ಬೆಂಗಳೂರು: ಕೇಂದ್ರ ಸರ್ಕಾರವು ಆಟೋ ಎಲ್.ಪಿ.ಜಿ ದರವನ್ನು ಪ್ರತಿ ಲೀಟರ್ಗೆ ಬರೋಬ್ಬರಿ 5.73 ರೂಪಾಯಿಗಳಷ್ಟು ದಿಢೀರ್ ಏರಿಕೆ ಮಾಡಿದ್ದೂ, ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಆಟೋ ಚಾಲಕರು, ಆಟೋ ಪ್ರಯಾಣ ದರವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲಾರಂಭಿಸಿದ್ದಾರೆ. ಬೆಂಗಳೂರು
ಆಟೋ ಚಾಲಕರ ಪ್ರಮುಖ ಬೇಡಿಕೆಗಳೇನು?
ಸದ್ಯ ಬೆಂಗಳೂರಿನಲ್ಲಿ ಆಟೋ ಕನಿಷ್ಠ ದರ (ಮೊದಲ 2 ಕಿಲೋಮೀಟರ್ಗೆ) 36 ರೂ. ನಿಗದಿಪಡಿಸಲಾಗಿದೆ. ಆ ನಂತರದ ಪ್ರತಿ ಕಿಲೋಮೀಟರ್ಗೆ 18 ರೂ. ಇದೆ. ಆದರೆ, ಈಗ ಗ್ಯಾಸ್ ಬೆಲೆ ವಿಪರೀತವಾಗಿ ಏರಿಕೆಯಾಗಿರುವುದರಿಂದ ಈ ದರದಲ್ಲಿ ಆಟೋ ಓಡಿಸಿದರೆ ನಮಗೆ ಯಾವುದೇ ಲಾಭವಿಲ್ಲ. ಬೆಂಗಳೂರು
ಇದನ್ನೂ ಓದಿ: ಪದ್ಮನಾಭಪುರಂ ಮತ್ತು ಕಿಲ್ವೇಲೂರು ಕ್ಷೇತ್ರಗಳಲ್ಲಿ ಸಿಪಿಎಂ ಗೆಲುವು!
ಹೀಗಾಗಿ ಕನಿಷ್ಠ ದರವನ್ನು 50 ರೂ.ಗಳಿಗೆ ಹಾಗೂ ನಂತರದ ಪ್ರತಿ ಕಿಲೋಮೀಟರ್ಗೆ 25 ರೂ.ಗಳಿಗೆ ಏರಿಸಬೇಕು ಎಂದು ವಿವಿಧ ಆಟೋ ಚಾಲಕರ ಸಂಘಟನೆಗಳು ಒತ್ತಾಯಿಸಿವೆ.
ಚಾಲಕರ ಆಕ್ರೋಶ: ದರ ಪರಿಷ್ಕರಣೆಗೆ ಆಗ್ರಹ
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಆಟೋ ಚಾಲಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಚಾಲಕರು, ಈಗ ಇಂಧನ ದರ ಏರಿಕೆಯು ತಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಪ್ರತಿದಿನ ಲೀಟರ್ಗಟ್ಟಲೆ ಗ್ಯಾಸ್ ಬಳಸುವ ನಮಗೆ ಇಷ್ಟು ದೊಡ್ಡ ಮೊತ್ತದ ಏರಿಕೆಯನ್ನು ಭರಿಸುವುದು ಅಸಾಧ್ಯ. ಇದರಿಂದ ನಮ್ಮ ದೈನಂದಿನ ಆದಾಯಕ್ಕೆ ಭಾರಿ ಹೊಡೆತ ಬೀಳಲಿದೆ” ಎಂದು ಆಟೋ ಚಾಲಕರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಪ್ರಯಾಣ ದರ ಹೆಚ್ಚಳದ ಭೀತಿ
ಇಂಧನ ದರ ಏರಿಕೆಯ ಬೆನ್ನಲ್ಲೇ ಆಟೋ ಚಾಲಕರು ಮತ್ತು ಸಂಘಟನೆಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿವೆ. ಆಟೋ ಕನಿಷ್ಠ ಪ್ರಯಾಣ ದರವನ್ನು (Minimum Fare) ಹೆಚ್ಚಿಸಬೇಕು ಅಥವಾ ಸಬ್ಸಿಡಿ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ಒಂದು ವೇಳೆ ಸರ್ಕಾರ ದರ ಏರಿಕೆಗೆ ಅನುಮತಿ ನೀಡಿದರೆ, ಬೆಂಗಳೂರಿನಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರಿಗೆ ಆಟೋ ಚಾರ್ಜ್ ಮತ್ತಷ್ಟು ದುಬಾರಿಯಾಗಲಿದೆ. ಇದು ಮೆಟ್ರೋ ಮತ್ತು ಬಸ್ಗಳ ಮೇಲಿನ ಅವಲಂಬನೆಯನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.
ಸಾಮಾನ್ಯ ಜನರಿಗೆ ಆರ್ಥಿಕ ಹೊರೆ
ಬೆಂಗಳೂರಿನಂತಹ ಮಹಾನಗರದಲ್ಲಿ ಕಚೇರಿಗಳಿಗೆ ತೆರಳಲು, ಶಾಲಾ ಮಕ್ಕಳಿಗೆ ಮತ್ತು ತುರ್ತು ಸಂಚಾರಕ್ಕೆ ಆಟೋಗಳೇ ಪ್ರಮುಖ ಆಸರೆಯಾಗಿವೆ. ಈಗಿನ 5.73 ರೂಪಾಯಿಗಳ ಏರಿಕೆಯು ಪರೋಕ್ಷವಾಗಿ ಸಾರಿಗೆ ವೆಚ್ಚವನ್ನು ಹೆಚ್ಚಿಸಲಿದ್ದು, ಮಧ್ಯಮ ವರ್ಗದ ಜನರ ಮಾಸಿಕ ಬಜೆಟ್ ಮೇಲೆ ಪರಿಣಾಮ ಬೀರಲಿದೆ.
“ಆಟೋ ದರ ಈಗಾಗಲೇ ಹೆಚ್ಚಿದೆ, ಈಗ ಗ್ಯಾಸ್ ಬೆಲೆ ನೆಪದಲ್ಲಿ ದರ ಇನ್ನು ಹೆಚ್ಚಾದರೆ ನಾವು ಸಂಚರಿಸುವುದಾದರೂ ಹೇಗೆ?” ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇದನ್ನೂ ನೋಡಿ: “(ಲೇಬರ್ ಕೋಡ್ಸ್) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media
