ನವದೆಹಲಿ: 2020ರಿಂದ 2025-26ರ ಅವಧಿಯಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡಿರುವ ಅಥವಾ ಪ್ರಚಾರ ಮಾಡುವ ಸರ್ಕಾರಿ ಜಾಹೀರಾತುಗಳಿಗಾಗಿ ಕೇಂದ್ರ ಸರ್ಕಾರ ₹2,586 ಕೋಟಿ ವೆಚ್ಚ ಮಾಡಿದೆ ಎಂದು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯಡಿ ಪಡೆದ ಮಾಹಿತಿಯಿಂದ ಬಹಿರಂಗವಾಗಿದೆ.
ತೃಣಮೂಲ ಕಾಂಗ್ರೆಸ್ನ ಮಾಜಿ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಕೇಂದ್ರೀಯ ಸಂವಹನ ಬ್ಯೂರೋ (ಸಿಬಿಸಿ) ಈ ಮಾಹಿತಿಯನ್ನು ನೀಡಿದೆ. ಜೂನ್ 16ರಂದು ಬಿಡುಗಡೆಗೊಂಡಿರುವ ಅಂಕಿಅಂಶಗಳು 2020-21ರಿಂದ 2025-26ರವರೆಗಿನ ಜಾಹೀರಾತು ವೆಚ್ಚದ ವಿವರಗಳನ್ನು ಒಳಗೊಂಡಿವೆ.
ಆರ್ಟಿಐ ಉತ್ತರದ ಪ್ರಕಾರ, ಈ ಅವಧಿಯಲ್ಲಿ ಮುದ್ರಣ ಮಾಧ್ಯಮ ಜಾಹೀರಾತುಗಳಿಗಾಗಿ ಸುಮಾರು ₹796 ಕೋಟಿ ಖರ್ಚು ಮಾಡಲಾಗಿದೆ. ದೂರದರ್ಶನ ಮತ್ತು ರೇಡಿಯೋ ಜಾಹೀರಾತುಗಳಿಗೆ ಸುಮಾರು ₹936 ಕೋಟಿ ವೆಚ್ಚವಾಗಿದ್ದು, ಹೋರ್ಡಿಂಗ್ಗಳು, ಜಾಹೀರಾತು ಫಲಕಗಳು ಸೇರಿದಂತೆ ಹೊರಾಂಗಣ ಪ್ರಚಾರಕ್ಕಾಗಿ ₹583.97 ಕೋಟಿ ಖರ್ಚು ಮಾಡಲಾಗಿದೆ.
ಹೊರಾಂಗಣ ಜಾಹೀರಾತುಗಳ ವೆಚ್ಚದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2022-23ರಲ್ಲಿ ಈ ವಿಭಾಗಕ್ಕೆ ₹32.76 ಕೋಟಿ ವೆಚ್ಚ ಮಾಡಲಾಗಿದ್ದರೆ, 2023-24ರಲ್ಲಿ ಅದು ₹162.21 ಕೋಟಿಗೆ ಏರಿಕೆಯಾಗಿದೆ.
ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ರಚಾರಗಳ ಮೇಲಿನ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ. “ನವ ಮಾಧ್ಯಮ” ವಿಭಾಗದಡಿ 2020-21ರಲ್ಲಿ ₹14 ಕೋಟಿ ವೆಚ್ಚವಾಗಿದ್ದರೆ, 2025-26ರಲ್ಲಿ ಅದು ₹131.35 ಕೋಟಿಗೆ ತಲುಪಿದೆ.
ಇದನ್ನೂ ಓದಿ : ವೆನೆಜುವೆಲಾದಲ್ಲಿ ಭೀಕರ ಭೂಕಂಪ : ಕಟ್ಟಡಗಳು ಕುಸಿತ, ಸಾವಿರಾರು ಸಾವು-ನೋವಿನ ಆತಂಕ
ಈ ಅಂಕಿಅಂಶಗಳನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಸಾಕೇತ್ ಗೋಖಲೆ, ವೆಚ್ಚದ ಪ್ರಮಾಣವನ್ನು “ಆಘಾತಕಾರಿ” ಎಂದು ಬಣ್ಣಿಸಿದ್ದಾರೆ. 2025-26ರಲ್ಲೇ ಮುದ್ರಣ ಜಾಹೀರಾತುಗಳಿಗಾಗಿ ಸುಮಾರು ₹338 ಕೋಟಿ ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, 2026-27ರ ಹಣಕಾಸು ವರ್ಷದ ಮೊದಲ ಆರು ತಿಂಗಳುಗಳು ಮಾತ್ರ ಪೂರ್ಣಗೊಂಡಿರುವಾಗಲೇ ಜಾಹೀರಾತುಗಳ ಮೇಲಿನ ವೆಚ್ಚ ₹2.76 ಕೋಟಿಯನ್ನು ತಲುಪಿದೆ ಎಂದು ಆರ್ಟಿಐ ಉತ್ತರದಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಜಾಹೀರಾತುಗಳಿಂದ ಹಣ ಪಡೆದ ಮಾಧ್ಯಮ ಸಂಸ್ಥೆಗಳು ಮತ್ತು ಜಾಹೀರಾತು ಏಜೆನ್ಸಿಗಳ ಹೆಸರುಗಳನ್ನು ಬಹಿರಂಗಪಡಿಸಲು ಸಿಬಿಸಿ ನಿರಾಕರಿಸಿದೆ. “ವಾಣಿಜ್ಯ ವಿಶ್ವಾಸ” (Commercial Confidence) ಕಾರಣ ನೀಡಿ ಈ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಸಿಬಿಸಿ ತಿಳಿಸಿದೆ.
ಈ ನಿರ್ಧಾರವನ್ನು ಟೀಕಿಸಿರುವ ಗೋಖಲೆ, ತೆರಿಗೆದಾರರ ಹಣವನ್ನು ಎಲ್ಲಿ ಮತ್ತು ಯಾರಿಗೆ ಖರ್ಚು ಮಾಡಲಾಗಿದೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಇದು ಕೇವಲ ಕೇಂದ್ರೀಯ ಸಂವಹನ ಬ್ಯೂರೋದ ವೆಚ್ಚದ ಲೆಕ್ಕಾಚಾರ ಮಾತ್ರವಾಗಿದ್ದು, ಇತರ ಸಚಿವಾಲಯಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಜಾಹೀರಾತು ವೆಚ್ಚಗಳು ಇದರಲ್ಲಿ ಸೇರಿಲ್ಲ. ಹೀಗಾಗಿ ವಾಸ್ತವಿಕ ವೆಚ್ಚದ ಮೊತ್ತ ಇನ್ನೂ ಹೆಚ್ಚಿರಬಹುದು ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರಧಾನಿಯವರ ಪ್ರಚಾರಕ್ಕಾಗಿ ಸಾರ್ವಜನಿಕ ಹಣವನ್ನು ವ್ಯಾಪಕವಾಗಿ ಬಳಸುತ್ತಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದು, ಸರ್ಕಾರಿ ಜಾಹೀರಾತುಗಳ ಮೂಲಕ ಕೆಲವು ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಯುತ್ತಿದೆ ಎಂದು ಗೋಖಲೆ ಟೀಕಿಸಿದ್ದಾರೆ.
ಇದನ್ನೂ ನೋಡಿ : ಬೀದಿ ವ್ಯಾಪಾರಿಗಳನ್ನು ರಕ್ಷಿಸಿ – ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ Janashakthi Media
