ಯಾದಗಿರಿ: ಜಿಲ್ಲೆಯಲ್ಲಿ ಭ್ರೂಣಹತ್ಯೆ ಪ್ರಕರಣಗಳ ಕುರಿತು ಹೊರಬಂದ ಅಂಕಿಅಂಶಗಳು ಗಂಭೀರ ಆತಂಕಕ್ಕೆ ಕಾರಣವಾಗಿವೆ. ನೋಂದಾಯಿತ 30 ಸಾವಿರಕ್ಕೂ ಹೆಚ್ಚು ಗರ್ಭಿಣಿಯರ ಪೈಕಿ 3 ಸಾವಿರಕ್ಕೂ ಅಧಿಕ ಮಹಿಳೆಯರ ಹೆರಿಗೆ ಸಂಬಂಧಿತ ಮಾಹಿತಿ ಲಭ್ಯವಾಗದಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಕಳೆದ ಒಂದು ವರ್ಷದಲ್ಲಿ (2024-25) ಸಾವಿರಕ್ಕೂ ಹೆಚ್ಚು ಭ್ರೂಣಹತ್ಯೆಗಳು ಸದ್ದಿಲ್ಲದೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
‘ಕನ್ನಡಪ್ರಭ’ ವರದಿ ಆಧರಿಸಿ, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರ ನೇತೃತ್ವದಲ್ಲಿ ಮಾ.25ರಂದು ಮಧ್ಯಾಹ್ನ ನಡೆದ ಹಿರಿಯ ಅಧಿಕಾರಿಗಳನ್ನೊಳಗೊಂಡ ವೀಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಯಾದಗಿರಿ ಜಿಲ್ಲೆಯಲ್ಲಿನ ಈ ಆಘಾತಕಾರಿ ಅಂಶ ಬಯಲಾಗಿತ್ತು. ‘ಕನ್ನಡಪ್ರಭ’ಕ್ಕೆ ಲಭ್ಯವಾದ, ಸಭೆಯಲ್ಲಿ ಮಂಡಿಸಲಾದ ಕಟ್ಟುನಿಟ್ಟಿನ ಗೌಪ್ಯ ವರದಿಯಲ್ಲಿನಂತೆ 2025ರ ಏಪ್ರಿಲ್‌ನಿಂದ ನವೆಂಬರ್‌ವರೆಗಿನ 7 ತಿಂಗಳಲ್ಲಿ ಒಟ್ಟು 652 ಗರ್ಭಪಾತ ಪ್ರಕರಣಗಳು ಇಲಾಖೆಯಲ್ಲೇ ವರದಿಯಾಗಿವೆ. ಗರ್ಭಪಾತದ ರಾಜ್ಯದ ಸರಾಸರಿ ವರದಿ ಶೇ.5.24 ರಷ್ಟಿದ್ದರೆ, ಯಾದಗಿರಿ ಜಿಲ್ಲೆಯದ್ದು ಶೇ.3.16 ರಷ್ಟಿದೆ.
ಇದನ್ನೂ ಓದಿ: ಡಿ ಸುಧಾಕರ್ ಅನಾರೋಗ್ಯ: ಹೆಬ್ಬೆಟ್ಟು ಒತ್ತಿಸಿಕೊಳ್ಳಲು ವಿಷಯ ಮುಚ್ಚಿಡಲಾಗಿದೆಯೇ? HD ಕುಮಾರಸ್ವಾಮಿ
1329 ಗರ್ಭಪಾತ
ಹಾಗೆಯೇ, 2024-25ರ ಸಾಲಿನಲ್ಲಿ ನೋಂದಣಿ ಮಾಡಿಸಿದ್ದ 31,435 ಗರ್ಭಿಣಿಯರ ಪೈಕಿ, 26,584 ಜೀವಂತ ಹೆರಿಗೆಗಳಾಗಿದ್ದು, 188 ಶಿಶು ಮರಣಗಳು ಸಂಭವಿಸಿವೆ. ಇನ್ನೂ 207 ಹೆರಿಗೆಗಳು ಆಗಬೇಕಿದ್ದು, 1329 ಗರ್ಭಪಾತಗಳಾಗಿವೆ. ಅಚ್ಚರಿಯೆಂದರೆ, ಇವೆಲ್ಲಗಳ ಸೇರಿಸಿದಾಗ ಆಗುವ 28,308 ಪ್ರಕರಣಗಳಲ್ಲಿ ಇನ್ನೂ 3,127ರಷ್ಟು ಹೆರಿಗೆಯ ವಿವರಗಳೇ ಸಿಗುತ್ತಿಲ್ಲ. ಈ ಗರ್ಭಿಣಿಯರಿಗೆ ನಂತರದಲ್ಲಿ ಹೆರಿಗೆಯಾಯಿತೇ? ಶಿಶುಗಳು ಜೀವಂತವಿವೆಯೇ? ಅಥವಾ ಮೃತಪಟ್ಟವೇ? ಯಾಕೆ? ಏನು? ಎಂಬ ಅನೇಕ ಅಂಶಗಳಿಗೆ ಉತ್ತರ ಸಿಕ್ಕಿಲ್ಲ.
ನಕಲಿ ತಾಯಿ ಕಾರ್ಡ್ ಸೃಷ್ಟಿ
‘ಹೆಣ್ಣು’ ಶಿಶು ಎಂಬ ಕಾರಣಕ್ಕೆ ಅನೇಕರು ಸದ್ದಿಲ್ಲದೆ ಅಬಾರ್ಷನ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ಚರ್ಚೆಗಳಾಗಿವೆ ಎಂದು ‘ಕನ್ನಡಪ್ರಭ’ಕ್ಕೆ ಬಲ್ಲ ಮೂಲಗಳು ತಿಳಿಸಿವೆ. ಹರ್ಷ ಗುಪ್ತಾ ಅವರ ಸೂಚನೆಯಂತೆ ರಚಿಸಲಾಗಿದ್ದ ರಾಜ್ಯಮಟ್ಟದ ಸಮಿತಿ ಏ.6ರಿಂದ ಏ.10ರವರೆಗೆ ಜಿಲ್ಲೆಯಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಿದೆ. ಕೆಲವು ಕಡೆಗಳಲ್ಲಿ ಸಮಿತಿಗೆ ದೊರೆತ ಮಾಹಿತಿಗಳು ಅವರನ್ನೂ ಬೆಚ್ಚಿ ಬೀಳಿಸಿವೆ ಎನ್ನಲಾಗಿದೆ. ಟಾರ್ಗೆಟ್ ರೀಚ್‌ಗಾಗಿ ತಾಯಿ ಕಾರ್ಡ್‌ಗಳನ್ನೂ ಸಹ ನಕಲಿ ಸೃಷ್ಟಿಸಲಾಗುತ್ತಿದೆ ಎಂಬ ಮಾತುಗಳು ಇಲಾಖೆಯಲ್ಲೇ ಕೇಳಿ ಬರುತ್ತಿವೆ.
ಗರ್ಭಪಾತ ತಡೆಗೆ ಕ್ರಮ
ಗರ್ಭಪಾತ ಪ್ರಕರಣಗಳ ಕುರಿತು ರಾಜ್ಯಮಟ್ಟದ ಸಮಿತಿ ಜಿಲ್ಲೆಗೆ ಬಂದು ಮಾಹಿತಿ ಸಂಗ್ರಹಿಸಿದೆ. ಇಷ್ಟರಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದು ತಂಡ ತಮಗೆ ತಿಳಿಸಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದೇನೆ. ನಕಲಿ ವೈದ್ಯರು ಹಾಗೂ ಗರ್ಭಪಾತ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳುತ್ತಾರೆ.
ಇದನ್ನೂ ನೋಡಿ: ಜಿಂದಾಲ್‌ಗೆ 900 ಎಕರೆ ಭೂ ಹಸ್ತಾಂತರ ವಿರೋಧಿಸಿ ತೀವ್ರಗೊಂಡ ರೈತರ ಹೋರಾಟ; ಹೋರಾಟಗಾರರ ಬಂಧನಕ್ಕೆ ಆಕ್ರೋಶ
