ಬಜೆಟ್‌ನ ವಿಕೃತ ಕಾರ್ಯತಂತ್ರ-ಜನರ ಪರಿಸ್ಥಿತಿಗಳು ಇನ್ನಷ್ಟು ಹದಗೆಡಲಿವೆ

ಭಾರತದ ಅರ್ಥವ್ಯವಸ್ಥೆಯ ಪ್ರಸ್ತುತ ಸಂದರ್ಭದಲ್ಲಿ ಬಂದಿರುವ ಬಜೆಟ್ ಸಂಪೂರ್ಣವಾಗಿ ವಿಕೃತ ದಾರಿ ಹಿಡಿದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಫ್ಯಾಸಿಸ್ಟ್ ತೆರನ ಸರ್ಕಾರಗಳು ಜನರ ಸ್ಥಿತಿಯನ್ನು ವಾಸ್ತವವಾಗಿ ಸುಧಾರಿಸುವುದಕ್ಕಿಂತ ಅವರಿಗೆ ತಮ್ಮ ಉದಾರತೆ ಪ್ರದರ್ಶಿಸುವುದರ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತವೆ. ಇದು 1930ರ ದಶಕದ ಫ್ಯಾಸಿಸಂ ಮತ್ತು ಪ್ರಸ್ತುತ ಫ್ಯಾಸಿಸ್ಟ್ ಸರ್ಕಾರಗಳ ನಡುವಿನ ಒಂದು ವ್ಯತ್ಯಾಸವನ್ನು ಒತ್ತಿಹೇಳುತ್ತದೆ. ಉದ್ಯೋಗವನ್ನು ಹೆಚ್ಚಿಸುವ ವಿಷಯದಲ್ಲಿ ನೇರ ನೇಮಕಾತಿ ಹಾಗೂ ಜನತೆಗೆ ನೇರ ಹಣ ವರ್ಗಾವಣೆ ಈ ಎರಡೂ ವಿಧಗಳಲ್ಲಿ ವಿಫಲವಾಗಿರುವ ಬಜೆಟ್‍ ಇದು. ಜನರ ಪರಿಸ್ಥಿತಿಗಳು ಇನ್ನೂ ಎರಡು ಅಧಿಕ ಕಾರಣಗಳಿಂದಾಗಿ ಇನ್ನಷ್ಟು ಹದಗೆಡಲಿವೆ: ಮೊದಲನೆಯದು, ಗ್ರಾಮೀಣ ಭಾರತದ ಜೀವನಾಧಾರವಾಗಿರುವ 5 ಕೆಜಿ ಆಹಾರ ಧಾನ್ಯಗಳ ವಿತರಣೆಯು 2027ರಲ್ಲಿ ಕೊನೆಗೊಳ್ಳಲಿರುವುದು. ಮತ್ತು ಎರಡನೆಯದು, ಈಗ ಸಹಿ ಹಾಕುತ್ತಿರುವ ‘ಅಸಮಾನ ವ್ಯಾಪಾರ ಒಪ್ಪಂದಗಳು’. ಆದ್ದರಿಂದ ಮುಂಬರುವ ತಿಂಗಳುಗಳಲ್ಲಿ “ದ್ವೇಷಕೋರತನ’ವನ್ನು ಆಶ್ರಯಿಸುವುದು ಹಲವು ಪಟ್ಟು ಹೆಚ್ಚುವ ಸಾಧ್ಯತೆಯಿದೆ. ಬಜೆಟ್‌

ಪ್ರೊ.ಪ್ರಭಾತ್ ಪಟ್ನಾಯಕ್

ಅನು:ಕೆ.ಎಂ. ನಾಗರಾಜ್

ಬೂರ್ಜ್ವಾಗಳ ದೇವವಾಣಿ ಎನಿಸಿರುವ ಐಎಂಎಫ್ ಕೂಡ ಭಾರತದ ಜಿಡಿಪಿ ಅಂದಾಜುಗಳ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿರುವುದರಿಂದ, ಬಜೆಟ್‌ನಲ್ಲಿರುವ ನಿಖರ ಅಂಕಿಅಂಶಗಳು ಒಂದು ಮಟ್ಟದ ಊಹೆಗಳನ್ನು ಹಾಗೂ ನಾಮಮಾತ್ರ ಜಿಡಿಪಿಯ ಬೆಳವಣಿಗೆ ದರವನ್ನು ಆಧರಿಸಿರುವುದರಿಂದ ಅವುಗಳು ಅರ್ಥಹೀನ ಎಂದೇ ಹೇಳಬೇಕಾಗುತ್ತದೆ. ಹಾಗೆ ನೋಡಿದರೆ, ಪ್ರಸ್ತುತ ಬಜೆಟ್‌ನಲ್ಲಿ ಪ್ರಕಟಿಸಿರುವ ಹಲವಾರು ತೆರಿಗೆ ಕ್ರಮಗಗಳಿಂದ ಎಷ್ಟು ಆದಾಯ ನಷ್ಟವಾಗುತ್ತದೆ ಅಥವಾ ಎಷ್ಟು ಆದಾಯ ಹೆಚ್ಚುತ್ತದೆ ಎಂಬುದರ ಅಂದಾಜುಗಳನ್ನು ನೀಡುವ ಗೋಜಿಗೂ ಸಹ ಅದು ಹೋಗಿಲ್ಲ. ಅದೇನೇ ಇರಲಿ, ಬಜೆಟ್‌ನಲ್ಲಿ ಒದಗಿಸಿರುವ ಅಂಕಿಅAಶಗಳ ಮೂಲಕ ಬಜೆಟ್ ಹೊಂದಿರುವ ಕಾರ್ಯತಂತ್ರ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನು ಗ್ರಹಿಸಬಹುದು. ಅದು, ಭಾರತದ ಅರ್ಥವ್ಯವಸ್ಥೆಯ ಪ್ರಸ್ತುತ ಸಂದರ್ಭದಲ್ಲಿ ಸಂಪೂರ್ಣವಾಗಿ ವಿಕೃತ ದಾರಿ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

ಪ್ರಸ್ತುತ ಭಾರತದ ಅರ್ಥವ್ಯವಸ್ಥೆಯ ತುರ್ತಿನ ಸಮಸ್ಯೆಗಳೆಂದರೆ: ಆರ್ಥಿಕ ಅಸಮಾನತೆಗಳು ಕಳೆದ ನೂರು ವರ್ಷಗಳ ಅವಧಿಯಲ್ಲೇ ಕಂಡಿರದಷ್ಟು ಅಸಾಧಾರಣ ಮಟ್ಟದಲ್ಲಿ ಏರಿಕೆಯಾಗಿರುವುದು; ಯೋಜನಾ ಆಯೋಗವು ಆರಂಭದಲ್ಲಿ ವ್ಯಾಖ್ಯಾನಿಸಿದ ದೈನಿಕ ಕ್ಯಾಲೋರಿ ಸೇವನೆಯ ಮಾನದಂಡದ ಪ್ರಕಾರವಾಗಿ ಕಡು ಬಡತನವು ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿರುವುದು; ಮತ್ತು, ನಿರುದ್ಯೋಗದಲ್ಲಿ ಅಗಾಧ ಏರಿಕೆ, ಈಗ ದೇಶದ ವಿದ್ಯಾವಂತ ಯುವಜನರ ಒಂದು ದೊಡ್ಡ ಭಾಗವನ್ನು ಕೂಡ ಬಾಧಿಸುತ್ತಿರುವುದು.. ಈ ಎಲ್ಲ ಸಮಸ್ಯೆಗಳಿಗೆ ಒಂದು ಸರ್ವಸಾಮಾನ್ಯ ಪರಿಹಾರವೆಂದರೆ ಜನಸಾಮಾನ್ಯರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವುದೇ ಆಗಿದೆ. ಈ ಕ್ರಮದಿಂದಾಗಿ ಜಿಡಿಪಿಯ ಅನುಪಾತದಲ್ಲಿ ವಿತ್ತೀಯ ಕೊರತೆಯ ಶೇಕಡಾವಾರು ಪ್ರಮಾಣವು ಏರಿಕೆಯಾಗಬಾರದು ಎಂದಾದರೆ, ಶ್ರೀಮಂತರ ಮೇಲೆ ಅಧಿಕ ತೆರಿಗೆಯನ್ನು ಹೇರುವ ಮೂಲಕ ಮಾತ್ರ ಅದನ್ನು ಸಾಧಿಸಬಹುದು. ಇದು ಅರ್ಥವ್ಯವಸ್ಥೆಯಲ್ಲಿ ಬಳಕೆಯ ಪ್ರಮಾಣವನ್ನು ಹೆಚ್ಚಿಸಿ ಒಟ್ಟು ಬೇಡಿಕೆಯನ್ನು ಹೆಚ್ಚಿಸುತ್ತದೆ, ಅದೂ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಸರಕುಗಳ ಬೇಡಿಕೆಯನ್ನು ಹೆಚ್ಚಿಸುವ ಮೂಲಕ. ಇದು ವರಮಾನಗಳ ಅಸಮಾನತೆಯನ್ನು ಇಳಿಕೆಗೆ ದಾರಿ ಮಾಡಿಕೊಡುತ್ತದೆ, ಏಕೆಂದರೆ, ಶ್ರೀಮಂತರ ಮೇಲೆ ತೆರಿಗೆ ಹೇರಿದ ನಂತರದ ಅವರ ವರಮಾನಗಳು ಅಷ್ಟರಮಟ್ಟಿಗೆ ಇಳಿಕೆಯಾಗುತ್ತವೆ.

ಎಲ್ಲ ಸಮಸ್ಯೆಗಳಿಗೆ ಒಂದು ಸರ್ವಸಾಮಾನ್ಯ ಪರಿಹಾರವೆಂದರೆ ಜನಸಾಮಾನ್ಯರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವುದೇ ಆಗಿದೆ. ಈ ಕ್ರಮದಿಂದಾಗಿ ಜಿಡಿಪಿಯ ಅನುಪಾತದಲ್ಲಿ ವಿತ್ತೀಯ ಕೊರತೆಯ ಶೇಕಡಾವಾರು ಪ್ರಮಾಣವು ಏರಿಕೆಯಾಗಬಾರದು ಎಂದಾದರೆ, ಶ್ರೀಮಂತರ ಮೇಲೆ ಅಧಿಕ ತೆರಿಗೆಯನ್ನು ಹೇರುವ ಮೂಲಕ ಮಾತ್ರ ಅದನ್ನು ಸಾಧಿಸಬಹುದು.

ತದ್ವಿರುದ್ಧ ದಿಕ್ಕು

ಈ ಬಜೆಟ್ ಕಾರ್ಯತಂತ್ರವು ವಿಕೃತಿಯೆಂದರೆ, ಇದಕ್ಕೆ ತದ್ವಿವಿರುದ್ಧವಾದ ಒಂದು ದಿಕ್ಕನ್ನು ಅದು ಅನುಸರಿಸುವುದು. ಒಟ್ಟು ತೆರಿಗೆ ಆದಾಯವು ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ಯಾವುದೇ ಹೆಚ್ಚಳವನ್ನು ತೋರಿಸುವುದರ ಬದಲು, 2023-24 ಮತ್ತು 2024-25ರಲ್ಲಿ 11.5 ಮತ್ತು 2025-26ರಲ್ಲಿ (ಪರಿಷ್ಕೃತ ಅಂದಾಜು) 11.4 ರಿಂದ 2026-27 ವರ್ಷದಲ್ಲಿ 11.2ಕ್ಕೆ ತುಸು ಇಳಿಕೆಯನ್ನೇ ತೋರಿಸುತ್ತದೆ. ತೆರಿಗೆ ಆದಾಯದ ಇಳಿಕೆಯೊಂದಿಗೆ ವಿತ್ತೀಯ ಕೊರತೆಯು 2024-25ರಲ್ಲಿದ್ದ ಶೇ. 4.8 ಮತ್ತು 2025-26ರ (ಪರಿಷ್ಕೃತ ಅಂದಾಜು) ಶೇ. 4.4ರಿಂದ ಶೇ. 4.3ಕ್ಕೆ ಇಳಿಯುತ್ತದೆ ಎಂದು ಭಾವಿಸಲಾಗಿದೆ. ಶ್ರೀಮಂತರ ಮೇಲೆ ಅಧಿಕ ತೆರಿಗೆ ವಿಧಿಸಲು ಅಥವಾ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರವು ನಿರಾಕರಿಸುವುದರಿಂದ ಒಟ್ಟು ಖರ್ಚುಗಳು ಕಡಿತಗೊಳ್ಳುವ ಪರಿಸ್ಥಿತಿಯಲ್ಲಿ, ಬಂಡವಾಳ ವೆಚ್ಚಗಳ ಮೊತ್ತವು 2024-25ರಲ್ಲಿದ್ದ ಜಿಡಿಪಿಯ ಶೇ. 4.0 ಮತ್ತು 2025-26ರ (ಪರಿಷ್ಕೃತ ಅಂದಾಜು) ಶೇ. 3.9ರಿಂದ 2026-27ರಲ್ಲಿ ಶೇ. 4.4ರ ಮಟ್ಟಕ್ಕೆ ಏರಿಕೆಯಾಗಿರುವುದು ಕಂಡುಬರುತ್ತದೆ.

ಆದರೆ, ಬಂಡವಾಳ ವೆಚ್ಚಗಳ ಈ ಮಟ್ಟದ ಏರಿಕೆಯೂ ಒಂದು ಭ್ರಮೆಯೇ ಸರಿ. 2023-24 ಮತ್ತು 2024-25ರಲ್ಲಿ ಜಿಡಿಪಿಯ ಶೇ. 3.2ರಷ್ಟಿದ್ದ ಮತ್ತು 2025-26ರ (ಪರಿಷ್ಕೃತ ಅಂದಾಜು) ಶೇ. 3.1ಕ್ಕೆ ಇಳಿದ ಕೇಂದ್ರ ಸರ್ಕಾರದ ಸ್ವಂತ ಬಂಡವಾಳ ವೆಚ್ಚವು 2026-27ರಲ್ಲಿ ಶೇ. 3.1ರಲ್ಲೇ ಉಳಿಯುವ ನಿರೀಕ್ಷೆಯಿದೆ. ಬಂಡವಾಳ ಆಸ್ತಿಗಳ ಸೃಷ್ಟಿಗಾಗಿ ಒದಗಿಸುವ ಅನುದಾನವು 2024-25ರಲ್ಲಿದ್ದ ಶೇ. 0.8 ಮತ್ತು 2025-26ರ (ಪರಿಷ್ಕೃತ ಅಂದಾಜು) ಶೇ. 0.9ರಿಂದ 2026-27ರಲ್ಲಿ ಶೇ. 1.3ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಆದರೆ, ಬಂಡವಾಳ ಆಸ್ತಿಗಳ ಸೃಷ್ಟಿಗಾಗಿ ಒದಗಿಸುವ ಅನುದಾನವು ಉದ್ಯೋಗ ಖಾತ್ರಿ ಯೋಜನೆಯಡಿಯ ಹಂಚಿಕೆಯನ್ನು ಒಳಗೊಂಡಿದೆ. ಈ ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಿಂದಿನ 90:10 ಅನುಪಾತದ ಬದಲಿಗೆ ಈಗ 60:40 ಆಧಾರದ ಮೇಲೆ ಹಂಚಿಕೊಳ್ಳಬೇಕಾಗಿದೆ. ಎಂದರೆ ಹಣದ ಕೊರತೆಯಿಂದ ಬಳಲುತ್ತಿರುವ ರಾಜ್ಯ ಸರ್ಕಾರಗಳು ಈ ಯೋಜನೆಗೆ ಬೇಕಾಗುವ ಹಣವನ್ನು ಹೊಂದಿಸಿಕೊಳ್ಳುವುದು ಸಾಧ್ಯವಾಗದಿದ್ದರೆ, ಆಗ ಕೇಂದ್ರವು ಈ ಯೋಜನೆಗಾಗಿ ಮೂಲತಃ ನಿಗದಿಪಡಿಸಿದ ಹಣವನ್ನು ಖರ್ಚು ಮಾಡಬೇಕಾಗಿಲ್ಲ ಎಂಬುದು ಇದರ ಅರ್ಥವಾಗುತ್ತದೆ. ನಂತರ ಅದು ಬಜೆಟ್‌ನಲ್ಲಿ ತೋರಿಸಿರುವ ವೆಚ್ಚವನ್ನು ಕೈಗೊಳ್ಳಬೇಕಾಗಿಲ್ಲ ಮತ್ತು ಅದೇ ಸಮಯದಲ್ಲಿ ಯೋಜನೆಯು ಅನುಷ್ಠಾನಗೊಳ್ಳದ ಹೊಣೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸುತ್ತದೆ. ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲಿನ ವೆಚ್ಚವನ್ನು 60:40 ಅನುಪಾತದಲ್ಲಿ ಭರಿಸುವ ನಿರ್ಧಾರವನ್ನು ಕೇಂದ್ರವು ಏಕಪಕ್ಷೀಯವಾಗಿ ಮತ್ತು ಒಂದು ನಿರಂಕುಶ ರೀತಿಯಲ್ಲಿ ತೆಗೆದುಕೊಂಡಿದೆ ಮತ್ತು ಅದನ್ನು ರಾಜ್ಯಗಳ ಮೇಲೆ ಹೇರಿದೆ ಕೂಡ.

ಇದನ್ನೂ ಓದಿ : ಎ.ಐ.ನಂತಹ ತಾಂತ್ರಿಕ ಪ್ರಗತಿ ಮತ್ತು ಸಮಾಜವಾದಿ ವ್ಯವಸ್ಥೆಯ ಅಗತ್ಯ

ಈ ಮಟ್ಟದ ಠಕ್ಕುತನ

ದೇಶವು ಒಂದು “ಸಹಕಾರಿ ಒಕ್ಕೂಟ” ಎಂದು ಸಂವಿಧಾನ ಹೇಳುತ್ತದೆಯಾದರೂ, ಈ ಪರಿಕಲ್ಪನೆಯೇ ಈಗ ಒಂದು ಆಡಂಬರದ ಪದ  ಎಂಬಂತಾಗಿದೆ. ಕೇಂದ್ರವು ರಾಜ್ಯ ಸರ್ಕಾರಗಳ ಸಂಪನ್ಮೂಲಗಳನ್ನು ಮತ್ತು ಅವುಗಳ ಜವಾಬ್ದಾರಿಗಳನ್ನು ಏಕಪಕ್ಷೀಯವಾಗಿ ನಿರ್ಧರಿಸುತ್ತದೆ ಮತ್ತು ಈ ಅಂಶವನ್ನು ರಾಜ್ಯಗಳ ನಡುವೆ ಪಕ್ಷಪಾತ ಮಾಡಲು ಬಳಸುತ್ತದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಕೇಂದ್ರವು ಪಕ್ಷಪಾತಿಯಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳಿಗೆ ಕಿರುಕುಳ ಕೊಡುತ್ತದೆ ಮತ್ತು ಅವುಗಳನ್ನು “ಕ್ರಿಯಾಶೀಲವಲ್ಲ” ಎಂದು ದೂಷಿಸುತ್ತದೆ. ವೈ. ವಿ. ರೆಡ್ಡಿ ಅಧ್ಯಕ್ಷರಾಗಿದ್ದ 14ನೇ ಹಣಕಾಸು ಆಯೋಗವು 2020ರ ವೇಳೆಗೆ ವಿಭಜಿಸಬಹುದಾದ ನಿಧಿಯಲ್ಲಿ ರಾಜ್ಯ ಸರ್ಕಾರಗಳ ಪಾಲನ್ನು ಶೇ. 32ರಿಂದ ಶೇ. 42ಕ್ಕೆ ಏರಿಸಬೇಕೆಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರವು ಒಟ್ಟು ತೆರಿಗೆ ಆದಾಯದಲ್ಲಿ (ಸೆಸ್‌ಗಳು ಮತ್ತು ಸರ್‌ಚಾರ್ಜ್ ಗಳನ್ನು ಒಳಗೊಂಡಂತೆ) ರಾಜ್ಯಗಳು ಪಡೆಯುವ ಪಾಲು ಶೇ. 34ನ್ನು ಮೀರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು, ರಾಜ್ಯಗಳೊಂದಿಗೆ ಹಂಚಿಕೆಯಾಗುವ ತೆರಿಗೆಗಳ ಬದಲಿಗೆ, ರಾಜ್ಯಗಳೊಂದಿಗೆ ಹಂಚಿಕೊಳ್ಳದ ಸೆಸ್‌ಗಳು ಮತ್ತು ಸರ್‌ಚಾರ್ಜ್ ಗಳ ಆಶ್ರಯ ಪಡೆಯಿತು. ಇದು ಸಂಪನ್ಮೂಲಗಳನ್ನು ಕೇಂದ್ರೀಕರಿಸುವ ಒಂದು ಕಾನೂನುಬಾಹಿರ ಕೃತ್ಯವಾಗಿ ಪರಿಣಮಿಸಿದೆ.

ಈ ಮಟ್ಟದ ಠಕ್ಕುತನದ ನಡುವೆಯೂ ಕೇಂದ್ರ ಸರ್ಕಾರದ ಖರ್ಚುಗಳು ಅಚಲವಾಗಿರುವಂತೆ ನೋಡಿಕೊಳ್ಳಲಾಗಿದೆ (ಬಂಡವಾಳ ಸ್ವತ್ತುಗಳನ್ನು ರೂಪಿಸಲು ಬೇಕಾಗುವ ನೆರವು ಈಗಾಗಲೇ ಉಲ್ಲೇಖಿಸಿದ ಕಾರಣಗಳಿಗಾಗಿ ಬಜೆಟ್ ನೀಡಿಕೆಗಿಂತ ಕಡಿಮೆಯಿದ್ದರೆ) ಅಥವಾ ಜಿಡಿಪಿಯ ಅನುಪಾತದಲ್ಲಿ ಸ್ವಲ್ಪ ಹೆಚ್ಚು ಇರುತ್ತದೆ. ಆದರೆ, ಇದು ಭಾರತದ ಅರ್ಥವ್ಯವಸ್ಥೆಯ ತಕ್ಷಣದ ಮೂರು ಬಿಕ್ಕಟ್ಟುಗಳನ್ನು ನಿವಾರಿಸಲು ಸಂಪೂರ್ಣವಾಗಿ ಅಸಮರ್ಥವಾಗಿದೆ. ಒಟ್ಟಾರೆಯಾಗಿ, ಕೇಂದ್ರದ ಬಂಡವಾಳ ವೆಚ್ಚದಿಂದ ಸೃಷ್ಟಿಯಾಗುವ ಉದ್ಯೋಗಗಳ ಪ್ರಮಾಣ ಜನರಿಗೆ ಮಾಡುವ ವರ್ಗಾವಣೆಗಿಂತ ಕಡಿಮೆ ಇರುತ್ತದೆ. ಏಕೆಂದರೆ ಬಂಡವಾಳ ವೆಚ್ಚದ ತಿರುಳಿನಂತಿರುವ ಮೂಲಸೌಕರ್ಯ ವೆಚ್ಚದಲ್ಲಿರುವ ಕೂಲಿಯ ಅಂಶವು ಒಟ್ಟು ಮೊತ್ತದಲ್ಲಿ ಕೊಂಚ ಮಾತ್ರ, ಆದರೆ ಜನರಿಗೆ ಮಾಡುವ ವರ್ಗಾವಣೆಯ ಇಡೀ ಮೊತ್ತವು ಕೂಲಿ ಪಾವತಿಯನ್ನು ಹೋಲುತ್ತದೆ. ಮತ್ತು, ಮೂಲಸೌಕರ್ಯ ಹೂಡಿಕೆಗೆ ಮೀಸಲಾಗಿರುವ ಸಂಪನ್ಮೂಲಗಳನ್ನು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅಥವಾ ಸರ್ಕಾರದ ಆರೋಗ್ಯ ಸೌಲಭ್ಯಗಳ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲು ಖರ್ಚು ಮಾಡಿದರೆ, ಆಗ ಉದ್ಯೋಗ ಪರಿಸ್ಥಿತಿಯ ಮೇಲೆ ನೇರ ಪರಿಣಾಮವಿರುತ್ತದೆ ಮತ್ತು ಹೊಸದಾಗಿ ಉದ್ಯೋಗ ಪಡೆದವರು ಸೃಷ್ಟಿಸುವ ಬೇಡಿಕೆಯಿಂದಾಗಿ ಎರಡನೇ ಸುತ್ತಿನ ಗುಣಕ ಪರಿಣಾಮಗಳು ಹೆಚ್ಚು ಮಹತ್ವದ್ದಾಗಿರುತ್ತವೆ.

ಕೇಂದ್ರ ಸರ್ಕಾರವು ಒಟ್ಟು ತೆರಿಗೆ ಆದಾಯದಲ್ಲಿ (ಸೆಸ್‌ಗಳು ಮತ್ತು ಸರ್‌ಚಾರ್ಜ್ ಗಳನ್ನು ಒಳಗೊಂಡಂತೆ) ರಾಜ್ಯಗಳು ಪಡೆಯುವ ಪಾಲು ಶೇ. 34ನ್ನು ಮೀರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು, ರಾಜ್ಯಗಳೊಂದಿಗೆ ಹಂಚಿಕೆಯಾಗುವ ತೆರಿಗೆಗಳ ಬದಲಿಗೆ, ರಾಜ್ಯಗಳೊಂದಿಗೆ ಹಂಚಿಕೊಳ್ಳದ ಸೆಸ್‌ಗಳು ಮತ್ತು ಸರ್‌ಚಾರ್ಜ್ ಗಳ ಆಶ್ರಯ ಪಡೆಯಿತು. ಇದು ಸಂಪನ್ಮೂಲಗಳನ್ನು ಕೇಂದ್ರೀಕರಿಸುವ ಒಂದು ಕಾನೂನುಬಾಹಿರ ಕೃತ್ಯವಾಗಿ ಪರಿಣಮಿಸಿದೆ.ಈ ಮಟ್ಟದ ಠಕ್ಕುತನ…..

ಆದ್ದರಿಂದ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಡತನದ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ಬಜೆಟ್ ಏನನ್ನೂ ಮಾಡುವುದಿಲ್ಲ. ವಾಸ್ತವವಾಗಿ ಅದು ತದ್ವಿರುದ್ಧವಾದದ್ದನ್ನು ಮಾಡುತ್ತದೆ: ಒಂದೆಡೆಯಲ್ಲಿ ಖಾಸಗಿ ವಲಯಕ್ಕೆ (ನೇರ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಬಹುರಾಷ್ಟ್ರೀಯ ಕಂಪನಿಗಳಿಗೆ) ತೆರಿಗೆ ರಿಯಾಯಿತಿಗಳನ್ನು ಒದಗಿಸುವ ಮೂಲಕ ಮತ್ತು ಇನ್ನೊಂದೆಡೆಯಲ್ಲಿ ನೇರವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಖರ್ಚುಗಳ (ಶಿಕ್ಷಕರ ಸಂಬಳದAತಹ) ವೆಚ್ಚದಲ್ಲಿ ಮತ್ತು ಜನರಿಗೆ ಮಾಡುವ ವರ್ಗಾವಣೆಯ ವೆಚ್ಚದಲ್ಲಿ ಕಡಿತ ಮಾಡಿ ಮೂಲಸೌಕರ್ಯದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ.

ಸರ್ಕಾರಕ್ಕೆ, ಖಾಸಗಿ ಹೂಡಿಕೆಯು ಬೇಡಿಕೆ ಬೆಳೆಯುವಂತಿದ್ದರೆ, ಅದಕ್ಕೆ ಸ್ಪಂದನೆಯಾಗಿ ಮಾತ್ರವೇ ಸಂಭವಿಸುತ್ತದೆ ಎಂಬ ಸರಳ ಸಂಗತಿಯ ಅರಿವು ಇದ್ದಂತೆ ತೋರುತ್ತಿಲ್ಲ. ಅಂತಹ ಹೂಡಿಕೆಯಿಂದ ಸೃಷ್ಟಿಯಾದ ಉತ್ಪಾದನಾ ಸಾಮರ್ಥ್ಯವು ಬಳಕೆಯಾಗದೆ ಉಳಿಯುವ ಸಾಧ್ಯತೆಯಿದ್ದರೆ, ತೆರಿಗೆ ರಿಯಾಯಿತಿಗಳು ಎಷ್ಟೇ ಇದ್ದರೂ ಅವು ಬಂಡವಾಳಗಾರರನ್ನು ಹೂಡಿಕೆ ಮಾಡುವಂತೆ ಒಲಿಸುವುದಿಲ್ಲ. 2019ರಲ್ಲಿ ಕಾರ್ಪೊರೇಟ್ ತೆರಿಗೆ ದರ ಇಳಿಕೆಯಂತಹ ಬೃಹತ್ ತೆರಿಗೆ ರಿಯಾಯಿತಿಗಳನ್ನು ಒಳಗೊಂಡAತೆ ಎಲ್ಲ ಹಿಂದಿನ ತೆರಿಗೆ ರಿಯಾಯಿತಿಗಳ ಹೊರತಾಗಿಯೂ, ಖಾಸಗಿ ಹೂಡಿಕೆಯು ನಿಧಾನಗತಿಯಲ್ಲೇ ಉಳಿದಿರುವ ಕಾರಣ ಇದುವೇ. ಅದೇ ರೀತಿಯಲ್ಲಿ, ಇದು ವಿಶ್ವ ಅರ್ಥವ್ಯವಸ್ಥೆಯು ನಿಧಾನಗೊಂಡಿರುವ ಮತ್ತು ಅದರೊಂದಿಗೆ ಹೂಡಿಕೆಯೂ ಸಾಮಾನ್ಯವಾಗಿ ನಿಧಾನಗೊಂಡಿರುವ ಸಮಯ ಕೂಡ, ಬಹುರಾಷ್ಟ್ರೀಯ ಕಂಪನಿಗಳು ಕಡಿಮೆ ತೆರಿಗೆ ಪಾವತಿ ಮಾಡುವಂತಿದ್ದರೆ ಮಾತ್ರವೇ ವಿದೇಶಿ ನೇರ ಹೂಡಿಕೆ ಭಾರತದತ್ತ ಹರಿಯುತ್ತದೆ ಎಂದು ನಿರೀಕ್ಷಿಸುವುದು ಅಸಂಬದ್ಧವಾಗುತ್ತದೆ. ಮತ್ತು, ಯು.ಎಸ್.ನಿಂದ ಹೂಡಿಕೆ-ಹೊರಹರಿವನ್ನು ತಡೆಯುವ ಉದ್ದೇಶದಿಂದ ಸುಂಕಗಳನ್ನು ಟ್ರಂಪ್ ಹೆಚ್ಚಿಸುತ್ತಿರುವಾಗ ವಿದೇಶಿ ನೇರ ಹೂಡಿಕೆ ಭಾರತದತ್ತ ಹರಿಯುತ್ತದೆ ಎಂದು ನಂಬುವುದು ಇನ್ನೂ ಹೆಚ್ಚು ಅಸಂಬದ್ಧವಾಗುತ್ತದೆ.

ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ

ಇನ್ನೂ ಎರಡು ಅಧಿಕ ಕಾರಣಗಳಿಂದಾಗಿ ಜನರ ಪರಿಸ್ಥಿತಿಗಳು ಇನ್ನಷ್ಟು ಹದಗೆಡಲಿವೆ: ಮೊದಲನೆಯದು, ತಿಂಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯಗಳ ವಿತರಣೆಯು 2027ರಲ್ಲಿ ಕೊನೆಗೊಳ್ಳಲಿದೆ. ಇದು ಗ್ರಾಮೀಣ ಭಾರತದ ಜೀವನಾಧಾರವಾಗಿದೆ ಮತ್ತು ಅದು ಕೊನೆಗೊಳ್ಳುವುದರಿಂದ ಜನರಿಗೆ ಹೆಚ್ಚು ಸಂಕಷ್ಟಗಳನ್ನು ತರುತ್ತದೆ. ಎರಡನೆಯದು, ಈಗ ಸಹಿ ಹಾಕುತ್ತಿರುವ ವ್ಯಾಪಾರ ಒಪ್ಪಂದಗಳು, ಯುಎಸ್‌ನೊಂದಿಗಿನ ವ್ಯಾಪಾರ ಒಪ್ಪಂದವೂ ಸೇರಿ.

ಮಾಧ್ಯಮಗಳ ವರದಿಗಳನ್ನು ನಂಬುವುದಾದರೆ, ಯುಎಸ್‌ನೊಂದಿಗಿನ ವ್ಯಾಪಾರ ಒಪ್ಪಂದವು ಭಾರತದ ಸರಕುಗಳ ಮೇಲೆ ಶೇ. 18ರಷ್ಟು ಸುಂಕಗಳನ್ನು ವಿಧಿಸಲು ಅಮೆರಿಕಕ್ಕೆ ಅವಕಾಶ ನೀಡುತ್ತದೆ. ಆದರೆ, ಭಾರತವು ಅಮೆರಿಕದ ಸರಕುಗಳನ್ನು ಸುಂಕ ಹಾಕದೆ ಆಮದು ಮಾಡಿಕೊಳ್ಳುತ್ತದೆ. ಈ “ಅಸಮಾನ ಒಪ್ಪಂದ”ವು ಭಾರತದ ಕೃಷಿ ವಲಯ, ಅದರಲ್ಲೂ ವಿಶೇಷವಾಗಿ ಹೈನು ಉದ್ಯಮ ವಲಯವು ಹೆಚ್ಚು ತೊಂದರೆಗಳನ್ನು ಅನುಭವಿಸಲಿದೆ. ಆದರೆ ಫ್ಯಾಸಿಸ್ಟ್ ತೆರನ ಸರ್ಕಾರವು ಜನರ ಸ್ಥಿತಿಯನ್ನು ವಾಸ್ತವವಾಗಿ ಸುಧಾರಿಸುವುದಕ್ಕಿಂತ ಅವರಿಗೆ ಉದಾರತೆ ಪ್ರದರ್ಶಿಸುವುದರ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತದೆ.

ಫ್ಯಾಸಿಸ್ಟ್ ತೆರನ ಸರ್ಕಾರವು ಜನರ ಸ್ಥಿತಿಯನ್ನು ವಾಸ್ತವವಾಗಿ ಸುಧಾರಿಸುವುದಕ್ಕಿಂತ ಅವರಿಗೆ ಉದಾರತೆ ಪ್ರದರ್ಶಿಸುವುದರ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತದೆ.

ಈ ಬಜೆಟ್, 1930ರ ದಶಕದ ಫ್ಯಾಸಿಸಂ ಮತ್ತು ಪ್ರಸ್ತುತ ಫ್ಯಾಸಿಸ್ಟ್ ಸರ್ಕಾರಗಳ ನಡುವಿನ ಒಂದು ವ್ಯತ್ಯಾಸವನ್ನು ಒತ್ತಿಹೇಳುತ್ತದೆ. 1930ರ ದಶಕದಲ್ಲಿ, ಮಿಲಿಟರಿ ವೆಚ್ಚಗಳನ್ನು ಹೆಚ್ಚಿಸಲು ಫ್ಯಾಸಿಸ್ಟ್ ದೇಶಗಳಲ್ಲಿ ವಿತ್ತೀಯ ಕೊರತೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಇದು ಒಟ್ಟು ಬೇಡಿಕೆಯ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿತು ಮತ್ತು ಆ ದೇಶಗಳನ್ನು ಮಹಾ ಆರ್ಥಿಕ ಕುಸಿತದಿಂದ ಹೊರತಂದಿತು. ಅದರ ಜೊತೆಗೆ, ಸರ್ಕಾರದ ವೆಚ್ಚಗಳ ಈ ಹೆಚ್ಚಳವು ರಸ್ತೆಗಳನ್ನು ನಿರ್ಮಿಸುವುದು ಮತ್ತು ಮಿಲಿಟರಿ ಸಲಕರಣೆಗಳನ್ನು ಖರೀದಿಸುವಂತಹ ಮೂಲಸೌಕರ್ಯ ಹೂಡಿಕೆಗೆ ಮಾತ್ರ ಸೀಮಿತವಾಗಿರಲಿಲ್ಲ, ಸಶಸ್ತ್ರ ಪಡೆಗಳ ಹೆಚ್ಚಳವನ್ನೂ ಸಹ ಒಳಗೊಂಡಿತ್ತು. ಇದು ನೇರವಾಗಿ ಉದ್ಯೋಗಗಳನ್ನು ಹೆಚ್ಚಿಸಿತು. ಬಿಜೆಪಿ ನೇತೃತ್ವದ ನಮ್ಮ ಸರ್ಕಾರದಂತಹ ಸಮಕಾಲೀನ ಫ್ಯಾಸಿಸ್ಟ್ ತೆರನ ಸರ್ಕಾರಗಳು, ಒಟ್ಟು ಬೇಡಿಕೆಯನ್ನು ಹೆಚ್ಚಿಸಲು ವಿತ್ತೀಯ ಕೊರತೆಯನ್ನು ಹೆಚ್ಚಿಸುವುದು ಸಾಧ್ಯವಿಲ್ಲ. ಅಥವಾ, ಕೇವಲ ಮೂಲಸೌಕರ್ಯಕ್ಕಾಗಿಯೇ ಹೆಚ್ಚು ಖರ್ಚು ಮಾಡುವುದಕ್ಕಿಂತ ಭಿನ್ನವಾಗಿ, ಜನರ ನೇರ ನೇಮಕಾತಿಯನ್ನು ಹೆಚ್ಚಿಸುವ ಅಥವಾ ಅವರಿಗೆ ವರ್ಗಾವಣೆ ಮಾಡುವ ಯಾವುದೇ ಒಲವನ್ನು ಹೊಂದಿಲ್ಲ. ಉದ್ಯೋಗವನ್ನು ಹೆಚ್ಚಿಸುವ ವಿಷಯದಲ್ಲಿ ಇವರು ನೇರ ನೇಮಕಾತಿ ಹಾಗೂ ನೇರ ಹಣ ವರ್ಗಾವಣೆ  ಈ ಎರಡೂ ವಿಧಗಳಲ್ಲಿ  ವಿಫಲರಾಗುತ್ತಾರೆ. ಆದ್ದರಿಂದ ಮುಂಬರುವ ತಿಂಗಳುಗಳಲ್ಲಿ “ದ್ವೇಷಕೋರತನ’ವನ್ನೇ ಆಶ್ರಯಿಸುವುದು ಹಲವು ಪಟ್ಟು ಹೆಚ್ಚುವ ಸಾಧ್ಯತೆಯಿದೆ.

ಇದನ್ನೂ ನೋಡಿ : “ಏನಿದು ‘ಕೆಂಪು ಪುಸ್ತಕ’? ಅದರ ವಿಶೇಷವೇನು?” – ಡಾ. ಕೆ.ಪ್ರಕಾಶ್‌ | ಯು.ಎಸ್‌. ಸಾಮ್ರಾಜ್ಯಶಾಹಿ Janashakthi Media

 

Donate Janashakthi Media

Leave a Reply

Your email address will not be published. Required fields are marked *