“ಇರಾನ್ ಮೇಲಿನ ಯುಎಸ್ -ಇಸ್ರೇಲ್ ಆಕ್ರಮಣವನ್ನು ಖಂಡಿಸಿ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು”
ಯುಎಸ್ ಮತ್ತು ಇಸ್ರೇಲ್ ಪ್ರಾರಂಭಿಸಿದ ಯುದ್ಧವು ನಮ್ಮ ದೇಶದ ಜನರ ಜೀವನ ಕುಗ್ಗಿ ಹೋಗುವಂತಹ ಪರಿಣಾಮವನ್ನು ಬೀರುತ್ತಿದೆ. ಇದು ನಮ್ಮ ಸಮಾಜದ ಬಡ ವಿಭಾಗಗಳನ್ನು ಹಸಿವಿನತ್ತ ತಳ್ಳುತ್ತಿದೆ, ಮಧ್ಯಮ ವರ್ಗದವರು ಬೆಲೆ ಏರಿಕೆಯ ಹೆಚ್ಚುವರಿ ಹೊರೆಯಿಂದ ಬಳಲುತ್ತಿದ್ದಾರೆ. ಸರಕಾರ ಯುಎಸ್-ಇಸ್ರೇಲ್ ಯುದ್ಧ ಮತ್ತು ಅದರ ಪರಿಣಾಮವಾಗಿ ಪೂರೈಕೆ ಸರಪಳಿಗಳಲ್ಲಿ ಸಂಭವಿಸುವ ಅಡ್ಡಿ-ಆತಂಕಗಳಿಂದ ಉಂಟಾದ ಬಾಹ್ಯ ಆಘಾತಗಳು ಮತ್ತು ಅಸ್ಥಿರತೆಗಳಿಂದ ದೇಶದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಅನಿಲ ಮೀಸಲುಗಳನ್ನು ಖಚಿತಗೊಳಿಸುವಲ್ಲಿ ವಿಫಲವಾದಂತೆ ಕಾಣುತ್ತದೆ, ಪ್ರಧಾನ ಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ ಇಂಧನ ಸಂಪನ್ಮೂಲಗಳ ಅಬಾಧಿತ ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿಯವರು ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಅವರು ತಮ್ಮ ಪತ್ರದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿನ ಪೂರೈಕೆ ಕುರಿತಂತೆ ಐದು ಆಗ್ರಹಗಳನ್ನು ಮುಂದಿಟ್ಟಿದ್ದಾರೆ.
ಅಲ್ಲದೆ ಸರಕಾರ ಇತ್ತೀಚಿನ ವಿದೇಶಾಂಗ ನೀತಿ ನಿಲುವುಗಳನ್ನು ಮರುಪರಿಶೀಲಿಸಬೇಕು ಮತ್ತು ಇರಾನ್ ಮೇಲಿನ ಯುಎಸ್-ಇಸ್ರೇಲ್ ಯುದ್ಧವನ್ನು ದೃಢವಾಗಿ ಖಂಡಿಸಬೇಕು, ತಕ್ಷಣವೇ ಯುಎಸ್ ಮತ್ತು ಇಸ್ರೇಲಿಗೆ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಬೇಕು ಎಂದೂ ಬೇಬಿಯವರು ಆಗ್ರಹಿಸಿದ್ದಾರೆ. 2003 ರಲ್ಲಿ ಇರಾಕ್ ಮೇಲೆ ಯುಎಸ್ ದಾಳಿ ಮಾಡಿದಾಗ, ಭಾರತದ ಸಂಸತ್ತು ಒಂದು ಸಾರ್ವಭೌಮ ರಾಷ್ಟ್ರದ ಮೇಲಿನ ದಾಳಿಯನ್ನು ಖಂಡಿಸುವ ಒಂದು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು, ಆ ಸಮಯದಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿದ್ದರು ಎಂಬುದನ್ನು ನೆನಪಿಸುತ್ತ, ಪ್ರಸ್ತುತ ಅಧಿವೇಶನದಲ್ಲಿರುವ ಸಂಸತ್ತಿನಲ್ಲಿ ಇರಾನ್ ಮೇಲಿನ ಯುಎಸ್ -ಇಸ್ರೇಲ್ ಆಕ್ರಮಣವನ್ನು ಖಂಡಿಸಿ ಇದೇ ರೀತಿಯ ನಿರ್ಣಯವನ್ನು ಮಂಡಿಸಬೇಕು ಎಂದೂ ಸಿಪಿಐ(ಎಂ) ಪ್ರಧಾನ ಮಂತ್ರಿಗಳು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ : ಜೀವನೋಪಾಯದ ಮೇಲೆ ದಾಳಿ ಖಂಡಿಸಿ ಫ್ರೀಡಂ ಪಾರ್ಕ್ನಲ್ಲಿ ಮಹಿಳಾ ದಿನದ ಪ್ರತಿಭಟನೆ Janashakthi Media
ಎಂ ಎ ಬೇಬಿಯವರ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:
ಆತ್ಮೀಯ ಶ್ರೀ ಮೋದಿ ಜಿ,
ಅಡುಗೆ ಅನಿಲದ ಕೊರತೆಯಿಂದಾಗಿ ಜನಸಂಖ್ಯೆಯ ಬಹುದೊಡ್ಡ ಭಾಗಕ್ಕೆ ತಟ್ಟಿರುವ ಗಂಭೀರ ಬಿಕ್ಕಟ್ಟನ್ನು ತಮ್ಮ ಗಮನಕ್ಕೆ ತರಲು ನಾನು ಈ ಪತ್ರವನ್ನು ತೀವ್ರ ವ್ಯಥೆಯಿಂದ ಬರೆಯುತ್ತಿದ್ದೇನೆ. ಸರಕಾರ ಇರಾನ್ ವಿರುದ್ಧ ಯುಎಸ್-ಇಸ್ರೇಲ್ ಯುದ್ಧ ಮತ್ತು ಅದರ ಪರಿಣಾಮವಾಗಿ ಪೂರೈಕೆ ಸರಪಳಿಗಳಲ್ಲಿ ಸಂಭವಿಸುವ ಅಡಚಣೆಗಳಿಂದ ಉಂಟಾದ ಬಾಹ್ಯ ಆಘಾತಗಳು ಮತ್ತು ಅಸ್ಥಿರತೆಗಳಿಂದ ದೇಶದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಅನಿಲ ಮೀಸಲುಗಳನ್ನು ಖಚಿತಗೊಳಿಸುವಲ್ಲಿ ವಿಫಲವಾದಂತೆ ಕಾಣುತ್ತದೆ,
ಇರಾನ್ ಮೇಲಿನ ಯುಎಸ್-ಇಸ್ರೇಲ್ ಆಕ್ರಮಣವು ಇಂಧನ ಪೂರೈಕೆ ಸರಪಳಿಗಳನ್ನು ಅಸ್ಥಿರಗೊಳಿಸಿದೆ ಮತ್ತು ಸರ್ಕಾರದ ಹೇಳಿಕೆಗಳ ಹೊರತಾಗಿಯೂ, ಜನರು ತೀವ್ರವಾಗಿ ಬಳಲುತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಸರ್ಕಾರವು ಸಬ್ಸಿಡಿಯಿರುವ ಮತ್ತು ಸಬ್ಸಿಡಿಯಿಲ್ಲದ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಗಳನ್ನು ಹೆಚ್ಚಿಸಿದೆ.ಇದು ಹಣದುಬ್ಬರದಿಂದ ಬಳಲುತ್ತಿರುವ ಜನರ ಮೇಲೆ ಈಗಾಗಲೇ ಇರುವ ಭಾರವಾದ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅದರ ಮೇಲೆ, ಜನರು ಅಡುಗೆ ಅನಿಲದ ತೀವ್ರ ಕೊರತೆಯನ್ನು ಕೂಡ ಎದುರಿಸುತ್ತಿದ್ದಾರೆ. ಜನರು ಮರುಪೂರಣಕ್ಕಾಗಿ ನೋಂದಾಯಿಸಿಕೊಳ್ಳಲು ಮತ್ತು ದೀರ್ಘ ಸರತಿ ಸಾಲಿನಲ್ಲಿ ಕಾಯುವ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅತ್ತ ಕಾಳಸಂತೆ ಮಾರಾಟಗಾರರಿಗೆ ಹಬ್ಬದಂತಾಗಿದೆ. ಗೃಹ ಬಳಕೆಗಾಗಿರುವ ಅನಿಲ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ 1,500 ರಿಂದ 4,000 ರೂ.ಗಳವರೆಗಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ತಕ್ಷಣವೇ ಕಾಳಸಂತೆ ಮಾರಾಟವನ್ನು ತಡೆಯಲು ಮತ್ತು ನಿಜವಾಗಿಯೂ ಅಗತ್ಯವಿರುವ ಎಲ್ಲಾ ವ್ಯಕ್ತಿಗಳಿಗೆ ಅನಿಲ ಸಿಲಿಂಡರ್ಗಳ ಲಭ್ಯತೆಯನ್ನು ಖಚಿತಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಅಡುಗೆ ಅನಿಲದ ಕೊರತೆಯಿಂದಾಗಿ, ಅನೇಕ ವಿದ್ಯಾರ್ಥಿ ಹಾಸ್ಟೆಲ್ಗಳು ತಮ್ಮ ಆಹಾರ ತಿಂಡಿಗಳಲ್ಲಿ ಕಡಿತ ಉಂಟುಮಾಡಿವೆ. ವಿದ್ಯಾರ್ಥಿಗಳಿಗೆ ಸರಿಯಾದ ಊಟದ ಬದಲಿಗೆ ಬೇಳೆ ಅಥವಾ ಪಲ್ಯ ನೀಡಲಾಗುತ್ತಿದೆ. ಕೆಲವು ಸ್ಥಳಗಳಲ್ಲಿ, ಹಾಸ್ಟೆಲ್ಗಳನ್ನು ಮುಚ್ಚಲಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಮರಳಲು ಹೇಳಲಾಗಿದೆ. ಈ ಬೆಳವಣಿಗೆಗಳು ವಿದ್ಯಾರ್ಥಿಗಳ, ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಸರ್ಕಾರ ತಕ್ಷಣವೇ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗದಂತೆ ವಿದ್ಯಾರ್ಥಿ ನಿಲಯಗಳಿಗೆ ಅನಿಲ ಸಿಲಿಂಡರ್ಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಅಡುಗೆ ಅನಿಲದ ಕೊರತೆಯು ಅನೇಕ ರೆಸ್ಟೋರೆಂಟ್ಗಳು ಮತ್ತು ಕಚೇರಿ ಕ್ಯಾಂಟೀನ್ಗಳ ಮೇಲೂ ಪರಿಣಾಮ ಬೀರಿದೆ. ಬೇಯಿಸಿದ ಆಹಾರವನ್ನು ತಲುಪಿಸುವುದನ್ನು ಅವಲಂಬಿಸಿರುವ ಗಿಗ್ ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಡಕ್ಷನ್ ಸ್ಟೌವ್ಗಳು ಮತ್ತು ಎಲೆಕ್ಟ್ರಿಕ್ ಕುಕ್ಕರ್ಗಳಂತಹ ಪರ್ಯಾಯ ಅಡುಗೆ ಸಾಧನಗಳ ಬೆಲೆಗಳು ತೀವ್ರವಾಗಿ ಏರಿವೆ.ಉರುವಲಿನ ಖರ್ಚೂ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ. ಖಾದ್ಯ ತೈಲದ ಬೆಲೆಗಳು ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಈ ಬೆಳವಣಿಗೆಗಳು ನಮ್ಮ ಸಮಾಜದ ಬಡ ವಿಭಾಗಗಳನ್ನು ಹಸಿವಿನತ್ತ ತಳ್ಳುತ್ತಿವೆ, ಮಧ್ಯಮ ವರ್ಗದವರು ಬೆಲೆ ಏರಿಕೆಯ ಹೆಚ್ಚುವರಿ ಹೊರೆಯಿಂದ ಬಳಲುತ್ತಿದ್ದಾರೆ. ಒಟ್ಟಾರೆಯಾಗಿ, ಯುಎಸ್ ಮತ್ತು ಇಸ್ರೇಲ್ ಪ್ರಾರಂಭಿಸಿದ ಯುದ್ಧವು ನಮ್ಮ ದೇಶದ ಜನರ ಜೀವನ ಕುಗ್ಗಿ ಹೋಗುವಂತಹ ಪರಿಣಾಮವನ್ನು ಬೀರುತ್ತಿದೆ. ಅನಿಲ ಆಧಾರಿತ ಸ್ಮಶಾನಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿರುವ ಸ್ಥಳಗಳಲ್ಲಿ ದಹನ ಕೂಡ ಕಷ್ಟಕರವಾಗಿದೆ.
ಈ ಸಂದರ್ಭದಲ್ಲಿ, ನೀವು ತಕ್ಷಣ ಮಧ್ಯಪ್ರವೇಶಿಸಿ ಈ ಕೆಳಗಿನವುಗಳನ್ನು ಖಚಿತಪಡಿಸಬೇಕೆಂದು ನಾನು ಆಗ್ರಹಿಸುತ್ತೇನೆ:
- ಅನಿಲ ಸಿಲಿಂಡರ್ಗಳ ಕಳ್ಳದಾಸ್ತಾನು ಮತ್ತು ಉಬ್ಬರಿಸಿದ ಬೆಲೆಗಳಲ್ಲಿ ಮಾರಾಟ ಮಾಡುವ ಕಾಳಸಂತೆಕೋರರ ವಿರುದ್ಧ ಕಟ್ಟುನಿಟ್ಟಾದ ಕ್ರಮ;
- ವಿದ್ಯಾರ್ಥಿ ನಿಲಯಗಳಿಗೆ ಅನಿಲ ಸಿಲಿಂಡರ್ಗಳ ನಿರಂತರ ಪೂರೈಕೆ, ಈ ಮೂಲಕ ಪೌಷ್ಟಿಕ ಮತ್ತು ಸಮತೋಲಿತ ಊಟಗಳನ್ನು, ಸಾಕಷ್ಟು ಪ್ರಮಾಣದಲ್ಲಿ ಬೇಳೆ ಮತ್ತು ಪಲ್ಯಗಳನ್ನೂ ,ಜೊತೆಗೆ ಇತರ ನಿಯಮಿತ ಆಹಾರವಸ್ತುಗಳನ್ನು ತಯಾರಿಸಿ ಬಡಿಸುವಂತಾಗಬೇಕು.
- ಖಾದ್ಯ ತೈಲಗಳ ಬೆಲೆಗಳ ಹತೋಟಿ ಮತ್ತು ನಿಯಂತ್ರಣ.
- ಆಹಾರ ವಿತರಣೆಯನ್ನು ಅವಲಂಬಿಸಿರುವ ಗಿಗ್ ವಲಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಸೂಕ್ತ ಪರಿಹಾರ; ಮತ್ತು
- ಸಣ್ಣ ರೆಸ್ಟೋರೆಂಟ್ ಮಾಲೀಕರ ಹಿತಾಸಕ್ತಿಗಳ ರಕ್ಷಣೆ.
ಸರ್ಕಾರದ ಇತ್ತೀಚಿನ ವಿದೇಶಾಂಗ ನೀತಿ ನಿಲುವುಗಳನ್ನು ಮರುಪರಿಶೀಲಿಸುವಂತೆ ಮತ್ತು ಇರಾನ್ ಮೇಲಿನ ಯುಎಸ್-ಇಸ್ರೇಲ್ ಯುದ್ಧವನ್ನು ದೃಢವಾಗಿ ಖಂಡಿಸುವಂತೆ ನಾನು ತಮ್ಮನ್ನು ಆಗ್ರಹಿಸುತ್ತೇನೆ. 2003 ರಲ್ಲಿ ಇರಾಕ್ ಮೇಲೆ ಯುಎಸ್ ದಾಳಿ ಮಾಡಿದಾಗ, ಭಾರತದ ಸಂಸತ್ತು ಒಂದು ಸಾರ್ವಭೌಮ ರಾಷ್ಟ್ರದ ಮೇಲಿನ ದಾಳಿಯನ್ನು ಖಂಡಿಸುವ ಒಂದು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು ಎಂದು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ಆ ಸಮಯದಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿದ್ದವರು ಶ್ರೀ. ಅಟಲ್ ಬಿಹಾರಿ ವಾಜಪೇಯಿ, ಅವರು ಆಗಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಮುನ್ನಡೆಸುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ. ಪ್ರಸ್ತುತ ಅಧಿವೇಶನದಲ್ಲಿರುವ ಸಂಸತ್ತಿನಲ್ಲಿ ಇರಾನ್ ಮೇಲಿನ ಯುಎಸ್ -ಇಸ್ರೇಲ್ ಆಕ್ರಮಣವನ್ನು ಖಂಡಿಸಿ ಇದೇ ರೀತಿಯ ನಿರ್ಣಯವನ್ನು ಮಂಡಿಸಬೇಕು ನಾವು ನಿಮ್ಮನ್ನು ಆಗ್ರಹಿಸುತ್ತೇವೆ.
ಸರಕಾರ ತಕ್ಷಣವೇ ಯುಎಸ್ ಮತ್ತು ಇಸ್ರೇಲಿಗೆ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಬೇಕು ಮತ್ತು ಇಂಧನ ಸಂಪನ್ಮೂಲಗಳ ಅಬಾಧಿತ ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು
ತಮ್ಮ ತಕ್ಷಣದ ಮಧ್ಯಪ್ರವೇಶ ಮತ್ತು ಕ್ರಮವನ್ನುನಿರೀಕ್ಷಿಸುತ್ತೇನೆ.
ಎಂ.ಎ.ಬೇಬಿ
ಪ್ರಧಾನ ಕಾರ್ಯದರ್ಶಿ
ಇದನ್ನೂ ಓದಿ : ಕೊರಗ ಕುಟುಂಬಗಳಿಗೆ ಕುಡಿಯುವ ನೀರಿಲ್ಲ: ಚೇಳ್ಯಾರು ಪಂಚಾಯತ್ ಅಮಾನವೀಯ ವರ್ತನೆ ಆರೋಪ
