ರಾಮ ಮಂದಿರ ದೇಣಿಗೆ ವಿವಾದಕ್ಕೆ ಹೊಸ ತಿರುವು: ಅಮೂಲ್ಯ ಇಟ್ಟಿಗೆಗಳ ನಾಪತ್ತೆ ಆರೋಪ

ಲಖನೌ: ಅಯೋಧ್ಯೆಯ ರಾಮ ಮಂದಿರ ದೇಣಿಗೆ ನಿರ್ವಹಣೆ ವಿವಾದ ಮತ್ತೊಂದು ಹಂತಕ್ಕೆ ತಲುಪಿದ್ದು, ರಾಮ ಜನ್ಮಭೂಮಿ ಚಳವಳಿಯ ಕಾರ್ಯಕರ್ತ ಸಂತೋಷ್ ದುಬೆ ಸುಮಾರು 1,250 ಅಮೂಲ್ಯ ಇಟ್ಟಿಗೆಗಳು ನಾಪತ್ತೆಯಾಗಿವೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿದ್ದಾರೆ.

ಚಿನ್ನ, ಬೆಳ್ಳಿ, ವಜ್ರಗಳಿಂದ ಅಲಂಕರಿಸಲ್ಪಟ್ಟ ಹಾಗೂ ಅಷ್ಟಧಾತುವಿನಿಂದ ನಿರ್ಮಿತ ಈ ಇಟ್ಟಿಗೆಗಳನ್ನು ದೇಶ-ವಿದೇಶಗಳ ಭಕ್ತರು ರಾಮ ಮಂದಿರ ನಿರ್ಮಾಣಕ್ಕಾಗಿ ದಾನ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ, ದೇವಾಲಯ ಆಡಳಿತಾಧಿಕಾರಿ ಗೋಪಾಲ್ ರಾವ್ ಹಾಗೂ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ದುಬೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳ ಕಾರು ಪಲ್ಟಿ

ಜೂನ್‌ 16ರಂದು ಅಯೋಧ್ಯೆಯ ರಾಮ ಜನ್ಮಭೂಮಿ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ, ಈ ಅಮೂಲ್ಯ ಇಟ್ಟಿಗೆಗಳು ಕಳೆದ ಕೆಲವು ವರ್ಷಗಳಿಂದ ಕಾಣೆಯಾಗಿದ್ದು, ಅವುಗಳ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಆರೋಪಿಸಲಾಗಿದೆ.

ಮಾರಿಷಸ್‌ನಿಂದ ಕಳುಹಿಸಲಾದ ವಿಶೇಷ ಇಟ್ಟಿಗೆ ಮತ್ತು ಮುಂಬೈ ಉದ್ಯಮಿಯೊಬ್ಬರು ವಜ್ರಗಳಿಂದ ಅಲಂಕರಿಸಿ ದಾನ ಮಾಡಿದ್ದ ಇಟ್ಟಿಗೆಯೂ ನಾಪತ್ತೆಯಾದ ವಸ್ತುಗಳಲ್ಲಿ ಸೇರಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ರಾಮ ಮಂದಿರ ಚಳವಳಿಯ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ನಾಯಕ ಅಶೋಕ್ ಸಿಂಘಾಲ್ ಅವರು ಭಕ್ತರು ಹಾಗೂ ಕರಸೇವಕರಿಗೆ ಇಟ್ಟಿಗೆಗಳನ್ನು ದಾನ ಮಾಡುವಂತೆ ಕರೆ ನೀಡಿದ್ದರು. ಅದರಂತೆ ವಿವಿಧ ಅಮೂಲ್ಯ ಲೋಹಗಳು ಮತ್ತು ರತ್ನಗಳಿಂದ ತಯಾರಿಸಲಾದ ಇಟ್ಟಿಗೆಗಳನ್ನು ದಾನ ಮಾಡಲಾಗಿತ್ತು ಎಂದು ದುಬೆ ತಿಳಿಸಿದ್ದಾರೆ.

ಈ ಪ್ರಕರಣದ ಜೊತೆಗೆ, ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಖರೀದಿ ವ್ಯವಹಾರಗಳ ಕುರಿತಾಗಿಯೂ ಈ ಹಿಂದೆ ಪ್ರಶ್ನೆಗಳು ಎದ್ದಿದ್ದವು ಎಂದು ಅವರು ಹೇಳಿದ್ದಾರೆ. ಟ್ರಸ್ಟ್‌ಗೆ ಸಂಬಂಧಿಸಿದ ಕೆಲವರ ಆಸ್ತಿ-ಪಾಸ್ತಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಇದಲ್ಲದೆ, ಒಬ್ಬ ಮಾಜಿ ಚಾಲಕ ಈಗ ಕೋಟ್ಯಂತರ ಮೌಲ್ಯದ ಆಸ್ತಿಗಳ ಮಾಲೀಕರಾಗಿದ್ದಾರೆ ಎಂಬ ವರದಿಗಳನ್ನೂ ಉಲ್ಲೇಖಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮಧ್ಯೆ, ದೇಣಿಗೆ ದುರುಪಯೋಗ ಆರೋಪದ ಹಿನ್ನೆಲೆ ರಚಿಸಲಾದ ವಿಶೇಷ ತನಿಖಾ ತಂಡ (SIT) ದೇವಾಲಯದಲ್ಲಿ ದೇಣಿಗೆ ಸಂಗ್ರಹಣೆ, ಎಣಿಕೆ, ಪ್ಯಾಕಿಂಗ್ ಹಾಗೂ ಬ್ಯಾಂಕ್ ಠೇವಣಿ ಪ್ರಕ್ರಿಯೆಯನ್ನು ಸುಮಾರು ಆರು ಗಂಟೆಗಳ ಕಾಲ ಪರಿಶೀಲಿಸಿದೆ.

ದಾಖಲೆಗಳು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಿದ ಎಸ್‌ಐಟಿ, ಟ್ರಸ್ಟ್ ಸಿಬ್ಬಂದಿ ಮತ್ತು ದೇಣಿಗೆ ನಿರ್ವಹಣೆಯಲ್ಲಿ ತೊಡಗಿರುವವರನ್ನು ವಿಚಾರಣೆ ಮಾಡುತ್ತಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದಾಗ, ಚಂಪತ್ ರಾಯ್ ಅಸ್ವಸ್ಥರಾಗಿರುವುದರಿಂದ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಅನಿಲ್ ಮಿಶ್ರಾ ಅವರು ವೈದ್ಯಕೀಯ ಚಿಕಿತ್ಸೆಗೆ ರಾಜ್ಯದ ಹೊರಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ನೋಡಿ: ಬೀಜ ಇಲ್ಲ, ಗೊಬ್ಬರ ಇಲ್ಲ, ಬಡವರಿಗೆ ಸೂರು ಇಲ್ಲ | ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತರು Janashakthi Media

Donate Janashakthi Media

Leave a Reply

Your email address will not be published. Required fields are marked *