ದೆಹಲಿಯಲ್ಲಿ ಪಟಾಕಿ ಹೊಗೆ ಅವಾಂತರ: ದೀಪಾವಳಿ ಮರುದಿನ PM2.5ನಲ್ಲಿ ಶೇ.71ರಷ್ಟು ಪಾಲು!

Please follow and like us:

ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದೆ. ಹಬ್ಬದ ಆಚರಣೆಯ ಹೆಸರಿನಲ್ಲಿ ಮನುಷ್ಯ ಪ್ರಕೃತಿ ಮತ್ತು ಇತರ ಜೀವಿಗಳ ಮೇಲೆ ನಡೆಸುವ ದೌರ್ಜನ್ಯಕ್ಕೆ ಈ ಪರಿಸ್ಥಿತಿಯೇ ಸಾಕ್ಷಿಯಾಗಿದೆ. ಪರಿಸರ ಪ್ರಜ್ಞೆಯನ್ನು ಮರೆತು ಪಟಾಕಿ ಸಿಡಿಸುವ ಮೂಲಕ ವಾತಾವರಣವನ್ನು ವಿಷಮಯಗೊಳಿಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.

ನವೆಂಬರ್ 9ರಂದು ಬೆಳಗಿನ ಜಾವ 1ರಿಂದ ಬೆಳಗ್ಗೆ 9 ಗಂಟೆಯವರೆಗೆ ದೆಹಲಿಯಲ್ಲಿ ದಾಖಲಾಗಿದ್ದ ಪಿಎಂ 2.5 (ಸೂಕ್ಷ್ಮ ಧೂಳಿನ ಕಣಗಳು) ಮಾಲಿನ್ಯದಲ್ಲಿ ಪಟಾಕಿಗಳ ಹೊಗೆಯ ಪಾಲು ಶೇ.71.1ರಷ್ಟಿತ್ತು ಎಂದು ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (IITM) ನಡೆಸಿದ ಅಧ್ಯಯನ ತಿಳಿಸಿದೆ.

ಐಐಟಿಎಂನ ಮತ್ತೊಂದು ಅಂದಾಜಿನ ಪ್ರಕಾರ, ನವೆಂಬರ್ 9ರಂದು ದೆಹಲಿಯ ಒಟ್ಟು ವಾಯುಮಾಲಿನ್ಯದಲ್ಲಿ ಪಟಾಕಿಗಳ ಹೊಗೆಯ ಪಾಲು ಶೇ.80ಕ್ಕೂ ಅಧಿಕವಾಗಿತ್ತು. ದೀಪಾವಳಿಗೂ ಮುನ್ನವೇ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದರೂ, ಹಬ್ಬದ ಬಳಿಕ ಪಟಾಕಿಗಳಿಂದಾಗಿ ಮಾಲಿನ್ಯದ ಪ್ರಮಾಣ ಮತ್ತಷ್ಟು ಏರಿಕೆಯಾಗಿರುವುದು ಅಧ್ಯಯನದಲ್ಲಿ ತಿಳಿದುಬಂದಿದೆ.

ನವೆಂಬರ್ 5 ಮತ್ತು 7ರಂದು ಪಿಎಂ 2.5 ಮಾಲಿನ್ಯದಲ್ಲಿ ಪಟಾಕಿಗಳ ಪಾಲು ಶೇ.5.6ರಷ್ಟಿದ್ದರೆ, ನವೆಂಬರ್ 6ರಂದು ಶೇ.9.3ರಷ್ಟಿತ್ತು. ಆದರೆ ದೀಪಾವಳಿ ದಿನವಾದ ನವೆಂಬರ್ 8ರಂದು ಈ ಪ್ರಮಾಣ ಏಕಾಏಕಿ ಶೇ.43.4ಕ್ಕೆ ಏರಿಕೆಯಾಗಿತ್ತು. ಹಬ್ಬದ ಮರುದಿನ ಅಂದರೆ ನವೆಂಬರ್ 9ರಂದು ಪಟಾಕಿಗಳ ಪಾಲು ಶೇ.71.1ಕ್ಕೆ ತಲುಪಿರುವುದು ಅಧ್ಯಯನದ ಅಂಕಿಅಂಶಗಳಿಂದ ತಿಳಿದುಬಂದಿದೆ.

ನವೆಂಬರ್ 9ರ ಬೆಳಗಿನ ಅಂದಾಜಿನ ಪ್ರಕಾರ, ದೆಹಲಿಯ ಪಿಎಂ 2.5 ಮಾಲಿನ್ಯದಲ್ಲಿ ವಾಹನಗಳ ಹೊಗೆ ಶೇ.6.9ರಷ್ಟು ಪಾಲು ಹೊಂದಿದ್ದರೆ, ದ್ವಿತೀಯ ಅಜೈವಿಕ ಏರೋಸಾಲ್‌ಗಳ ಕೊಡುಗೆ ಶೇ.5 ಮತ್ತು ದ್ವಿತೀಯ ಸಾವಯವ ಏರೋಸಾಲ್‌ಗಳ ಪಾಲು ಶೇ.4.5ರಷ್ಟಿತ್ತು. ಅಂದು ಬೆಳಗಿನ ಜಾವ 3 ಗಂಟೆಗೆ ಜಹಾಂಗೀರ್‌ಪುರಿಯಲ್ಲಿ ಪ್ರತಿ ಘನ ಮೀಟರ್ ಗಾಳಿಯಲ್ಲಿ ಪಿಎಂ 2.5 ಪ್ರಮಾಣ 4,985 ಮೈಕ್ರೋಗ್ರಾಂ ದಾಖಲಾಗಿತ್ತು. ಆದರೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಈ ಅಂಕಿಅಂಶವನ್ನು ನಂತರ 776 ಮೈಕ್ರೋಗ್ರಾಂಗೆ ಪರಿಷ್ಕರಿಸಿತು. ನೆಹರು ನಗರದಲ್ಲಿ 2,808 ಮೈಕ್ರೋಗ್ರಾಂ ದಾಖಲಾಗಿತ್ತು.

ಹವಾಮಾನವೂ ಮಾಲಿನ್ಯ ಹೆಚ್ಚಳಕ್ಕೆ ಕಾರಣ

ದೆಹಲಿಯಲ್ಲಿ ಗಾಳಿಯ ವೇಗ ಕಡಿಮೆಯಿದ್ದ ಕಾರಣ ಮಾಲಿನ್ಯಕಾರಕ ಕಣಗಳು ವಾತಾವರಣದಲ್ಲಿ ದೀರ್ಘಕಾಲ ಉಳಿದಿದ್ದವು. ಗಾಳಿಯ ವೇಗ, ದಿಕ್ಕು, ತಾಪಮಾನ ಮತ್ತು ತೇವಾಂಶ ಮಾಲಿನ್ಯದ ಹರಡುವಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ 8ರಂದು ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 376ರಷ್ಟಿತ್ತು. ನವೆಂಬರ್ 10ರಂದು ಸಂಜೆ 4 ಗಂಟೆಗೆ 299ಕ್ಕೆ ಇಳಿದಿದ್ದ AQI, ಸಂಜೆ 6 ಗಂಟೆಗೆ ಮತ್ತೆ 302ಕ್ಕೆ ಏರಿಕೆಯಾಗಿತ್ತು. ಬುಧವಾರ ಬೆಳಗ್ಗೆ 308 ದಾಖಲಾಗಿತ್ತು. ಮುಂದಿನ ದಿನಗಳಲ್ಲಿ ಗಾಳಿಯ ವೇಗ ಹೆಚ್ಚಾದರೆ ಮಾಲಿನ್ಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿತ್ತು.

ಇದನ್ನೂ ಓದಿ: ಅಯೋಧ್ಯೆ ಭೇಟಿ ಬಗ್ಗೆ ಬಿಜೆಪಿಗೆ ಏಕೆ ಆತಂಕ? ಲಕ್ಷಾಂತರ ಕೋಟಿ ರೂ. ನಷ್ಟಕ್ಕೆ ಉತ್ತರವೇನು? ಅಖಿಲೇಶ್‌ ಯಾದವ್‌ ಪ್ರಶ್ನೆ

ಐಐಟಿಎಂ ವರದಿಗೆ ವ್ಯಾಪಾರಿಗಳ ಆಕ್ಷೇಪ

ಇನ್ನೊಂದೆಡೆ, ಐಐಟಿಎಂ ವರದಿಯನ್ನು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಪ್ರಶ್ನಿಸಿದೆ. ಪಟಾಕಿಗಳಿಂದ ಹೊಗೆ ಉಂಟಾಗುವುದು ನಿಜವಾದರೂ, ದೆಹಲಿಯ ಮಾಲಿನ್ಯಕ್ಕೆ ಅವುಗಳನ್ನೇ ಸಂಪೂರ್ಣ ಹೊಣೆ ಮಾಡುವುದು ಸರಿಯಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಬ್ರಿಜೇಶ್ ಗೋಯಲ್ ಹೇಳಿದ್ದಾರೆ. ಅಕ್ಟೋಬರ್‌ನಿಂದ ಜನವರಿವರೆಗೆ ಮಾಲಿನ್ಯ ಹೆಚ್ಚಾಗುವುದರಿಂದ ವಾಹನಗಳ ಹೊಗೆ ಮತ್ತು ಕೃಷಿ ತ್ಯಾಜ್ಯ ಸುಡುವಿಕೆಯಂತಹ ಇತರ ಮೂಲಗಳ ಮೇಲೂ ಗಮನ ಹರಿಸಬೇಕು ಎಂದಿದ್ದಾರೆ. ಪಟಾಕಿ ಸಿಡಿಸುವುದಕ್ಕೂ ಮುನ್ನ ನವೆಂಬರ್ 5, 6 ಮತ್ತು 7ರಂದು ದೆಹಲಿಯ AQI 350ರಿಂದ 400ರ ನಡುವೆ ಇತ್ತು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ವಾಯುಮಾಲಿನ್ಯದಿಂದ ಹೃದಯದ ಆರೋಗ್ಯಕ್ಕೂ ಅಪಾಯ

ವಾಯುಮಾಲಿನ್ಯದಿಂದ ಕೆಮ್ಮು, ಉಬ್ಬಸ, ಉಸಿರಾಟದ ತೊಂದರೆ ಮತ್ತು ಅಸ್ತಮಾ ಸಮಸ್ಯೆಗಳು ಹೆಚ್ಚಾಗುವುದರ ಜತೆಗೆ ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. NDTVಗೆ ಮಾತನಾಡಿದ ಪಲ್ಮನಾಲಜಿಸ್ಟ್ ಡಾ. ಅರವಿಂದ್ ಕುಮಾರ್, ದೀರ್ಘಕಾಲ ಕಲುಷಿತ ಗಾಳಿಗೆ ಒಡ್ಡಿಕೊಳ್ಳುವುದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ರಕ್ತದೊತ್ತಡ ಹೆಚ್ಚಾಗುವ ಅಪಾಯವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ: 88 ಸಾವಿರ ಪತ್ರಿಕೆಗಳ ನೋಂದಣಿ ರದ್ದು: ಸಣ್ಣ ಪತ್ರಿಕೆಗಳ ಕತ್ತು ಹಿಸುಕುತ್ತಿದೆಯೇ ಹೊಸ ನಿಯಮ? ಅಂಚೆ ವೆಚ್ಚದ ಹೊರೆ!

ಮಾಲಿನ್ಯ ಹೆಚ್ಚಾದ ನಂತರದ ದಿನಗಳಲ್ಲಿ ಹೃದಯಾಘಾತದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಬಹುದು ಎಂಬುದಕ್ಕೆ ಪುರಾವೆಗಳಿವೆ ಎಂದು ಅವರು ಹೇಳಿದ್ದಾರೆ. ವರದಿಯಲ್ಲಿ ಉಲ್ಲೇಖಿಸಿರುವ 2025ರ ಅಧ್ಯಯನವು ದೆಹಲಿಯ 41,436 ಆಸ್ಪತ್ರೆ ದಾಖಲೆಗಳನ್ನು ವಿಶ್ಲೇಷಿಸಿದೆ. ಈ ಪೈಕಿ 11,494 ಹೃದಯರಕ್ತನಾಳ ಸಂಬಂಧಿತ ಪ್ರಕರಣಗಳಾಗಿದ್ದು, ಮಾಲಿನ್ಯ ಹೆಚ್ಚಿರುವ ತಿಂಗಳುಗಳಲ್ಲಿ ಇಂತಹ ಆರೋಗ್ಯ ಸಮಸ್ಯೆಗಳ ಪ್ರಮಾಣವೂ ಹೆಚ್ಚಾಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

 

Please follow and like us:
Donate Janashakthi Media

Leave a Reply

Your email address will not be published. Required fields are marked *