ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಅರಣ್ಯ, ಹೌಸಿಂಗ್ ಬೋರ್ಡ್ ಹಾಗೂ ವಕ್ಫ್ ಜಾಗಗಳನ್ನು ಸಚಿವ ಎನ್.ಎಸ್.ಬೋಸರಾಜು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಆರೋಪದಡಿ ದಲಿತ ಸೇನೆ ವತಿಯಿಂದ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆಗೆ ದೂರು ನೀಡಲಾಗಿದೆ. ಅಕ್ರಮ
ಏಪ್ರಿಲ್ 29ರಂದು ಹೇಳಿಕೆ ನೀಡಿರುವ ರಾಜ್ಯಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್, ರಾಯಚೂರು ವಲಯದ ಸರ್ವೇ ಸಂಖ್ಯೆ 1252, 1253 ಮತ್ತು 1254ಕ್ಕೆ ಸಂಬಂಧಿಸಿದ 5 ಎಕರೆ ಭೂಮಿ ಸರಕಾರಿ/ಮೀಸಲು ಅರಣ್ಯ ಭೂಮಿ ಎಂದು ದಾಖಲಾಗಿರುವುದು ಕಂಡುಬಂದಿದೆ. ದಾಖಲೆಗಳ ಪರಿಶೀಲನೆಯಂತೆ ಭೂಮಿಯನ್ನು ಸಚಿವ ಎನ್.ಎಸ್.ಬೋಸರಾಜು ಅವರ ಕುಟುಂಬ ಸದಸ್ಯರ(ಪತ್ನಿಯ) ಹೆಸರಿನಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಒಡಿಶಾ| ಹಣಕ್ಕಾಗಿ ಸಹೋದರಿಯ ಶವವನ್ನೇ ಬ್ಯಾಂಕ್‌ಗೆ ತಂದ ವ್ಯಕ್ತಿ!
ಈ ಹಿನ್ನೆಲೆಯಲ್ಲಿ, ಸರಕಾರಿ/ ಮೀಸಲು ಅರಣ್ಯ ಭೂಮಿಯ ಹಕ್ಕುಸ್ವಾಮ್ಯ ಬದಲಾವಣೆ ಕಾನೂನು ಬದ್ಧವಾಗಿದೆಯೇ ಎಂಬುದು ಗಂಭೀರ ಅನುಮಾನಕ್ಕೆ ಒಳಪಟ್ಟಿದ್ದು, ವಿಷಯವನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸುವುದು ಅತ್ಯಾವಶ್ಯಕವಾಗಿದೆ. ಇದೇ ಸಂದರ್ಭದಲ್ಲಿ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಾನ್ವಿ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಇರುವ ಸರಕಾರಿ ಜಾಗವೂ ಅವರ ಹೆಸರಲ್ಲಿ ದಾಖಲಾಗಿರುವುದಾಗಿ ತಿಳಿದಬಂದಿದೆ. ಜೊತೆಗೆ ಪಟ್ಟಣದ ವರವಲಯದಲ್ಲಿರುವ ವಕ್ಫ್ ಜಾಗವು ಸಹ ಸಚಿವರ ಬೇನಾಮಿಗಳ ಹೆಸರಲ್ಲಿ ಇರುವುದಾಗಿ ಅವರು ಆರೋಪ ಮಾಡಿದ್ದಾರೆ.
ಈ ವಿಷಯದಲ್ಲಿ ನಡೆದ ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ನ್ಯಾಯಾಲಯವು ಸಂಬಂಧಿತ ಜಾಗವನ್ನು ಸರಕಾರದ ವಶಕ್ಕೆ ಹಿಂತಿರುಗಿಸುವಂತೆ ಆದೇಶ ನೀಡಲಾಗಿದೆ. ಆದಾಗ್ಯೂ, ಬೋಸರಾಜು ಅವರು ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿದೆ. ಆದುದರಿಂದ ಸರಕಾರ ಈ ಕುರಿತು ಸಂಪೂರ್ಣ ನಿಸ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾವೀದ್ ಖಾನ್ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಪಕ್ಷಾಂತರನಿಷೇಧ ಕಾಯ್ದೆ: ಪ್ರಜಾಪ್ರಭುತ್ವದ ರಕ್ಷಕವೇ, ಪಕ್ಷಾಂತರದ ದ್ವಾರವೇ? Janashakthi Media
