ಮೇ 4ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜಕೀಯ ವಿಶ್ಲೇಷಕರಿಗೆ ‘ತಾವು ಹಾದಿ ತಪ್ಪಿದ್ದು ಎಲ್ಲಿ’ ಎನ್ನುವ ಜಿಜ್ಞಾಸೆ ಶುರುವಾಯಿತು. ಬಹುತೇಕರು ಡಿಎಂಕೆ ಸರಳ ಬಹುಮತ ಗಳಿಸಿ ಎರಡನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆ, ಟಿವಿಕೆ ಶೇ.8-12ರಷ್ಟು ಮತ ಗಳಿಸಿ vote cutter ಆಗುತ್ತದೆ ಎಂದೇ ವಿಶ್ಲೇಷಿಸಿದ್ದರು. ತಮಿಳುನಾಡು
– ಬಿ. ಶ್ರೀಪಾದ ಭಟ್
ಆದರೆ ಎಲ್ಲವೂ ತಲೆಕೆಳಗಾಗಿ ಟಿವಿಕೆ ಶೇ. 35ರಷ್ಟು ಮತ ಪಡೆದು 107ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ವಿಜಯ್ ಒಂದು ಸ್ಥಾನ ಬಿಟ್ಟುಕೊಡಬೇಕು, ಸ್ಪೀಕರ್ ರ ಒಂದು ಸ್ಥಾನ ಹೊರತುಪಡಿಸಿದರೆ ಟಿವಿಕೆಗೆ ಸರಳ ಬಹುಮತಕ್ಕೆ ಇನ್ನೂ 12 ಶಾಸಕರ ಬೆಂಬಲ ಬೇಕಾಗುತ್ತದೆ. ತಮಿಳುನಾಡು
ಮತ್ತೊಮ್ಮೆ ಅಧಿಕಾರಕ್ಕೇರುವ ಕನಸು ಕಂಡ ಡಿಎಂಕೆ ಶೇ.32.17ಷ್ಟು ಮತ ಪ್ರಮಾಣ ಗಳಿಸಿದೆ.(ಕಳೆದ ಬಾರಿ ಶೇ.38) 60 ಸ್ಥಾನಗಳನ್ನು ಪಡೆದುಕೊಂಡಿದೆ. (ಮಿತ್ರ ಪಕ್ಷಗಳು 10) ಇದು ‘ಫಸ್ಟ್ ಪಾಸ್ಟ್ ದ ಪೋಸ್ಟ್’ ಪದ್ಧತಿಯಲ್ಲಿ ಸಾಮಾನ್ಯ ಸಂಗತಿ. ತಮಿಳುನಾಡು
ಇದನ್ನೂ ಓದಿ: ಮತ ಎಣಿಕೆ ಮಧ್ಯೆ ಮಮತಾ ಆರೋಪ: ‘ಅಂಕಿ-ಸಂಖ್ಯೆಗಳು ನಕಲಿ’
ಗೆದ್ದ ಟಿವಿಕೆ ಮತ್ತು ಸೋತ ಡಿಎಂಕೆ ನಡುವೆ ಶೇ.4ರಷ್ಟು ಮತ ಪ್ರಮಾಣದ ಅಂತರವಿದ್ದರೂ ಸಹ(ಮಿತ್ರ ಪಕ್ಷಗಳ ಮಾತು ಪ್ರಮಾಣ ಸೇರಿದರೆ ಶೇ.31.39ರಷ್ಟಾಗುತ್ತದೆ)
47ಸ್ಥಾನಗಳ ಅಂತರವಿದೆ.(ಮಿತ್ರ ಪಕ್ಷಗಳ ಸ್ಥಾನಗಳನ್ನು ಸೇರಿಸಿದರೆ 33 ಸ್ಥಾನಗಳ ಅಂತರ) ಅಂದರೆ ಡಿಎಂಕೆ ಮೈತ್ರಿಕೂಟ ಹಾಗೂ ಟಿವಿಕೆ ನಡುವೆ ಶೇ.4ರಷ್ಟು ಅಂತರವಿದ್ದರೆ ಕ್ಷೇತ್ರಗಳಲ್ಲಿ 33 ಸ್ಥಾನಗಳ ಅಂತರವಿದೆ. ತಮಿಳುನಾಡು
ಸಹಜವಾಗಿಯೇ ಡಿಎಂಕೆ ಹಾಗೂ ಎಡಿಎಂಕೆ ವಿರೋಧಿ ಮತಗಳು ಟಿವಿಕೆ ಪಕ್ಷಕ್ಕೆ ದೊರಕಿದೆ. ಅದರಲ್ಲೂ ಡಿಎಂಕೆ ಪಕ್ಷವು ತನ್ನ ಪ್ರಾಬಲ್ಯದ ಗ್ರೇಟರ್ ಚೈನ್ನೈನ 37 ಸ್ಥಾನಗಳ ಪೈಕಿ ಕೇವಲ 2ರಲ್ಲಿ ಗೆದ್ದಿದ್ದರೆ ಟಿವಿಕೆ 32 ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಪಶ್ಚಿಮ ತ.ನಾಡಿನಲ್ಲಿ ಇವೆರಡೂ ಪಕ್ಷಗಳ ನಡುವೆ ಭಾರಿ ವ್ಯತ್ಯಾಸವಿದೆ.
ಚೆನ್ನೈ ಪ್ರದೇಶ ಹಾಗೂ ಕೊಯಂಬತ್ತೂರು, ಸೇಲಂ, ಈರೋಡ್, ತಿರುಪ್ಪೂರು, ನಮಕ್ಕಲ್, ಧರ್ಮಪುರಿ, ನೀಲಗಿರೀಸ್ ಭಾಗಗಳು ಟಿವಿಕೆ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಇವುಗಳಲ್ಲಿ ಬಹುತೇಕ ಕೈಗಾರಿಕಾ ಪ್ರದೇಶಗಳು ಎನ್ನುವುದು ಏನನ್ನು ಸೂಚಿಸುತ್ತದೆ? ತಮಿಳುನಾಡು
ಎರಡನೆಯದಾಗಿ
ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ 75 ವರ್ಷಗಳ ಅನುಭವಿ ಪಕ್ಷ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷ ಅಧಿಕಾರದಲ್ಲಿ ಇರಲು ಸಾಧ್ಯವಾಗಲಿಲ್ಲ .. ಇವೆರಡೂ ಈಗಿನ ಬೆಳವಣಿಗೆಗಳು. ತಮಿಳುನಾಡು
ಮುಖ್ಯವಾಗಿ ವಿಜಯ್ ಅವರ ಟಿವಿಕೆ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಯಾವುದೇ ಸೈದ್ಧಾಂತಿಕತೆ ಬದ್ಧತೆಯನ್ನೂ ಸಹ ಪ್ರಕಟಿಸದೆ ಸಂಪೂರ್ಣವಾಗಿ ಕಲ್ಯಾಣ ಯೋಜನೆಗಳ ಬಗ್ಗೆ ಭರವಸೆಗಳನ್ನು ನೀಡಿದೆ. ಇದು ಇವರ ಗೆಲುವಿಗೆ ಮುಖ್ಯ ಕಾರಣ ಎಂದು ಹೇಳಲು ಸಾಧ್ಯವೇ? ತಮಿಳುನಾಡು
ಯಾಕೆಂದರೆ ಡಿಎಂಕೆ ಮತ್ತು ಎಐಎಡಿಎಂಕೆ ಸಹ ಅನೇಕ ಕಲ್ಯಾಣ ಯೋಜನೆಗಳ ಭರವಸೆ ನೀಡಿದ್ದಾರೆ ಮತ್ತು ಮುಖ್ಯವಾಗಿ 2021-26ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಡಿಎಂಕೆ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಯೋಜನೆಗಳ ಕಾರಣಕ್ಕೆ ಯಾವುದೇ ಅನುಭವವಿಲ್ಲದ ಟಿವಿಕೆಯನ್ನು ನೆಚ್ಚಿಕೊಂಡು ಅಧಿಕಾರ ಕೊಡುತ್ತಾರೆಯೇ ಎನ್ನುವ ಪ್ರಶ್ನೆಯೂ ಇದೆ.
ಆದರೆ ನಿರ್ದಿಷ್ಟ ಪ್ರದೇಶಗಳ ಮತದಾರರು ಬೇರೆ ಬೇರೆ ಕಾರಣಗಳಿಗಾಗಿ ಟಿವಿಕೆಯನ್ನು ಆಯ್ಕೆ ಮಾಡುವಾಗ ಇದೂ ಸಹ ಅದರ ಭಾಗವಾಗಿರುತ್ತದೆ ಎನ್ನುವುದಂತೂ ಸತ್ಯ.
ವಿಜಯ್ ತಮ್ಮ ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಸಾರ್ವಜನಿಕ ನೀತಿಗಳು, ಅಭಿವೃದ್ಧಿ ಯೋಜನೆಗಳು, ಸೈದ್ಧಾಂತಿಕ ಒಲವಿನ ರಾಜಕೀಯ ಕುರಿತು
ಮಾತನಾಡಲೇ ಇಲ್ಲ.
ಕೇವಲ ಭ್ರಷ್ಟಾಚಾರವನ್ನು ಉದಾಹರಿಸುತ್ತಾ ಬದಲಾವಣೆ ಬಯಸಿದ್ದರು. ಆದರೆ ಇಷ್ಟು ಮಾತ್ರದಿಂದ ಶೇ.35ರಷ್ಟು ಮತಗಳನ್ನು ಪಡೆಯಲು ಸಾಧ್ಯವಿರಲಿಲ್ಲ.
ಇಂತಹ ಮಿತಿಗಳನ್ನು ದಾಟಲು ತಮ್ಮ ವರ್ಚಸ್ಸನ್ನು ಮತಗಳಾಗಿ ಪರಿವರ್ತಿಸುವ ಒಂದಂಶದ ಕಾರ್ಯಸೂಚಿಯನ್ನು ಬಲವಾಗಿ ನಂಬಿಕೊಂಡಿದ್ದರೇ?
ಆದರೆ ವಿಜಯ್ ಅವರ ಸ್ಟಾರ್ ಕ್ರೇಜ್ ಮಾತ್ರ ಈ ಗೆಲುವಿಗೆ ಮುಖ್ಯ ಕಾರಣ ಎಂದರೆ ಅದು ಸರಳೀಕರಣಗೊಳಿಸಿದಂತಾಗುತ್ತದೆ.
ಮೂರನೆಯದಾಗಿ
18-40 ವಯಸ್ಸಿನವರು ವಿಜಯ್ ಪರ ಆಕರ್ಷಿತರಾಗಿದ್ದಾರೆ. ಜೊತೆಗೆ ಇದುವರೆಗೂ ಡಿಎಂಕೆ/ಎಐಎಡಿಎಂಕೆ ಪರ ಮತ ಹಾಕುತ್ತಿದ್ದ ತಮ್ಮ ಕುಟುಂಬದ ಹಿರಿಯ ಸದಸ್ಯರ ಮೇಲೂ ವಿಜಯ್ ಪರ ಬಟನ್ ಒತ್ತಲು ಪ್ರಭಾವ ಬೀರಿದ್ದಾರೆ. ‘ಒಮ್ಮೆ ಅವಕಾಶ ಕೊಡಿ’ ಎಂದು ಜೆನ್ ಜಿಗಳ ಆಗ್ರಹಕ್ಕೆ ಈ ಹಿರಿಯರು ಮಣಿದಂತಿದೆ.
ಈ ಸಾಧ್ಯತೆಯು ಆಡಳಿತ ವಿರೋಧಿ ಅಲೆಯೊಂದಿಗೆ ಪೂರಕವಾಗಿ ಬೆರೆತಂತಿದೆ.
ನಾಲ್ಕನೆಯದಾಗಿ
ಈ ಕಾಲದಲ್ಲಿ ಡಿಎಂಕೆ/ಎಐಎಡಿಎಂಕೆ ಪಕ್ಷಗಳ ಕೇಡರ್ ಆಧಾರಿತ ಸಾಂಪ್ರದಾಯಿಕ ರೀತಿಯ ಸಂಘಟನೆಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿದೆ ಎಂದು ಕಂಡುಬಂದರೂ ಅದು ಸತ್ಯವಲ್ಲ. ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಇವರು ಎಡವಿದ್ದಾರೆ ಎನ್ನುವುದು ವಾಸ್ತವ.
ಮತ್ತು ಸಾಮಾಜಿಕ ಜಾಲತಾಣಗಳ ಪ್ರಾಬಲ್ಯ ಬಳಸಿಕೊಂಡು ರೂಪಿಸಿದ ಚುನಾವಣಾ ತಂತ್ರಗಾರಿಕೆ ವಿಜಯ್ ಅವರ ಗೆಲುವಿಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎನ್ನುವುದೂ ಸತ್ಯ.
ಇವರ ಮೊದಲ ಪ್ರಯತ್ನದ ಗೆಲುವನ್ನು ಎಂಜಿಆರ್ ಅವರ 1977ರ ಗೆಲುವಿಗೆ ಹೋಲಿಸಬಹುದು. ಎಂಜಿಆರ್ ರೀತಿಯಲ್ಲಿ ‘ಜನ ಬದಲಾವಣೆ ಬಯಸುತ್ತಿದ್ದರು ಎನ್ನುವ ಪ್ರಚಾರಕ್ಕೆ ಸೆಲ್ಯುಲಾಯ್ಡ್ ನ ಹೀರೋ ನಿಜಜೀವನದ ‘ಜನ ನಾಯಕನೂ ಆಗಬಲ್ಲ’ ಎನ್ನುವ ಪ್ರಚಾರವೂ ಸಹಾಯ ಮಾಡಿದೆ.
ಆದರೆ ಈ ಹೋಲಿಕೆ ಇಲ್ಲಿಗೆ ನಿಲ್ಲುತ್ತದೆ.
ಎಂಜಿಆರ್ ಅನೇಕ ದಶಕಗಳಿಂದ ಡಿಎಂಕೆ ಜೊತೆಗೆ ಗುರುತಿಸಿಕೊಂಡಿದ್ದರು ಮತ್ತು ಅವರ ಸಿನಿಮಾಗಳಲ್ಲಿಯೂ ಅದರ ಪ್ರತಿಫಲನ ಕಂಡು ಬರುತ್ತದೆ.
ವಿಜಯ್ ಇಂತಹ ಯಾವುದೇ ರಾಜಕೀಯ, ಚಳುವಳಿ ಹಿನ್ನೆಲೆ ಇಲ್ಲದೆ ದಿಢೀರನೆ ಉದ್ಭವಿಸಿ ಗೆಲುವಿನ ರುಚಿ ಕಂಡಿದ್ದಾರೆ.
ಈ ಮೂಲಕ ಜನಪ್ರಿಯ ಸಿನಿಮಾ ಕಲಾವಿದರಿಗೆ ‘ನಿಮ್ಮ ಅಭಿಮಾನಿಗಳನ್ನು ವ್ಯವಸ್ಥಿತವಾಗಿ ಸಂಘಟಿಸಿ, ಅದಕ್ಕೆ ಭಾವುಕತೆಯನ್ನು ಬೆರೆಸಿ, ಇವೆರಡೂ ಸರಿಯಾಗಿ ಸೇರಿಕೊಂಡಾಗ ಭರಪೂರು ಕಲ್ಯಾಣ ಯೋಜನೆಗಳ ಮೂಲಕ ಒಂದು ಪ್ರಣಾಳಿಕೆ ಸಿದ್ಧಪಡಿಸಿ.. ಇದು ಮತಗಳಾಗಿ ಪರಿವರ್ತನೆ ಆಗುತ್ತದೆ’ ಎನ್ನುವ ಮಾದರಿ ಸಮೀಕರಣವನ್ನು(template) ಮುಂದಿಟ್ಟಿದ್ದಾರೆ. ಇದಕ್ಕೆ ಯಶಸ್ಸು ದೊರಕಿದ ಕಾರಣ ಮುಂದಿನ ದಿನಗಳಲ್ಲಿ ಚರ್ಚೆಯಲ್ಲಿರುತ್ತದೆ..
ಮುಂದೇನು ಎನ್ನುವ ಪ್ರಶ್ನೆಗೆ ಎರಡು ವರ್ಷಗಳ ಆಡಳಿತದ ನಂತರವಷ್ಟೇ ಉತ್ತರ ದೊರೆಯಲಿದೆ
ಐದನೆಯದಾಗಿ
ವಿಜಯ್ ಮತ್ತು ಟಿವಿಕೆ ಪಕ್ಷದ ಪರೀಕ್ಷೆ ಶುರುವಾಗುವುದೇ ಇಲ್ಲಿಂದ. ವಿಜಯ್ ಜೊತೆಗೆ ಅಧವ್ ಅರ್ಜುನ ಮತ್ತು ಬುಸ್ಸಿ ಆನಂದ್ ರಂತಹ ಪಕ್ಷ ಬದ್ಧತೆಯುಳ್ಳ ಮುಖಂಡರಿದ್ದಾರೆ. ಆದರೆ ಇವರಿಬ್ಬರು ಮತ್ತೊಂದಿಬ್ಬರನ್ನು ಹೊರತುಪಡಿಸಿ
ಸಂಪೂರ್ಣ ಅನನುಭವಿಗಳನ್ನು ಬೆನ್ನ ಹಿಂದಿಟ್ಟುಕೊಂಡು ಆಡಳಿತ ದಕ್ಷತೆ ಸಾಧಿಸುವ ಸವಾಲು ಮುಂದಿದೆ. ಇದಕ್ಕಾಗಿ ಕಾರ್ಯಯೋಜನೆ ರೂಪಿಸಿಕೊಂಡಿದ್ದಾರೆಯೇ?
ಕಾಲವೇ ಉತ್ತರಿಸಬೇಕು..
ಇನ್ನು ಪಕ್ಷವನ್ನು ಹೇಗೆ ಕಟ್ಟುತ್ತಾರೆ? ಅಭಿಮಾನಿಗಳನ್ನು ರಾಜಕೀಯ ಕಾರ್ಯಕರ್ತರನ್ನಾಗಿ ಹೇಗೆ ಬದಲಾಯಿಸುತ್ತಾರೆ?
ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವವನ್ನು ಹೇಗೆ ಬೆಳೆಸುತ್ತಾರೆ?
ಮುಂದಿನ ದಿನಗಳಲ್ಲಿ ಸಮಾಜೋ-ಆರ್ಥಿಕ-ಶೈಕ್ಷಣಿಕ ನೀತಿಗಳ ನೀಲನಕ್ಷೆ ಹೇಗೆ ತಯಾರಿಸುತ್ತಾರೆ?
ಸಾರ್ವಜನಿಕ ಶಿಕ್ಷಣ, ಆರೋಗ್ಯ, ಉದ್ಯೋಗ ನೀತಿ, ಸಾಮಾಜಿಕ ನ್ಯಾಯ ಕುರಿತು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸಲು ಯಾವ ಬಗೆಯ ಕಾರ್ಯಯೋಜನೆಗಳನ್ನು ರೂಪಿಸಿದ್ದಾರೆ?
ಮುಖ್ಯವಾಗಿ ಸಿನಿಮಾ ಪಯಣದಿಂದ ರಾಜಕೀಯ ಪಯಣಕ್ಕೆ ಪರಿವರ್ತನೆಗೊಳ್ಳಲು ಯಾವ ಬಗೆಯ ಸಿದ್ಧತೆ ಮಾಡಿಕೊಂಡಿದ್ದಾರೆ?
ಇನ್ನೂ ಅನೇಕ ಪ್ರಶ್ನೆಗಳಿವೆ.
ಕಾಯಬೇಕು..
ಕಡೆಯದಾಗಿ
ಇದರಾಚೆಗೆ ಯಾವುದೇ ಸಿದ್ಧಾಂತವಿಲ್ಲದ ರಾಜಕೀಯ ಪಕ್ಷಗಳು ಇಂದಿನ ಸಂದರ್ಭದಲ್ಲಿ ಮತ್ತೊಂದು ಜೆಡಿಎಸ್, ಟಿಡಿಪಿ, ಜಗನ್ ರೆಡ್ಡಿ, ಆಪ್, ಎಜಿಪಿ ಪಕ್ಷಗಳಾಗುತ್ತವೆ.
ಇದು ಶತಸಿದ್ಧ. ಇದಕ್ಕೆ ಟಿವಿಕೆ ಹೊರತಾಗುವುದೇ?
ಕಾಯಬೇಕು..
ಗೆದ್ದ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲಿನ ಅಚಲ ನಂಬಿಕೆ, ಸಾಮಾಜಿಕ ನ್ಯಾಯ, ಸಮತಾವಾದ, ಸಂವಿಧಾನ ಬದ್ಧತೆ ಮತ್ತು ವೈಚಾರಿಕ ಪ್ರಜ್ಞೆ ಇರುವವರೆಗೂ ಹಾಗೂ ಕನಿಷ್ಠ ನೈತಿಕತೆ ಹೊಂದಿರುವವರೆಗೂ ಬದಲಾವಣೆ ರಾಜಕೀಯದ ಕುರಿತು ಆಶಾವಾದವೂ ಇರುತ್ತದೆ.
ಇಲ್ಲದೇ ಹೋದರೆ ‘ನಾನು ಹೇಳಿಲ್ಲವೇ..’ ಎಂದು ಉದ್ಗಾರ ಹೊರಡಿಸುವುದು ಇದ್ದೇ ಇದೆ..
ಪಾರ್ಕಲಾಂ..
ಇದನ್ನೂ ನೋಡಿ: “ಮೇ ದಿನದ ಇತಿಹಾಸ: 8 ಗಂಟೆ ಕೆಲಸದ ಹಕ್ಕು ಹೇಗೆ ಬಂದಿತು?” JanashakthiMedia
