ಇಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನ. ಈ ವಿಶೇಷ ದಿನದ ಸಂದರ್ಭದಲ್ಲಿ ನಾವು ಶಿವಾಜಿ ಯಾರು? ಕೇವಲ ಕತ್ತಿ ಹಿಡಿದು ಯುದ್ಧ ಗೆದ್ದ ವೀರನಾ? ಕೋಟೆಗಳನ್ನು ಜಯಿಸಿದ ರಾಜನಾ? ಅಥವಾ ಜನರ ಮನ ಗೆದ್ದ ನಾಯಕನಾ? ಜನರ ನೋವನ್ನು ಅರ್ಥಮಾಡಿಕೊಂಡ ಆಡಳಿತಗಾರನಾ?ಇತಿಹಾಸದಲ್ಲಿ ಅವರ ಹೆಸರು ಶೌರ್ಯಕ್ಕೆ ಪ್ರಸಿದ್ಧ. ಆದರೆ ಅವರ ಬದುಕಿನಲ್ಲಿ ಶೌರ್ಯಕ್ಕಿಂತಲೂ ಹೆಚ್ಚಿನ ಅರ್ಥ ಇದೆ. ಈ ಲೇಖನದ ಮೂಲಕ ಶಿವಾಜಿಯ ನಿಜವಾದ ವ್ಯಕ್ತಿತ್ವವನ್ನು, ಅವರ ಆಡಳಿತದ ಮೌಲ್ಯಗಳನ್ನು ಮತ್ತು ಜನಪರ ಚಿಂತನೆಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಶಿವಾಜಿ
ಗುರುರಾಜ ದೇಸಾಯಿ
ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ನಾವು ಬಾಲ್ಯದಿಂದಲೇ ಅನೇಕ ಕಥೆಗಳು ಕೇಳುತ್ತಾ ಬೆಳೆದವರು. ಧೈರ್ಯಶಾಲಿ ಯೋಧ, ಶತ್ರುಗಳಿಗೆ ಸವಾಲು ಹಾಕಿದ ರಾಜ, ಹಿಂದೂ ಸಾಮ್ರಾಜ್ಯದ ರಕ್ಷಕ ಇತ್ಯಾದಿ ಗುರುತುಗಳ ಮೂಲಕವೇ ನಮಗೆ ಪರಿಚಯ ಮಾಡಿಕೊಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ವಲಯಗಳು ಶಿವಾಜಿಯನ್ನು ಕೇವಲ ಹಿಂದೂಗಳ ರಕ್ಷಕನಂತೆ ಮಾತ್ರ ಚಿತ್ರಿಸುತ್ತಿರುವುದನ್ನು ಗಮನಿಸಿದ್ದೇನೆ. ಈ ಹಿನ್ನೆಲೆ ನನಗೆ ಒಂದು ಪ್ರಶ್ನೆ ಮೂಡಿತು ನಿಜವಾಗಿಯೂ ಶಿವಾಜಿ ಯಾರು? ನಾವು ಭಾವಿಸಿಕೊಂಡಿರುವ ಶಿವಾಜಿ ಮತ್ತು ಇತಿಹಾಸದಲ್ಲಿರುವ ಶಿವಾಜಿ ಒಂದೇನಾ ಎಂಬ ಪ್ರಶ್ನೆ ನನ್ನೊಳಗೆ ಮೂಡಿತು.
ಈ ಪ್ರಶ್ನೆಗೆ ಉತ್ತರ ಹುಡುಕಲು ನಾನು ಗೋವಿಂದ ಪಾನ್ಸಾರೆ ಅವರ “Who Was Shivaji?” ಶಿವಾಜಿ ಯಾರು ಎಂದು ಕನ್ನಡಕ್ಕೆ ಅನುವಾದಗೊಂಡ ಪುಸ್ತಕವನ್ನು ಓದಿದೆ. ಈ ಪುಸ್ತಕವನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ಅನುವಾದಿಸಿದ್ದು. ನವ ಕರ್ನಾಟಕ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಪುಸ್ತಕ ಚಿಕ್ಕದಾದರೂ ಅದರೊಳಗಿನ ವಿಚಾರಗಳು ಬಹಳ ಗಂಭೀರವಾಗಿವೆ. ಓದುತ್ತಾ ಹೋದಂತೆ ನನಗೆ ಶಿವಾಜಿಯ ಮತ್ತೊಂದು ಮುಖ ಕಾಣಿಸಿತು. ನಾವು ಸಾಮಾನ್ಯವಾಗಿ ಕತ್ತಿ, ಕೋಟೆ, ಯುದ್ಧ, ಸಾಹಸ ಇವುಗಳ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಈ ಪುಸ್ತಕದಲ್ಲಿ ಅವರು ಜನರ ಭಾವನೆಗಳನ್ನು ಅರ್ಥಮಾಡಿಕೊಂಡ ಆಡಳಿತಗಾರನಾಗಿ ಮೂಡಿಬರುತ್ತಾರೆ.
ಪುಸ್ತಕದಲ್ಲಿ ನನ್ನನ್ನು ಹೆಚ್ಚು ಕಾಡಿದ ಮಾತು ಯಾವುದೆಂದರೆ.. “ನೌಕಾಪಡೆಗೆ ಮಾವು ಮತ್ತು ಹಲಸಿನ ಮರಗಳ ಉಪಯೋಗ ಮುಖ್ಯವಾಗಿತ್ತು. ಆದರೂ ಜನರು ತಮ್ಮ ಮಕ್ಕಳಂತೆ ಬೆಳೆಸಿದ ಆ ಮರಗಳನ್ನು ಕತ್ತರಿಸಬಾರದು ಎಂದು ಶಿವಾಜಿ ಸೈನಿಕರಿಗೆ ಹೇಳುತ್ತಿದ್ದರು. ಒಂದು ಮರ ಒಣಗಿದರೂ ಅದರ ಮಾಲೀಕರನ್ನು ಮನವೊಲಿಸಿ, ಅವರ ತೃಪ್ತಿಯಿಂದಲೇ, ಅವರ ಕೈಯಿಂದಲೇ ಕತ್ತರಿಸಬೇಕು ಎಂದು ಆದೇಶಿಸುತ್ತಾರೆ. ಈ ಉದಾಹರಣೆಯೇ ಅವರ ಆಡಳಿತದ ಮೌಲ್ಯಗಳನ್ನು ತೋರಿಸುತ್ತದೆ. ಅಧಿಕಾರ ಇದ್ದರೂ ಜನರ ನೋವಿಗೆ ಗೌರವ ಕೊಟ್ಟ ರಾಜ ಶಿವಾಜಿ.
ಶಿವಾಜಿ ಸಿದ್ಧಗೊಂಡಿದ್ದ ಸಿಂಹಾಸನವನ್ನು ಪಡೆದ ರಾಜನಲ್ಲ. ಹೋರಾಟದಿಂದ ರಾಜ್ಯವನ್ನು ಕಟ್ಟಿದವರು. ಹಲವು ವರ್ಷಗಳ ಪರಿಶ್ರಮ, ಯುದ್ಧ ಮತ್ತು ತಂತ್ರಗಳಿಂದ ಸ್ವರಾಜ್ಯವನ್ನು ನಿರ್ಮಿಸಿದರು. 1674ರಲ್ಲಿ ರೈಗಡದಲ್ಲಿ(ರಾಯಗಡ) ನಡೆದ ಪಟ್ಟಾಭಿಷೇಕ ಕೇವಲ ರಾಜಕೀಯ ಆಚರಣೆ ಅಲ್ಲ ಅದು ಹೊಸ ಆಡಳಿತದ ಆರಂಭ. ಜನರಿಗೆ ತಮ್ಮದೇ ರಾಜ್ಯ ಎಂಬ ಭಾವನೆ ಹುಟ್ಟಿಸಿದ ಕ್ಷಣ. ಸಾಮಾನ್ಯ ಜನರು ತಮ್ಮನ್ನೂ ರಾಜ್ಯದ ಭಾಗವೆಂದು ಕಂಡದ್ದು ಇದೇ ಮೊದಲ ಬಾರಿ.
ಜನ ನಾಯಕ ಶಿವಾಜಿ
ಶಿವಾಜಿಯ ಅಡಳಿತದ ಕಾಲದಲ್ಲಿ ರೈತರ ಪರಿಸ್ಥಿತಿ ಕಷ್ಟಕರವಾಗಿತ್ತು. ಜಮೀನ್ದಾರರು, ಜಾಗೀರ್ದಾರರು ರೈತರನ್ನು ಶೋಷಿಸುತ್ತಿದ್ದರು. ಶಿವಾಜಿ ಈ ಅನ್ಯಾಯವನ್ನು ಗಮನಿಸುತ್ತಾನೆ. ಬರಗಾಲ ಬಂದ ಸಂದರ್ಭದಲ್ಲಿ ತೆರಿಗೆ ಮನ್ನಾ ಮಾಡಿದರು. ಮನಬಂದಂತೆ ತೆರಿಗೆ ವಸೂಲಿ ಮಾಡುವ ಪದ್ಧತಿಯನ್ನು ನಿಲ್ಲಿಸಿದರು. ಕೃಷಿಗೆ ಉತ್ತೇಜನ ನೀಡಲು ನೆರವು ನೀಡಿದರು. ಯಾವ ಸೈನ್ಯವೂ ರೈತರ ಫಸಲನ್ನು ನಾಶ ಮಾಡಬಾರದು ಎಂದು ಆದೇಶ ಹೊರಡಿಸಿದ. ಇದರಿಂದಾಗಿ ರೈತರು ಭಯದಿಂದಲ್ಲ, ನಂಬಿಕೆಯಿಂದ ರಾಜನತ್ತ ನೋಡಲು ಆರಂಭಿಸಿದರು. ಇದು ಶಿವಾಜಿ ಅನ್ನದಾತರನ್ನು ಹೇಗೆ ಗೌರವದಿಂದ ಕಾಣುತ್ತಿದ್ದ ಎಂಬುದನ್ನು ತೋರಿಸುತ್ತದೆ.
ಶಿವಾಜಿಯ ಆಡಳಿತದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಎಂದರೆ ಆಡಳಿತ ಭಾಷೆಯನ್ನು ಪರ್ಷಿಯನ್‌ನಿಂದ ಮರಾಠಿಗೆ ಬದಲಾಯಿಸಿದದ್ದು. ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಆಡಳಿತ ನಡೆಯಬೇಕು ಎಂಬುದು ಅವರ ನಿಲುವು. ಇದು ಜನರಿಗೂ ಆಡಳಿತಕ್ಕೂ ನಡುವಿನ ಅಂತರವನ್ನು ಕಡಿಮೆ ಮಾಡಿತು. ಆದರೆ ಶಿವಾಜಿಯ ಹೆಸರು ಹೇಳಿ ರಾಜಕೀಯ ಮಾಡುತ್ತಿರುವ ರಾಜಕೀಯ ಪಕ್ಷಗಳು ಮಹಾರಾಷ್ಟ್ರದಲ್ಲಿ ಇಂಗ್ಲೀಷ್‌ನಲ್ಲಿಯೇ ಆಡಳಿತ ನಡೆಸುತ್ತಿವೆ. ಶಿವಾಜಿ ಜನರಾಡುವ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿದ್ದ ಕಾರಣ ಜನರಿಗೆ ಅದು ತಮ್ಮದೇ ರಾಜ್ಯ ಎಂದೆನಿಸಿತು.
ಇದನ್ನೂ ಓದಿ : ಮ್ಯಾಪಿಂಗ್ ಹೆಸರಿನ ಪರಿಷ್ಕರಣೆ – ಕರ್ನಾಟಕದಲ್ಲಿ ಎಸ್‌ಐಆರ್ ಶಿವಾಜಿ
ಶಿವಾಜಿ ಧರ್ಮ ದ್ವೇಷಿಯಲ್ಲ
ಶಿವಾಜಿ ಹಿಂದೂ ರಾಜನಾಗಿದ್ದ, ಕರ್ಮಭೂಮಿಯೂ ಮಹಾರಾಷ್ಟ್ರವಾಗಿದ್ದರಿಂದ ಹಿಂದುಗಳಿಗೆ ಶಿವಾಜಿಯ ಬಗೆಗೆ ಅಭಿಮಾನ ಮೂಡುವುದು ಸಹಜ. ಶಿವಾಜಿ ಧರ್ಮಾತ್ಮನಾಗಿದ್ದ ಆದರೆ ಇತರ ಧರ್ಮಗಳ ವಿರುದ್ಧ ದ್ವೇಷವಿರಲಿಲ್ಲ. ಯುದ್ಧದ ಸಂದರ್ಭದಲ್ಲೂ ಮಸೀದಿಗಳನ್ನು ಹಾನಿಗೊಳಿಸಬಾರದು, ಖುರಾನ್‌ಗೆ ಅವಮಾನ ಮಾಡಬಾರದು, ಮಹಿಳೆಯರನ್ನು ಕಾಡಬಾರದು ಎಂದು ಸ್ಪಷ್ಟ ಆದೇಶ ನೀಡಿದ್ದ. ಶಿವಾಜಿಯ ಸೇನೆ ಮತ್ತು ಆಡಳಿತದಲ್ಲಿ ಮುಸ್ಲಿಮರು ಪ್ರಮುಖ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಧರ್ಮಕ್ಕಿಂತ ರಾಜ್ಯದ ಹಿತ ಮುಖ್ಯವಾಗಿತ್ತು.
ಶಿವಾಜಿಗೆ ಪಟ್ಟಾಭಿಷೇಕವಾಗುವಾಗ ಕೆಲವು ಬ್ರಾಹ್ಮಣರು ಅವರನ್ನು ರಾಜನಾಗಿ ಒಪ್ಪಲಿಲ್ಲ. ಅದಕ್ಕಾಗಿ ನಾನಾ ಷಡ್ಯಂತ್ರಗಳನ್ನು ಮಾಡಿದರು. ಜಾತಿ ಆಧಾರದ ಮೇಲೆ ವಿರೋಧ ವ್ಯಕ್ತವಾಯಿತು. ಆದರೆ ಶಿವಾಜಿಗೆ ಬೆಂಬಲ ನೀಡಿದವರು ಬಡ ರೈತರು ಮತ್ತು ಸಾಮಾನ್ಯ ಜನರು. ಜ್ಯೋತಿರಾವ್ ಫುಲೆ ಅವರು ಅವರನ್ನು “ಕುಳವಾಡಿ ಭೂಷಣ” ಎಂದು ಕರೆದದ್ದು ಯಾದೃಚ್ಛಿಕವಲ್ಲ. ಅವರು ರೈತರ ಪರ ನಿಂತ ನಾಯಕ.
ಆದರೆ ಶಿವಾಜಿಯನ್ನು ಹಿಂದು ಧರ್ಮದ ರಕ್ಷಕನೆಂದು, ಮುಸ್ಲಿಂ ಧರ್ಮದ ವಿರೋಧಿ ಎಂದು ಬಿಂಬಿಸುತ್ತಿರುವುದು ಸುಳ್ಳು ಎಂಬುದಕ್ಕೆ ಈ ಅಂಶವೇ ಸಾಕ್ಷಿ. ಶಿವಾಜಿ ಹಿಂದುವಾಗಿದ್ದರಿಂದ ಹಿಂದೂ ಧರ್ಮ ರಕ್ಷಣೆ ಮಾಡಿದ್ದರಿಂದಲೇ ಯಶಸ್ವಿಯಾದ ಎಂದ ಮೇಲೆ ರಾಣಾ ಪ್ರತಾಪ, ಪೃಥ್ವಿರಾಜ ಚವ್ಹಾಣ ಏಕೆ ಯಶಸ್ವಿಯಾಗಲಿಲ್ಲ. ಹಾಗೇ ನೋಡಿದರೆ ಇವರಿಬ್ಬರೂ ಶಿವಾಜಿಗಿಂತಲೂ ಬಲಾಢ್ಯರು!. ಉಚ್ಚವರ್ಣೀಯ ಕ್ಷತ್ರೀಯರಾಗಿದ್ದರು. ಒಬ್ಬರು ಯಶಸ್ವಿಯಾಗುತ್ತಾರೆ, ಮತ್ತಿಬ್ಬರು ಊರ ತೊರೆಯಬೇಕಾಗಿ ಏಕೆ ಬಂತು? ಹಾಗಾಗಿ ಶಿವಾಜಿ ಹಿಂದೂ ಧರ್ಮನಿಷ್ಠೆಯಿಂದ ಯಶಸ್ವಿಯಾಗಲಿಲ್ಲ, ಶಿವಾಜಿಗೆ ಜನರ ಬಗ್ಗೆ ಕಾಳಜಿ ಇತ್ತು, ದುಡಿಯುವ ಜನ, ರೈತರು, ಬಡವರ ಮೇಲೆ ಪ್ರೀತಿ ಇತ್ತು. ಏನಾದರೂ ಒಳಿತನ್ನು ಮಾಡಬೇಕು ಎಂಬ ಹಂಬಲವಿದ್ದ ಕಾರಣ ಶಿವಾಜಿ ಯಶಸ್ವಿ ನಾಯಕನಾಗಿ ಗೆಲ್ಲುತ್ತಾನೆ.
ಮುಸ್ಲಿಂ ರಾಜರೆಲ್ಲ ಹಿಂದೂಗಳ ಬಗೆಗೆ, ಹಿಂದೂ ಧರ್ಮದ ಬಗೆಗೆ ಅಸಹಿಷ್ಣುಗಳಾಗಿರುವುದು ಕಂಡುಬರುವುದಿಲ್ಲ. ಹಲವು ಮುಸ್ಲಿಂ ರಾಜರು ಹಿಂದೂ ಧರ್ಮ ಸಹಿಷ್ಣುಗಳಾಗಿದ್ದರು ಎನ್ನುವುದಕ್ಕೆ ಚರಿತ್ರೆಯಲ್ಲಿ ಪುರಾವೆಗಳು ಉಪಲಬ್ಧವಿವೆ. ವಿಶೇಷವಾಗಿ ಶಿವಾಜಿ ಕಾರ್ಯನಿರ್ವಹಿಸಿದ ಮಹಾರಾಷ್ಟ್ರದಲ್ಲೇ ಮುಸ್ಲಿಂ ಅರಸರು ಸಹಿಷ್ಣು ವೃತ್ತಿಯ ಮತ್ತು ಹಿಂದೂಗಳ ಜತೆಗಿದ್ದ ರಾಜಕೀಯ ಮತ್ತು ಕೌಟುಂಬಿಕ ಸಂಬಂಧಗಳ ಹಲವು ಪುರಾವೆಗಳು ಲಭ್ಯವಿವೆ. . ಪಾರಸನೀಸರ ‘ಮರಾಠ ಸರದಾರ’ ಗ್ರಂಥದಲ್ಲಿ ಈ ಉಲ್ಲೇಖಗಳಿವೆ.
“ನಿಜಾಮ, ಕುತುಬ ಮತ್ತು ಆದಿಲಶಾಹಿಯರಲ್ಲಿ ಮರಾಠರ ಪ್ರಾಬಲ್ಯವಿತ್ತು ನಿಜಾಮ್ ಶಾಹಿಯ ಮೂಲಪುರುಷನಾದ ಗಾಂಗನಿಗೆ ಬಹಿರಭಟ ಕುಲಕರ್ಣಿ ಎಂಬ ಮುಸಲ್ಮಾನನಾದ ಮಗನಿದ್ದ. ಅಹಮ್ಮದನಗರದ ಬಾದಶಹಾನ ತಂದೆ ಸಹ ಹಿಂದೂ ಆಗಿದ್ದ ವಿಜಾಪುರದ ಸಂಸ್ಥಾಪಕ ಯುಸೂಫ ಆದಿಲಶಾಹಿ ಮರಾಠಾ ಹುಡುಗಿಯನ್ನು ಮದುವೆಯಾದ. ಬೆದರಿನ ಕಾಸಿಂ ಬರೀದನೆಂಬ ಸಂಸ್ಥಾಪಕನ ಮಗನೂ ಸಹ ಸಾಂಬಾಜಿಯ ಮಗಳೊಂದಿಗೆ ಲಗ್ನವಾದ. ಈ ಸಂಸ್ಕಾರದಿಂದಾಗಿ ಹಿಂದೂಗಳ ಬಗೆಗೆ ಸಹಿಷ್ಣುತೆ ಬೆಳೆದು ಈ ಐದೂ ರಾಜ್ಯಗಳಲ್ಲಿ ಮರಾಠರ ಪ್ರಾಬಲ್ಯವಿತ್ತು.
ಶಿವಾಜಿ ಗೋಬ್ರಾಹ್ಮಣ ರಕ್ಷಕನೇ?
“ಗೋಬ್ರಾಹ್ಮಣ ರಕ್ಷಕ” ಎಂಬ ಪದಪ್ರಯೋಗವನ್ನು ಶಿವಾಜಿಯೊಂದಿಗೆ ಜೋಡಿಸುವುದು ನಂತರದ ಕಾಲದಲ್ಲಿ ರೂಪುಗೊಂಡ ಒಂದು ಚಿತ್ರಣ ಎಂದು ಅನೇಕ ಇತಿಹಾಸಕಾರರು ಹೇಳುತ್ತಾರೆ. ಶಿವಾಜಿ ತನ್ನನ್ನು “ಕ್ಷತ್ರೀಯ ಕುಲವಂತ ಶ್ರೀರಾಜಾ ಶಿವ ಛತ್ರಪತಿ” ಎಂದು ಕರೆದುಕೊಂಡಿದ್ದಾನೆ.“ಗೋಬ್ರಾಹ್ಮಣ ರಕ್ಷಕ” ಎಂಬ ಬಿರುದು ಅವರ ಕಾಲಕ್ಕಿಂತ ನಂತರ, ವಿಶೇಷವಾಗಿ ಅವರನ್ನು ಧಾರ್ಮಿಕ ಪ್ರತೀಕವಾಗಿ ಸ್ಥಾಪಿಸಲು, ರಾಜಕೀಯ ಲಾಭ ಪಡೆಯಲು ನಡೆದ ಪ್ರಯತ್ನಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬಂದದ್ದು ಎಂದು ಅಭಿಪ್ರಾಯವಿದೆ.
ಹೀಗಾಗಿ “ಗೋಬ್ರಾಹ್ಮಣ ರಕ್ಷಕ” ಎಂಬ ಪದವು ಶಿವಾಜಿಯ ಸಮಗ್ರ ವ್ಯಕ್ತಿತ್ವವನ್ನು ಪ್ರತಿನಿಧಿಸುವುದಿಲ್ಲ. ಅವರನ್ನು ಒಂದು ಧಾರ್ಮಿಕ ಘೋಷಣೆಗೆ ಸೀಮಿತಗೊಳಿಸುವುದಕ್ಕಿಂತ, ಜನಪರ ಆಡಳಿತ, ರೈತರ ಹಿತ, ಧರ್ಮಸಹಿಷ್ಣುತೆ ಮತ್ತು ಸಂಘಟನಾ ಸಾಮರ್ಥ್ಯಗಳ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವುದು ಹೆಚ್ಚು ಸಮಗ್ರವಾದ ನಿಲುವಾಗಿದೆ.
ಶಿವಾಜಿಯ ರಾಜ್ಯದಲ್ಲಿ ಬ್ರಾಹ್ಮಣರಿಗೆ ವಿಶೇಷ ಸವಲತ್ತು ನೀಡಿದ್ದು ಎಲ್ಲಿಯೂ ಕಂಡು ಬರುವುದಿಲ್ಲ. ಬ್ರಾಹ್ಮಣರ ಕುರಿತು ಶಿವಾಜಿ ಒಂದು ಪತ್ರದಲ್ಲಿ ಹೀಗೆ ಬರೆಯುತ್ತಾರೆ “ ಬ್ರಾಹ್ಮಣನೆಂದು ಯಾರಾದರೂ ಲಾಭ ಪಡೆಯಲು ಪ್ರಯತ್ನಿಸಿದರೆ….” ಎಂದು ಎಚ್ಚರಿಕೆ ನೀಡಿ ಬೆದರಿಸುತ್ತಾನೆ.. “ ಶತ್ರುಗಳ ಶತ್ರುಗಳಿಗೆ ಸಿಗುವ ಶಿಕ್ಷೆಯನ್ನು ನೀಡಬೇಕಾಗುತ್ತದೆ ಎಂದು ಆದೇಶಿಸುತ್ತಾನೆ. ಈ ಕಾರಣಕ್ಕಾಗಿಯೇ ಬ್ರಾಹ್ಮಣರು ಶಿವಾಜಿಯ ಪರವಾಗಿ ಇರಲಿಲ್ಲ ಹೀಗೀರುವಾಗ “ ಗೋ ಬ್ರಾಹ್ಮಣ ರಕ್ಷಕ” ಎಂಬ ಬಿರುದನ್ನು ಬ್ರಾಹಣರು ಕೊಡಲು ಸಾಧ್ಯವೆ?
ಈಗ ಒಂದು ಪ್ರಮುಖ ವಿಚಾರವನ್ನು ನಮ್ಮ ಮುಂದೆ ಇದೆ. ಶಿವಾಜಿಯನ್ನು ದೇವರನ್ನಾಗಿ ಮಾಡಿದಾಗ, ಅವರ ನಿಜವಾದ ಕಾರ್ಯ ಮತ್ತು ಚಿಂತನೆಗಳು ಮರೆಯಾಗುತ್ತವೆ. ದೇವರನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಇತಿಹಾಸದ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಬಹುದು, ವಿಮರ್ಶಿಸಬಹುದು ಮತ್ತು ಅವರಿಂದ ಕಲಿಯಬಹುದು. ಇಂದು ಶಿವಾಜಿಯ ಹೆಸರನ್ನು ಬಳಸುವವರು, ಅವರ ತತ್ವಗಳನ್ನು ನಿಜವಾಗಿ ಅನುಸರಿಸುತ್ತಾರೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಈ ಪುಸ್ತಕ ಓದಿದ ನಂತರ ನನಗೆ ಶಿವಾಜಿ ಕೇವಲ ಯುದ್ಧವೀರನಾಗಿ ಕಾಣಿಸಲಿಲ್ಲ. ಅವರು ಜನರಿಗಾಗಿ ಆಡಳಿತ ನಡೆಸಿದ ರಾಜ. ರೈತರ ನೋವನ್ನು ಅರ್ಥ ಮಾಡಿಕೊಂಡ ನಾಯಕ. ಧರ್ಮವನ್ನು ಗೌರವಿಸಿದರೂ ದ್ವೇಷವಿಲ್ಲದ ವ್ಯಕ್ತಿ. ಸಮಾಜದಲ್ಲಿ ನ್ಯಾಯ ಮತ್ತು ಸಮತೆಯನ್ನು ಬೆಳೆಸಲು ಪ್ರಯತ್ನಿಸಿದ ಆಡಳಿತಗಾರ. ಶಿವಾಜಿಯನ್ನು ಕೇವಲ ಆರಾಧಿಸುವುದಕ್ಕಿಂತ, ಅವರಿಂದ ಕಲಿಯುವುದು ಮತ್ತು ಅವರ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸುವುದು ಮುಖ್ಯ ಎಂದು ನನಗೆ ಅನಿಸುತ್ತದೆ.
ಇದನ್ನೂ ನೋಡಿ : ದಲಿತ ನೋವಿನ ಧ್ವನಿ – ಸಂಬಳಿಗೋಲು | ಪುಸ್ತಕ ಬಿಡುಗಡೆ Janashakthi Media
