ಪಲ್ಗುಣಿ ನದಿಯ ನೀರು ಕುಲುಷಿತ, ದುರ್ವಾಸನೆ, ಜಲಚರಗಳ ಸಾವು. ತನಿಖೆ ಹಾಗು ಕ್ರಮಕ್ಕೆ ಹೋರಾಟ ಸಮಿತಿ ಆಗ್ರಹ

ಮಂಗಳೂರು :  ಪಲ್ಗುಣಿ ನದಿಯ ಹಿನ್ನೀರು ಆಗಿರುವ ಕೂಳೂರು, ರಾಯಿಕಟ್ಟೆ ಹಳ್ಳದಲ್ಲಿ ನೀರು ಮಲಿನಗೊಂಡು ದುರ್ವಾಸನೆ ಬೀರುತ್ತಿದ್ದು, ಮೀನು, ಏಡಿ ಸಹಿತ ಜಲಚರಗಳು ಸತ್ತು ತೇಲುತ್ತಿವೆ. ಇದರಿಂದಾಗಿ ದಟ್ಟ ಜನವಸತಿ ಇರುವ ಸುತ್ತಲ ಪ್ರದೇಶದಲ್ಲಿ ಅಸಹನೀಯ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಒಂದು ವಾರದಿಂದ ಗ್ರಾಮಸ್ಥರು ಈ ಕುರಿತು ದೂರುತ್ತಿದ್ದರೂ ಯಾವುದೇ ನಿರ್ಣಾಯಕ ಕ್ರಮಗಳು ಕೈಗೊಂಡಿರುವುದಿಲ್ಲ. ಪಲ್ಗುಣಿ ನದಿಯಲ್ಲಿ ಇಂತಹ ಗಂಭೀರ ಮಾಲಿನ್ಯಕ್ಕೆ ಬೈಕಂಪಾಡಿ ಕೈಗಾರಿಕಾ ವಲಯ ಸೇರಿದಂತೆ ಸುತ್ತಲಿನ ಹಲವು ಕೈಗಾರಿಕೆಗಳು ತಮ್ಮ ಘಟಕಗಳಿಂದ ಶುದ್ದೀಕರಿಸದ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಹರಿಸುತ್ತಿರುವುದು ಕಾರಣ ಎಂದು “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ಆರೋಪಿಸಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು, ಹಾಗು ನದಿ ಹಾಗು ಹಳ್ಳದಲ್ಲಿ ನೀರು ಸಹಜ ಸ್ಥಿತಿಗೆ ಬರಲು ತಕ್ಷಣದಿಂದಲೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಪಲ್ಗುಣಿ ನದಿಯಲ್ಲಿ ಮರವೂರು ಸೇತುವೆ ವರಗೆ ಹಾಗು ಅದನ್ನು ಸೇರುವ ಕೂಳೂರು ಹಳ್ಳದಲ್ಲಿ ನೀರು ಮಲಿನಗೊಂಡು ಆಮ್ಲಜನಕ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಇದರಿಂದ ಮೀನು ಸಹಿತ ಜಲಚರಗಳು ಸಾಯತೊಡಗಿದೆ, ನೀರು ಕೊಳೆತು ದುರ್ಗಂಧ ಬೀರುತ್ತಿದೆ. ಈ ಕುರಿತು ಗ್ರಾಮಸ್ಥರ ದೂರಿಗೆ “ತಣ್ಣೀರು ಬಾವಿಯಲ್ಲಿ ಸೇತುವೆ ಕಾಮಗಾರಿಗಾಗಿ ಸ್ಮಾರ್ಟ್ ಸಿಟಿಯವರು ನದಿಗೆ ಅಡ್ಡಲಾಗಿ ಮಣ್ಣುತುಂಬಿಸಿರುವುದರಿಂದ ನೀರಿನ ಹರಿವು ನಿಂತು ಈ ಸ್ಥಿತಿ ಉಂಟಾಗಿದೆ” ಎಂದು ತಿಪ್ಪೆ ಸಾರಿಸುವ ಹೇಳಿಕೆಯನ್ನು ಜಿಲ್ಲಾಡಳಿತ ನೀಡುತ್ತಿದೆ. ಸಮಸ್ಯೆ ಇದಕ್ಕಿಂತ ಗಂಭೀರ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಎಸ್ಇಝಡ್ ಗೆ ತೆರಳುವ ಓ.ಡಿ.ಸಿ ರಸ್ತೆಯಲ್ಲಿರುವ ರುಚಿ ಸೋಯಾ, ವಿಲ್ಮರ್, ಓಯಸಿಸ್ ಫ್ರೊಟೀನ್ ಕೈಗಾರಿಕಾ ಘಟಕಗಳ ಭಾಗದಿಂದ ಫಲ್ಗುಣಿ ನದಿಗೆ ಸೇರುವ ತೋಕೂರು, ಕುಡಂಬೂರು ಹಳ್ಳಕ್ಕೆ ಕೈಗಾರಿಕಾ ಮಾಲಿನ್ಯದಿಂದ ಕಪ್ಪಾಗಿರುವ ನೀರು ಸೇರುತ್ತಿರುವುದು ಮೇಲ್ನೋಟಕ್ಕೇ ಗೋಚರಿಸುತ್ತಿದೆ. ಇದು ಹಲವು ವರ್ಷಗಳ ವಿದ್ಯಾಮಾನವಾಗಿದ್ದು, ಸಾಕಷ್ಟು ಬಾರಿ ಈ ಕುರಿತು ಸಾಕ್ಷ್ಯ ಸಮೇತವಾಗಿ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರುಗಳನ್ನು ನೀಡಿದ್ದರೂ ಕಠಿಣ ಕ್ರಮಗಳನ್ನು ಕೈಗೊಂಡಿರುವುದಿಲ್ಲ, ಚೆನ್ನೈ ಹಸಿರು ಪೀಠ ಈ ಕುರಿತು ಸು ಮಟೊ ದೂರುಗಳನ್ನು ದಾಖಲಿಸಿಕೊಂಡಿದ್ದರೂ ಹಸಿರು ಪೀಠದ ಕಣ್ಣಿಗೆ ಮಣ್ಣೆರೆಚುವ ತೋರಿಕೆಯ ಕ್ರಮಗಳನ್ನಷ್ಟೆ ಜರುಗಿಸಲಾಗುತ್ತಿದೆ, ಮಾರಕ ಮಾಲಿನ್ಯ ಹರಿಸಿ ಪಲ್ಗುಣಿ ನದಿಯನ್ನು ನಿಸ್ತೇಜಗೊಳಿಸುತ್ತಿರುವ ಕೈಗಾರಿಕೆಗಳ ಮೇಲೆ ಯಾವುದೆ ಕ್ರಮಗಳನ್ನು ಜರುಗಿಸಲಾಗಿಲ್ಲ ಎಂದು ಹೋರಾಟ ಸಮಿತಿ ಆಪಾದಿಸಿದೆ.‌

ಇದನ್ನೂ ಓದಿ : ಎ.ಐ.ನಂತಹ ತಾಂತ್ರಿಕ ಪ್ರಗತಿ ಮತ್ತು ಸಮಾಜವಾದಿ ವ್ಯವಸ್ಥೆಯ ಅಗತ್ಯ

ಪಲ್ಗುಣಿ ನದಿ ಹಾಗು ಅದನ್ನು ಸೇರುವ ಶಾಖೆಗಳಲ್ಲಿ ಈ ಬಾರಿ ಗಂಭೀರವಾದ ಮಾಲಿನ್ಯಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಬೇಕು, ತೀವ್ರವಾದ ತನಿಖೆಯನ್ನು ನಡೆಸಬೇಕು, ಪರಿಸರ ನಿಯಮ ಉಲ್ಲಂಘಿಸುವ, ಅಗತ್ಯಕ್ಕೆ ತಕ್ಕುದಾದ ಶುದ್ದೀಕರಣ ಘಟಕ ಹೊಂದದ, ಪಲ್ಗುಣಿ ನದಿಗೆ ಮಾಲಿನ್ಯ ಹರಿಸುವ ಕೈಗಾರಿಕೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕ ಹೋರಾಟ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಎಂದಿನಂತೆ ತೇಪೆ ಹಚ್ಚುವ ಯತ್ನಗಳಿಗೆ ಸೀಮಿತಗೊಂಡಲ್ಲಿ ಸ್ಥಳೀಯರನ್ನು ಒಳಗೊಂಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮುತ್ತಿಗೆ ಸಹಿತ ತೀವ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

ಇದನ್ನೂ ನೋಡಿ : “ವಿಕಸಿತ ಭಾರತ ಯಾರಿಗೆ? ಬ್ಯಾಂಕಿಂಗ್–ವಿಮಾ ವಲಯದಲ್ಲಿ ಜನಸಾಮಾನ್ಯರ ಹಿತ ಕಣ್ಮರೆಯೇ?” Janashakthi Media

Donate Janashakthi Media

Leave a Reply

Your email address will not be published. Required fields are marked *