ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ | ಮುಖ್ಯಮಂತ್ರಿ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಭಾರೀ ಸಮಾರಂಭದಲ್ಲಿ ರಾಜ್ಯಪಾಲರು ಅವರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಹಲವು ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದ ಬಳಿಕ ಸುವೇಂದು ಅಧಿಕಾರಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.

ಸುವೇಂದು ಅಧಿಕಾರಿ ಜೊತೆಗೆ ಹಲವು ಸಚಿವರೂ ಪ್ರಮಾಣವಚನ ಸ್ವೀಕರಿಸಿದರು. ದಿಲೀಪ್ ಘೋಷ್‌, ಅಗ್ನಿಮಿತ್ರ ಪಾಲ್‌, ಅಶೋಕ್ ಕೀರ್ತಾನಿಯಾ, ಕ್ಷುದಿರಾಮ ತುಡು ಮತ್ತು ನಿಶಿತ್ ಪ್ರಮಾಣಿಕ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ವೈರಲ್‌ ವಿಡಿಯೊ : “ಚುನಾವಣೆಯ ಬಳಿಕ ನುಸುಳುಕೋರರು ಬಂಗಾಳ ತೊರೆಯುತ್ತಿದ್ದಾರೆ”

ತೃಣಮೂಲ ಕಾಂಗ್ರೆಸ್‌ನ ಸುಮಾರು ಹದಿನೈದು ವರ್ಷದ ಆಡಳಿತಕ್ಕೆ ಅಂತ್ಯ ಹಾಡಿ ಬಿಜೆಪಿ ಅಧಿಕಾರಕ್ಕೇರಿರುವುದು ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಎಸ್‌ಐಆರ್‌ ಅನ್ನು ಬಳಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬ ಆರೋಪಗಳ ನಡುವೆ ಬಿಜೆಪಿ ಸರಕಾರ ರಚಿಸಿದೆ. ಫಲಿತಾಂಶ ಬಂದ ದಿನದಿಂದಲೇ ಟಿಎಂಸಿ, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಆರಂಭವಾಗಿತ್ತು. ಬಿಜೆಪಿ ಹಲವು ಕಡೆ ಸಿಪಿಐ(ಎಂ) ಕಚೇರಿ ಮೇಲೆ ದಾಳಿ ನಡೆಸಿದ ಕುರಿತು ವರದಿಯಾಗಿತ್ತು.

ನಂದಿಗ್ರಾಮ ಹೋರಾಟದ ಮೂಲಕ ರಾಜ್ಯ ರಾಜಕೀಯದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ನಂತರ ಪಕ್ಷದ ಪ್ರಮುಖ ಮುಖವಾಗಿದ್ದರು. ಇದೀಗ ಅವರು ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ವಿಡಿಯೋ ನೋಡಿ : ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *