ದಲಿತ ಸಂತ್ರಸ್ತರಿಗೆ 1.23 ಕೋಟಿ ರೂ. ಪರಿಹಾರ ಬಾಕಿ
ಹಾಸನ: ದೌರ್ಜನ್ಯಕ್ಕೊಳಗಾದ ದಲಿತ ಸಂತ್ರಸ್ತರಿಗೆ ನೀಡಬೇಕಾದ ಪರಿಹಾರ ಧನ ಹಾಗೂ ಅಂತರ್ಜಾತಿ ವಿವಾಹಿತರಿಗೆ ವಿತರಿಸಬೇಕಾದ ಪ್ರೋತ್ಸಾಹಧನ ಬಿಡುಗಡೆಗೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿರುವ ದಲಿತ ಹಕ್ಕುಗಳ ಸಮಿತಿ (ಡಿಎಚ್‌ಎಸ್), ಬಾಕಿ ಇರುವ ಎಲ್ಲಾ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದೆ.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರಿಗೆ ನೀಡಬೇಕಾದ ಕಾನೂನುಬದ್ಧ ಪರಿಹಾರ ಧನವನ್ನು ವಿಳಂಬ ಮಾಡುತ್ತಿರುವುದು ಸರ್ಕಾರದ ನಿರ್ಲಕ್ಷ್ಯದ ಧೋರಣೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಹಾಸನ ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 125 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 52 ಸಂತ್ರಸ್ತ ಕುಟುಂಬಗಳು ಹಾಗೂ 22 ಆಶ್ರಿತ ಪಿಂಚಣಿದಾರರಿಗೆ ಸೇರಿ ಒಟ್ಟು 1.23 ಕೋಟಿ ರೂಪಾಯಿ ಪರಿಹಾರ ಧನ ಇನ್ನೂ ವಿತರಿಸಿಲ್ಲ ಎಂದು ಅವರು ತಿಳಿಸಿದರು.
ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯಲ್ಲೂ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. 2025-26ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ 3,231 ಅರ್ಜಿಗಳ ಪೈಕಿ 2,198 ಅರ್ಜಿಗಳಿಗೆ ಇನ್ನೂ ಅನುದಾನ ಮಂಜೂರಾಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಹಾಸನ | ಜಾನುವಾರು ಖರೀದಿ ಸ್ಥಗಿತ ವಿರೋಧಿಸಿ ರೈತರ ಆಕ್ರೋಶ; ಡಿಸಿ ಕಚೇರಿಗೆ ದನಗಳೊಂದಿಗೆ ತೆರಳಲು ಸಿದ್ಧತೆ
ಹಾಸನ ಜಿಲ್ಲೆಯಲ್ಲೇ 2024ರಿಂದ ಇದುವರೆಗೆ 428 ಅಂತರ್ಜಾತಿ ವಿವಾಹಗಳು, 33 ಒಳಪಂಗಡಗಳ ವಿವಾಹಗಳು ಹಾಗೂ ಇಬ್ಬರು ವಿಧವಾ ಮರುವಿವಾಹಿತರು ಸೇರಿದಂತೆ ಫಲಾನುಭವಿಗಳಿಗೆ ನೀಡಬೇಕಾದ ಸುಮಾರು 11.90 ಕೋಟಿ ರೂಪಾಯಿ ಪ್ರೋತ್ಸಾಹಧನ ಬಾಕಿ ಉಳಿದಿದೆ. ಇದರಿಂದ ಅನೇಕ ದಂಪತಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ದೌರ್ಜನ್ಯ ಸಂತ್ರಸ್ತರಿಗೆ ಬಾಕಿ ಇರುವ ಪರಿಹಾರ ಧನ ಹಾಗೂ ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಈ ಯೋಜನೆಗಳಿಗೆ ವಾರ್ಷಿಕ ಬಜೆಟ್‌ನಲ್ಲಿ ಸಮರ್ಪಕ ಅನುದಾನ ಮೀಸಲಿಟ್ಟು, ಅರ್ಜಿಗಳ ವಿಲೇವಾರಿಗೆ ಕಾಲಮಿತಿಯ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಮಿತಿ ಒತ್ತಾಯಿಸಿತು.
ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯ ಸರ್ಕಾರದ ದಲಿತ ವಿರೋಧಿ ಧೋರಣೆಯ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಸಮಿತಿ ಎಚ್ಚರಿಕೆ ನೀಡಿತು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಸಹ ಸಂಚಾಲಕರಾದ ರಾಜು ಸಿಗರನಹಳ್ಳಿ, ಪ್ರಕಾಶ್, ಸಿ.ಕೆ. ಪ್ರಸನ್ನ ಕುಮಾರ್, ಮೀನಾಕ್ಷಿ ಎಚ್.ಟಿ., ವಿ. ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಗೋವಂಶ ವಧೆ ಮಾಡದಂತೆ ಮುಸ್ಲಿಮರ ನಿರ್ಧಾರ – ವಯಸ್ಸಾದ ದನಗಳನ್ನು ಯಾರಿಗೆ ಮಾರಬೇಕು? ರೈತರಲ್ಲಿ ಹೆಚ್ಚಿದ ಆತಂಕ
