ಭಾರತದ ರಾಜಕೀಯದಲ್ಲಿ ಮಹತ್ವದ ಸ್ಥಾನ ಹೊಂದಿರುವ ಬಿಹಾರದಲ್ಲಿ ಒಂದು ಯುಗದ ಅಂತ್ಯವಾಗುತ್ತಿರುವ ಸೂಚನೆಗಳು ಸ್ಪಷ್ಟವಾಗುತ್ತಿವೆ. ಜೆಡಿ(ಯು) ಮುಖ್ಯಸ್ಥ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಅವರ ರಾಜಕೀಯ ಭವಿಷ್ಯ ಹಾಗೂ ಜೆಡಿಯು ಅಸ್ತಿತ್ವವೇನು ಎಂಬ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಇದೇ ವೇಳೆ, ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಕಟ್ಟಿಕೊಂಡು ನಂತರ ಅವುಗಳನ್ನು ದುರ್ಬಲಗೊಳಿಸುವ ಬಿಜೆಪಿಯ ತಂತ್ರ, ಜೆಡಿಯು ಮೇಲೂ ಪ್ರಯೋಗವಾಗಬಹುದೇ ಎಂಬ ಪ್ರಶ್ನೆಯೂ ಎದ್ದಿದೆ. ನಿತೀಶ್
– ಗುರುರಾಜ ದೇಸಾಯಿ
ಒಮ್ಮೆ ಭಾರತೀಯ ರಾಜಕೀಯದಲ್ಲಿ ಪ್ರಾದೇಶಿಕ ಪಕ್ಷಗಳು ಶಕ್ತಿಶಾಲಿ ಪರ್ಯಾಯವಾಗಿದ್ದವು. ರಾಜ್ಯಗಳ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪ್ರಶ್ನೆಗಳನ್ನು ರಾಷ್ಟ್ರೀಯ ಚರ್ಚೆಯ ಕೇಂದ್ರಕ್ಕೆ ತರುವಲ್ಲಿ ಅವು ನಿರ್ಣಾಯಕ ಪಾತ್ರವಹಿಸಿದ್ದವು. ಆದರೆ ಇತ್ತೀಚಿನ ಬೆಳವಣಿಗೆಗಳು ಈ ಶಕ್ತಿಯ ದಿಕ್ಕು ಬದಲಾಗುತ್ತಿರುವುದನ್ನು ತೋರಿಸುತ್ತಿವೆ. ನಿತೀಶ್ ಕುಮಾರ್ ಅವರ ರಾಜಕೀಯ ಪಥವೇ ಈ ಬದಲಾವಣೆಯ ಸಂಕೀರ್ಣತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಇದು ಕೇವಲ ವ್ಯಕ್ತಿಯ ಹಿನ್ನಡೆಯ ಕಥೆಯಲ್ಲ; ಒಂದು ರಾಜಕೀಯ ಮಾದರಿಯ ಆಂತರಿಕ ಕುಸಿತದ ಚಿತ್ರಣವಾಗಿದೆ.
ಬಿಹಾರದಲ್ಲಿ ಜೆಡಿಯು ಅನುಭವಿಸುತ್ತಿರುವ ಕುಸಿತವು, ಪ್ರಾದೇಶಿಕ ಪಕ್ಷಗಳು ಎದುರಿಸುತ್ತಿರುವ ದ್ವಂದ್ವ ಸಂಕಷ್ಟವನ್ನು ಬಿಂಬಿಸುತ್ತದೆ. ಒಂದೆಡೆ ಸಂಘಟನಾ ದುರ್ಬಲತೆ, ಮತ್ತೊಂದೆಡೆ ಬಲಿಷ್ಠ ರಾಷ್ಟ್ರೀಯ ಪಕ್ಷಗಳ ಒತ್ತಡ—ಈ ಎರಡೂ ಅಂಶಗಳು ಸೇರಿ ಪಕ್ಷಗಳ ಅಸ್ತಿತ್ವವನ್ನೇ ಪ್ರಶ್ನಾರ್ಥಕವಾಗಿಸುತ್ತಿವೆ. ದೀರ್ಘಕಾಲ ಮೈತ್ರಿ ರಾಜಕೀಯದ ಮೇಲೆ ನಿಂತಿದ್ದ ನಾಯಕತ್ವ, ಕಾಲಕ್ರಮೇಣ ತನ್ನದೇ ತಂತ್ರಗಳ ಮಿತಿಗಳನ್ನು ಎದುರಿಸುತ್ತಿದೆ.
ಇದನ್ನೂ ಓದಿ: ಬಿಹಾರದ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಪ್ರಮಾಣವಚನ ಸ್ವೀಕಾರ
ಮೈತ್ರಿ ರಾಜಕೀಯ ಭಾರತದಲ್ಲಿ ಅನಿವಾರ್ಯವಾದರೂ, ಅದು ಶಾಶ್ವತ ಪರಿಹಾರವಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ನಿತೀಶ್ ಕುಮಾರ್ ತಮ್ಮ ರಾಜಕೀಯ ಪಯಣದಲ್ಲಿ ಅನೇಕ ಮೈತ್ರಿಗಳನ್ನು ರೂಪಿಸಿ ಅಧಿಕಾರವನ್ನು ಉಳಿಸಿಕೊಂಡರು. ಆದರೆ ಇದೇ ಕ್ರಮವು ಅವರ ವಿಶ್ವಾಸಾರ್ಹತೆಯನ್ನು ಕುಗ್ಗಿಸಿತು. ಪದೇ ಪದೇ ಮೈತ್ರಿ ಬದಲಾವಣೆಗಳು ಮತದಾರರಲ್ಲಿ ಅನುಮಾನ ಹುಟ್ಟಿಸಿದವು; ನಾಯಕತ್ವದ ಸ್ಥಿರತೆಯ ಮೇಲೂ ಪ್ರಶ್ನೆಗಳು ಏಳುವಂತೆ ಮಾಡಿತು. ಪರಿಣಾಮವಾಗಿ, ಪಕ್ಷದ ಸ್ವತಂತ್ರ ಗುರುತು ನಿಧಾನವಾಗಿ ಮಸುಕಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ತನ್ನ ವಿಸ್ತರಣಾ ತಂತ್ರವನ್ನು ಪ್ರಾದೇಶಿಕ ಪಕ್ಷಗಳ ಮೂಲಕ ಸೂಕ್ಷ್ಮವಾಗಿ ಜಾರಿಗೊಳಿಸುತ್ತಿದೆ. ಆರಂಭದಲ್ಲಿ ಮೈತ್ರಿ ಸಹಭಾಗಿತ್ವದ ಮೂಲಕ ಪ್ರವೇಶಿಸಿ, ನಂತರ ಸಂಘಟನೆ, ಸಂಪನ್ಮೂಲಗಳು ಮತ್ತು ಪ್ರಚಾರ ಯಂತ್ರಣೆಯ ಮೂಲಕ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತದೆ. ಇದು ನೇರ ಸಂಘರ್ಷವಲ್ಲ; ನಿಧಾನವಾದ, ಸಂಯೋಜಿತ ವಿಸ್ತರಣೆ. ಇದರ ಪರಿಣಾಮವಾಗಿ ಪ್ರಾದೇಶಿಕ ಪಕ್ಷಗಳ ರಾಜಕೀಯ ಜಾಗ ಕ್ರಮೇಣ ಕುಗ್ಗುತ್ತಿದೆ.
ಒಮ್ಮೆ ಬಿಹಾರ ರಾಜಕೀಯದ ಕೇಂದ್ರಬಿಂದು ಆಗಿದ್ದ ನಿತೀಶ್ ಕುಮಾರ್, ಈಗ ಪ್ರತಿಕಾತ್ಮಕ ನಾಯಕತ್ವದತ್ತ ಸರಿಯುತ್ತಿರುವಂತೆ ಕಾಣಿಸುತ್ತಿದ್ದಾರೆ. ನಾಯಕತ್ವವು ವ್ಯಕ್ತಿಗತ ಕರಿಷ್ಮೆಯ ಮೇಲೆ ಮಾತ್ರ ನಿಲ್ಲುವುದಿಲ್ಲ; ಅದರ ಹಿಂದೆ ಬಲಿಷ್ಠ ಸಂಘಟನೆ ಅಗತ್ಯ. ಸಂಘಟನೆ ದುರ್ಬಲವಾದಾಗ ನಾಯಕತ್ವವೂ ತನ್ನ ಪ್ರಭಾವ ಕಳೆದುಕೊಳ್ಳುತ್ತದೆ ಎಂಬುದಕ್ಕೆ ಇಂದಿನ ಪರಿಸ್ಥಿತಿ ಉದಾಹರಣೆ.
ಪ್ರಾದೇಶಿಕ ಪಕ್ಷಗಳ ಮೇಲಿನ ಒತ್ತಡ ಕೇವಲ ಆಂತರಿಕವಾಗಿಲ್ಲ; ಅದು ಹೊರಗಿನ ರಾಜಕೀಯ ಪ್ರಕ್ರಿಯೆಗಳೊಂದಿಗೆ ಆಳವಾಗಿ ಸಂಬಂಧಿಸಿದೆ. ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿ ವಿಭಜನೆ, ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಒಳಗಿನ ಸಂಘರ್ಷಗಳು, ಕರ್ನಾಟಕದಲ್ಲಿ ಜಿಡಿಎಸ್ ಪಕ್ಷವನ್ನು ತನ್ನ ಪ್ರಭಾವ ವಲಯಕ್ಕೆ ಸೆಳೆಯುವ ಪ್ರಯತ್ನಗಳು—ಇವೆಲ್ಲವೂ ಈ ಪ್ರಕ್ರಿಯೆಯ ಸ್ಪಷ್ಟ ಉದಾಹರಣೆಗಳಾಗಿವೆ. ವಿಶೇಷವಾಗಿ, ಹಿಂದುಳಿದ ವರ್ಗದ ಮತಾಧಾರವನ್ನು (ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯ) ತನ್ನತ್ತ ಸೆಳೆಯುವ ರಾಜಕೀಯ ಲೆಕ್ಕಾಚಾರವೂ ಇಲ್ಲಿ ಗಮನಾರ್ಹವಾಗಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ತಮ್ಮ ಪ್ರಾಬಲ್ಯ ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿ ಅದರ ಅಂಗಳಕ್ಕೆ ಸೇರುವ ಪ್ರಾದೇಶಿಕ ಪಕ್ಷಗಳನ್ನು ಹೇಗೆ ತನ್ನ ರಾಜಕೀಯ ತಂತ್ರದೊಳಗೆ ಒಳಗೊಳ್ಳಿಸಬೇಕು ಎಂಬುದು ಬಿಜೆಪಿಗೆ ರಗತವಾಗಿದೆ.
ಇದರ ಜೊತೆಗೆ, ಇಡಿ (Enforcement Directorate) ಮತ್ತು ಐಟಿ (Income Tax Department) ಮುಂತಾದ ಸಂಸ್ಥೆಗಳ ಕ್ರಮಗಳು, ರಾಜಕೀಯ ಒತ್ತಡದ ಸಾಧನಗಳಾಗಿವೆ ಎಂಬ ಆರೋಪವೂ ಕೇಳಿಬರುತ್ತಿದೆ. ಕೇಂದ್ರ ಸಚಿವ ಸ್ಥಾನಗಳ ಆಕರ್ಷಣೆ, ಮೈತ್ರಿ ರಾಜಕೀಯದ ಆಮಿಷಗಳ ಮೂಲಕ ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳನ್ನು ತನ್ನ ಅಂಗಳಕ್ಕೆ ಸೆಳೆಯುವುದು, ನಂತರ ಅವುಗಳನ್ನು ದುರ್ಬಲಗೊಳಿಸುವುದು ಬಿಜೆಪಿಯ ಹುಟ್ಟು ಗುಣ
ಚುನಾವಣಾ ರಾಜಕೀಯದಲ್ಲಿಯೂ ಗಣಿತ ಬದಲಾಗಿದೆ. ಗೆಲುವು ಎಂದರೆ ಕೇವಲ ಹೆಚ್ಚು ಮತಗಳನ್ನು ಪಡೆಯುವುದಲ್ಲ; ವಿರೋಧ ಪಕ್ಷಗಳ ಮತಗಳನ್ನು ವಿಭಜಿಸುವುದೂ ಸಮಾನವಾಗಿ ಮಹತ್ವದ್ದಾಗಿದೆ. ಈ ತಂತ್ರದಲ್ಲಿ ಪ್ರಾದೇಶಿಕ ಪಕ್ಷಗಳ ಮತಾಧಾರವನ್ನು ತುಂಡರಿಸುವುದು ಪ್ರಮುಖ ಅಂಶವಾಗಿದೆ. ಇದರ ಪರಿಣಾಮವಾಗಿ ಒಗ್ಗೂಡಿದ ವಿರೋಧ ರಾಜಕೀಯ ದುರ್ಬಲಗೊಳ್ಳುತ್ತಿದೆ. 2025ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಇದಕ್ಕೆ ಉದಾಹರಣೆಯಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಸಮಗ್ರ ಪರಿಣಾಮವಾಗಿ, ಭಾರತೀಯ ಪ್ರಜಾಪ್ರಭುತ್ವದ ಸ್ವರೂಪವೇ ಬದಲಾಗುತ್ತಿರುವ ಸೂಚನೆಗಳು ಗೋಚರಿಸುತ್ತಿವೆ. ಪ್ರಾದೇಶಿಕ ಪಕ್ಷಗಳ ದುರ್ಬಲತೆ ಸ್ಥಳೀಯ ಧ್ವನಿಗಳನ್ನು ಕುಗ್ಗಿಸುವ ಅಪಾಯವನ್ನು ಉಂಟುಮಾಡುತ್ತದೆ. ಕೇಂದ್ರಿಕೃತ ರಾಜಕೀಯ ಬಲವಾಗುವಂತೆ, ವೈವಿಧ್ಯಮಯ ಅಭಿಪ್ರಾಯಗಳು ಕಡಿಮೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಇದು ಬಹುಸ್ವರದ ವ್ಯವಸ್ಥೆಯನ್ನು ಏಕಸ್ವರದತ್ತ ಕೊಂಡೊಯ್ಯುವ ಅಪಾಯವನ್ನು ಸೂಚಿಸುತ್ತದೆ.
ಒಟ್ಟಿನಲ್ಲಿ, ನಿತೀಶ್ ಯುಗಾಂತ್ಯವನ್ನು ಕೇವಲ ಒಂದು ರಾಜ್ಯದ ರಾಜಕೀಯ ಘಟನೆಯಂತೆ ನೋಡಲು ಸಾಧ್ಯವಿಲ್ಲ. ಇದು ಭಾರತೀಯ ರಾಜಕೀಯ ವ್ಯವಸ್ಥೆಯ ಆಳದಲ್ಲಿರುವ ಬದಲಾವಣೆಗಳ ಪ್ರತಿಬಿಂಬವಾಗಿದೆ. ಜೆಡಿಯು ಮುಂದೆ ಪುನರ್‌ನಿರ್ಮಾಣದ ಸವಾಲಿನ ಹಂತದಲ್ಲಿದೆ. ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ, ಅನೇಕ ನಾಯಕರು ಆರ್‌ಜೆಡಿಯತ್ತ ಮುಖ ಮಾಡುವ ಸಾಧ್ಯತೆಯೂ ಇದೆ.
ಬಿಹಾರದ ಈ ಬೆಳವಣಿಗೆಗಳನ್ನು ಗಮನಿಸಿದರೆ, ಬಲಿಷ್ಠ ಸಂಘಟನೆ, ಸ್ಪಷ್ಟ ರಾಜಕೀಯ ನಿಲುವು ಮತ್ತು ವಿಶ್ವಾಸಾರ್ಹ ನಾಯಕತ್ವ ಇಲ್ಲದೆ ಪ್ರಾದೇಶಿಕ ಪಕ್ಷಗಳ ಭವಿಷ್ಯ ಗಂಭೀರ ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಲ್ಲವಾದರೆ, ಜೆಡಿಯು ಅನ್ನು ಬಿಜೆಪಿ ಸುಲಭವಾಗಿ ಅಳಿಸಿಹಾಕುವ ಸಾಧ್ಯತೆ ತಳ್ಳಿ ಹಾಕಲು ಸಾಧ್ಯವಿಲ್ಲ.
ಇದನ್ನೂ ನೋಡಿ:ನಿತೀಶ್ ಕುಮಾರ್ ಎಂಬ ನಾನು…!? ಜೆಡಿಯುಗೆ ಇದು ಕೊನೆಯ ಮೊಳೆಯೇ? Janashakthi Media
