ಡಾ: ಎನ್.ಬಿ.ಶ್ರೀಧರ
ಕತ್ತೆ ಕಿರುಬವನ್ನು ನೋಡಿದರೆ ಅದು ನಾಯಿಯಂತೆ ಕಾಣುತ್ತದೆ. ಆದರೆ ಅದು ನಾಯಿ ಕುಟುಂಬಕ್ಕೆ ಸೇರಿಲ್ಲ. ಇದು ಹೈಯನಿಡೇ ಎಂಬ ಸ್ವತಂತ್ರ ಕುಟುಂಬಕ್ಕೆ ಸೇರಿದ ಸ್ತನಿ. ರೂಪದಲ್ಲಿ ನಾಯಿಯಂತಿದ್ದರೂ, ಅದರ ವಂಶವಾಹಿ ಸಂಬಂಧ ಬೆಕ್ಕುಗಳಿಗೆ ಹತ್ತಿರವಾಗಿದೆ. ಇದನ್ನು ವಿಜ್ಞಾನದಲ್ಲಿ ಸಂಯುಕ್ತ ವಿಕಾಸ ಎಂದು ಕರೆಯುತ್ತಾರೆ. ಇವುಗಳಲ್ಲಿ ಭಾರತದಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಏಕೈಕ ಪ್ರಭೇದ ಪಟ್ಟೆ ಕತ್ತೆ ಕಿರುಬ
ರಾತ್ರಿ ಕಾಡಿನ ಅಂಚಿನಲ್ಲಿ, ಒಣಗಿದ ಹುಲ್ಲುಗಾವಲುಗಳ ನಡುವೆ ಅಥವಾ ಕಲ್ಲು ಗುಡ್ಡಗಳ ನೆರಳಲ್ಲಿ ಒಂದು ವಿಚಿತ್ರ ಊಳಿಡುವ ಧ್ವನಿ ಕೇಳಿದಾಗ ಮಲೆನಾಡಿನ ಅನೇಕ್ರು ತಕ್ಷಣ ಹೇಳುವ ವಿಷಯ: “ಕತ್ತೆ ಕಿರುಬ ಇರಬಹುದು ನಾಯಿಗಳನ್ನೆಲ್ಲಾ ಸುರಕ್ಷಿತವಾಗಿ ಬಚ್ಚಿಡಿ.” ಆ ಮಾತಿನೊಂದಿಗೆ ಭಯ, ಅಸಹ್ಯ ಮತ್ತು ಅಜ್ಞಾನ ನಮ್ಮ ಮನಸ್ಸಿನಲ್ಲಿ ಒಂದೇ ಸಾರಿ ಮೂಡುತ್ತವೆ. ಆದರೆ ನಾವು ಭಯಪಡುವ ಈ ಜೀವಿ ನಿಜವಾಗಿಯೂ ಭಯಾನಕವೇ? ಅಥವಾ ಪ್ರಕೃತಿಯ ಒಂದು ಮೌನ ಸೇವಕವೇ?
ಕತ್ತೆ ಕಿರುಬವನ್ನು ಕೇವಲ “ಸತ್ತ ಪ್ರಾಣಿಗಳನ್ನು ತಿನ್ನುವ ಜೀವಿ” ಎಂದು ನೋಡುವುದು ಬಹಳ ಸಾಮಾನ್ಯ. ಕಾಡಿನ ವ್ಯವಸ್ಥೆಯಲ್ಲಿ ಮರಣ ಒಂದು ಅವಿಭಾಜ್ಯ ಪ್ರಕ್ರಿಯೆ ಮತ್ತು ಮರಣ ಹೊಂದಿದ ಜೀವಿಯ ಶರೀರರ ವಿಲೇವಾರಿಯೂ ಸಹ ಅತ್ಯಂತ ಅಗತ್ಯ. ಆ ಮರಣದ ನಂತರ ಉಂಟಾಗುವ ಅಸ್ವಚ್ಛತೆಯನ್ನು ನಿವಾರಿಸುವ ಪ್ರಾಕೃತಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುವ ಜೀವಿ ಕತ್ತೆ ಕಿರುಬ.
ವಾಸಸ್ಥಳ: ಕತ್ತೆ ಕತ್ತೆ ಕಿರುಬಕ್ಕೆ ಹೈನಾ ಎಂದು ಆಂಗ್ಲಭಾಷೆಯಲ್ಲಿ ಕರೆಯುತ್ತಾರೆ. ಕತ್ತೆ ಕಿರುಬವು ದಟ್ಟ ಮಳೆಕಾಡಿನ ಪ್ರಾಣಿ ಅಲ್ಲ; ಇದು ಮುಖ್ಯವಾಗಿ ಒಣ ಮತ್ತು ಅರ್ಧ ಒಣ ಪರಿಸರಗಳಿಗೆ ಹೊಂದಿಕೊಂಡ ಜೀವಿ. ಕರ್ನಾಟಕದಲ್ಲಿ ಇದು ಸಾಮಾನ್ಯವಾಗಿ ಉತ್ತರ ಮತ್ತು ಮಧ್ಯ ಭಾಗಗಳ ಒಣ ಹುಲ್ಲುಗಾವಲುಗಳು, ಗಿಡಗಂಟಿಗಳ ಪ್ರದೇಶಗಳು, ಬಂಡೆಗುಡ್ಡಗಳು ಮತ್ತು ಅರಣ್ಯದ ಅಂಚು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಕೊಪ್ಪಳ ಮತ್ತು ಬಾಲಾರಿ ಭಾಗಗಳಂತಹ ಅರ್ಧ ಬರ ಪ್ರದೇಶಗಳು ಇದರ ಸಹಜ ವಾಸಸ್ಥಳಗಳಾಗಿವೆ. ತುಂಗಭದ್ರಾ ಪ್ರದೇಶ ಮತ್ತು ಕೆಲವೊಂದು ಅರಣ್ಯ ಅಂಚುಗಳಲ್ಲಿ ಇದರ ಹಾದಿಗಳು ದಾಖಲಾಗಿವೆ.
ಭಾರತದ ಮಟ್ಟದಲ್ಲಿ ಪಟ್ಟೆ ಕತ್ತೆ ಕಿರುಬ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಒಣ ಭೂಪ್ರದೇಶಗಳಲ್ಲಿ ವ್ಯಾಪಿಸಿದೆ.
ಜಗತ್ತಿನಲ್ಲಿ ಕತ್ತೆ ಕಿರುಬ ಕುಟುಂಬ (ಹೈಯನಿಡೇ)ಕ್ಕೆ ಸೇರಿದ ನಾಲ್ಕು ಪ್ರಮುಖ ಜೀವಿಗಳಿವೆ: ಪಟ್ಟೆ ಕತ್ತೆ ಕಿರುಬ (ಸ್ಟ್ರೈಪ್ಡ್ ಹೈನಾ-ಹಯೆನ ಹಯೆನ), ಚುಕ್ಕೆ ಕತ್ತೆ ಕಿರುಬ (ಸ್ಪಾಟೆಡ್ ಹೈನಾ-ಕ್ರೋಕುಟಾ ಕ್ರೋಕುಟಾ), ಕಂದು ಕತ್ತೆ ಕಿರುಬ (ಬ್ರೌನ್ ಹೈನಾ-ಪರಾಹ್ಯೇನ ಬ್ರೂನಿಯಾ) ಮತ್ತು ಆರ್ಡ್‌ವುಲ್ಫ್ (ಆರ್ಡ್‌ವುಲ್ಫ್ : ಪ್ರೋಟೆಲೆಸ್ ಕ್ರಿಸ್ಟಾಟಾ). ಜಾಗತಿಕ ಮಟ್ಟದಲ್ಲಿ ಕತ್ತೆ ಕಿರುಬ ಕುಟುಂಬದ ಸದಸ್ಯರು ಆಫ್ರಿಕಾ, ಮಧ್ಯಪೂರ್ವ, ಇರಾನ್, ಟರ್ಕಿ ಮತ್ತು ಮಧ್ಯ ಏಷ್ಯಾದವರೆಗೆ ಇವೆ. ಚುಕ್ಕೆ ಕತ್ತೆ ಕಿರುಬಗಳು ಆಫ್ರಿಕಾದ ಸವನ್ನಾಗಳಲ್ಲಿ ಸಾಮಾನ್ಯವಾಗಿದ್ದರೆ, ಪಟ್ಟೆ ಕತ್ತೆ ಕಿರುಬಗಳು ಒಣ ಗಿಡಗಂಟಿ ಮತ್ತು ಮರುಭೂಮಿ ಅಂಚು ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ. ನಾವು “ಬೇಡದ ಭೂಮಿ” ಎಂದು ಕರೆಯುವ ಈ ಒಣ ಪ್ರದೇಶಗಳೇ ಕತ್ತೆ ಕಿರುಬಗಳ ಜೀವನಾಡಿ.
ನಾಯಿ ಅಲ್ಲ… ಬೆಕ್ಕು ಕೂಡ ಅಲ್ಲ… ವಿಕಾಸದ ಕಥೆ
ಕತ್ತೆ ಕಿರುಬವನ್ನು ನೋಡಿದರೆ ಅದು ನಾಯಿಯಂತೆ ಕಾಣುತ್ತದೆ. ಆದರೆ ಅದು ನಾಯಿ ಕುಟುಂಬಕ್ಕೆ ಸೇರಿಲ್ಲ. ಇದು ಹೈಯನಿಡೇ ಎಂಬ ಸ್ವತಂತ್ರ ಕುಟುಂಬಕ್ಕೆ ಸೇರಿದ ಸ್ತನಿ. ರೂಪದಲ್ಲಿ ನಾಯಿಯಂತಿದ್ದರೂ, ಅದರ ವಂಶವಾಹಿ ಸಂಬಂಧ ಬೆಕ್ಕುಗಳಿಗೆ ಹತ್ತಿರವಾಗಿದೆ. ಇದನ್ನು ವಿಜ್ಞಾನದಲ್ಲಿ ಸಂಯುಕ್ತ ವಿಕಾಸ ಎಂದು ಕರೆಯುತ್ತಾರೆ. ಇವುಗಳಲ್ಲಿ ಭಾರತದಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಏಕೈಕ ಪ್ರಭೇದ ಪಟ್ಟೆ ಕತ್ತೆ ಕಿರುಬ (ಸ್ಟ್ರೈಪ್ಡ್ ಹೈನಾ-ಹಯೆನ ಹಯೆನ) ದೇಶದ ಒಣ ಮತ್ತು ಅರ್ಧ ಒಣ ಪರಿಸರಗಳಿಗೆ ಅತ್ಯಂತ ಚೆನ್ನಾಗಿ ಹೊಂದಿಕೊಂಡಿದೆ.
ದೇಹ ರಚನೆ ಮತ್ತು ಬದುಕಿನ ಹೊಂದಾಣಿಕೆ
ಕತ್ತೆ ಕಿರುಬದ ದೇಹವನ್ನು ಗಮನಿಸಿದರೆ ಅದರ ಜೀವನಶೈಲಿ ಅರ್ಥವಾಗುತ್ತದೆ. ಮುಂದೆ ಕಾಲುಗಳು ಬಲಿಷ್ಠವಾಗಿದ್ದು, ಹಿಂಬದಿ ಭಾಗ ಸ್ವಲ್ಪ ಕಡಿಮೆ ಎತ್ತರದಲ್ಲಿರುತ್ತದೆ. ಇದರಿಂದ ಅದರ ದೇಹ ಇಳಿಜಾರು ರೂಪದಲ್ಲಿರುತ್ತದೆ. ಇದರ ದವಡೆ ಅತ್ಯಂತ ಬಲಿಷ್ಠವಾಗಿದ್ದು, ಎಲುಬುಗಳನ್ನು ಸಹ ಜಜ್ಜುವ ಸಾಮರ್ಥ್ಯ ಹೊಂದಿದೆ. ಎಲ್ಲವನ್ನೂ ಸಹ ತಿಂದು ಜೀರ್ಣ ಮಾಡುವ ಶಕ್ತಿ ಈ ಪ್ರಬಲ ಜಜ್ಜುವ ಹೊಂದಾಣಿಕೆ ದವಡೆಗಳಿಂದ ಬಂದಿದೆ.
ಇದರ ಜೀರ್ಣಕ್ರಿಯೆ ವ್ಯವಸ್ಥೆ ಕೂಡ ಬಹಳ ಬಲಿಷ್ಠ. ಮಾಂಸ ಮಾತ್ರವಲ್ಲದೆ ಎಲುಬಿನ ಕೆಲವು ಭಾಗಗಳನ್ನೂ ಜೀರ್ಣಿಸಬಲ್ಲದು. ಇದರ ಜೀರ್ಣಕೋಶದ ಅಮ್ಲಗಳು ಅನೇಕ ರೋಗಕಾರಕ ಜೀವಿಗಳನ್ನು ನಾಶಮಾಡಲು ಸಹಾಯಕವಾಗುತ್ತವೆ. ಆದ್ದರಿಂದ ಕತ್ತೆ ಕಿರುಬವು ಕೇವಲ ತಿನ್ನುವ ಪ್ರಾಣಿ ಅಲ್ಲ; ಅದು ಪ್ರಕೃತಿಯ ಸ್ವಚ್ಛತಾ ವ್ಯವಸ್ಥೆಯ ಪ್ರಮುಖ ಭಾಗ. ಕೊಳೆತು ಅತ್ಯಂತ ದುರ್ವಾಸನೆ ಮತ್ತು ಹಾನಿಕಾರಕ ಬ್ಯಾಕ್ಟಿರಿಯಾಗಳನ್ನು ಹೊಂದಿದ್ದರೂ ಸಹ ಹೈನಾ ಯಾವುದೇ ರೋಗಕ್ಕೆ ತುತ್ತಾಗಲ್ಲ.

ಆಹಾರ ಪದ್ಧತಿ: ಅಸಹ್ಯವಲ್ಲ, ಪರಿಸರ ಸೇವೆ
ಕತ್ತೆ ಕಿರುಬವು ಮುಖ್ಯವಾಗಿ ಸತ್ತ ಪ್ರಾಣಿಗಳ ಅವಶೇಷಗಳನ್ನು ತಿನ್ನುವ ಜಾಡಮಾಲಿ (ಸ್ಕ್ಯಾವೆಂಜರ್) ಪ್ರಾಣಿ. ಆದರೆ ಇದನ್ನು ಹೀನ ಕೆಲಸವೆಂದು ನೋಡುವುದು ತಪ್ಪು. ಸಮಾಜದಲ್ಲಿ ಸ್ವಚ್ಚತಾ ಕಾರ್ಮಿಕರ ಅವಶ್ಯಕತೆ ಎಷ್ಟು ಮುಖ್ಯವೋ ಕಾಡಿನಲ್ಲಿ ಸತ್ತ ಪ್ರಾಣಿಗಳು ಹಾಗೇ ಬಿದ್ದರೆ ಅವು ಕೊಳೆತು ದುರ್ವಾಸನೆ ಬೀರುತ್ತವೆ ಮತ್ತು ರೋಗಕಾರಕ ಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಇಂತಹ ಸಂದರ್ಭದಲ್ಲಿ ಕತ್ತೆ ಕಿರುಬವು ಆ ಅವಶೇಷಗಳನ್ನು ತೆರವುಗೊಳಿಸಿ ರೋಗ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ.
ಪಟ್ಟೆ ಕತ್ತೆ ಕಿರುಬವು ಸಂಪೂರ್ಣವಾಗಿ ಸತ್ತ ಪ್ರಾಣಿಗಳ ಮೇಲೆಯೇ ಅವಲಂಬಿತವಲ್ಲ. ಅವು ತಮಗೆ ಬೇಕಾದ 70-90% ಆಹಾರವನ್ನು ತಾವೇ ಬೇಟೆಯಾಡುತ್ತವೆ. ಕೆಲವೊಮ್ಮೆ ಸಣ್ಣ ಪ್ರಾಣಿಗಳು, ಕೀಟಗಳು, ಹಣ್ಣುಗಳು ಮತ್ತು ಲಭ್ಯವಿರುವ ಆಹಾರ ಅವಶೇಷಗಳನ್ನೂ ಬಳಸಬಹುದು. ಅದರ ಮುಖ್ಯ ಶಕ್ತಿ ಬೇಟೆಯಲ್ಲಿ ಅಲ್ಲ; ಆಹಾರವನ್ನು ಹುಡುಕುವ ಬುದ್ಧಿವಂತಿಕೆಯಲ್ಲಿ ಇದೆ. ಇವುಗಳ ಹೊಟ್ಟೆಯಲ್ಲಿರುವ ಆಮ್ಲ ಎಷ್ಟೊಂದು ಶಕ್ತಿಶಾಲಿಯೆಂದರೆ, ಇವು ಮೂಳೆ, ಹಲ್ಲು, ಮತ್ತು ಕೊಂಬುಗಳನ್ನು ಕೂಡ ಜೀರ್ಣಿಸಿಕೊಳ್ಳಬಲ್ಲವು.
ವಾಸನೆ, ಶ್ರವಣ ಮತ್ತು ರಾತ್ರಿಯ ಜೀವನ
ಕತ್ತೆ ಕಿರುಬವು ಮುಖ್ಯವಾಗಿ ರಾತ್ರಿ ಚಟುವಟಿಕೆಯ ನಿಶಾಚರ ಪ್ರಾಣಿ. ಹಗಲು ವೇಳೆಯಲ್ಲಿ ಗುಹೆಗಳು, ದೊಡ್ಡ ಕಲ್ಲುಗಳು, ಬಿಲಗಳು ಅಥವಾ ಗಿಡಗಂಟಿಗಳೊಳಗೆ ವಿಶ್ರಾಂತಿ ಪಡೆಯುತ್ತದೆ. ರಾತ್ರಿ ಅದು ಆಹಾರ ಹುಡುಕಲು ಹೊರಬರುತ್ತದೆ.
ಒಂದು ಕತ್ತೆ ಕಿರುಬವು 10 ಕಿ.ಮೀ (6 ಮೈಲಿ) ದೂರದಿಂದ ಇತರ ಪ್ರಾಣಿಗಳ ಶಬ್ದವನ್ನು ಕೇಳಿಸಿಕೊಳ್ಳುತ್ತದೆ. ಆದರೆ ಮಾನವರು ಗರೀಷ್ಟ ೧-೨ ಕಿಮಿ ದೂರದಿಂದ ಮಾತ್ರ ಸಾಮಾನ್ಯ ಶಬ್ಧವನ್ನು ಗುರುತಿಸುತ್ತಾರೆ. ಇದರ ವಾಸನೆ ಗ್ರಹಿಸುವ ಶಕ್ತಿ ಅತ್ಯದ್ಭುತ. ದೂರದಲ್ಲಿರುವ ಸತ್ತ ಪ್ರಾಣಿಯ ವಾಸನೆಯನ್ನು ಹಿಡಿಯುವ ಸಾಮರ್ಥ್ಯ ಇದಕ್ಕೆ ಇದೆ. ಇದರ ಶ್ರವಣ ಮತ್ತು ರಾತ್ರಿ ದೃಷ್ಟಿ ಕೂಡ ಇದರ ಜೀವನಕ್ಕೆ ಮುಖ್ಯ. ಆದ್ದರಿಂದ ಕತ್ತೆ ಕಿರುಬವನ್ನು ಕಾಡಿನ “ವಾಸನೆ ತಜ್ಞ” ಎಂದು ಕರೆಯಬಹುದು.
ಕತ್ತೆಕಿರುಬಗಳು ಬಾಯಿಯ ಮೇಲ್ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ವಾಸನಾ ಗೃಹಣಶಕ್ತಿಯ ವಿಶೇಷ ಜಾಕೋಬ್ಸನ್‌ನ ಅಂಗ ಹೊಂದಿರುತ್ತವೆ. ಅವು ಫೆರೋಮೋನ್‌ಗಳನ್ನು ಬಳಸಿ ಸಂಗಾತಿ ಅಥವಾ ಪ್ರತಿಸ್ಪರ್ಧಿಯ ಮನಸ್ಥಿತಿಯನ್ನು ಅರಿತುಕೊಳ್ಳುತ್ತವೆ.
ಇದನ್ನೂ ಓದಿ : ಸ್ವಾತಂತ್ರ್ಯಕ್ಕೆ 78 ವರ್ಷ: ಇನ್ನೂ ಶೌಚಾಲಯವಿಲ್ಲದ ಸಾವಿರಾರು ಮನೆಗಳು
ಸಂತಾನೋತ್ಪತ್ತಿ ಮತ್ತು ಮರಿಗಳ ಬೆಳವಣಿಗೆ
ಕತ್ತೆ ಕಿರುಬದ ಸಂತಾನೋತ್ಪತ್ತಿಯ ಬಗ್ಗೆ ಅನೇಕ ಕಥೆಗಳಿವೆ. ಚುಕ್ಕೆ ಕತ್ತೆ ಕಿರುಬಗಳಿಗೆ ಮಾತ್ರ ಸೀಮಿತ. ಉಳಿದ ಎಲ್ಲಾ ಕತ್ತೆ ಕಿರುಬಗಳ ಗರ್ಭಾವಧಿ ಸುಮಾರು ಮೂರು ತಿಂಗಳುಗಳಷ್ಟಿರುತ್ತದೆ. ಮರಿಗಳು ಸಾಮಾನ್ಯವಾಗಿ ಸುರಕ್ಷಿತವಾದ ಗುಹೆ, ದೊಡ್ಡ ಬಿಲ ಅಥವಾ ಬಂಡೆಗಳ ಸಂದುಗಳಲ್ಲಿನ ತಂಪಾದ ಪ್ರದೇಶದಲ್ಲಿ ಜನಿಸುತ್ತವೆ. ಹುಟ್ಟುವಾಗ ಅವು ದುರ್ಬಲವಾಗಿದ್ದು, ಕಣ್ಣು ಮುಚ್ಚಿದ ಸ್ಥಿತಿಯಲ್ಲಿ ಇರುತ್ತವೆ. ತಾಯಿ ಅವುಗಳನ್ನು ಹಾಲುಣಿಸಿ, ರಕ್ಷಿಸಿ, ನಿಧಾನವಾಗಿ ಹೊರಗಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತದೆ.

ಚುಕ್ಕೆ ಕತ್ತೆ ಕಿರುಬಗಳ ವಿಶೇಷ ಪ್ರಜನನ ವ್ಯವಸ್ಥೆ
ಆಫ್ರಿಕಾದ ಚುಕ್ಕೆ ಕತ್ತೆ ಕಿರುಬಗಳಲ್ಲಿ (ಕ್ರೋಕುಟಾ ಕ್ರೋಕುಟಾ) ಹೆಣ್ಣು ಪ್ರಾಣಿಗಳಲ್ಲಿ ಅತ್ಯಂತ ವಿಚಿತ್ರವಾದ ಪ್ರಜನನ ರಚನೆ ಕಂಡುಬರುತ್ತದೆ. ಅವುಗಳ ಚಂದ್ರನಾಡಿ (ಕ್ಲಿಟೋರಿಸ್) ಬಹಳ ವಿಸ್ತರಿಸಿಕೊಂಡು ಗಂಡುಗಲಂತೆ ಸುಳ್ಳು-ಶಿಶ್ನ (ಸೂಡೋ ಪೆನಿಸ್) ರೂಪ ಪಡೆಯುತ್ತದೆ. ಸಾಮಾನ್ಯ ಸ್ತನಿಗಳಂತೆ ಪ್ರತ್ಯೇಕ ಹೊರಗಿನ ಯೋನಿ ದ್ವಾರ ಸ್ಪಷ್ಟವಾಗಿ ಇರುವುದಿಲ್ಲ. ಮೂತ್ರವಿಸರ್ಜನೆ, ಮಿಲನ, ವೀರ್ಯಸಂಗ್ರಹ ಮತ್ತು ಪ್ರಸವ ಈ ಉದ್ದವಾದ ಮಾರ್ಗದ ಮೂಲಕವೇ ನಡೆಯುತ್ತದೆ. ಈ ಕಾರಣದಿಂದ ಚುಕ್ಕೆ ಕತ್ತೆ ಕಿರುಬಗಳಲ್ಲಿ ಮೊದಲ ಪ್ರಸವ ಬಹಳ ಕಷ್ಟಕರವಾಗಬಹುದು. ಮಾರ್ಗವು ಉದ್ದ ಮತ್ತು ಕಿರಿದಾಗಿರುವುದರಿಂದ ಪ್ರಸವದ ಸಮಯದಲ್ಲಿ ಗಾಯ, ಮರಿ ಸಾವು ಮತ್ತು ಅಪರೂಪವಾಗಿ ತಾಯಿ ಪ್ರಾಣಿಗೂ ಜೀವಾಪಾಯ ಉಂಟಾಗಬಹುದು. ಇದು ಪ್ರಾಣಿಶಾಸ್ತ್ರದಲ್ಲಿ ಅತ್ಯಂತ ಅಪರೂಪದ ಮತ್ತು ಕುತೂಹಲಕರ ಜೈವಿಕ ವ್ಯವಸ್ಥೆ.
ಹೆಣ್ಣು ಕತ್ತೆಕಿರುಬಗಳು ಚುಕ್ಕೆ ಕತ್ತೆಕಿರುಬ ಜಾತಿಗಳಲ್ಲಿ ಮಾತ್ರ ಗಂಡುಗಳಿಗಿಂತ ದೊಡ್ಡದಾಗಿರುತ್ತವೆ. ಇತರ ಮೂರು ಜಾತಿಗಳಲ್ಲಿ (ಪಟ್ಟೆ, ಕಂದು, ಆರ್ಡ್‌ವುಲ್ಫ್), ಗಂಡುಗಳು ಸಮಾನವಾಗಿರುತ್ತವೆ ಅಥವಾ ಸ್ವಲ್ಪ ದೊಡ್ಡದಾಗಿರುತ್ತವೆ. ಆದರೆ ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿಸಬೇಕು. ನಮ್ಮ ಭಾರತದಲ್ಲಿ ಕಂಡುಬರುವ ಪಟ್ಟೆ ಕತ್ತೆ ಕಿರುಬದಲ್ಲಿ ಇಂತಹ ಸುಳ್ಳು-ಶಿಶ್ನ ಅಥವಾ ಸೂಡೋ-ಪೆನಿಸ್ ವ್ಯವಸ್ಥೆ ಇಲ್ಲ. ಪಟ್ಟೆ ಕತ್ತೆ ಕಿರುಬದಲ್ಲಿ ಹೆಣ್ಣು ಪ್ರಾಣಿಗಳ ಪ್ರಜನನ ವ್ಯವಸ್ಥೆ ಸಾಮಾನ್ಯ ಸ್ತನಿಗಳಂತೆಯೇ ಇರುತ್ತದೆ ಮತ್ತು ಪ್ರಸವ ಸಾಮಾನ್ಯವಾಗಿ ಸಹಜ ರೀತಿಯಲ್ಲಿ ನಡೆಯುತ್ತದೆ.
ಮರಿಗಳ ನಡುವಿನ ಸ್ಪರ್ಧೆ
ಚುಕ್ಕೆ ಕತ್ತೆ ಕಿರುಬಗಳಲ್ಲಿ ಮರಿಗಳು ಕಣ್ಣು ತೆರೆದ ಸ್ಥಿತಿಯಲ್ಲಿ ಮತ್ತು ಹಲ್ಲುಗಳೊಂದಿಗೆ ಹುಟ್ಟುತ್ತವೆ. ಜೋಡಿ ಮರಿಗಳು ಹುಟ್ಟಿದರೆ ಹಾಲು ಮತ್ತು ತಾಯಿಯ ಆರೈಕೆಗಾಗಿ ಅವುಗಳ ನಡುವೆ ತೀವ್ರ ಸ್ಪರ್ಧೆ ಉಂಟಾಗಬಹುದು. ಇದನ್ನು ಸಹೋದರ ಪೈಪೋಟಿ (ಸಿಬ್ಲಿಂಗ್ ರೈವಲ್ರಿ) ಎಂದು ಕರೆಯುತ್ತಾರೆ. ಹುಟ್ಟುವಾಗಲೇ ಕತ್ತೆ ಕಿರುಬ ಮರಿ ಬಲಶಾಲಿ ಉಗುರು ಮತ್ತು ಹಲ್ಲು ಇರುವುದರಿಂದ ಮತ್ತು ಅವುಗಳಲ್ಲಿ ಯಾವುದೇ ಸಹೋದರ ಸಂಬಂಧದ ಪ್ರೀತಿ ಇಲ್ಲದಿರುವುದರಿಂದ ಒಂದು ಮರಿ ಮತ್ತೊಂದನ್ನು ಕಚ್ಚಿ ಪರಚಿ ಸಾಯಿಸುವ ಅನೇಕ ಸಂದರ್ಭ ಇರುತ್ತದೆ. ಆದರೆ ತಾಯಿಗೆ ಅತ್ಯಂತ ಪುತ್ರ ವಾತ್ಸಲ್ಯ ಇರುತ್ತಿದ್ದು ಮರಿಗಳು ಚಿಕ್ಕವಾಗಿದ್ದಾಗ ಅತ್ಯಂತ ಆಕ್ರೋಶ ಹೊಂದಿರುತ್ತದೆ. ಮರಿಗಳಿಗೆ ಅವುಗಳ ತಂದೆ ಯಾರು ಎಂಬುದೇ ತಿಳಿದಿರುವುದಿಲ್ಲ. ಅದುದರಿಂದ ಪಿತ್ರ ವಾತ್ಸಲ್ಯ ಎಂಬುದು ಅಲ್ಲಿ ಇಲ್ಲವೇ ಇಲ್ಲ.
ಆದರೆ ಪಟ್ಟೆ ಕತ್ತೆ ಕಿರುಬಗಳಲ್ಲಿ ಈ ರೀತಿಯ ತೀವ್ರ ಜನನೋತ್ತರ ಹೋರಾಟ ಸಾಮಾನ್ಯ ವರ್ತನೆಯಾಗಿ ಕಂಡುಬರುವುದಿಲ್ಲ. ಅವುಗಳಲ್ಲಿ ಮರಿಗಳು ಹೆಚ್ಚು ಅವಲಂಬಿತ ಸ್ಥಿತಿಯಲ್ಲಿ ಹುಟ್ಟಿ ತಾಯಿಯ ಆರೈಕೆಯಿಂದ ಬೆಳೆಯುತ್ತವೆ.
ಭ್ರಮೆಗಳು ಮತ್ತು ನಿಜಸ್ಥಿತಿ
ಕತ್ತೆ ಕಿರುಬ “ನಗುತ್ತದೆ” ಎಂಬುದು ಜನಪ್ರಿಯ ಕಲ್ಪನೆ. ಆದರೆ ಪ್ರಾಣಿಗಳ ಧ್ವನಿಯನ್ನು ನೇರವಾಗಿ ಮನುಷ್ಯರ ಭಾವನೆಗಳೊಂದಿಗೆ ಹೋಲಿಸುವುದು ತಪ್ಪು. ಆ ಧ್ವನಿಗಳು ಎಚ್ಚರಿಕೆ, ಸಂವಹನ, ಭಯ ಅಥವಾ ಸಾಮಾಜಿಕ ಸಂಕೇತಗಳಾಗಿರಬಹುದು.ಕತ್ತೆ ಕಿರುಬ ಅಪಶಕುನ, ಕ್ರೂರ ಅಥವಾ ಅನಾವಶ್ಯಕ ಪ್ರಾಣಿ ಎಂಬ ಕಲ್ಪನೆಗಳು ವಿಜ್ಞಾನಕ್ಕೆ ವಿರುದ್ಧ. ಇದು ತನ್ನ ಪರಿಸರದಲ್ಲಿ ಅವಶ್ಯಕ ಪಾತ್ರವನ್ನು ನಿರ್ವಹಿಸುವ ಜೀವಿ. ಮನುಷ್ಯನಿಗೆ ಸುಂದರವಾಗಿ ಕಾಣದ ಜೀವಿಯೂ ಪ್ರಕೃತಿಗೆ ಅಮೂಲ್ಯವಾಗಿರಬಹುದು.
ಕತ್ತೆ ಕಿರುಬಗಳ ಭವಿಷ್ಯ
ಇಂದಿನ ಕಾಲದಲ್ಲಿ ಕತ್ತೆ ಕಿರುಬಗಳಿಗೆ ದೊಡ್ಡ ಅಪಾಯ ಮನುಷ್ಯನಿಂದಲೇ ಬರುತ್ತಿದೆ. ವಾಸಸ್ಥಳ ನಾಶ, ರಸ್ತೆ ಅಪಘಾತಗಳು, ವಿಷಪ್ರಯೋಗ, ಅಂಧನಂಬಿಕೆ, ಸತ್ತ ಪಶುಗಳಲ್ಲಿ ಹಾಕುವ ವಿಷ, ಮತ್ತು ಒಣ ಪ್ರದೇಶಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ನಾಶಮಾಡುವುದು ಇವುಗಳ ಬದುಕಿಗೆ ಹೊಡೆತ ನೀಡುತ್ತಿವೆ.
ಒಣ ಹುಲ್ಲುಗಾವಲುಗಳನ್ನು “ಬೇಡದ ಭೂಮಿ” ಎಂದು ನೋಡುವ ಮನೋಭಾವ ಬದಲಾಗಬೇಕು. ಅವು ಕತ್ತೆ ಕಿರುಬ, ನರಿ, ತೋಳ, ಜಿಂಕೆ, ಪಕ್ಷಿಗಳು ಮತ್ತು ಅನೇಕ ಸಣ್ಣ ಜೀವಿಗಳ ಮನೆ. ಜೀವ ವೈವಿಧ್ಯ ಕೇವಲ ದಟ್ಟ ಕಾಡುಗಳಲ್ಲಿ ಮಾತ್ರ ಇರುವುದಿಲ್ಲ; ಒಣ ಪ್ರದೇಶಗಳೂ ಜೀವ ವೈವಿಧ್ಯದ ಮಹತ್ವದ ಕೇಂದ್ರಗಳಾಗಿವೆ.
ನಾವು ಕತ್ತೆ ಕಿರುಬವನ್ನು ಏಕೆ ಉಳಿಸಬೇಕು?
ಕತ್ತೆ ಕಿರುಬ ಉಳಿದರೆ ಪ್ರಕೃತಿಯ ಸ್ವಚ್ಛತಾ ಚಕ್ರ ಉಳಿಯುತ್ತದೆ. ಸತ್ತ ಪ್ರಾಣಿಗಳ ಅವಶೇಷಗಳನ್ನು ತೆರವುಗೊಳಿಸುವ ವ್ಯವಸ್ಥೆ ಉಳಿಯುತ್ತದೆ. ರೋಗದ ಒತ್ತಡ ಕಡಿಮೆಯಾಗುತ್ತದೆ. ಪೋಷಕಾಂಶ ಮರುಚಕ್ರಣ ಮುಂದುವರಿಯುತ್ತದೆ. ಒಣ ಪ್ರದೇಶಗಳ ಜೀವ ವೈವಿಧ್ಯ ಉಳಿಯುತ್ತದೆ. ಪ್ರಕೃತಿಯಲ್ಲಿ ಸುಂದರವಾದವುಗಳಷ್ಟೇ ಮುಖ್ಯವಲ್ಲ. ಕೆಲವೊಮ್ಮೆ ಅಸಹ್ಯವೆನಿಸುವ ಜೀವಿಗಳೇ ಪರಿಸರಕ್ಕೆ ಅತ್ಯಂತ ಅಗತ್ಯವಾಗಿರುತ್ತವೆ. ಕತ್ತೆ ಕಿರುಬವು ನಮಗೆ ಇದೇ ಪಾಠ ಕಲಿಸುತ್ತದೆ.
ಕೊನೆಯ ಮಾತು
ಕತ್ತೆ ಕಿರುಬ ಕಾಡಿನ ಶತ್ರುವಲ್ಲ. ಅದು ಪ್ರಕೃತಿಯ ಮೌನ ಸ್ವಚ್ಛತಾ ಕಾರ್ಮಿಕ. ಅದು ಮರಣವನ್ನು ಅಸ್ವಚ್ಛತೆಯಾಗಿ ಬಿಡದೆ, ಅದನ್ನು ಮತ್ತೆ ಪ್ರಕೃತಿಯ ಚಕ್ರಕ್ಕೆ ಸೇರಿಸುತ್ತದೆ.. ನಾವು ಕತ್ತೆ ಕಿರುಬವನ್ನು ಅರ್ಥಮಾಡಿಕೊಂಡಾಗ, ಪ್ರಕೃತಿಯ ಆಳವಾದ ಸತ್ಯವನ್ನು ಅರ್ಥಮಾಡಿಕೊಳ್ಳುತ್ತೇವೆ. ಪ್ರಕೃತಿ ಕೇವಲ ಹೂವು, ಹಕ್ಕಿ ಮತ್ತು ಸುಂದರ ಪ್ರಾಣಿಗಳ ಜಗತ್ತಲ್ಲ. ಅದು ಮರಣ, ಕೊಳೆತ, ಮರುಚಕ್ರಣ ಮತ್ತು ಸಮತೋಲನದ ಮಹಾ ವ್ಯವಸ್ಥೆ.
ಕತ್ತೆ ಕಿರುಬವನ್ನು ಉಳಿಸುವುದು ಎಂದರೆ ಕೇವಲ ಒಂದು ಪ್ರಾಣಿಯನ್ನು ಉಳಿಸುವುದಲ್ಲ. ಅದು ಪ್ರಕೃತಿಯ ಮೌನ ಸಮತೋಲನವನ್ನು ಉಳಿಸುವುದು. ಪ್ರಕೃತಿಯಲ್ಲಿ ಸುಂದರವಾದವುಗಳಷ್ಟೇ ಮುಖ್ಯವಲ್ಲ. ಅಸಹ್ಯವೆನಿಸುವವುಗಳೂ ಅವಶ್ಯಕ. ಕತ್ತೆ ಕಿರುಬವನ್ನು ಉಳಿಸುವುದು ಎಂದರೆ ಪ್ರಕೃತಿಯ ಮೌನ ಸಮತೋಲನವನ್ನು ಉಳಿಸುವುದು.
ಇಂದಿನ ನಿಜವಾದ ಅಪಾಯ ಕತ್ತೆ ಕಿರುಬಕ್ಕೆ ಅಪಾಯ ಹುಲಿ, ಸಿಂಹ ಅಲ್ಲ…ಆದರೆ ಮನುಷ್ಯನೆಂಬ ಪ್ರಪಂಚದ ಅತ್ಯಂತ ದುಷ್ಟ ಪ್ರಾಣಿ.
ಇದನ್ನೂ ನೋಡಿ : ಮೇ ಡೇ ವಿಶೇಷ: ಕನಿಷ್ಠ ವೇತನ, ಹಕ್ಕುಗಳ ರಕ್ಷಣೆಗೆ ರಾಜ್ಯವ್ಯಾಪಿ ಕಾರ್ಮಿಕರ ಮೆರವಣಿಗೆ Janashakthi Media
