ಮಂಗಳೂರು: ಮಧ್ಯಮ ವರ್ಗದ ಹಾಗೂ ದುಡಿಯುವ ಜನರ ಮೇಲೆ ಆಸ್ತಿ ತೆರಿಗೆ ಹೆಚ್ಚಳದ ಮೂಲಕ ಆರ್ಥಿಕ ಹೊರೆ ಹೇರಲಾಗುತ್ತಿದೆ. ಮತ್ತೊಂದೆಡೆ, ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ ಬಡ ಕುಟುಂಬಗಳಿಗೆ ನ್ಯಾಯ ಒದಗಿಸುವ ಬದಲು ಹೆಚ್ಚುವರಿ ಪಾವತಿಯ ಹೆಸರಿನಲ್ಲಿ ಮತ್ತಷ್ಟು ಶೋಷಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಿಪಿಐ(ಎಂ) ಮಂಗಳೂರು ನಗರ ಸಮಿತಿಯ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ದೇಶದಲ್ಲಿ ಅನುಸರಿಸಲಾಗುತ್ತಿರುವ ನವ ಉದಾರೀಕರಣ ನೀತಿಗಳ ಪರಿಣಾಮವಾಗಿ ಸ್ಥಳೀಯ ಆಡಳಿತವು ಜನರಿಗೆ ಮುಲಭೂತ ಸೌಲಭ್ಯಗಳನ್ನು ನೀಡದೆ ಕೇವಲ ಆದಾಯ ಸಂಗ್ರಹಿಸುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದು ಆರೋಪಿಸಿದರು. ನಗರವನ್ನು ಕಟ್ಟಿದ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ನೌಕರರು ಮತ್ತು ಸಾಮಾನ್ಯ ಜನರ ಮೇಲೆ ತೆರಿಗೆ ಭಾರ ಹೆಚ್ಚಿಸಲಾಗುತ್ತಿದೆ.
ಆದರೆ ದೊಡ್ಡ ಬಂಡವಾಳಶಾಹಿಗಳು ಮತ್ತು ರಿಯಲ್ ಎಸ್ಟೇಟ್ ಲಾಬಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಕೆಲಸ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ಡಿಜಿಟಲ್ ಯುಗದಲ್ಲಿ ಯುವ ಜನಾಂಗದ ತಲ್ಲಣಗಳು
ವಸತಿ ಎಂಬುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಆದರೆ ಬಡವರ ವಸತಿ ಸಮಸ್ಯೆಯನ್ನು ಪರಿಹರಿಸುವ ಬದಲು ಅವರನ್ನು ವರ್ಷಗಟ್ಟಲೆ ಕಾಯಿಸುವುದು ಮತ್ತು ನಿವೇಶನ ಹಂಚಿಕೆಯಲ್ಲಿಯೂ ಹೆಚ್ಚುವರಿ ಹಣ ಪಾವತಿಸಲು ಒತ್ತಾಯಿಸುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿದರು.
ಜನರ ಶ್ರಮದಿಂದ ನಿರ್ಮಾಣವಾಗುವ ಸಂಪತ್ತನ್ನು ಕೆಲವೇ ಜನರ ಲಾಭಕ್ಕಾಗಿ ಬಳಸುವ ವ್ಯವಸ್ಥೆಯ ಪರಿಣಾಮವೇ ಇಂತಹ ತೆರಿಗೆ ದರೋಡೆ ಮತ್ತು ವಸತಿ ವಂಚನೆ. ನಗರಾಭಿವೃದ್ಧಿಯ ಹೆಸರಿನಲ್ಲಿ ಜನರ ಮೇಲೆ ಹೊರೆ ಹಾಕುವ ನೀತಿಗಳನ್ನು ಕೈಬಿಟ್ಟು, ಜನಕೇಂದ್ರಿತ ಅಭಿವೃದ್ಧಿ ಮಾದರಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಸದಸ್ಯರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ , ಆಸ್ತಿ ತೆರಿಗೆ ಹೆಚ್ಚಳವನ್ನು ಹಿಂಪಡೆಯುವುದು, ನಿವೇಶನ ರಹಿತರಿಗೆ ತಕ್ಷಣ ನಿವೇಶನ ಮತ್ತು ಹಕ್ಕುಪತ್ರ ನೀಡುವುದು, ಹೆಚ್ಚುವರಿ ಪಾವತಿ ಆದೇಶಗಳನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಸಮಿತಿ ಮುಖಂಡರಾದ ಜಯಂತಿ ಬಿ ಶೆಟ್ಟಿ , ಸಂತೋಷ್ ಬಜಾಲ್ , ದಯಾನಂದ ಶೆಟ್ಟಿ , ಶ್ರೀನಾಥ್ ಕಾಟಿಪಳ್ಳ, ಪ್ರಮೀಳಾ ಶಕ್ತಿನಗರ ಮಾತನಾಡಿದರು .
ಪ್ರತಿಭಟನೆಯ ನೇತೃತ್ವವನ್ನು ಜಯಲಕ್ಷ್ಮಿ ಜಪ್ಪಿನಮೊಗರು, ದೀಪಕ್ ಬಜಾಲ್, ಲೋಕೇಶ್ ಎಂ, ಶಶಿಧರ್ ಶಕ್ತಿನಗರ, ಮನೋಜ್ ಉರ್ವಸ್ಟೋರ್, ನಾಗೇಶ್ ಬೋಳಾರ್, ಭಾರತಿ ಬೋಳಾರ್ , ರವಿಚಂದ್ರ ಕೊಂಚಾಡಿ , ಕೃಷ್ಣ ತಣ್ಣೀರುಬಾವಿ ವಹಿಸಿದ್ದರು.
ಜಗದೀಶ್ ಬಜಾಲ್ , ಮಾದುರಿ ಬೋಳಾರ, ಜಯಪ್ರಕಾಶ್, ರೋಹಿಣಿ ಶೆಟ್ಟಿ ಬಿಲಾಲ್ ಬೆಂಗ್ರೆ , ನಾಸೀರ್ ಬೆಂಗ್ರೆ , ಗೀತಾ ನಾಯಕ್, ಯೋಗಿತಾ ಉಳ್ಳಾಲ್ ಹಾಗೂ ಪಕ್ಷದ ಕಾರ್ಯಕರ್ತರು, ನಿವೇಶನ ರಹಿತರು ಭಾಗವಹಿಸಿದ್ದರು.
ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳ ಮೇಲೆ GBA ದಾಳಿ – ಬೀದಿ ವ್ಯಾಪಾರಿಗಳ ಆಕ್ರೋಶ Janashakthi Media
