ವಿರಾಜಪೇಟೆ : ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಐದು ದಿನಗಳ ಕಾಲ ಆಯೋಜಿಸಿರುವ ರಾಜ್ಯಮಟ್ಟದ ಅಧ್ಯಯನ ಶಿಬಿರಕ್ಕೆ ಪೊಲಿಟ್ ಬ್ಯೂರೋ ಸದಸ್ಯರಾದ ರಾಘವಲು ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಚಾಲನೆ ನೀಡಿದರು.
ಕೊಡಗು ಜಿಲ್ಲೆಯ ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿರುವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ಕುತಂತ್ರ ಹಾಗೂ ದಬ್ಬಾಳಿಕೆ ಜಾಗತಿಕ ಮಟ್ಟದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿವೆ ಎಂದು ಹೇಳಿದರು. ಸಾಮ್ರಾಜ್ಯಶಾಹಿ ಅಮೆರಿಕಾ ಇಷ್ಟೆಲ್ಲ ಪ್ರಯತ್ನಗಳನ್ನು ಮಾಡಿದರೂ ಇರಾನ್ ಅನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಅಮೆರಿಕಾದ ವಿರುದ್ಧ ಇರಾನ್ ನಡೆಸಿದ ಪ್ರತಿರೋಧಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿದೆ ಎಂದರು.
ಯು.ಎಸ್. ಒತ್ತಡಕ್ಕೆ ನಾವು ಮಣಿಯುವುದಿಲ್ಲ. ನಮ್ಮ ಹಾಗೂ ಜಾಗತಿಕ ಮಟ್ಟದಲ್ಲಿ ಒಪ್ಪಿಗೆಯಾಗುವ ನಿಬಂಧನೆಗಳು ಬಂದರೆ ಮಾತ್ರ ಸಂಧಾನಕ್ಕೆ ಮುಂದಾಗುತ್ತೇವೆ ಎಂದು ಇರಾನ್ ಹೇಳಿರುವುದನ್ನು ಅವರು ಉಲ್ಲೇಖಿಸಿದರು.

ಯುದ್ಧದ ಪರಿಣಾಮವಾಗಿ ತೈಲ ಬೆಲೆ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಭಾರತದಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಲಭ್ಯತೆ ಕಡಿಮೆಯಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಸುಮಾರು ₹900ರವರೆಗೆ ಏರಿಕೆ ಕಂಡುಬಂದಿದೆ. ಡೀಸೆಲ್, ಪೆಟ್ರೋಲ್ ಸೇರಿದಂತೆ ಇಂಧನ ದರಗಳು ಹೆಚ್ಚಳಗೊಂಡಿವೆ. ಯುದ್ಧ ಮುಂದುವರಿದರೆ ಬೆಲೆಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಕುರಿತು ವಿಶೇಷ ಅಧಿವೇಶನ ಕರೆದಿದ್ದು, ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಿತು. ಮಹಿಳಾ ಮೀಸಲಾತಿಯನ್ನು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ (ಡಿಲಿಮಿಟೇಶನ್) ಜೊತೆಗೆ ಲಿಂಕ್ ಮಾಡಿರುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಮಹಿಳಾ ಮೀಸಲಾತಿ ವಿಷಯದಲ್ಲಿ ಬಿಜೆಪಿ ನಾಟಕವಾಡುತ್ತಿದೆ. ನಿಜವಾಗಿಯೂ ಜಾರಿಗೆ ತರಬೇಕಿದ್ದರೆ 2024ರಲ್ಲೇ ಜಾರಿಗೊಳಿಸಬಹುದಿತ್ತು. ಆದರೆ, ಕ್ಷೇತ್ರ ಪುನರ್ವಿಂಗಡಣೆಗೆ ಅನುಕೂಲವಾಗುವಂತೆ ಅದನ್ನು ಮುಂದೂಡಲಾಗಿದೆ ಎಂದು ಆರೋಪಿಸಿದರು.
ಈ ನಡೆಯನ್ನು ಅರಿತ ವಿರೋಧ ಪಕ್ಷಗಳು ಒಟ್ಟಾಗಿ ವಿರೋಧ ವ್ಯಕ್ತಪಡಿಸಿದ ಪರಿಣಾಮ ಡಿಲಿಮಿಟೇಶನ್ ಪ್ರಕ್ರಿಯೆಗೆ ಹಿನ್ನಡೆ ಉಂಟಾಯಿತು. ಜೊತೆಗೆ ಬಿಜೆಪಿಯ ನಾಟಕವೂ ಬಯಲಾಯಿತು ಎಂದರು. ಸಿಪಿಐ(ಎಂ) ಸೇರಿದಂತೆ ಹಲವು ಸಂಘಟನೆಗಳು ಮಹಿಳಾ ಮೀಸಲಾತಿ ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಿವೆ ಎಂದರು.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿ ಪ್ರಯತ್ನಿಸಿದೆ. ಆದರೆ ಮಹಿಳೆಯರ ವಿಶ್ವಾಸಕ್ಕೆ ದ್ರೋಹ ಮಾಡಿದೆ. ಇದರ ವಿರುದ್ಧ ಹೋರಾಟಗಳು ನಡೆಯಬೇಕು ಎಂದು ಕರೆ ನೀಡಿದರು. ಕ್ಷೇತ್ರ ಪುನರ್ವಿಂಗಡಣೆ ನಡೆದರೆ ಬಿಜೆಪಿ ಬಲ ಹೆಚ್ಚಾಗಿ, ಸಂವಿಧಾನ ತಿದ್ದುಪಡಿ ಸುಲಭವಾಗಬಹುದು ಎಂಬ ಉದ್ದೇಶದಿಂದ ತುರ್ತಾಗಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು. ಬಸವರಾಜ, ಮೀನಾಕ್ಷಿ ಸುಂದರಂ, ಯಾಧವಶೆಟ್ಟಿ ಹಾಗೂ ಮುಖಂಡರಾದ ರಮೇಶ್, ಸಾಬು, ದುರ್ಗಾಪ್ರಸಾದ್, ಭರತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
