ಫೆಬ್ರವರಿ 12; ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ರಸ್ತೆ ತಡೆ ಮತ್ತು ಪಿಕೆಟಿಂಗ್

ಹಾಸನ: ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಿರಿ, ವಿ.ಬಿ. ಜಿರಾಮ್ ಜಿ, ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಿ. ವಿದ್ಯುಚ್ಛಕ್ತಿ ತಿದ್ದುಪಡಿ, ಬೀಜ ಮಸೂದೆ, ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ, ಅಮೇರಿಕಾ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಹಾಗೂ ಕರ್ನಾಟಕ ಸರ್ಕಾರ ಕಾರ್ಮಿಕ ಸಂಹಿತೆಗಳಿಗೆ ಸೇವಾ ನಿಯಮಾವಳಿಗಳನ್ನು ರಚಿಸಬಾರದು ಮತ್ತು ಉಳಿದ ಎಲ್ಲಾ ಜನ ವಿರೋಧಿ ಮಸೂದೆಗಳನ್ನು ವಿರೋಧಿಸಬೇಕೆಂದು ಒತ್ತಾಯಿಸಿ, ಉತ್ಪಾದನೆ, ಸೇವೆ, ಸಂಚಾರ, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು ಸ್ವಯಂಪ್ರೇರಿತವಾಗಿ ಮುಷ್ಕರ ನಡೆಸಿ ಫೆಬ್ರವರಿ 12ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ನಡೆಸಲಾಗುತ್ತಿದೆ.

ಭಾರತದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಒಕ್ಕೂಟಗಳು, ನೌಕರರ ಸಂಘಗಳು ಜಂಟಿಯಾಗಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರವನ್ನು ಯಶಸ್ವಿ ಮಾಡಲು ಕೇಂದ್ರ ಕಾರ್ಮಿಕ ಸಂಘಟನೆಗಳು ಸ್ವತಂತ್ರ ಒಕ್ಕೂಟಗಳು, ನೌಕರರ ಸಂಘಟನೆಗಳೊಂದಿಗೆ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ಸಹಭಾಗಿ ಸಂಘಟನೆಗಳಾದ ವಿವಿಧ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕೃಷಿಕೂಲಿಕಾರರ ಸಂಘಟನೆಗಳು, ಮಹಿಳಾ, ವಿದ್ಯಾರ್ಥಿ, ಯುವ ಜನ ಸಂಘಟನೆಗಳು ಈ ಮುಷ್ಕರವನ್ನು ಬೆಂಬಲಿಸಿ ಹೋರಾಟ ನಡೆಸುತ್ತಿವೆ. ಕಾರ್ಮಿಕರು, ರೈತರು, ಕೂಲಿಕಾರರು, ದಲಿತರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಮತ್ತು ವ್ಯಾಪಾರಿಗಳು ಒಟ್ಟಾಗಿ ಬೃಹತ್ ಮೆರವಣಿಗೆ, ಸಾರ್ವಜನಿಕ ಸಭೆ, ರಸ್ತೆ ತಡೆ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳನ್ನು ಪಿಕೆಟಿಂಗ್ ಮಾಡುವ ಮುಖಾಂತರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ನಡೆಸಲಾಗುತ್ತಿದೆ.

ವ್ಯಾಪಾರದ ಸುಲಭೀಕರಿಸಲು, ಯೂನಿಯನ್ ಮುಕ್ತ ವಾತಾವರಣ ನಿರ್ಮಿಸಲಿಕ್ಕಾಗಿ, 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಡಿರುವುದು ಕೇವಲ ಆರ್ಥಿಕದಾಳಿ ಮಾತ್ರವಲ್ಲದೆ ರಾಜಕೀಯ ದಾಳಿಯೂ ಆಗಿದೆ. ಕಾರ್ಖಾನೆಗಳ ವ್ಯಾಖ್ಯಾನದಲ್ಲಿ ಕಾರ್ಮಿಕರಮಿತಿ ಹೆಚ್ಚಳದಿಂದ, ಗುತ್ತಿಗೆ ಕಾರ್ಮಿಕರ ಲೈಸೆನ್ಸಗಳಿಗೆ ಕಾರ್ಮಿಕರ ಮಿತಿ ಹೆಚ್ಚಳದಿಂದಾಗಿ 90% ಕಾರ್ಮಿಕರಿಗೆ ವೇತನ, ESI, PF, ಗ್ರಾಚ್ಯುಟಿ & ಭೋನಸ್ ಹಕ್ಕುಗಳಿಂದ ಹೊರಗುಳಿಯುತ್ತಾರೆ.

ಇದನ್ನೂ ಓದಿ: ಬಿಕ್ಲು ಶಿವು ಕೊಲೆ ಪ್ರಕರಣ: ಬೈರತಿ ಬಸವರಾಜ‌ ಗೆ ಜಾಮೀನು ನೀಡಲು ಮತ್ತೆ ನಿರಾಕರಿಸಿದ ಹೈಕೋರ್ಟ್

ಜೀವನೋಪಾಯ ವೇತನದ ಜಾರಿಯ ಪ್ರಸ್ತಾಪವಿಲ್ಲ ಕನಿಷ್ಠ ವೇತನ ಅಥವಾ ರಾಷ್ಟ್ರೀಯ ಸರಾಸರಿ ವೇತನದ ಖಾತ್ರಿಯ ಬದಲಿಗೆ ತಳಹಂತದ 178 ರೂ. ಕೂಲಿಯನ್ನು ಹೊಸದಾಗಿ ಪರಿಷ್ಕರಿಸಲಾಗಿದೆ. ಇನ್ನು ಯಾವುದೇ ವಲಯದ ವೇತನಗಳ ಹೆಚ್ಚಳಕ್ಕೆ ಆಧಾರವಿಲ್ಲದಂತೆ ಮಾಡಲಾಗಿದೆ.

ಈಗಾಗಲೇ ಮಾಲೀಕರ ಹೆಚ್ಚುವರಿ ಮೌಲ್ಯ 23.39% ರಿಂದ 51.01% ಗೆ ಹೆಚ್ಚಳವಾಗಿದೆ. ಕಾರ್ಮಿಕರ ವೇತನದ ಪಾಲು 30.27% ರಿಂದ 15.97% ಗೆ ಇಳಿದಿದೆ. ಕಾರ್ಮಿಕರಿಂದ ಪ್ರಾಥಃಮಿಕವಾಗಿ ಸಂಘ ರಚಿಸಿಕೊಳ್ಳುವ ಹಕ್ಕುಗಳನ್ನು ನಿರ್ಬಂಧಿಸಲಾಗಿದೆ. ಸಹಜವಾಗಿ ಚುನಾಯಿಸಲ್ಪಟ್ಟ ಸಂಘದೊಂದಿಗೆ ಕುಂದುಕೊರತೆಗಳ ಸಮಿತಿಯನ್ನು ಮಾಡುವ ಮುಖಾಂತರ ಸಾಮೂಹಿಕ ಚೌಕಾಸಿಯನ್ನು ಶಕ್ತಿಯನ್ನು ಕಡಿಮೆ ಮಾಡುಲಾಗಿದೆ. ಮಾತ್ರವಲ್ಲದೆ ಹಕ್ಕೊತ್ತಾಯಗಳು ಈಡೇರದೇ ಇದ್ದಾಗ ಮಾಡುತ್ತಿದ್ದ ಮುಷ್ಕರವನ್ನು ಮಾಡಿದರೆ ಅದಕ್ಕೆ ದಂಡ, ಜೈಲು, ಮತ್ತು ಅನಿರ್ಧಿಷ್ಟ ವೇತನ ಕಡಿತ ಮಾಡಲಾಗುತ್ತದೆ.

ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯು ಇನ್ನುಮುಂದೆ ಮಾಲೀಕರ ಮೇಲೆ ಯಾವುದೇ ಕಾನೂಕು ಕ್ರಮ ಕೋಗೊಳ್ಳದೆ ಕೇವಲ ಉದ್ಯೋಗ ಸುಗಮಕಾರರಾಗಿ ಕೆಲಸ ಮಾಡಬೇಕಾಗಿರುವುದರಿಂದ ಕಾರ್ಮಿಕರ ಶೋಷಣೆಯನ್ನು ಪ್ರಶ್ನಿಸುವ ಹಾಗೂ ನ್ಯಾಯ ಪಡೆಯುವ ವ್ಯವಸ್ಥೆಯೇ ಇಲ್ಲವಾಗಿದೆ. 300ಕ್ಕಿಂತ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಗಳು ಮಾತ್ರವೇ ಸ್ಥಾಯಿ ಆದೇಶಗಳಿರುತ್ತವೆ.

300 ಕಾರ್ಮಿಕರಿರುವ ಕಾರ್ಖಾನೆಗಳು ಯಾವಾಗ ಬೇಕಾದರೂ ಮುಚ್ಚಿಕೊಂಡು ಹೋಗಲು ಅನುಮತಿ ಕೊಡಲಾಗಿದೆ. ಈ ರೀತಿಯಾಗಿ ಬಂಡವಾಳಗಾರರ ಹಿತಕಾಯಲು ಮತ್ತು ಬಂಡವಾಳಗಾರರ ಸಂಪತ್ತುನ್ನು ರಕ್ಷಿಸಲು ಪ್ರಭುತ್ವಗಳು ಟೊಂಕ ಕಟ್ಟಿ ಅನುವು ಮಾಡಿ ಕೊಟ್ಟಿದ್ದಾರೆ. ಖಾಯಂ ಉದ್ಯೋಗವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ‘ನಿಗದಿತ ಅವಧಿಯ ಉದ್ಯೋಗ ಪದ್ದತಿ’ಯನ್ನು ಜಾರಿಗೆ ತರಲಾಗಿದೆ.

ನರೇಗಾ ಕಾಯ್ದೆಯಡಿಯಲ್ಲಿ ಖಾತರಿ ಪಡಿಸಲಾದ ಕೆಲಸ ಕೆಲಸದ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಗ್ರಾಮೀಣ ಶ್ರಮ ಜೀವಿಗಳ ಕೊಂಡುಕೊಳ್ಳುವ ಸಾಮಾರ್ಥ್ಯ ಕಡಿಮೆ ಮಾಡುವುದು ಮತ್ತು ಕೃಷಿ ಕಾರ್ಮಿಕರ ಮತ್ತು ಇತರೆ ಗ್ರಾಮೀಣ ಕಾರ್ಮಿಕರ ವೇತನವನ್ನು ನಿಗ್ರಹಿಸುತ್ತಿದೆ. ವಿದ್ಯುತ್ವಕ್ತಿಯನ್ನು ಖಾಸಗೀಕರಿಸಿ ವಿದ್ಯುತ್ ಪ್ರಸರಣ, ವಿತರಣಾ ವ್ಯವಸ್ಥೆಯ ಅನುಷ್ಠಾನ ಮತ್ತು ನಿರ್ವಹಣೆಯನ್ನು ಖಾಸಗಿ ಬಂಡವಾಳಗಾರರಿಗೆ ಕೊಡುವ ಮುಖಾಂತರ ಇದುವರೆಗೂ ವಿದ್ಯುತ್ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸಬ್ಸಿಡಿ ದರದಲ್ಲಿ ಸಿಗುತ್ತಿದ್ದ ಪ್ರಮುಖ ಸೇವೆಯಿಂದ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ.

ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ, ಕಂಪನಿ ಕೃಷಿಯನ್ನು ಉತ್ತೇಜಿಸಿ ಬಲವಂತದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ವಶಪಡಿಕೊಳ್ಳುತ್ತಿದೆ. ಇದರಿಂದ ರೈತರು ಕೂಲಿಕಾರರಾಗಿ ಮತ್ತು ನಿರುದ್ಯೋಗಸ್ಥರಾಗಿ ಮಾರ್ಪಾಡಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಅಮೇರಿಕಾ ಮತ್ತು ಭಾರತದ ನಡುವಿನ ವಾಣಿಜ್ಯ ಮತ್ತು ವ್ಯಾಪಾರ ಒಪ್ಪಂದದಲ್ಲಿ ಭಾರತದ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಅಮೇರಿಕಾದ ಹಿತಾಸಕ್ತಿಗಾಗಿ ಬಲಿ ಕೊಎಲಾಗಿದೆ. ಇದು ಈ ದೇಶದ ರೈತರ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀಳಲಿದೆ.

ಫೆಬ್ರವರಿ 1ರಂದು ಕೇಂದ್ರ ಸರ್ಕಾರ 53.5 ಲಕ್ಷಕೋಟಿ ಬಜೆಟನ್ನು ಮಂಡಿಸಲಾಗಿದೆ. ಆದರೆ ಇದರಲ್ಲಿ ಜನಸಾಮಾನ್ಯರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರವಿಲ್ಲ ಬದಲಿಗೆ ಬಂಡವಾಳಗಾರರಿಗೆ ಹಸೆಮಣೆ ಹಾಕಲಾಗಿದೆ. ರಾಜ್ಯ ಸರ್ಕಾರ ಈ ಕೋಡ್‌ಗಳಿಗೆ ನಿಯಮಾವಳಿ ರಚಿಸಬಾರದೆಂದೂ ಒತ್ತಾಯಿಸಿದರೂ ಕೂಡಾ ಕಾರ್ಮಿಕರ ಸಂಘಟನೆಗಳ ಬಳಿ ಕನಿಷ್ಠ ಚರ್ಚೆ ಮಾಡುವ ಸೌಜನ್ಯವನ್ನು ನೋಡಿಸದೇ 4 ಕೋಡ್‌ಗಳಿಗೆ ಗೆಜೆಟ್ ನೋಟಿಫಿಕೇಷನ್ ತಂದು ಕಾರ್ಮಿಕರು ಉಸಿರೆತ್ತದಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ.

2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನದ ಮಂಡಳಿಯಿಂದ ಶಿಫಾದಸ್ಸಾದ ಕನಿಷ್ಠ ವೇತನವನ್ನು ಈಗ 1948ರ ಕನಿಷ್ಠ ವೇತನ ಕಾಯ್ದೆ ರದ್ದಾದ ಹಿನ್ನಲೆಯನ್ನು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುವುದಾಗಿ ಹಿಂಬರಹ ಕೊಡುವ ಮುಖಾಂತರ ರಾಜ್ಯದ ಅಧಿಕಾರವನ್ನು ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಬಳಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ನುಡಿದಂತೆ ನಡೆಯುತ್ತೀವೆ ಎಂದು ಹೇಳುವ ರಾಜ್ಯ ಸರ್ಕಾರ ಕೂಡ ಕೇಂದ್ರದ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಲು ನಿಯಮಗಳನ್ನು ರಚಿಸಿ ಕರಡು ಅಧಿಸೂಚನೆ ಹೊರಡಿಸಿದೆ ಜೊತೆಗೆ ರೈತ ವಿರೋಧಿ ಧೋರಣೆಗಳನ್ನು ಮುಂದುವರೆಸುತ್ತಿದೆ. ಈ ಹಿನ್ನೆಲೆಯಲ್ಕಿ ಕರ್ನಾಟಕ ರಾಜ್ಯ ಸರ್ಕಾರವೂ ಕೂಡ ಕೇಂದ್ರ ಸರ್ಕಾರದ ಎಲ್ಲಾ ಜನ ವಿರೋಧಿ ನೀತಿಗಳನ್ನು ಕರ್ನಾಟಕ ರಾಜ್ಯದ ಜನರ ಮೇಲೆ ಜಾರಿ ಮಾಡಲು ಹೊರಟಿದೆ.

ಈ ನೀತಿಯನ್ನು ವಿರೋಧಿಸಿ, ಫೆಬ್ರವರಿ 12 ರಂದು ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ ಸಂಘಗಳು ಎಲ್ಲಾ ರೈತ ಸಂಘಗಳು, ದಲಿತ ಸಂಘಟನೆಗಳು ಮಹಿಳಾ ಸಂಘಟನೆಗಳು ಮತ್ತು ವಿದ್ಯಾರ್ಥಿ ಯುವಜನ ಸಂಘಟನೆಗಳು ಸೇರಿ ಮುಷ್ಕರ ನಡೆಸಲಾಗುತ್ತಿದೆ.

ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಮೆರವಣಿಗೆ ಹಾಸನ ನಗರದ ಹೇಮಾವತಿ ಪ್ರತಿಮೆಯ ಮುಂಬಾಗದಿಂದ ಹೊರಟು ಮಹಾವೀರ ವೃತ್ತ, ಕಸ್ತೂರಬಾ ರಸ್ತೆ, ಎನ್.ಆರ್‌ವೃತ್ತ ಅಲ್ಲಿಂದ ಸಿಟಿ ಬಸ್ ನಿಲ್ದಾಣದ ರಸ್ತೆ ಮೂಲಕ ಪ್ರಧಾನ ಅಂಚೆ ಕಛೇರಿಗೆ ಮುತ್ತಿಗೆ ಹಾಕಿ, ರಸ್ತೆ ರಡೆ ನಡೆಸಿ ಪ್ರತಿಭಟಿಸಲಾಯಿತು.

ಮುಷ್ಕರದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಎಂ.ಸಿ.ಡೋಂಗ್ರೆ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೆಚ್.ಆರ್. ನವೀನ್ ಕುಮಾರ್, ರೈತ ಮುಖಂಡರಾದ ಬಾಬು, ಬ್ಯಾಂಕ್ ನೌಕರರ ಸಂಘಟನೆಯ ಪರಮಶಿವಯ್ಯ, ಆರ್.ಕುಮಾರ್, ದಲಿಯ ಮುಖಂಡರುಗಳಾದ ರಾಜಶೇಖರ್, ಈರೇಶ್ ಇರೆಹಳ್ಳಿ, ವಿಮಾನೌಕರರ ಸಂಘದ ವಿಶ್ವನಾಥ್, ರವಿಕುಮಾರ್, ಸಂವಿಧಾನ ಓದು ಅಭಿಯಾನದ ರಾಜು ಗೊರೂರು ಸಿಐಟಿಯು ಅರವಿಂದ್, ಎಸ್‌ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಮುಂತಾದವರು ಇದ್ದರು.

ಇದನ್ನೂ ನೋಡಿ: “ವಿಕಸಿತ ಭಾರತ ಯಾರಿಗೆ? ಬ್ಯಾಂಕಿಂಗ್–ವಿಮಾ ವಲಯದಲ್ಲಿ ಜನಸಾಮಾನ್ಯರ ಹಿತ ಕಣ್ಮರೆಯೇ?” Janashakthi Media

Donate Janashakthi Media

Leave a Reply

Your email address will not be published. Required fields are marked *