ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ 5 ಸ್ಥಾನ, ಬಿಜೆಪಿಗೆ 2; ಜೆಡಿಎಸ್ ಅಭ್ಯರ್ಥಿಗೆ ಸೋಲು

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದ್ದು, ಬಿಜೆಪಿ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ನಿರೀಕ್ಷೆಗಿಂತ ಒಂದು ಹೆಚ್ಚುವರಿ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿರುವುದು ಚುನಾವಣೆಯ ಪ್ರಮುಖ ಬೆಳವಣಿಗೆಯಾಗಿದೆ.

ಒಟ್ಟು 222 ಶಾಸಕರು ಮತದಾನ ಮಾಡಿದ್ದು, ಗೆಲುವಿಗೆ 28 ಮತಗಳ ಅಗತ್ಯವಿತ್ತು. ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂರು, ಪಿ.ವಿ. ಮೋಹನ್, ಶಿವಣ್ಣ ಮಳವಳ್ಳಿ ಹಾಗೂ ವಿನಯ್ ಕಾರ್ತಿಕ್ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಬಿಜೆಪಿಯ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ಜಯಗಳಿಸಿದ್ದಾರೆ.

  1. ಅಭ್ಯರ್ಥಿಗಳಿಗೆ ದೊರೆತ ಮತಗಳು:
  2. ಬಿ.ಕೆ. ಹರಿಪ್ರಸಾದ್ (ಕಾಂಗ್ರೆಸ್) – 30
  3. ತಿಪ್ಪಣ್ಣಪ್ಪ ಕಾಮಕನೂರು (ಕಾಂಗ್ರೆಸ್) – 30
  4. ಪಿ.ವಿ. ಮೋಹನ್ (ಕಾಂಗ್ರೆಸ್) – 29
  5. ಶಿವಣ್ಣ ಮಳವಳ್ಳಿ (ಕಾಂಗ್ರೆಸ್) – 30
  6. ವಿನಯ್ ಕಾರ್ತಿಕ್ (ಕಾಂಗ್ರೆಸ್) – 32
  7. ರಘು ಕೌಟಿಲ್ಯ (ಬಿಜೆಪಿ) – 29
  8. ಲಿಂಗರಾಜ್ ಪಾಟೀಲ್ (ಬಿಜೆಪಿ) – 27
  9. ಗೋವಿಂದರಾಜು (ಜೆಡಿಎಸ್) – 14

ಇದನ್ನೂ ಓದಿ : ನ್ಯೂಸ್ ಪೇಪರ್‌ನಲ್ಲಿ ಆಹಾರ ಸುತ್ತುವುದು ಅಪಾಯ: FSSAI ಕಟ್ಟುನಿಟ್ಟಿನ ಆದೇಶ

ಈ ಫಲಿತಾಂಶದಲ್ಲಿ ಅಡ್ಡಮತದಾನದ ಪ್ರಭಾವ ಸ್ಪಷ್ಟವಾಗಿ ಕಂಡುಬಂದಿದೆ. ನಾಲ್ಕು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಂಖ್ಯಾಬಲ ಹೊಂದಿದ್ದ ಕಾಂಗ್ರೆಸ್, ಹೆಚ್ಚುವರಿ ಮತಗಳ ಬೆಂಬಲದಿಂದ ಐದನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರನ್ನು ಸಹ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ನಿಂದ ಕೆಲವು ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾಗಿರುವ ಸಾಧ್ಯತೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್ ಪಕ್ಷದ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಲು ರೂಪಿಸಿದ ರಣತಂತ್ರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಯಶಸ್ವಿಯಾದರು. ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಆದ ಅಡ್ಡ ಮತದಾನವು ವಿನಯ್ ಕಾರ್ತಿಕ್ ಪ್ರಕಾಶ್‍ಗೆ ಪಾಲಿಗೆ ವರವಾಗಿ ಪರಿಣಮಿಸಿತು. ಅಲ್ಲದೇ, ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಎಂಟು ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅವರು ಅಚ್ಚರಿ ಮೂಡಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಅಡ್ಡ ಮತದಾನ ಮಾಡಿರುವುದು, ವಿಪಕ್ಷಗಳಿಗೆ ತಲೆಬಿಸಿಯಾಗುವಂತೆ ಮಾಡಿದೆ. ಜೆಡಿಎಸ್ ಪಕ್ಷವು ವಿಧಾನಸಭೆಯಲ್ಲಿ 18 ಶಾಸಕರನ್ನು ಹೊಂದಿದೆ. ಅಲ್ಲದೆ, ಬಿಜೆಪಿಯ ಹೆಚ್ಚುವರಿ ಎರಡು ಮತಗಳನ್ನು ಜೆಡಿಎಸ್‍ಗೆ ಹಂಚಿಕೆ ಮಾಡಲಾಗಿತ್ತು.

ಆದರೆ, ಚುನಾವಣಾ ಫಲಿತಾಂಶ ಪ್ರಕಟವಾದಾಗ ಜೆಡಿಎಸ್ ಅಭ್ಯರ್ಥಿ ಕೇವಲ 14 ಮತಗಳನ್ನು ಮಾತ್ರ ಪಡೆದಿದ್ದರು. ಒಂದು ಕಡೆ ಜೆಡಿಎಸ್‍ಗೆ ತನ್ನದೆ ಪಕ್ಷದ ನಾಲ್ವರು ಶಾಸಕರು ಕೈ ಕೊಟ್ಟಿದ್ದರೆ, ಮಿತ್ರ ಪಕ್ಷ ಬಿಜೆಪಿ ಹಂಚಿಕೆ ಮಾಡಿದ್ದ ಎರಡು ಮತಗಳು ಸಿಕ್ಕಿಲ್ಲ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ 11 ಮತಗಳು ಚಲಾವಣೆಗೊಂಡಿವೆ.

ಇದನ್ನೂ ನೋಡಿ : ಕುಡಿತಿನಿ | ಬಲವಂತದ ಭೂ ಸ್ವಾಧೀನ ವಿರೋಧಿಸಿ ಬಳ್ಳಾರಿ ಬಂದ್

 

Donate Janashakthi Media

Leave a Reply

Your email address will not be published. Required fields are marked *