ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಜನಸಂದಣಿ ಮಸೂದೆಗೆ ಎಸ್‌ಒಪಿ ಸೇರಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: ರಾಜ್ಯ ಸರ್ಕಾರವು ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಪ್ರಮಾಣೀಕೃತ ಕಾರ್ಯವಿಧಾನದ (ಎಸ್‌ಒಪಿ) ಪ್ರಮುಖ ಅಂಶಗಳನ್ನು ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯಲ್ಲಿ ಸೇರ್ಪಡೆ ಮಾಡುವ ಸಲಹೆ ಕುರಿತು ನಿಲುವು ತಿಳಿಸಲು ಫೆಬ್ರವರಿ 20ರಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು.

ಇದಕ್ಕೂ ಮುನ್ನ ಪ್ರಕರಣ ಅಮೈಕಸ್‌ ಕ್ಯೂರಿಯಾದ ಹಿರಿಯ ವಕೀಲೆ ಎಸ್‌. ಸುಶೀಲಾ ಅವರು, 2025ರ ಸೆಪ್ಟೆಂಬರ್ 1ರಂದು ರಾಜ್ಯ ಸರ್ಕಾರ ಎಸ್‌ಒಪಿ ರೂಪಿಸಿದ್ದು, ನಮಗೆ ಸಲಹೆ ನೀಡಲು ಕೋರಲಾಗಿತ್ತು. ಅದರಂತೆ, ನವೆಂಬರ್ 3ರಂದು ನಾವು ನಮ್ಮ ಸಲಹೆ ನೀಡಿದ್ದೇವೆ. ನವೆಂಬರ್ 26ರಂದು ಮತ್ತೆ ಹೆಚ್ಚುವರಿಯಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಫೆ. 21ರಿಂದ ಷರತ್ತುಬದ್ಧವಾಗಿ ಸಫಾರಿ ಪುನರಾರಂಭ: ಈಶ್ವರ್ ಖಂಡ್ರೆ

ಇದೆಲ್ಲವನ್ನೂ ಅಡಕಗೊಳಿಸಿ 2026 ಜನವರಿ 13ರಂದು ರಾಜ್ಯ ಸರ್ಕಾರ ಪರಿಷ್ಕೃತ ಎಸ್‌ಒಪಿ ರೂಪಿಸಿದೆ. ಈ ಮಧ್ಯೆ, 2025ರ ಆಗಸ್ಟ್ 20ರಂದು ರಾಜ್ಯ ಸರ್ಕಾರ ಜನಸಂದಣಿ ನಿಯಂತ್ರಣಕ್ಕೆ ಮಸೂದೆ ರೂಪಿಸಿದ್ದು, ಅದು ಸದನ ಸಮಿತಿಯ ಪರಿಗಣನೆಯಲ್ಲಿದೆ. ಮಸೂದೆಗೆ ಹೋಲಿಕೆ ಮಾಡಿದರೆ ಎಸ್‌ಒಪಿ ಅತ್ಯಂತ ಪರಿಣಾಮಕಾರಿಯಾಗಿದೆ. ಇಲ್ಲಿನ ಅಂಶಗಳನ್ನು ಅಲ್ಲಿ ಅಡಕಗೊಳಿಸಿದರೆ ಒಳ್ಳೆಯದು ಎಂದರು.

ಮುಂದುವರಿದು, ಆರ್‌ಸಿಬಿಯು ಮುಂದಿನ ಐಪಿಎಲ್‌ ಟೂರ್ನಿಯ ಪಂದ್ಯಗಳನ್ನು ಇಲ್ಲಿ ನಡೆಸಲು ಬಯಸಿದೆ ಎನ್ನಲಾಗಿದೆ. ಅದಕ್ಕೂ ಮುನ್ನ ಎಸ್‌ಒಪಿಯನ್ನು ಜಾರಿಗೊಳಿಸಬೇಕು. ಏನಾಗುತ್ತದೆ ಎಂಬುದನ್ನು ಇಡೀ ದೇಶ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದರು.

ಹಿರಿಯ ವಕೀಲ ಸಿ.ಕೆ. ನಂದಕುಮಾರ್ ಅವರು, ಎಸ್‌ಒಪಿ ಮತ್ತು ಕಾಯ್ದೆಯು ವಿಭಿನ್ನ ಉದ್ದೇಶಕ್ಕಾಗಿ ರೂಪಿಸಲಾಗಿದೆ. ಎಲ್ಲರೂ ಸಮಾನ ಉದ್ದೇಶಕ್ಕಾಗಿ ಕೆಲಸ ಮಾಡಬೇಕು ಎಂದರು.

ಆಗ ನ್ಯಾಯಪೀಠ, ಎಸ್‌ಒಪಿಯಲ್ಲಿ ಸೂಚಿಸಿರುವ ಕೆಲವು ಕ್ರಮಗಳನ್ನು ಮಸೂದೆಯಲ್ಲಿ ಅಡಕಗೊಳಿಸಬೇಕು. ಒಂದೊಮ್ಮೆ ಮಸೂದೆ ಕಾಯ್ದೆಯಾದರೂ ಎಸ್‌ಒಪಿಯನ್ನು ಯಾವಾಗ ಬೇಕಾದರೂ ಜಾರಿಗೊಳಿಸಬಹುದು. ಹೇಗೆ ಮುನ್ನಡೆಯಲು ಬಯಸುತ್ತೀರಿ ಎಂದು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

ಸರ್ಕಾರದ ಪರ ಹಾಜರಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು, ಅಡ್ವೊಕೇಟ್‌ ಜನರಲ್‌ ಸೋಮವಾರ ವಿಚಾರಣೆಯಲ್ಲಿ ಭಾಗಿಯಾಗಲಿದ್ದು, ಕಾಲವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಎಸ್‌ಒಪಿಯ ಪ್ರಮುಖ ಅಂಶಗಳನ್ನು ಸೇರಿಸುವ ಸಲಹೆ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿತು.

ಈ ಮಧ್ಯೆ, ಕಾಲ್ತುಳಿತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಇದನ್ನು ಸರಿಪಡಿಸುವ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ಪರಿಗಣಿಸಬೇಕು ಎಂದು ವಕೀಲ ರಮೇಶ್‌ ನಾಯ್ಕ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಪರಿಗಣಿಸಲು ನಿರಕಾರಿಸಿದ ಪೀಠ, ಮಧ್ಯಂತರ ಅರ್ಜಿ ವಜಾಗೊಳಿಸಿತು.

ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಏನು ಹೇಳುತ್ತದೆ? Janashakthi Media

Donate Janashakthi Media

Leave a Reply

Your email address will not be published. Required fields are marked *