ಜನಪರತೆಯ ಮುಖವಾಡ ಧರಿಸಿ-ಬಂಡವಾಳಗಾರರಿಗೆ ಮಣೆ ಹಾಕುವ ಬಜೆಟ್-1.34 ಲಕ್ಷ ಕೋಟಿ ಸಾಲದ ಹೊರೆ-ಹೊರಿಸಿದ ಬಜೆಟ್-ಸಿ.ಪಿ.ಐ(ಎಂ) ಟೀಕೆ

ಬೆಂಗಳೂರು:ಜನಪರತೆಯ ಮುಖವಾಡ ಧರಿಸಿ-ಬಂಡವಾಳಗಾರರಿಗೆ ಮಣೆ ಹಾಕಿರುವ ಮತ್ತು 1.34 ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದ ಬಜೆಟ್ ಎಂದು ಸಿಪಿಐ(ಎಂ) ಟೀಕಿಸಿದೆ.

ಈ ಕುರಿತು ರಾಜ್ಯ ಕಾರ್ಯದರ್ಶಿ ಡಾ.ಕೆ ಪ್ರಕಾಶ್ ಪ್ರಕಟಣೆ ನೀಡಿದ್ದು, ಪ್ರಗತಿಶೀಲ ರಾಜ್ಯದ ಸರ್ವರ ಏಳಿಗೆಯನ್ನು ಬಯಸುವ ಬಜೆಟ್ ಎಂದು ಮಂಡನೆಯಾದ ರಾಜ್ಯದ ಬಜೆಟ್, ಬಹುತೇಕ ಖಾಸಗೀ, ಕಾರ್ಪೊರೇಟ್ ಬಂಡವಾಳಿಗರಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಡುವ ಬಜೆಟ್ ಎಂದು ತಿಳಿಸಿದ್ದಾರೆ.

4.48 ಲಕ್ಷ ಕೋಟಿಯ ಬಜೆಟ್ ಮಂಡನೆಯಾಗಿದ್ದು 1.34 ಲಕ್ಷ ಕೋಟಿ ಸಾಲದ ಹೊರೆ ಮತ್ತೆ ಹೊರಿಸುವ ಬಜೆಟ್ ಇದಾಗಿದೆ. 2024-25 ರಲ್ಲಿ 5 ಲಕ್ಷ ಕೋಟಿ ರೂ.ಗಳ ಮಟ್ಟದಲ್ಲಿದ್ದ ಸಾಲದ ಹೊರೆ ಈಗ ಅಂದಾಜು ಸುಮಾರು 8 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ. ಸರಕಾರದ ವೆಚ್ಚವನ್ನು ಸರಿತೂಗಿಸಲು ಸಾಲವೇ ಪ್ರಮುಖ ಆಧಾರವಾಗಿದೆ ಎಂಬುದನ್ನು ಇದು ಸೂಚಿಸುತ್ತಿದೆ.

ರಾಜ್ಯದ ಅಭಿವೃದ್ದಿಗೆ ಮೂಲ ಕೊಡುಗೆ ನೀಡುವ ಕೈಗಾರಿಕಾ ಬೆಳವಣಿಗೆಗಳ ಕುರಿತು ಹೊಸ ದೃಷ್ಟಿಕೋನವೇ ಈ ಬಜೆಟ್ ನಲ್ಲಿ ಇಲ್ಲವಾಗಿದೆ. ಗೌರವಾನ್ವಿತ ಆದಾಯ ಬರುವ ಹೊಸ ಉದ್ಯೋಗ ಸೃಷ್ಟಿಯ ಸೂಚನೆಗಳಿಲ್ಲ, ಜನರ ಆದಾಯ ಹೆಚ್ಚಿಸದೇ ಆರ್ಥಿಕತೆ ಉತ್ತಮಗೊಳ್ಳಲು ಸಾಧ್ಯವಿಲ್ಲ. ಕೇಂದ್ರದ ಬಿ.ಜೆ.ಪಿ. ಸರಕಾರ ಜಾರಿಗೆ ತಂದಿರುವ ಕರಾಳ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸುವ ಯಾವ ಸೂಚನೆಯನ್ನೂ ರಾಜ್ಯ ಸರಕಾರ ಕೊಟ್ಟಿಲ್ಲ.

ಕೈಗಾರಿಕಾ ಅಭಿವೃದ್ದಿಗೆಂದು ಕರಾಳ ಕೆ.ಐ.ಡಿ.ಬಿ ಕಾಯ್ದೆಯ ಮೂಲಕ ಮನಬಂದಂತೆ ರಾಜ್ಯದಲ್ಲಿ ನಡೆದಿರುವ, ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗಳು, ಅದರಿಂದ ವಂಚನೆಗೊಳಗಾದ ಪ್ರಕರಣಗಳಿಗೆ ಪರಿಹಾರದ ಪ್ರಸ್ತಾಪವಿಲ್ಲ, ಬಗರ್ ಹುಕುಂ ಸಾಗುವಳಿ, ಅರಣ್ಯ ಭೂಮಿ ಒಳಗೊಂಡು ಹಲವಾರು ಸಾಗುವಳಿದಾರರ ಜಮೀನು ಸಕ್ರಮಗೊಳಿಸುವ ಪ್ರಸ್ತಾಪವೂ ಇಲ್ಲ ಎಂದಿದ್ದಾರೆ.

ಮನ್ ರೇಗಾ ಉಳಿಸುವ ಪ್ರಯತ್ನ ಬಜೆಟ್ ನಲ್ಲಿ ಕಾಣುತ್ತಿಲ್ಲ:
2025-26 ರ ಸಾಲಿನಲ್ಲಿ ಮನ್ ರೇಗಾ ದ ಅಡಿಯಲ್ಲಿ ಕೇಂದ್ರದ ಪಾಲು 90% ರಾಜ್ಯದ ಪಾಲು 10% ಇದ್ದಾಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 26,735 ಕೋಟಿ ಹಂಚಿಕೆಯಾಗಿತ್ತು. ಈಗ ಆ ಕಾಯ್ದೆಯನ್ನೇ ರದ್ದು ಮಾಡಿ ರಾಜ್ಯದ ಪಾಲು 40%, ಕೇಂದ್ರದ ಪಾಲು 60% ಎಂದು ಮಾಡಿರುವ ಹೊತ್ತಿನಲ್ಲಿ ಕಳೆದ ಅವಧಿಗಿಂತ ಕಡಿಮೆ ಎಂದರೆ 26,559 ಕೋಟಿ ಮೀಸಲಿಟ್ಟು 176 ಕೋಟಿಯಷ್ಟು ಕಡಿತ ಮಾಡಲಾಗಿದೆ. ಸರ್ವೋದಯದ ಕನಸು ಇಲ್ಲೇ ಹುಡಿಯಾಗಿದೆ. ಕೃಷಿ ಬಿಕ್ಕಟ್ಟಿನಿಂದ ರೈತರು ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ರಾಜ್ಯದ ಬಜೆಟ್ ಮೂಲಕ ಅವರಿಗೆ ಬದುಕಿನ ಭರವಸೆ ನೀಡಲು ಸರಕಾರ ವಿಫಲವಾಗಿದೆ.

ಕೃಷಿ ಉತ್ಪಾದಕತೆ ಮತ್ತು ಕೃಷಿ ಭೂಮಿ ರಕ್ಷಣೆಗೆ ಯಾವುದೇ ಬೆಂಬಲ ನೀಡದೇ ರಿಯಲ್ ಎಸ್ಟೇಟ್ ಹಾಗೂ ಕಾರ್ಪೊರೇಟ್ ಭೂ ಕಬಳಿಕೆಗೆ ಉತ್ತೇಜಿಸುವಂತೆ ವ್ಯವಸ್ಥೆಯನ್ನು ರೂಪಿಸುವ ಕ್ರಮಗಳು ಬಜೆಟ್‌ನಲ್ಲಿವೆ.
ಆರೋಗ್ಯ ವಲಯದಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಮತ್ತು ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪಗಳು ಸ್ವಾಗತಾರ್ಹ. ಆದರೆ ಅವುಗಳ ಸಮರ್ಪಕ ಜಾರಿಯಲ್ಲಿ ಕೊರತೆಗಳಿವೆ ಎಂಬುದು ಈ ಹಿಂದಿನ ಅವಧಿಗಳ ನಮ್ಮ ಅನುಭವ. ಇವುಗಳನ್ನು ಖಾಸಗೀ ಸಹಭಾಗಿತ್ವದ ಹೆಸರಿನಲ್ಲಿ ಖಾಸಗೀ ಬಂಡವಾಳಿಗರಿಗೆ ತೆರೆದಿಡುವ ಸೂಚನೆಗಳು ಅತ್ಯಂತ ಅಪಾಯಕಾರಿಯಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕೆಲವು ವಿಸ್ತರಣಾ ಯೋಜನೆಗಳ ಪ್ರಸ್ತಾಪವಿದೆ. ಆದರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಸುತ್ತಮುತ್ತಲಿನ ಸರಕಾರೀ ಶಾಲೆಗಳನ್ನು ಮುಚ್ಚುವ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಅವು ಗ್ರಾಮೀಣ ಭಾಗದ ಮಕ್ಕಳ ಕಲಿಕೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡಲಿದೆ. ಖಾಸಗೀ ಶಾಲೆಗಳನ್ನು ತೆರೆಯಲು ಅನುಮತಿಯನ್ನು ಆನ್ಲೆöÊನ್ ಮೂಲಕ ಸರಳೀಕರಿಸುವ ಪ್ರಸ್ತಾಪ ಸರಕಾರೀ ಶಾಲೆಗಳ ಕೊರಳಿಗೆ ಬಿಗಿಯುವ ಉರುಳೇ ಆಗಿದೆ. ರೋಹಿತ್ ವೇಮುಲ ಕಾಯ್ದೆಯ ಜಾರಿ ಎನ್ನುವುದು ಕೂಡಾ ಆಗ ಕನಸಿನ ಗಂಟೇ ಆದೀತು.

ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆಯೊಂದು ಸ್ವಾಗತಾರ್ಹ. ಆದರೆ ಅದು ವೇತನ ಸಹಿತ ರಜೆ ಎಂಬುದನ್ನು ಖಾತ್ರಿಪಡಿಸಿ, ಅವರ ರಜೆಯ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಗೆ ಅಗತ್ಯವಾದ ಕ್ರಮದ ಪ್ರಸ್ತಾಪವಿಲ್ಲ.

ಗ್ಯಾರಂಟಿ ಯೋಜನೆಗಳು: ಬಜೆಟ್ ನಲ್ಲಿಯೇ ಉಲ್ಲೇಖಿಸಿದಂತೆ ಕಳೆದ ಅವಧಿಗೆ ಗ್ಯಾರಂಟಿ ಯೋಜನೆಗಳಿಗೆ ಸರಕಾರ ಮಾಡಿದ ವೆಚ್ಚ 1,21,598 ಕೋಟಿಗಳು, ಈ ವರ್ಷದ ಬಜೆಟ್ ನಲ್ಲಿ ಘೋಷಿಸಿರುವುದು 49,608 ಕೋಟಿ. ಯುವ ನಿಧಿಯ ಪ್ರಸ್ತಾಪವೇ ಇಲ್ಲ. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು ಕಳೆದ ವಾರ ಧಾರವಾಡದಲ್ಲಿ ನಡೆದ ಯುವಜನರ ಹೋರಾಟವೇ ಸಾಕ್ಷಿಯಾಗಿದೆ. ಆದರೆ ಅದರತ್ತ ಗಮನವೇ ಕೊಡದ ಸರಕಾರ ಇತರ ಗ್ಯಾರಂಟಿಗಳಿಗೆ ಘೋಷಿಸಿರುವ ಮೊತ್ತವೂ ತೀರಾ ಕಡಿಮೆಯಾಗಿದ್ದು ಗ್ಯಾರಂಟಿಗಳ ಭವಿಷ್ಯದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಿದೆ. ಅದಲ್ಲದೆ ದಲಿತರು ಹಾಗೂ ಆದಿವಾಸಿಗಳ ಅಭಿವೃದ್ದಿಗೆಂದೇ ಮೀಸಲಿರುವ ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ.ಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಅದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲದಿರುವುದು ಕೂಡಾ ಅನುಮಾನಕ್ಕೆ ಎಡೆ ಮಾಡಿದೆ.

ಈ ಮೊದಲು ಮಂಡಿಸುತ್ತಿದ್ದ ಜೆಂಡರ್ ಬಜೆಟ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು ಈ ಬಾರಿಯೂ ಮುಂದುವರೆದಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ವಿಕೃತ ಸ್ವರೂಪದ ದೌರ್ಜನ್ಯಗಳು, ಅವುಗಳನ್ನು ನಿಯಂತ್ರಿಸಿ ನಿಜವಾದ ಮಹಿಳಾ ಸಬಲೀಕರಣಕ್ಕೆ ಕೊಡಬೇಕಾದ ಒತ್ತು ಮಾಯವಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಗೌರವ ಧನ ಹೆಚ್ಚಿಸುವ ಭರವಸೆ ಇದುವರೆಗೂ ಈಡೇರಿಸದೇ ಸಮವಸ್ತçಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರು ಸಾವಿರಾರು ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಅವರ ಕುರಿತು ಪ್ರಸ್ತಾಪವಿಲ್ಲ. ಮಕ್ಕಳ ಸಹಾಯವಾಣಿ ಸಿಬ್ಬಂದಿಗೆ ಕಳೆದ 6 ತಿಂಗಳಿನಿAದ ವೇತನವೂ ಇಲ್ಲ. ಇವೆಲ್ಲದರ ಬಗ್ಗೆ ಬಜೆಟ್ ಮೌನ ವಹಿಸಿದೆ.

ಪ್ರವಾಸೋದ್ಯಮದ ಹೆಸರಿನಲ್ಲಿ ಕರಾವಳಿ ಕಡಲ ತೀರಗಳನ್ನು ಖಾಸಗೀ ಬಂಡವಾಳಿಗರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ತೆರೆದಿಡುವ ಪ್ರಸ್ತಾಪವನ್ನು ಬಜೆಟ್ ನಲ್ಲಿಯೇ ಮಾಡಿರುವುದು ಸರಕಾರ ಎಂದಿದ್ದರೂ ತನ್ನ ನವ ಉದಾರವಾದೀ ನೀತಿಗಳ ಪರವಾಗಿಯೇ ನಿಲ್ಲುತ್ತದೆ ಎಂಬುದನ್ನು ದೃಢಪಡಿಸುತ್ತದೆ.
ವೃದ್ದರು, ಗಂಡ ಸತ್ತವರು, ಅಂಗವಿಕಲರು, ದೇವದಾಸಿಯರಾಗಿದ್ದವರು ಇವರೆಲ್ಲರ ಬದುಕಿಗೆ ಆಸರೆ ಒದಗಿಸುವ ಯಾವ ಪ್ರಸ್ತಾಪಗಳನ್ನೂ ಮಾಡದ ಒಂದು ತೀರಾ ನೀರಸ ಬಜೆಟ್ ಇದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *