ಬೆಂಗಳೂರು: ಮತದಾರರಿಗಷ್ಟೇ ಗ್ಯಾರಂಟಿ ಯೋಜನೆಗಳು ಎಂಬ ಅರ್ಥ ಬರುವ ಮುಖ್ಯಮಂತ್ರಿ ಅವರ ಅಹಂಕಾರ ಮತ್ತು ಜನವಿರೋಧಿ ಹೇಳಿಕೆಯನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ಯಾರಂಟಿ
ಮುಖ್ಯಮಂತ್ರಿ ಹುದ್ದೆಯು ಒಂದು ಪಕ್ಷ ಅಥವಾ ನಿರ್ದಿಷ್ಟ ವರ್ಗದ ಪ್ರತಿನಿಧಿತ್ವವಲ್ಲ; ಅದು ರಾಜ್ಯದ ಪ್ರತಿಯೊಬ್ಬ ನಾಗರಿಕರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯ ಸ್ಥಾನವಾಗಿದೆ. ಗ್ಯಾರಂಟಿ ಯೋಜನೆಗಳು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವೈಯಕ್ತಿಕ ಆಸ್ತಿಯಲ್ಲ, ಜನರ ತೆರಿಗೆ ಹಣದಿಂದ ಜಾರಿಯಾಗುತ್ತಿರುವ ಸಾರ್ವಜನಿಕ ಕಲ್ಯಾಣ ಯೋಜನೆಗಳಾಗಿವೆ ಎಂದು ಅವರು ಹೇಳಿದ್ದಾರೆ.
ತೆರಿಗೆ ಸಂಗ್ರಹಿಸುವಾಗ ಸರ್ಕಾರ ಮತದಾರರು, ಬೆಂಬಲಿಗರು ಅಥವಾ ವಿರೋಧಿಗಳು ಎಂದು ಭೇದ ಮಾಡುವುದಿಲ್ಲ. ಆದರೆ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಇಂತಹ ವಿಭಜನೆಯ ಮಾತುಗಳು ಕೇಳಿಬರುತ್ತಿರುವುದು ಖೇದಕರ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆ ಟೀಕಿಸಿದೆ.
ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಇಂತಹ ಹೇಳಿಕೆಗಳು ಜನರಲ್ಲಿ ಅನಗತ್ಯ ಗೊಂದಲ ಮತ್ತು ಆತಂಕ ಸೃಷ್ಟಿಸುತ್ತವೆ. ಸರ್ಕಾರದ ಯೋಜನೆಗಳು ಎಲ್ಲ ಅರ್ಹ ನಾಗರಿಕರ ಹಕ್ಕಾಗಿದ್ದು, ಯಾರ ದಯಾದಾಕ್ಷಿಣ್ಯವೂ ಅಲ್ಲ. ಜನರ ತೆರಿಗೆ ಹಣದಿಂದ ನಡೆಯುವ ಯೋಜನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳ ಲಾಭ ಕರ್ನಾಟಕದ ಮತದಾರರಿಗೆ ಮಾತ್ರ: ಡಿ.ಕೆ. ಶಿವಕುಮಾರ್
ಇದೇ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಆತಂಕ ವ್ಯಕ್ತಪಡಿಸಿರುವ ಸಂಘಟನೆ, ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗಗಳನ್ನು ಗುರಿಯಾಗಿಸಿಕೊಂಡು ಈ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಹೇಳಿದೆ.
ಪಶ್ಚಿಮ ಬಂಗಾಳ, ಬಿಹಾರ ಹಾಗೂ ತಮಿಳುನಾಡಿನಲ್ಲಿ ಎಷ್ಟು ಮಹಿಳೆಯರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟಿವೆ ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿಯೂ ಇಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಸಂಘಟನೆ ತಿಳಿಸಿದೆ.
ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗವು ಯಾವುದೇ ಅರ್ಹ ಮಹಿಳೆಯ ಹೆಸರು ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಕೈಬಿಡದಂತೆ ಎಚ್ಚರಿಕೆ ವಹಿಸಬೇಕು. ಮಹಿಳೆಯರ ಮತದಾನದ ಹಕ್ಕು ಹಾಗೂ ಸರ್ಕಾರಿ ಸೌಲಭ್ಯಗಳ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಇಲ್ಲವಾದರೆ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಜನರು ಇಂತಹ ಬೇಜವಾಬ್ದಾರಿ ರಾಜಕಾರಣಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಎಚ್ಚರಿಕೆ ನೀಡಿದೆ.
ಇದನ್ನೂ ನೋಡಿ : BLO ಕೆಲಸದ ಒತ್ತಡಕ್ಕೆ ಬೇಸತ್ತ ಅಂಗನವಾಡಿ ನೌಕರರು! ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ Janashakthi Media
