ಬೆಂಗಳೂರು: ಉಜ್ವಲ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದಾಗಿ ಆರೋಪಿಸಿರುವ ಕಾಂಗ್ರೆಸ್, ಇದರಿಂದ ದೇಶದ ಬಡ ಮಹಿಳೆಯರ ಮೇಲೆ ಸಾವಿರಾರು ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಹೇಳಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಆರಂಭದಲ್ಲಿ ವರ್ಷಕ್ಕೆ 12 ಅಡುಗೆ ಅನಿಲ ಸಿಲಿಂಡರ್‌ಗಳಿಗೆ ತಲಾ ₹300 ಸಬ್ಸಿಡಿ ನೀಡಲಾಗುತ್ತಿತ್ತು. ನಂತರ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು 9ಕ್ಕೆ ಇಳಿಸಲಾಗಿದ್ದು, ಇದೀಗ ಅದನ್ನು ಕೇವಲ 4ಕ್ಕೆ ಇಳಿಸಲಾಗಿದೆ ಎಂದು ಆರೋಪಿಸಿದರು.
ಈ ಕ್ರಮದಿಂದ ಪ್ರತಿ ಫಲಾನುಭವಿ ಮಹಿಳೆ ವರ್ಷಕ್ಕೆ 8 ಸಬ್ಸಿಡಿ ಸಿಲಿಂಡರ್‌ಗಳ ಪ್ರಯೋಜನ ಕಳೆದುಕೊಳ್ಳಲಿದ್ದು, ಸರಾಸರಿ ₹2,400 ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಗೇವು ಒಪ್ಪಂದಗಳಲ್ಲಿ ಎಫ್‌ಸಿಐ ನ ʼಏಕಸ್ವಾಮ್ಯ – ವಿರೋಧಿʼ ಕಲಮನ್ನೆ ಕೈಬಿಟ್ಟ ಸರಕಾರ
ದೇಶದಲ್ಲಿ ಒಟ್ಟು 10.33 ಕೋಟಿ ಉಜ್ವಲ ಯೋಜನೆ ಫಲಾನುಭವಿಗಳಿದ್ದು, ಈ ನಿರ್ಧಾರದಿಂದ ಮಹಿಳೆಯರ ಮೇಲೆ ವಾರ್ಷಿಕ ₹24,792 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸುರ್ಜೆವಾಲಾ ಅಂದಾಜಿಸಿದ್ದಾರೆ. ಕರ್ನಾಟಕದಲ್ಲೇ ಸುಮಾರು 37.50 ಲಕ್ಷ ಫಲಾನುಭವಿಗಳಿದ್ದು, ರಾಜ್ಯದ ಮಹಿಳೆಯರ ಮೇಲೆ ವರ್ಷಕ್ಕೆ ಸುಮಾರು ₹900 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.
ಅಡುಗೆ ಅನಿಲದ ಬೆಲೆ ಏರಿಕೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಮಹಿಳೆಯರು ಮತ್ತೆ ಸಾಂಪ್ರದಾಯಿಕ ಇಂಧನ ಬಳಕೆಯತ್ತ ಮರಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ.
2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಸುಮಾರು ₹400 ಇತ್ತು. ಇದೀಗ ಅದು ₹1,000 ಗಡಿ ತಲುಪುತ್ತಿದೆ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮಾತ್ರ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹90 ಹೆಚ್ಚಳವಾಗಿದೆ ಎಂದೂ ಅವರು ಹೇಳಿದ್ದಾರೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಿಂದ ಸಣ್ಣ ಹೋಟೆಲ್‌ಗಳು, ಉಪಾಹಾರ ಗೃಹಗಳು ಹಾಗೂ ಸಣ್ಣ ವ್ಯಾಪಾರಿಗಳ ಮೇಲೂ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಉಜ್ವಲ ಯೋಜನೆ ಫಲಾನುಭವಿಗಳು ಹಾಗೂ ಸಾಮಾನ್ಯ ಜನರ ಮೇಲಿನ ಈ ಹೆಚ್ಚುವರಿ ಆರ್ಥಿಕ ಹೊರೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದೆ.
ಇದನ್ನೂ ನೋಡಿ: ನಳ ಇದೆ, ಪೈಪ್ ಇದೆ… ಆದರೆ ನೀರೇ ಇಲ್ಲ! ಕೊಡಗಿನ ಆದಿವಾಸಿಗಳ ಕಣ್ಣೀರಿನ ಕಥೆ Janashakthi Media
