ಪರಿಸರ ಸೂಕ್ಷ್ಮ ಹಿಮಾಲಯದ ಒಡಲಲ್ಲಿ ಮೂಲ ಸೌಕರ್ಯಗಳು ವಿನಾಶಕಾರಿಯಾಗಕೂಡದು
ನವ ಉದಾರವಾದಿ ಆರ್ಥಿಕತೆಯಲ್ಲಿ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಳಗಳೂ ಸಹ ಮಾರುಕಟ್ಟೆಯ ಕಚ್ಚಾವಸ್ತುಗಳಾಗಿಯೇ ಪರಿಗಣಿಸಲ್ಪಡುವುದರಿಂದ, ಭಾರತದ ಆರ್ಥಿಕ ಅಭಿವೃದ್ಧಿ ಮಾದರಿಯೂ ಸಹ ಪರಿಸರ ಸಮತೋಲನವನ್ನು ಗಮನದಲ್ಲಿಟ್ಟುಕೊಂಡೇ ಮುಂದುವರೆಯಬೇಕಾಗುತ್ತದೆ. ದುರದೃಷ್ಟವಶಾತ್ ಭಾರತ ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿ ಭಿನ್ನ ಹಾದಿಯಲ್ಲಿದೆ. ಪಕ್ಷಾತೀತವಾಗಿ ನೋಡಿದರೂ ಸಹ ಯಾವುದೇ ಪಕ್ಷವೂ ಸಹ ಪರಿಸರ ರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸುವುದು ಕಾಣುವುದಿಲ್ಲ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆಯಲ್ಲಿ ಮೂಲ ಸೌಕರ್ಯಾಭಿವೃದ್ಧಿಯೇ ಪ್ರಧಾನವಾದ್ದರಿಂದ, ಆಧುನಿಕ ಜೀವನ ಶೈಲಿಗೆ, ಐಷಾರಾಮಿ ಸಮಾಜದ ನಿರ್ಮಾಣಕ್ಕೆ ಪೂರಕವಾದ ಆರ್ಥಿಕ ನೀತಿಗಳನ್ನೇ ಅನುಸರಿಸಲಾಗುತ್ತದೆ. ಅಭಿವೃದ್ಧಿ
– ನಾ ದಿವಾಕರ
ಆದರೆ ಈ ಮೇಲ್ವರ್ಗ (Upper Class), ಮೇಲ್ಪದರ ಅಥವಾ ಗಣ್ಯ (Elite) ಮತ್ತು ಹಿತವಲಯದ (Comfort Zone) ಸಮಾಜಗಳಷ್ಟೇ ಭಾರತ ಅಲ್ಲ. ವಿಶಾಲ ಭಾರತದಲ್ಲಿ ಈ ವರ್ಗಗಳ ಸಂಖ್ಯೆಗಿಂತಲೂ ಮೀರಿದ ಜನಸಂಖ್ಯೆಯನ್ನು ತಳಸಮುದಾಯಗಳು, ಶ್ರಮಿಕ ವರ್ಗಗಳು, ರೈತ-ಕೃಷಿಕಾರ್ಮಿಕರು ಹಾಗೂ ಬುಡಕಟ್ಟು ಸಮುದಾಯಗಳು ಪ್ರತಿನಿಧಿಸುತ್ತವೆ. ಈ ವರ್ಗಗಳ ಜನತೆಗೆ ನಾಳೆ ಎನ್ನುವುದು ಅನಿಶ್ಚಿತವಾಗಿದ್ದು ವರ್ತಮಾನ ನಿರ್ಣಾಯಕವಾಗುತ್ತದೆ. ಈ ದೇಶದ ಹಸಿರು ಸಂಪತ್ತು, ವನ್ಯಜೀವಿಗಳು ಹಾಗೂ ನಿಸರ್ಗದೊಡಲಿನ ಸಂಪನ್ಮೂಲಗಳು ಈ ಸಮಾಜಗಳಿಗೂ ಸಮಾನವಾಗಿ ಸೇರಿರುತ್ತವೆ. ಮೇಲಾಗಿ ಈ ದುಡಿಯುವ ವರ್ಗಗಳಿಗೇ ಪರಿಸರ ಮತ್ತು ಸಂಪನ್ಮೂಲ ರಕ್ಷಣೆ ಮುಖ್ಯವಾಗಿರುತ್ತದೆ.
ಪರಿಸರ ರಕ್ಷಣೆ ಎಂದ ಕೂಡಲೇ ಅರಣ್ಯ, ಬೆಟ್ಟಗುಡ್ಡಗಳು, ಜಲಸಂಪತ್ತು ಮತ್ತು ಘಟ್ಟಪ್ರದೇಶಗಳಷ್ಟೇ ಕಾಣಬೇಕಿಲ್ಲ. ಈ ಪ್ರಾಕೃತಿಕ ಆಸ್ತಿಯನ್ನೇ ಅವಲಂಬಿಸಿ ಬದುಕುವ ಕೋಟ್ಯಂತರ ಜನರು ನಮ್ಮಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಈ ಜನಸಮೂಹದಲ್ಲಿರುವ ಮಾನವ ಸಂಪನ್ಮೂಲವನ್ನು ರಕ್ಷಿಸುವುದೂ ಸಹ ಆರ್ಥಿಕ ನೀತಿಗಳ ಒಂದು ಭಾಗವಾಗಬೇಕಾಗುತ್ತದೆ. ಮಾರುಕಟ್ಟೆಯ ದೃಷ್ಟಿಯಲ್ಲಿ ಲಾಭದ ಭಂಡಾರವಾಗಿ ಕಾಣುವ ನಿಸರ್ಗವು ಈ ಸಾಮಾನ್ಯ ಜನರ ದೃಷ್ಟಿಯಲ್ಲಿ ಬದುಕಿನ ಆಧಾರ ಸ್ತಂಭದಂತೆ ಕಾಣುತ್ತದೆ. ಈ ಸಮಾಜದೊಳಗಿನ ಜನತೆ ಸಾಪೇಕ್ಷವಾಗಿ ಕಡಿಮೆ ಶಿಕ್ಷಣ ಅಥವಾ ಅರಿವು ಹೊಂದಿದ್ದರೂ, ಭವಿಷ್ಯಕ್ಕಾಗಿ ಪ್ರಕೃತಿಯನ್ನು ಕಾಪಾಡಬೇಕು ಎಂಬ ವಿವೇಕ ಇವರಲ್ಲಿ ಸದಾ ಜಾಗೃತವಾಗಿರುತ್ತದೆ. ಪರಿಸರ ರಕ್ಷಣೆಗಾಗಿ ಹೋರಾಡುತ್ತಾ, ನಗರಗಳ ಸೌಂದರ್ಯೀಕರಣಕ್ಕಾಗಿ ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ ಬಯಸುವ ಹೋರಾಟಗಾರರು ಈ ಸೂಕ್ಷ್ಮವನ್ನು ಅರಿತಿರಬೇಕು.
ಇದನ್ನೂ ಓದಿ: ಬೀಜ ಮಸೂದೆ ಕುರಿತು ರೈತರಿಂದ ಕೇಂದ್ರ ಕೃಷಿ ಮಂತ್ರಿಗಳಿಗೆ ಹತ್ತು ಪ್ರಶ್ನೆಗಳು
ವಿಜ್ಞಾನ-ನಿಸರ್ಗ-ಸಮಾಜ
ಹಾಗಾಗಿಯೇ ಪರಿಸರ ವಿಜ್ಞಾನಿಗಳು ಸದಾ ಕಾಲವೂ ಸಮತೋಲನದ ಅಭಿವೃದ್ಧಿ ಮಾದರಿಗಳನ್ನು ಸೂಚಿಸುತ್ತಿರುತ್ತಾರೆ. ಇತ್ತೀಚೆಗೆ ನಿಧನರಾದ ಮಾಧವ್ ಗಾಡ್ಗಿಲ್ ಈ ನಿಟ್ಟಿನಲ್ಲಿ ಹಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದರೂ ಸಹ, ಸರ್ಕಾರಗಳು ನಿರ್ಲಕ್ಷಿಸಿದ್ದವು. ಪರಿಣಾಮವನ್ನು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ, ಕೇರಳದ ವಯನಾಡು ದುರಂತದಲ್ಲಿ ಈಗಾಗಲೇ ಕಂಡಿದ್ದೇವೆ. ಪರಿಸರ ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಕಾರ್ಪೋರೇಟ್ ಔದ್ಯೋಗಿಕ ದೃಷ್ಟಿಯಿಂದ ಅಭಿವೃದ್ಧಿ ವಿರೋಧಿಗಳಾಗಿ ಕಾಣುವುದು ಅಚ್ಚರಿಯೇನಲ್ಲ ಆದರೆ ಪ್ರಾಕೃತಿಕ ವಿಕೋಪಗಳನ್ನು ಪ್ರತಿವರ್ಷ ಎದುರಿಸುತ್ತಲೇ ಇದ್ದರೂ, ಸಾವಿರಾರು ಸಾವುನೋವುಗಳನ್ನು ಕಾಣುತ್ತಿದ್ದರೂ, ಸರ್ಕಾರಗಳೂ ಇದೇ ದೃಷ್ಟಿಯಿಂದ ನೋಡುವುದು ಜೀವವಿರೋಧಿ ಮನಸ್ಥಿತಿಯಾಗಿ ಕಾಣುತ್ತದೆ.
ಕಳೆದ ವರ್ಷ ಕೇರಳದ ವಯನಾಡು ಘಟ್ಟ ಪ್ರದೇಶದಲ್ಲಿ ಚೂರಲ್ಮಲ-ಮುಡಕ್ಕೈ ನಡುವೆ ಸಂಭವಿಸಿದ ಭೂ ಕುಸಿತ ಮತ್ತು ಪ್ರವಾಹದಲ್ಲಿ 357 ಜನರು ಮೃತಪಟ್ಟಿದ್ದರು, ಇನ್ನೂ ನೂರಾರು ಶವಗಳು ಕಾಣೆಯಾಗಿವೆ. ಈ ಪ್ರಾಕೃತಿಕ ದುರಂತದ ಹೊರತಾಗಿಯೂ ಕೇರಳದ ಎಡರಂಗ ಸರ್ಕಾರ ಅದೇ ಮಾರ್ಗದಲ್ಲಿ ಕೊಝಿಕೋಡ್ ಮತ್ತು ವಯನಾಡ್ ನಡುವೆ 8 ಕಿಲೋಮೀಟರ್ ವ್ಯಾಪ್ತಿಯ ಸುರಂಗ ಮಾರ್ಗದ ನಿರ್ಮಾಣಕ್ಕೆ ಚಾಲನೆ ನೀಡಿದೆ. ಈ ನಿರ್ಮಾಣದಿಂದ ಅರಣ್ಯ ಹಾಗೂ ಘಟ್ಟ ಪ್ರದೇಶಗಳಲ್ಲಿ ವಾಹನ ಸಂಚಾರ ಕಡಿಮೆಯಾಗುವುದು ವಾಸ್ತವವೇ ಆದರೂ ಈ ಘಟ್ಟಪ್ರದೇಶಗಳ ಭೂಮಿಯ ದುರ್ಬಲತೆ (Fragility) ಮತ್ತು ಮಣ್ಣಿನ ಧಾರಣಾ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ಪರಿಶೀಲಿಸದೆ ಮುಂದುವರೆಯುವುದು ಭವಿಷ್ಯದ ದುರಂತಗಳಿಗೆ ಮುನ್ನುಡಿ ಹಾಡಿದಂತಾಗುತ್ತದೆ.
ಅಭಿವೃದ್ಧಿ ಮತ್ತು ಪರಿಸರ ಪ್ರಜ್ಞೆ
ಪರಿಸರ-ಅಭಿವೃದ್ಧಿಯ ತಾಕಲಾಟದಲ್ಲಿ ಎಡಪಂಥೀಯ ಸರ್ಕಾರವೂ ಮಾರುಕಟ್ಟೆ ಆರ್ಥಿಕ ನೀತಿಗನುಗುಣವಾಗಿಯೇ ವರ್ತಿಸುವುದಕ್ಕೆ ಇದೊಂದು ಉದಾಹರಣೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವೂ ಸಹ ಇದೇ ನೀತಿಯನ್ನು ಅನುಸರಿಸುತ್ತಿದೆ. “ ಜಿಯೋಹಝಾರ್ಡಸ್ ಮೆಕ್ಯಾನಿಕ್ಸ್ ” ಎಂಬ ವಿಜ್ಞಾನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿಯಲ್ಲಿ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಭೂ ಕುಸಿತ ಸಾಧ್ಯತೆಗಳನ್ನು ಮತ್ತು ಸೂಕ್ಷ್ಮ ಪ್ರದೇಶಗಳನ್ನು ಉಲ್ಲೇಖಿಸಲಾಗಿದೆ. 2024ರಲ್ಲಿ ಸಂಭವಿಸಿದ ಭೂಕುಸಿತದ ಹಿನ್ನೆಲೆಯಲ್ಲಿ ಈ ಅಧ್ಯಯನವನ್ನು ನಡೆಸಲಾಗಿದ್ದು, ರಾಜ್ಯದಲ್ಲಿ ಹರಡಿರುವ ಪಶ್ಚಿಮ ಘಟ್ಟಗಳ ಶೇಕಡಾ 60ರಷ್ಟು ಪ್ರದೇಶವು ಸಂಭವನೀಯ ಭೂಕುಸಿತದ ಅಪಾಯವನ್ನು ಎದುರಿಸುತ್ತಿವೆ. 2024ರ ಒಂದು ವರ್ಷದಲ್ಲೇ ಪಶ್ಚಿಮ ಘಟ್ಟಗಳಲ್ಲಿ 40ಕ್ಕೂ ಹೆಚ್ಚು ಭೂಕುಸಿತಗಳು ಸಂಭವಿಸಿದ್ದವು.
ಅವೈಜ್ಞಾನಿಕ ಅಭಿವೃದ್ಧಿ ಯೋಜನೆಗಳು, ಮೂಲ ಸೌಕರ್ಯಗಳ ನಿರ್ಮಾಣ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನೆಪದಲ್ಲಿ ಹೆದ್ದಾರಿ, ರೆಸಾರ್ಟ್ ಮತ್ತು ಜನವಸತಿ ಕಟ್ಟಡಗಳಿಗೆ ಅನುಮತಿ ನೀಡುವುದರಿಂದ, ಕಾಂಕ್ರೀಟ್ ಕಾಡುಗಳು ಹಸಿರು ಕಾಡುಗಳ ಸ್ಥಾನವನ್ನು ಆಕ್ರಮಿಸುತ್ತವೆ. ಸುರಂಗ ನಿರ್ಮಾಣದಲ್ಲಿ ಸೂಕ್ಷ್ಮ ಮಣ್ಣು ಇರುವ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸದೆ ಹೋದರೆ, ಭವಿಷ್ಯದ ದುರಂತಗಳನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಈ ದೃಷ್ಟಿಯಿಂದ ಪರಿಸರ ವಿಜ್ಞಾನಿಗಳ ಪಾತ್ರ ನಿರ್ಣಾಯಕವಾಗುತ್ತದೆ. ಸರ್ಕಾರಗಳು ಈ ವಿಜ್ಞಾನಿಗಳ ಅಧ್ಯಯನ ವರದಿಗಳನ್ನು ಗಂಭೀರವಾಗಿ ಪರಿಗಣಿಸುವುದು ಮುಖ್ಯವಾಗುತ್ತದೆ. ದುರದೃಷ್ಟವಶಾತ್ ವರ್ತಮಾನದ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳು ಪರಿಸರ ಸೂಕ್ಷ್ಮತೆಯನ್ನು ಕಳೆದುಕೊಂಡಿವೆ.

ಕಳೆದುಕೊಂಡಿವೆ ಎನ್ನುವುದಕ್ಕಿಂತಲೂ ಮಿಗಿಲಾಗಿ, ಕಾರ್ಪೋರೇಟ್ ಮಾರುಕಟ್ಟೆ ಹಿತಾಸಕ್ತಿಗಳು ಆಡಳಿತ ವ್ಯವಸ್ಥೆಯಲ್ಲಿ ಮೇಲುಗೈ ಸಾಧಿಸಿವೆ. ಇದನ್ನು ಹಿಮಾಲಯದ ಚಾರ್ಧಾಮ್ನಿಂದ ಮೈಸೂರಿನ ಚಾಮುಂಡಿ ಬೆಟ್ಟದವರೆಗೂ ಗುರುತಿಸಬಹುದು. ಪ್ರವಾಸೋದ್ಯಮ ಸರ್ಕಾರಗಳಿಗೆ ಅತಿ ಹೆಚ್ಚು ಆದಾಯ ತರುವ ಕ್ಷೇತ್ರವಾಗಿರುವುದರಿಂದ, ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ PRASHAD ಯೋಜನೆಗೆ ಮೈಸೂರಿನ ಚಾಮುಂಡಿ ಬೆಟ್ಟವೂ ಒಳಗಾಗಿದೆ. ಸ್ಥಳೀಯ ಪರಿಸರವಾದಿಗಳ ಸುದೀರ್ಘ ಹೋರಾಟದ ಫಲವಾಗಿ ಸದ್ಯಕ್ಕೆ ನಿರ್ಮಾಣ ಕಾರ್ಯಗಳು ಕೊಂಚ ಮಟ್ಟಿಗೆ ಸ್ಥಗಿತಗೊಂಡಿದ್ದರೂ, ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಹೇಳಲಾಗುವುದಿಲ್ಲ.
ಸಾಮಾನ್ಯವಾಗಿ ವಿವಿಧ ರಾಜ್ಯಗಳಲ್ಲಿ ವಿಭಿನ್ನ ನಿಯಮಾವಳಿಗಳು ಇದ್ದರೂ, ಅರಣ್ಯ ಮತ್ತು ಬೆಟ್ಟಗುಡ್ಡಗಳ ಸಮೀಪದಲ್ಲಿ ಜನವಸತಿ ವಲಯಗಳನ್ನು, ಬಡಾವಣೆಗಳನ್ನು, ಕಟ್ಟಡಗಳನ್ನು ನಿರ್ಮಾಣ ಮಾಡಲು ಕೆಲವು ನಿಬಂಧನೆಗಳನ್ನೂ ಸಹ ಕಾನೂನಾತ್ಮಕವಾಗಿ ರೂಪಿಸಲಾಗಿದೆ. ಕೆಲವು ನಿಯಮಗಳು ಹೀಗಿವೆ:
1. ಅರಣ್ಯ ಗಡಿಯಿಂದ 5 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ನಿರ್ಮಾಣವನ್ನು ಅನುಮತಿಸಬಾರದು. ಹೆಚ್ಚು ಸಂರಕ್ಷಿತ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಈ ಅಂತರವನ್ನು ಹೆಚ್ಚಿಸಲಾಗುತ್ತದೆ.
2. ಭಾರತದ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಸುತ್ತಲೂ ಕನಿಷ್ಠ 1 ಕಿಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ (Ecologically sensitive zones) ಎಂದು ಪರಿಗಣಿಸಿ, ಶಾಶ್ವತ ಕಟ್ಟಡ ನಿರ್ಮಾಣವನ್ನು ನಿಷೇಧಿಸಲಾಗಿದೆ.
3. ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ, ಕಡಿದಾದ ಭೂ ಪ್ರದೇಶಗಳಿದ್ದಲ್ಲಿ, ಇಳಿಜಾರಿನಿಂದ ಕನಿಷ್ಠ 10 ಮೀಟರ್ ದೂರದಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕು.
ಈ ನಿಯಮಗಳು ಗ್ರಾಂಥಿಕವಾಗಿ ಕಟ್ಟುನಿಟ್ಟಾಗಿದ್ದರೂ, ಮಾರುಕಟ್ಟೆಯ ಪ್ರಭಾವ, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರ ಈ ನಿಯಮಗಳ ಉಲ್ಲಂಘನೆಗೆ ಮುಕ್ತ ಅವಕಾಶ ಕಲ್ಪಿಸುತ್ತವೆ.
ಕರ್ನಾಟಕದಲ್ಲಿ ಪರಿಸರನಾಶದ ಪರಿ
ಈಗ ಕರ್ನಾಟಕಕ್ಕೆ ಮತ್ತೊಂದು ಸಂಭಾವ್ಯ ವಿಕೋಪದ ಆತಂಕ ಎದುರಾಗಿದೆ. ಮೈಸೂರಿನ ಬಳಿ ಇರುವ ರಂಗನತಿಟ್ಟು ಪಕ್ಷಿಧಾಮಕ್ಕೆ ವಿಶ್ವದ ಎಲ್ಲ ಭಾಗಗಳಿಂದಲೂ ಪಕ್ಷಿಗಳು ವಲಸೆ ಬರುತ್ತವೆ. ಈಗ ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿ ನಿರ್ಮಾಣ ನಡೆಯುತ್ತಿದ್ದು, ಈ ಹೆದ್ದಾರಿಯು ರಂಗನತಿಟ್ಟು ಪಕ್ಷಿಧಾಮದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿ ಹಾದುಹೋಗುತ್ತಿದ್ದು, ಪರಿಸರವಾದಿಗಳಲ್ಲಿ ಆತಂಕ ಮೂಡಿಸಿದೆ. ರಂಗನತಿಟ್ಟು ಪಕ್ಷಿಧಾಮವನ್ನು ಭೇದಿಸಿ ನಿರ್ಮಾಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದರೂ, ಇಷ್ಟು ಸನಿಹದಲ್ಲಿ ವಾಹನ ಸಂಚಾರ ಹೆಚ್ಚಾದರೂ ಸಹ ಪಕ್ಷಿ ಸಂಕುಲಕ್ಕೆ ತೊಂದರೆಯಾಗುತ್ತದೆ ಎಂದು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಸರ ಪರಿಣಾಮ ಮೌಲ್ಯಮಾಪನ (EIA) ಪ್ರಮಾಣಪತ್ರವನ್ನು ಪಡೆಯದೆ ನಿರ್ಮಾಣ ಕಾರ್ಯಕ್ಕೆ ಮುಂದಾಗಕೂಡದು ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಪಶ್ಚಿಮ ಘಟ್ಟಗಳಲ್ಲೇ ಅತ್ಯಂತ ಎತ್ತರದ ಪ್ರದೇಶ ಮತ್ತು ಅತಿ ಕಿರಿದಾದ ರಸ್ತೆಗಳನ್ನು ಹೊಂದಿರುವ ಆಗುಂಬೆ ಘಾಟಿ ಈಗ ವಿವಾದದ ಕೇಂದ್ರವಾಗಿದೆ. 14 ಹೇರ್ ಪಿನ್ ತಿರುವುಗಳನ್ನು ಹೊಂದಿರುವ ಆಗುಂಬೆ ಘಾಟಿಯಲ್ಲಿ ರಸ್ತೆಗಳು ಕಿರಿದಾಗಿವೆ. ಕೆಲವು ರಸ್ತೆಗಳು ಕನಿಷ್ಠ ಐದು ಮೀಟರ್ನಷ್ಟೂ ಅಗಲವಾಗಿಲ್ಲ. ದಿನಕ್ಕೆ ಹತ್ತು ಸಾವಿರ ವಾಹನಗಳು ಸಂಚರಿಸುವ ಈ ಘಾಟಿಯನ್ನು ಹಾದು ಹೋಗುವಂತೆ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಈ ಹೆದ್ದಾರಿಯು ಆಗುಂಬೆ ಘಾಟಿಯನ್ನು ಹಾದು ಹೋಗುತ್ತದೆ. ಈ ಹೆದ್ದಾರಿಯಲ್ಲಿ ಆಗುಂಬೆಯಿಂದ ಹೆಬ್ರಿಯವರೆಗೆ 20.85 ಕಿಲೋಮೀಟರ್ ವ್ಯಾಪ್ತಿಯ ದ್ವಿಪಥ ರಸ್ತೆಯ ನಿರ್ಮಾಣಕ್ಕಾಗಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟೆಂಡರ್ ಆಹ್ವಾನಿಸಿದೆ. ಅಭಿವೃದ್ಧಿ
ಈ 2.33 ಕೋಟಿ ರೂಗಳ ಯೋಜನೆಯಡಿ ಉದ್ದೇಶಿತ ಹೆದ್ದಾರಿಯನ್ನು ಸುರಂಗ ನಿರ್ಮಾಣದ ಮೂಲಕ ಕೈಗೊಳ್ಳುವುದು ಉದ್ದೇಶಿತ ಗುರಿಯಾಗಿದೆ. ಯೋಜನೆಯ ತಯಾರಿಯಲ್ಲಿ ಭೂ-ಭೌತಶಾಸ್ತಜ್ಞರು ಮತ್ತು ಸುರಂಗ ವಿನ್ಯಾಸ ತಜ್ಞರು ಒಳಗೊಂಡಿರುವುದರಿಂದ, ಸುರಂಗ ನಿರ್ಮಾಣದ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಾದಿಯು ಇಲ್ಲಿರುವ ವನ್ಯಜೀವಿಧಾಮವನ್ನು ಹಾದುಹೋಗಲಿದ್ದು ,ಇಡೀ ಪ್ರದೇಶದಲ್ಲಿ ಸಣ್ಣಪುಟ್ಟ ನೀರಿನ ತೊರೆಗಳು ವರ್ಷವಿಡೀ ಹರಿಯುತ್ತಿರುತ್ತವೆ. ಮಳೆಗಾಲದಲ್ಲಿ ಅತಿಹೆಚ್ಚು ಮಳೆಯಾದಾಗ ಹಲವಾರು ಬಾರಿ ಭೂಕುಸಿತಗಳು ಸಂಭವಿಸಿದ್ದು, ಪುನಃ ಹೆದ್ದಾರಿ ನಿರ್ಮಾಣಕ್ಕಾಗಿ ಗುಡ್ಡಗಳನ್ನು ಕಡಿದರೆ, ಭೂಕುಸಿತವಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಭಿವೃದ್ಧಿ
ಸುರಂಗ ನಿರ್ಮಾಣದಿಂದ ಮೇಲ್ಭಾಗದ ರಸ್ತೆ ಸಂಚಾರ ಕಡಿಮೆಯಾಗಿ, ದಟ್ಟಾರಣ್ಯವನ್ನು ಹಾದುಹೋಗುವ ರಸ್ತೆಗಳು ಸಂಚಾರ ಮುಕ್ತವಾಗುತ್ತವೆ, ತತ್ಪರಿಣಾಮವಾಗಿ ಹಸಿರು ಸಂಪತ್ತು ಮತ್ತು ವನ್ಯಜೀವಿಗಳಿಗೆ ಅಪಾಯ ಕಡಿಮೆಯಾಗುತ್ತದೆ ಎಂಬ ವಾದವೂ ಕೇಳಿಬರುತ್ತಿದೆ. ಇದು ವಾಸ್ತವವೇ ಆದರೂ, ಇಡೀ ಪ್ರದೇಶದ ಮಣ್ಣಿನ ಗುಣ ಮತ್ತು ಧಾರಣಾ ಶಕ್ತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಸುರಂಗ ನಿರ್ಮಾಣಕ್ಕೆ ಮುಂದಾಗುವುದು ವಿವೇಕಯುತ ಕ್ರಮ. ಪರಿಸರ ಕಾರ್ಯಕರ್ತರ ಅಭಿಪ್ರಾಯದಲ್ಲಿ ಇಲ್ಲಿನ ಭೂ ರಚನೆ ಸೂಕ್ಷ್ಮವಾಗಿದ್ದು ಮಣ್ಣಿನ ಗುಣವನ್ನು ಗಮನಿಸಿದರೆ, ಭಾರಿ ಯಂತ್ರಗಳನ್ನು ಬಳಸಿ ಭೂಮಿಯನ್ನು ಕೊರೆಯುವುದು ಅವಿವೇಕದ ಕ್ರಮವಾಗುತ್ತದೆ. ಆಗುಂಬೆಯ ಕೆಳಗಿನ ಮತ್ತು ಘಟ್ಟದ ಮೇಲಿನ ರೈತರ ಜೀವನೋಪಾಯಕ್ಕೇ ಈ ವಿಕೋಪಗಳು ಸಂಚಕಾರ ತರುತ್ತವೆ.
ಸಮತೋಲನ ಮತ್ತು ಸಹಜೀವನ
ಪರಿಸರ ರಕ್ಷಣೆ ಎಂದರೆ ಕೇವಲ ಹಸಿರು ರಕ್ಷಣೆಯಲ್ಲ. ಹಸಿರು ವನ, ಜಲಸಂಪನ್ಮೂಲ, ಸಸ್ಯ ವೈವಿಧ್ಯ, ಪ್ರಾಣಿ-ಪಕ್ಷಿ ವೈವಿಧ್ಯ ಮತ್ತು ಈ ನಿಸರ್ಗದೊಡಲನ್ನೇ ಅವಲಂಬಿಸಿ ತಮ್ಮ ಬದುಕು ಕಟ್ಟಿಕೊಳ್ಳುವ ಸಾವಿರಾರು ಜನರ ಜೀವನ-ಜೀವನೋಪಾಯಗಳ ರಕ್ಷಣೆಯೂ ಆಗುತ್ತದೆ. ಈ ಜನಸಮುದಾಯಗಳ ಹಿತಾಸಕ್ತಿಗಳನ್ನು ಕಡೆಗಣಿಸಿ, ಅವರ ವಸತಿ ನೆಲೆಗಳ ಮೂಲೋತ್ಪಾಟನೆ ಮಾಡಿ, ವನಸಂಪತ್ತನ್ನು ರಕ್ಷಿಸುವ ಪ್ರಯತ್ನಗಳನ್ನೂ ಸಹ ಪರಿಸರವಾದಿಗಳು ಸೂಕ್ಷ್ಮವಾಗಿ ಗಮನಿಸಬೇಕಿದೆ ಅರಣ್ಯವನ್ನೇ ನಂಬಿಬದುಕುವ ಜನಸಮುದಾಯಗಳಿಂದ ಅವರ ಜೀವನ ವಿಧಾನಗಳಿಂದ ನಿಸರ್ಗ ಸಂಪತ್ತಿಗೆ ಯಾವುದೇ ರೀತಿಯ ಅಪಾಯ ಇರುವುದಿಲ್ಲ. ಹಾಗಾಗಿಯೇ ಈ ಜನತೆಯ ಅಭಿಪ್ರಾಯವೂ ಸಹ ನಿರ್ಣಾಯಕವಾಗುತ್ತದೆ. ಅರಾವಳಿಯಿಂದ ಪಶ್ಚಿಮಘಟ್ಟದವರೆಗೂ ಈ ಜನಸಮೂಹಗಳನ್ನು ಕಡೆಗಣಿಸುವ ಒಂದು ಆಡಳಿತ ನೀತಿಯನ್ನೂ ಕಾಣುತ್ತಲೇ ಬಂದಿದ್ದೇವೆ. ಸುಪ್ರೀಂಕೋರ್ಟ್ ಮಧ್ಯಪ್ರವೇಶ ಇಲ್ಲದೆ ಹೋಗಿದ್ದಲ್ಲಿ ಅರಾವಳಿಯ ಸಸ್ಯ ಸಂಪತ್ತು ಈವೇಳೆಗಾಗಲೇ ಕರಾವಳಿಯ ಮರಳದಂಡೆಗಳಂತಾಗುತ್ತಿತ್ತು.
ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಏನು ಹೇಳುತ್ತದೆ? Janashakthi Media
ಪಶ್ಚಿಮ ಘಟ್ಟಗಳನ್ನೇ ಹಾದು ಹೋಗುವ ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯ ವಿರುದ್ಧವೂ ಹೋರಾಟ ಚುರುಕಾಗಿದ್ದು ಗಾನವಿ ಎಂಬ ಶಾಲಾಬಾಲಕಿ ಈ ಯೋಜನೆಯನ್ನು ರದ್ದುಪಡಿಸಲು ಕೋರಿ ಪ್ರಧಾನಮಂತ್ರಿಗೆ ಪತ್ರ ಬರೆದಿರುವುದು ಪರಿಸರ ಹೋರಾಟಗಾರರಲ್ಲೇ ಸಂಚಲನ ಮೂಡಿಸಿದೆ. ಈ ಪರಿಸರ ಪ್ರಜ್ಞೆ ಇಡೀ ಸಮಾಜದಲ್ಲಿ ಮೂಡಬೇಕಿದೆ. ಏಕೆಂದರೆ ಭಾರತದ ಎಲ್ಲ ನದಿಗಳನ್ನೂ ಜೋಡಿಸುವ ಮಹಾ ಯೋಜನೆ ಈಗಾಗಲೇ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪದ ಹೊಸ ಅಧ್ಯಾಯಗಳನ್ನೇ ತೆರೆಯಲಿದೆ. ಭೌಗೋಳಿಕವಾಗಿ, ನೈಸರ್ಗಿಕವಾಗಿ ಭಾರತಕ್ಕೆ ರಕ್ಷಣಾ ಗೋಡೆಯಂತಿರುವ ಹಿಮಾಲಯ ಪರ್ವತ ಶ್ರೇಣಿಗೆ ಎದುರಾಗಿರುವ ಸವಾಲುಗಳನ್ನು ಇನ್ನೂ ಗಂಭೀರವಾಗಿ ಪರಾಮರ್ಶಿಸಬೇಕಿದೆ. ಅಭಿವೃದ್ಧಿ
ಈ ಎಲ್ಲ ಆಯಾಮಗಳಲ್ಲಿ ನೋಡುವಾಗ ನಮಗೆ ನೆನಪಾಗಬೇಕಿರುವುದು ಹಿಮಾಲಯದ ಪರ್ವತ ಶ್ರೇಣಿ ಮತ್ತು ಅಲ್ಲಿನ ನಿಸರ್ಗ ಸಂಪತ್ತಿನ, ಅರಣ್ಯ ಸಂಪನ್ಮೂಲಗಳ ರಕ್ಷಣೆ. ಚಾಮುಂಡಿ ಬೆಟ್ಟಕ್ಕೆ ಒದಗಲಿರುವ ದುರ್ಗತಿಯೇ ಬದರಿ-ಕೇದಾರದ ಪರ್ವತಗಳಿಗೂ ಒದಗುವ ದಿನಗಳು ಸಮೀಪಿಸುತ್ತಿರುವುದು ಆತಂಕಕಾರಿ ವಿಚಾರ. ಕೇಂದ್ರ-ರಾಜ್ಯ ಸರ್ಕಾರಗಳು ರೂಪಿಸುವ ಮೂಲ ಸೌಕರ್ಯ ಯೋಜನೆಗಳಿಗೆ ನಿರ್ಣಾಯಕವಾಗಿ ಕಾಣುವುದು ಮಾರುಕಟ್ಟೆ ಹಿತಾಸಕ್ತಿ ಮತ್ತು ಇದನ್ನು ಪೋಷಿಸುವಂತಹ ಮೇಲ್ವರ್ಗದ ಗಣ್ಯ ಸಮಾಜ ಮತ್ತು ಐಷಾರಾಮಿ ಬದುಕಿನ ಶ್ರೀಮಂತರು. ಈ ಸಮಾಜದ ಮನರಂಜನಾದಾಹ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಲಾಭದಾಹ ಈಗಾಗಲೇ ಹಿಮಾಲಯದ ಒಡಲನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ.
(ಈ ಲೇಖನದ ಕೆಲವು ಮಾಹಿತಿಗಳನ್ನು ಪ್ರಜಾವಾಣಿ ಪತ್ರಿಕೆಯ ಜನವರಿ 23 ಮತ್ತು ಫೆಬ್ರವರಿ 10ರ ಆಳ-ಅಗಲ ವರದಿಗಳಿಂದ ಪಡೆದುಕೊಳ್ಳಲಾಗಿದೆ.)
(ಮುಂದಿನ ಭಾಗದಲ್ಲಿ : ಹಿಮಾಲಯದಲ್ಲಿ ವಿಪತ್ಕಾರಿ ಯೋಜನೆಗಳ ಸೂಕ್ಷ್ಮ ನೋಟ)
