ಬೆಂಗಳೂರು: ಡಿಎಪಿ ಹಾಗೂ ಯೂರಿಯಾ ರಸಗೊಬ್ಬರಗಳ ಜೊತೆ ಇತರೆ ರಸಗೊಬ್ಬರ ಉತ್ಪನ್ನಗಳ ಕಡ್ಡಾಯ ಖರೀದಿ ಜೋಡಣೆ ವಿರೋಧಿಸಿ, ರಸಗೊಬ್ಬರ ಸರಕು ಸಾಗಾಣಿಕೆ ವೆಚ್ಚದ ಹೊಣೆಯನ್ನು ಉತ್ಪಾದಕ ಕಂಪನಿಗಳೇ ಹೊರಬೇಕು, ರಸಗೊಬ್ಬರ ಖರೀದಿಗೆ ರೈತರ ಗುರುತು ಸಂಖ್ಯೆ ಪಡೆಯಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿ ದೇಶದಾದ್ಯಂತ ಏಪ್ರಿಲ್ 27 ರಂದು ಕೃಷಿ ಪರಿಕರ ಮಾರಾಟಗಾರರು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರವನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಮಾರಾಟಗಾರ
ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ, ಕ್ರಿಮಿನಾಶಕ ಮುಂತಾದ ಕೃಷಿ ಪರಿಕರಗಳ ಕಾಳಸಂತೆ ಮಾರಾಟ, ಕಳಪೆ ಗುಣಮಟ್ಟ ಸರಕುಗಳ ಮಾರಾಟ, ನಮೂದಾಗಿರುವ ಗರಿಷ್ಠ ಚಿಲ್ಲರೆ ದರಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ, ತಮ್ಮ ಬೆಳೆಗೆ ಬೇಕಾದ ಕೃಷಿ ಪರಿಕರಗಳ ಜೊತೆಗೆ ಅಗತ್ಯ ಇಲ್ಲದ ಕೃಷಿ ಪರಿಕರಗಳ ಕಡ್ಡಾಯ ಖರೀದಿಗೆ ಒತ್ತಾಯ ಮುಂತಾದ ಶೋಷಣೆಗೆ, ರೈತರು ನಿರಂತರವಾಗಿ ಗುರಿಯಾಗುತ್ತಾ ಬಂದಿದ್ದಾರೆ.
ಇದನ್ನೂ ಓದಿ: 1997ರಿಂದಲೂ ತಿಮರೋಡಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ: ಹೈಕೋರ್ಟ್‌ಗೆ ಸರ್ಕಾರ
ಕೆಲವೇ ಕೆಲವು ಕೃಷಿ ವ್ಯಾಪಾರ ದೈತ್ಯ ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳು ಕೃಷಿ ಪರಿಕರಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಏಕಸ್ವಾಮ್ಯ ಸಾಧಿಸಿರುವುದು ನಿರಂತರವಾಗಿ ರೈತರ ಮೇಲೆ ನಡೆಯುತ್ತಿರುವ ಶೋಷಣೆಗೆ ಪ್ರಧಾನ ಕಾರಣವಾಗಿದೆ.ಇಂತಹ ಏಕಸ್ವಾಮ್ಯ ಹಿಡಿತವನ್ನು ರಾಷ್ಟ್ರವ್ಯಾಪಿ ಮುಷ್ಕರದ ಮೂಲಕ ಕೃಷಿ ಪರಿಕರಗಳ ಚಿಲ್ಲರೆ ಮಾರಾಟಗಾರರು ಪ್ರಶ್ನಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸುತ್ತದೆ.
ದೇಶದ ಆಹಾರ ಭದ್ರತೆಯಲ್ಲಿ ,ಭಾರತದ ಆಹಾರ ಉತ್ಪಾದನೆಯ ಸ್ವಾವಲಂಬನೆಯಲ್ಲಿ, ಸುಧಾರಿತ ಬಿತ್ತನೆ ಬೀಜ , ರಸಗೊಬ್ಬರ,ಕೀಟನಾಶಕಗಳ ಬಳಕೆ ಅತ್ಯಮೂಲ್ಯ ಕೊಡುಗೆ ನೀಡಿರುವುದನ್ನು ಉದಾಸೀನ ಮಾಡಲಾಗದು. ಆಮೇರಿಕನ್ ಸಾಮ್ರಾಜ್ಯಶಾಹಿಯ ಯುದ್ದಕೋರ ದುರಾಕ್ರಮಣದ ಕಾರಣದಿಂದಾಗಿ ರಸಗೊಬ್ಬರ ಉತ್ಪಾದನೆ ಮತ್ತು ಲಭ್ಯತೆ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗಿದ್ದು ,ದೇಶದ ಕೃಷಿ ಉತ್ಪಾದನೆಯು ತೀವ್ರ ಕಷ್ಟಕ್ಕೆ ಸಿಲುಕಲಿದೆ.
ಕೃಷಿ ಉತ್ಪಾದನೆಯಲ್ಲಿ ಆಗುವ ನಕಾರಾತ್ಮಕ ಬೆಳವಣಿಗೆ ಆಹಾರ ಭದ್ರತೆ ಮೇಲೆ ಮಾತ್ರವೇ ಅಲ್ಲದೇ ಕೈಗಾರಿಕಾ ಉತ್ಪಾದನೆ ಸೇರಿದಂತೆ ಒಟ್ಟಾರೆ ಆರ್ಥಿಕತೆಯನ್ನು ಗಂಭೀರವಾಗಿ ಬಾಧಿಸಲಿದೆ. ತಕ್ಷಣವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಪರಿಕರಗಳ ಬೆಲೆ ಮೇಲೆ ನಿಯಂತ್ರಣ ಸಾಧಿಸಿ, ಸಕಾಲಕ್ಕೆ ಹಾಗೂ ರೈತರ ಕೈಗೆಟುಕುವ ದರಕ್ಕೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.
ಇದನ್ನೂ ನೋಡಿ: ಕನಿಷ್ಠ ವೇತನಕ್ಕಾಗಿ ಕಾರ್ಮಿಕರ ಹೋರಾಟ – ಸರ್ಕಾರ ಮತ್ತು ಕೈಗಾರಿಕಾ ಮಾಲೀಕರಿಗೆ ಎಚ್ಚರಿಕೆಯ ಗಂಟೆ Janashakthi Media
