿತಂತೆ ಎರಡು ದಿನಗಳ ಕಾಲ ಉಪನ್ಯಾಸ, ಸಂವಾದ ಮತ್ತು ಗುಂಪುಚರ್ಚೆಗಳು ನಡೆಯಲಿವೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಿವಿಎಸ್ ರಾಜ್ಯ ಉಪಾಧ್ಯಕ್ಷ ಚೇಗರೆಡ್ಡಿ ವಹಿಸಿದ್ದರು. ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಸ್ವಾಗತಿಸಿದರು. ಪ್ರಮೀಳಾ ವಂದಿಸಿದರು. ಕಾಂತರಾಜು ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ವಿಜ್ಞಾನ ಬರಹಗಾರರು ಅಧ್ಯಯನ ಕಮ್ಮಟದಲ್ಲಿ ಭಾಗವಹಿಸಿದ್ದರು.
ಇದನ್ನೂ ನೋಡಿ: ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media
