ಪಶು – ಪಕ್ಷಿ ಲೋಕದ ವಿಸ್ಮಯಗಳು: ಸಂಚಿಕೆ – 4

ಪ್ರಾಣಿಗಳೇಕೆ ಮನುಷ್ಯನ ಹಾಗಿಲ್ಲ?
ಹೆಣ್ಣು ಬೆಕ್ಕು ಮರಿಹಾಕಿದಾಗ ‘ಮಾಳಬೆಕ್ಕು'(ಗಂಡುಬೆಕ್ಕು) ಬೆಕ್ಕು ಸಾಕಿದವರು ಎಷ್ಟೇ ಜಾಗೃತೆಯಿಂದ ಬೆಕ್ಕಿನ ಮರಿಗಳನ್ನು ಮುಚ್ಚಿಟ್ಟರೂ ಎಷ್ಟೋ ಸಲ ಗಂಡುಬೆಕ್ಕು ಬೆಕ್ಕಿನಮರಿಗಳನ್ನು/ಬೆಕ್ಕಿನಮರಿಯನ್ನು ಕಚ್ಚಿ ಸಾಯಿಸುತ್ತದೆ. ಇದಕ್ಕೆ ಕಾರಣ ಹೆಣ್ಣುಬೆಕ್ಕು ಪುನಃ ಗರ್ಭಧರಿಸಲು ಬೇಗ ತಯಾರಾಗಲಿ ಅಂತ. ಪಕ್ಷಿ 

– ಪ್ರೊ. ಡಾ| ಎನ್. ಬಿ. ಶ್ರೀಧರ

“ಗಂಡು ಬೆಕ್ಕು (ಮೋಳ, ಗಡವ) ಎಂದೂ ತನ್ನ ಅಥವಾ ಇತರ ಗಂಡುಬೆಕ್ಕುಗಳ ಸಂಜಾತ ಮರಿಗಳನ್ನು ಸಹಿಸದು. ಅದಕ್ಕೆ ಹೆಣ್ಣು ಬೆಕ್ಕು ಬೇಗ ಹೀಟಿಗೆ ಬಂದು ಮುಂದಿನ ಸಂತಾನೋತ್ಪತ್ತಿಗೆ ಸಿದ್ಧವಾಗಲಿ ಎಂದು ಆಸೆ. ಅದಕ್ಕೆ ಮರಿಗಳು ಹಾಲು ಕುಡಿಯುವವರೆಗೂ ಪ್ರೊಲ್ಯಾಕ್ಟಿನ್ ಹಾರ್ಮೋನ್ ಬಿಡುಗಡೆಯಾಗುವುದರಿಂದ ಅದು ಹೀಟಿಗೆ ಬರದು. ಅದಕ್ಕೆ ಗಂಡು ಅವಕಾಶ ಸಿಕ್ಕಾಗ ಹುಟ್ಟಿದ ಮರಿಗಳು ಅದರದೇ ಆದರೂ ಸಹ ಯಾವುದೇ ಮಮಕಾರ ತೋರದೇ ಮರಿಗಳನ್ನು ಸಾಯಿಸಲು ಪ್ರಯತ್ನಿಸುವುದು. ಇದಕ್ಕೆ ತಾಯಿ ಬೆಕ್ಕು ಅಡ್ಡ ಹಾಕುತ್ತದೆ. ಕೊನೆಗೆ ಬಲಶಾಲಿ ಗೆಲ್ಲುತ್ತದೆ. ಮೋಳ ಗೆದ್ದರೆ ಮರಿಗಳು ಮಟಾಷ್ ಮತ್ತು ಹೆಣ್ಣು ಬೇಗ ಪುನ: ಸಿದ್ಧ. ಒಂದು ಗಂಡು ಬೆಕ್ಕು ಸೋತರೆ ಇನ್ನೊಂದು ಮರಿಗಳನ್ನು ಸಾಯಿಸಲು ಹೊಂಚು ಹಾಕುತ್ತದೆ. ಪಕ್ಷಿ 

ಎಲ್ಲದಕ್ಕೂ ಅವುಗಳ ಸಂತತಿಯನ್ನು ಮುಂದುವರೆಸುವ ತವಕ. ಹೆಣ್ಣು ಅಥವಾ ತಾಯಿ ಬೆಕ್ಕು ಪ್ರಭಲವಾಗಿದ್ದು ಯುದ್ಧದಲ್ಲಿ ಗೆದ್ದರೆ ಮರಿಗಳು ಬಚಾವ್. ಪ್ರಾಣಿಗಳ ನ್ಯಾಯವೇ ಹಾಗೆ. ದೈಹಿಕ ಬಲಶಾಲಿಯೇ ಅಲ್ಲಿ ಒಡೆಯ.

ಇದನ್ನೂ ಓದಿ:  ಪಶು – ಪಕ್ಷಿ ಲೋಕದ ವಿಸ್ಮಯಗಳು: ಸಂಚಿಕೆ – 3

ಮನುಷ್ಯನೂ ಸೇರಿದಂತೆ ಗರ್ಭಧಾರಣೆಯ ಪ್ರಕ್ರಿಯೆಯಾದ ನಂತರ ಗರ್ಭಧರಿಸಿದ ಸಂಗಾತಿಯನ್ನು ನೋಡಿಕೊಳ್ಳುವ ಮತ್ತು ಆರೈಕೆ ಮಾಡುವ ಅಕ್ಕರೆ, ಪ್ರೀತಿ ಗಂಡುಜೀವಿಗಳಿಗಿಲ್ಲ. ಮನುಷ್ಯನನ್ನು ಹೊರತುಪಡಿಸಿ ಗರ್ಭಧರಿಸಿದ ಹೆಣ್ಣು ಅವನ್ನು ಬಯಸುವುದೂ ಇಲ್ಲ. ಬಹುತೇಕ ಅಮ್ಮಂದಿರು ಅವುಗಳ ಮರಿಗಳನ್ನು ಹೆರುವ ಮತ್ತು ರಕ್ಷಿಸುವ ಸಾಮರ್ಥ್ಯ ಹೊಂದಿದ್ದು ಗಂಡು ಜೀವಿಯನ್ನು ಅವಲಂಭಿಸಿಲ್ಲ.

ಆದರೆ ಕೆಲವೊಂದು ಜಾತಿಗೆ ಸೇರಿದ ತಂದೆ ಹಕ್ಕಿಗಳು ಮಾತ್ರ “ಒಳ್ಳೆ ಅಪ್ಪ”ನ ಲಕ್ಷಣ ಹೊಂದಿದ್ದು ಗೂಡುಕಟ್ಟುವುದರಿಂದ ಹಿಡಿದು ಮೊಟ್ಟೆಗೆ ಕಾವು ಕೊಡುವುದು, ಮರಿಗೆ ಆಹಾರ ನೀಡುವುದು, ವೈರಿಯ ದಾಳಿಯ ಸಮಯದಲ್ಲಿ ಹೆಣ್ಣು ಹಕ್ಕಿಗೆ ಸಾತ್ ಕೊಡುತ್ತವೆ. ಕೆಟ್ಟ ಅಪ್ಪಂದಿರ ದೊಡ್ಡ ಪಟ್ಟಿಯೇ ಇದೆ.

ಗಂಡು ಸಿಂಹ

ಗಂಡು ಸಿಂಹಗಳು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಸಹ ಅವು ಒಳ್ಳೆಯ ಅಪ್ಪಂದಿರಲ್ಲ. ಸಿಂಹಿಣಿಯ ಮರಿಗಳಿಗೆ ರಕ್ಷಣೆ ನೀಡುವುದಿರಲಿ, ಅವುಗಳಿಗೆ ಆಹಾರವನ್ನು ಬೇಟೆಯಾಡದಷ್ಟು ಸೋಮಾರಿಗಳು. ಹೆಣ್ಣು ಸಿಂಹಿಣಿ ಮಾತ್ರ ಮರಿಗಳಿಗೆ ಮತ್ತು ಗಂಡು ಸಿಂಹ (ಗಂಡ?) ಕ್ಕೂ ಸೇರಿದಂತೆ ಅವಶ್ಯ ಆಹಾರದ ಬೇಟೆಯಾಡುತ್ತದೆ. ಮರಿಗಳಿಗೆ ಆಹಾರ ನೀಡುವಾಗ ಅದನ್ನು ಗಂಡು ಸಿಂಹ ಕಸಿಯದಂತೆ ನೋಡುವುದೇ ಸಿಂಹಿಣಿಯ ದೊಡ್ಡ ಕೆಲಸ.

ಆದರೆ ಇನ್ನೊಂದು ಗಂಡು ಸಿಂಹ ಬಂದು ಡ್ಯಾಡಿ ಸಿಂಹವನ್ನು ಕಾದಾಡಿ ಸೋಲಿಸಿದರೆ ಅದರ ಮೊದಲ ಕೆಲಸ ಎಲ್ಲಾ ಮರಿಗಳ ಕೊಲೆ. ಏಕೆಂದರೆ ಈ ಮರಿಗಳು ಇರುವವರೆಗೂ ಸಹ ಹೆಣ್ಣು ಸಿಂಹ ಬೆದೆಗೆ ಬರುವುದಿಲ್ಲ. ಪ್ರತಿಯೊಂದು ಸಿಂಹವೂ ತನ್ನ ಸಂತತಿಯು ಮುಂದುವರೆಯಬೇಕೆಂದು ಬಯಸುತ್ತದೆಯೇ ಹೊರತು ಇತರ ಸಿಂಹದ ಸಂತತಿಯನ್ನಲ್ಲ. ಎಲ್ಲವನ್ನೂ ಅದು ತನ್ನ ಪ್ರತಿಸ್ಪರ್ಧಿಯಂತೆ ನೋಡುತ್ತದೆ.

ಗಂಡು ಕರಡಿಗಳು

ಗ್ರಿಝ್ಝಿ ಗಂಡು ಕರಡಿಗಳು ಹೆಣ್ಣನ್ನು ಒಲಿಸಿಕೊಳ್ಳಲು ಸಾವಿರಾರು ಕಿಲೋಮೀಟರಿನಷ್ಟು ಪ್ರದೇಶವನ್ನು ಗುರುತಿಸಿಕೊಂಡು ತಮ್ಮ ಸಂಸ್ಥಾನವನ್ನು ಗುರುತಿಸಿಕೊಳ್ಳುತ್ತವೆ. ರಾಜ್ಯ ಸ್ಥಾಪನೆಗೆ ಬರುವ ಇತರ ಗಂಡು ಕರಡಿಗಳೊಂದಿಗೆ ಕಾದಾಡಿ, ಜಾಸ್ತಿ ವ್ಯಾಪ್ತಿಯ ಪ್ರದೇಶವನ್ನು ಆಕ್ರಮಿಸಿಕೊಂಡ “ಶ್ರೀಮಂತ” ಗಂಡು ಕರಡಿಯನ್ನು ಹೆಣ್ಣು ಕರಡಿಗಳು ಅರಸಿಕೊಂಡು ಸಂತಾನೋತ್ಪತ್ತಿ ಮಾಡುವ ಭಾಗ್ಯ ಕರುಣಿಸುತ್ತವೆ. ಹೆಣ್ಣು ಕರಡಿ ಮರಿ ಹಾಕಿದ ನಂತರ ಗಂಡು ಕರಡಿಗೆ ಆಹಾರ ದೊರಕದಿದ್ದರೆ ಅದು ತುಂಬಾ ಇಷ್ಟು ಪಡುವುದು ಎಳೆ ಮರಿ ಕರಡಿಗಳನ್ನು !.

ಕಾರಣ ಡ್ಯಾಡಿ ಕರಡಿಯಿಂದ ಮರಿಗಳನ್ನು ರಕ್ಷಿಸಿಕೊಳ್ಳುವುದೇ ಮಮ್ಮಿ ಕರಡಿಗೆ ದೊಡ್ಡ ಸಾಹಸ. ಡ್ಯಾಡಿ ಕರಡಿ ಮಹಾ ಸಮಯ ಸಾಧಕವಾಗಿದ್ದು ಅವಕಾಶವಾದಿ ಬೇಟೆಗಾರವಾಗಿದ್ದು ಅವುಗಳಿಗೆ ಹಣ್ಣು, ಮೀನು, ಗೆದ್ದಲು ಸಿಗದೇ ಇದ್ದಲ್ಲಿ ಅವುಗಳಿಂದಲೇ ಹುಟ್ಟಿದ ಮರಿಗಳನ್ನು ತಿಂದು ತೇಗುತ್ತವೆ !. ಅದು ತನ್ನದೇ ಮರಿಯಾಗಿದ್ದರೂ ಸಹ ಅದಕ್ಕೆ ಇದರಲ್ಲಿ ಯಾವುದೇ ಬೇಧ ಇಲ್ಲ. ಹಸಿವಾದಾಗ ಅದರ ಹೊಟ್ಟೆ ಸುಲಭವಾಗಿ ತುಂಬಬೇಕು ಅಷ್ಟೆ. ಇನ್ನು ಪ್ರಕೃತಿಯಲ್ಲಿ ಅನಿವಾರ್ಯವಾಗಿ ಕೆಲವೊಂದು ಪ್ರಾಣಿಗಳು ಒಳ್ಳೆಯ ಅಪ್ಪಂದಿರಾಗಿದ್ದಾರೆ.

ಮಾರ್ಮೋಸೇಟ್ ಎಂಬ ಒಳ್ಳೆಯ ಅಪ್ಪ

ಮಾರ್ಮೋಸೇಟ್ ಜಾತಿಗೆ ಸೇರಿದ ಪ್ರಾಣಿಗಳಲ್ಲಿ ಗಂಡು ಒಳ್ಳೆಯ ತಂದೆಯಾಗದಿದ್ದರೆ ಅದಕ್ಕೆ ಸಂತಾನಭಾಗ್ಯವೇ ಇಲ್ಲ. ಹೆಣ್ಣು ಮಾರ್ಮೊಸೆಟ್ಟುಗಳು ಬೆದೆಗೆ ಬಂದಾಗ ಜಾಸ್ತಿ ಮರಿ ಪ್ರೀತಿಯನ್ನು ಹೊಂದಿದ ಮತ್ತು “ಅನುಭವಿ” ಡ್ಯಾಡಿಗಳನ್ನು ಮುಂದಿನ ಪೀಳಿಗೆ ಜನಕನಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಮಿಲನ ಕ್ರಿಯೆಯ ನಂತರ ಅವಳಿ ಮರಿಗಳಿಗೆ ತಾಯಿ ಮಾರ್ಮೋಸೆಟ್ ಜನ್ಮ ನೀಡುತ್ತದೆ. ಮರಿಗಳು ತಾಯಿಯ ತೂಕದ ಶೇ ೨೫ ರಷ್ಟು ಇರುವುದರಿಂದ ಹೆರಿಗೆಯಾದ ಕೂಡಲೇ ತಾಯಿ ಮಾರ್ಮೊಸೆಟ್ಟಿಗೆ ತುಂಬಾ ವಿಶ್ರಾಂತಿ ಅವಶ್ಯ. ಕಾರಣ ಅದರ ಆಹಾರ ಮತ್ತು ಮರಿಗಳ ಆಹಾರವನ್ನು ತಂದೆ ಮಾರ್ಮೋಸೆಟ್ ಪೂರೈಸಬೇಕು.

ಕಾರಣ ಡ್ಯಾಡಿ ಮಾರ್ಮೊಸೆಟ್ ಮರಿಗಳನ್ನು ಚೆನ್ನಾಗಿ ನೆಕ್ಕಿ, ಮೈ ನೇವರಿಸಿ ಶುದ್ಧಗೊಳಿಸಿ ಅವುಗಳಿಗೆ ಮೊಲೆಯೂಡಿಸಲು ಮಮ್ಮಿ ಮಾರ್ಮೊಸೆಟ್ಟಿನ ಮನವೊಲಿಸುತ್ತದೆ. ಮಮ್ಮಿ ಮಾರ್ಮೋಸೆಟ್ ಸಿಡುಕಿ ಮರಿಗಳಿಗೆ ಹಾಲೂಡಿಸದಿದ್ದರೆ ಮರಿಗಳು ಮಟಾಷ್. ಗಂಡು ಮಾರ್ಮೋಸೆಟ್ ಮರಿಗಳನ್ನೂ ಉಳಿಸಿಕೊಂಡು ಹೆಣ್ಣಿನ ಮನವೊಲಿಸಬೇಕು. ಹೀಗೆಲ್ಲಾ ಕಸರತ್ತು ಮಾಡಿ ಬೇಗ ಮರಿಗಳನ್ನು ಗಂಡು ಪುನರ್ಮಿಲನಕ್ಕೆ ಹೆಣ್ಣು ಮಾರ್ಮೋಸೆಟ್ಟನ್ನು ಸಿದ್ಧಪಡಿಸಿಕೊಳ್ಳುತ್ತದೆ. ಇಷ್ಟೆಲ್ಲಾ ಕಸರತ್ತು ಮಾಡುವಾಗ ಕೆಲಸವಿಲ್ಲದ ಇತರ ಗಂಡು ಮಾರ್ಮೋಸೆಟ್ಟುಗಳು ತರ ತರದಲ್ಲಿ ಹೆಣ್ಣನ್ನು ಓಲೈಸುತ್ತವೆ. ಅವು ಯಶಸ್ಸು ಕಂಡರೆ ಹೆಣ್ಣು ಅವುಗಳ ಜೊತೆ ಪರಾರಿ!. ಇದೇ ಕಾರಣದಿಂದ ಡ್ಯಾಡಿ ಮಾರ್ಮೋಸೆಟ್ ಮರಿಗಳು ಬೇಗ ಆರೈಕೆಗೊಂಡು ದೊಡ್ಡದಾಗಿ ಅಮ್ಮನನ್ನು ಬಿಟ್ಟು ತೊಲಗಲಿ ಅಂದುಕೊಳ್ಳುವುದು !

ಜಿಂಕೆಗಳು

ಜಿಂಕೆಗಳು ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ, ತೋಳ ಇತ್ಯಾದಿ ಹಿಂಸ್ರ ಪ್ರಾಣಿಗಳಿಂದ ಬದುಕುಳಿಯುವುದೇ ಅವುಗಳ ಸಂತತಿಯ ಉಳಿವಿಗೆ ಅವಶ್ಯವಾದ ಅರ್ಹತೆ. ಅವುಗಳ ಮೇಲೆ ದಾಳಿ ಆದಾಗ ಯಾವ ಜಿಂಕೆ ತಪ್ಪಿಸಿಕೊಂಡು ಹೋಗುತ್ತದೆಯೋ ಅದು ಆ ದಿನ ಅಥವಾ ಬಹಳ ದಿನ ಬದುಕಿ ಉಳಿಯುತ್ತದೆ. ಜಿಂಕೆಗಳಲ್ಲಿ ಹಿಂಸ್ರ ಪ್ರಾಣಿಗಳಿಂದ ಬದುಕಿ ಉಳಿಯುವುದೇ ಸಂತಾನೋತ್ಪತ್ತಿಗೆ ದೊಡ್ಡ ಅರ್ಹತೆ. ಜಿಂಕೆಗಳಲ್ಲಿ ಸಂತಾನೋತ್ಪತ್ತಿ ಸಮಯದಲ್ಲಿ ಗಂಡು ಜಿಂಕೆಗಳೆಲ್ಲಾ ವೃತ್ತಾಕಾರದಲ್ಲಿ ನಿಂತು ಕೊಳ್ಳುತ್ತವೆ. ನಂತರ ಸಂತಾನೋತ್ಪತ್ತಿ ಕ್ರಿಯೆಗೆ ಸಿದ್ದವಾದ ಹೆಣ್ಣುಗಳೆಲ್ಲಾ ಅಲ್ಲಿಗೆ ಬರುತ್ತವೆ.

ನಂತರ ಅಲ್ಲಿರುವ ಎಲ್ಲಾ ಗಂಡುಗಳು ಮೂತ್ರ ವಿಸರ್ಜನೆಯ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸುತ್ತವೆ. ಬಹಳ ದೂರ ಯಾವ ಗಂಡು ಜಿಂಕೆಯು ಮೂತ್ರ ಎರಚುತ್ತದೆಯೋ ಅದು ಮುಂದಿನ ಪ್ರಕ್ರಿಯೆಗೆ ಅರ್ಹ. ಎಲ್ಲರೂ ಸಮಬಲರಾದ ಪಕ್ಷದಲ್ಲಿ ಅವುಗಳಲ್ಲೇ ಜೀವನ್ಮರಣ ಕಾದಾಟವಾಗುತ್ತದೆ. ಈ ಪ್ರಕ್ರಿಯೆ ನಡೆದಲ್ಲಿ ಮಾತ್ರ ಹೆಣ್ಣು ಜಿಂಕೆ ಗಂಡನ್ನು ಒಪ್ಪುತ್ತದೆ. ಇದು ಒಂಥರಾ ಹಿಂದಿನ ಕಾಲದ ಸ್ವಯಂವರದ ಹಾಗೆ. ಬಲಶಾಲಿ ಗಂಡು ಜಿಂಕೆ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯೇ ನಡೆಯುವುದಿಲ್ಲ. ಹುಟ್ಟುವ ಮರಿಗಳು ದೈಹಿಕವಾಗಿ ಬಲಶಾಲಿಯಾಗಿರಬೇಕೆನ್ನುವ ಪೃಕೃತಿಯ ನಿಯಮವನ್ನು ಅವು ಚಾಚು ತಪ್ಪದೇ ಪಾಲಿಸುತ್ತವೆ.

ಒಂಟೆಗಳು

ಒಂಟೆಗಳಲ್ಲಿ ಸಂತಾನೋತ್ಪತ್ತಿ ಕ್ರಿಯೆ ಇನ್ನೂ ವಿಚಿತ್ರ. ಒಂಟೆಗಳು ಸಂಗಾತಿ ಬೇಕೆನ್ನಿಸಿದಾಗ ಅತ್ಯಂತ ವಿಚಿತ್ರವಾಗಿ ವರ್ತಿಸುತ್ತವೆ. ಗಂಡು ಒಂಟೆಗಳಲ್ಲಿ ಪ್ರತಿವರ್ಷದ ಜನವರಿ ತಿಂಗಳ ಕೊನೆಯಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನಿನ ಪ್ರಭಾವ ಜಾಸ್ತಿಯಾಗುತ್ತಿದ್ದಂತೆ ಅದು “ರಟ್ ಅಥವಾ ಗೊಬಿ” ಎಂಬ ವರ್ತನೆ ತೋರುತ್ತದೆ. ಗಂಡು ಒಂಟೆಯ ಮೇಲ್ದುಟಿಯ ದಲ್ಲಾ ಅಥವಾ ಗುಲ್ಲಾ ಎಂಬ ಹೊಸ ಆಕೃತಿ ಕಾಣಿಸಲು ಪ್ರಾರಂಭಿಸುತ್ತದೆ. ಹೊಸದಾಗಿ ನೋಡಿದವರಿಗೆ ಇದೆಲ್ಲಾ ಏನು ಎಂದು ಗಾಬರಿ ಬೀಳಬೇಕು!. ಒಂಟೆಯ ಕುತ್ತಿಗೆಯಲ್ಲಿ ಮತ್ತು ಎರಡು ಕಿವಿಯ ಬುಡಗಳ ಮಧ್ಯದಲ್ಲಿ ಇರುವ ಪೋಲ್ ಗ್ರಂಥಿಯೊಂದರಿಂದ ದ್ರವ್ಯವೊಂದರ ವಿಸರ್ಜನೆಯಾಗುತ್ತದೆ.

ಇದರ ಮೂತ್ರದಲ್ಲಿ ಫೆರೊಮೋನುಗಳು ಇರುತ್ತವೆ. ರಟ್ ಅಥವಾ ಗೊಬಿಯಲ್ಲಿರುವ ಗಂಡು ಒಂಟೆಗಳು ಬೆದೆಯಲ್ಲಿರುವ ಹೆಣ್ಣನ್ನು ಕೂಡುವ ಮೊದಲು ಘನಘೋರ ಕಾಳಗ ಮಾಡಿ ಯಾವುದು ಗೆಲ್ಲುತ್ತದೆಯೋ ಅವುಗಳಿಗೆ ಸಂತಾನ ಮುಂದುವರೆಸುವ ಗ್ಯಾರಂಟಿ ದೊರೆಯುತ್ತದೆ. ಕೈಲಾಗದೆ ಸೋತ ಒಂಟೆಗಳು ಮಿಲನ ಪ್ರಕ್ರಿಯೆಯನ್ನು ನೋಡುತ್ತಾ ಸುತ್ತಲೂ ವೃತ್ತಾಕಾರದ ಕೋಟೆ ನಿರ್ಮಿಸಿ ಮಿಲನ ಪ್ರಕ್ರಿಯೆ ಮುಗಿಯುವವರೆಗೂ ಸುಮ್ಮನೆ ನಿಲ್ಲಬೇಕು ಅಷ್ಟೆ. ಇದು ಪ್ರಕೃತ್ ನಿಯಮ !. ಮುರಿಯುವ ಹಾಗಿಲ್ಲ. ಹುಟ್ಟಿದ ಮರಿಗಳನ್ನು ಗಂಡು ಒಂಟೆಗಳು ಕಣ್ಣೆತ್ತಿಯೂ ನೋಡುವುದಿಲ್ಲ. ಅವು ಉತ್ತಮ ಡ್ಯಾಡಿಗಳಲ್ಲ!.

ಅಚ್ಚರಿಯ ಅಪ್ಪ ತೋಳ !

ಕೆಂಪು ತೋಳಗಳ ಪರಿವೆಯೇ ಬೇರೆ. ಇಲ್ಲಿ ಗಂಡು ಮತ್ತು ಹೆಣ್ಣು ಗೆಳತನ ಹೊಂದಿ ಮಿಲನ ಕ್ರಿಯೆ ನಡೆದು ಹೆಣ್ಣು ಮರಿ ಹಾಕಿದ ನಂತರ ಗಂಡು ತೋಳ ಪ್ರತಿ ೬ ಗಂಟೆಗೊಮ್ಮೆ ಹೊರಗೆ ಹೋಗಿ ತಾಯಿ ಮರಿಗಳಿಗೆ ಸಾಕಾಗುವಷ್ಟು ಆಹಾರವನ್ನು ತರಲೇಬೇಕು. ಹೆಣ್ಣು ತೋಳ ಮರಿಗಳು ಸ್ವತಂತ್ರವಾಗುವ ವರೆಗೂ ಸಹ ಹೊರಗೆ ಹೊರಡುವುದಿಲ್ಲ. ಮರಿಗಳಿಗೆ ಬೇಟೆಯಾಡುವುದನ್ನು, ಇತರರ ಬೇಟೆಯನ್ನು ಕದ್ದು ತಿನ್ನುವುದನ್ನು, ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು, ಸಂಗಾತಿಯನ್ನು ಒಲಿಸಿಕೊಳ್ಳುವುದನ್ನು ಗಂಡು ತೋಳವೇ ನುರಿತ ಸರ್ಕಾರಿ ಶಾಲೆಯ ಶಿಕ್ಷಕನಂತೆ ಸಮಯ ಹೊಂದಿಸಿಕೊಂಡು ಹೆಣ್ಣಿನ ಮುಂದೆಯೇ ಮಾಡಬೇಕು.

ಇದನ್ನು ಈಗಿನ ಝೊಮ್ಯಾಟೋ ತರ ನೀಡುವ “ಗೃಹ ಸೇವೆ ಅಥವಾ ರೂಂ ಸೇವೆ” ಎನ್ನಬಹುದು. ಈ ಸೇವೆ ತೃಪ್ತಿಕರವಾಗಿದ್ದರೆ ಮಾತ್ರ ಮುಂದೆ ಅದರ ಸಂತಾನ ಮುಂದುವರೆಸಲು ಹೆಣ್ಣು ತೋಳಗಳು ಮುಂದೆ ಬರುವುದು ಎಂಬುದು ಗಂಡಿಗೆ ಗೊತ್ತಿರುವುದರಿಂದ ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತದೆ. ಅದು ಒಳ್ಳೆಯ ಅಪ್ಪನಾಗದಿದ್ದರೆ ಅಥವಾ ಅಪ್ಪನಾಗಿ ಶ್ರದ್ಧೆಯಿಂದ ದುಡಿದು ತೋರಿಸಿ ಸಾಬೀತು ಮಾಡದಿದ್ದರೆ ಅದಕ್ಕೆ ಸಂತಾನ ಮುಂದುವರೆಸುವ ಯೋಗ ಇಲ್ಲವೇ ಇಲ್ಲ. ಇದನ್ನು ಮನುಷ್ಯರಿಗೆ ಹೋಲಿಸಬೇಡಿ. ಕೆಲವೇ ಕೆಲವು ಅಪ್ಪಂದಿರು ಈ ಪರೀಕ್ಷೆಯಲ್ಲಿ ಪಾಸಾಗಬಹುದು !.

ಹಾವುಗಳು ಜೊತೆಗಾರ ಜೀವಿಗಳಲ್ಲ!

ಸರೀಸೃಪಗಳಾದ ಹಾವುಗಳು ಸಹ ಒಂಟಿ ಜೀವಿಗಳು. ಅವು ಸಂಗಾತಿಯನ್ನರುಸುವುದು ಸಂತಾನ ಕ್ರಿಯೆಗೆ ಸಿದ್ಧವಾದಾಗ ಮಾತ್ರ. ಆ ಸಮಯದಲ್ಲಿ ಮಾತ್ರ ಅವು ಜೊತೆಗಾರ ಅಥವಾ ಜೊತೆಗಾರ್ತಿಯ ಜೊತೆಗಿರುತ್ತದೆ. ಗಂಡು ಹಾವು ಮಿಲನಕ್ರಿಯೆಯ ನಂತರ ಹೆಣ್ಣು ಹಾವನ್ನು ಗುರುತಿಸುವುದೂ ಇಲ್ಲ. ಗರ್ಭಧರಿಸಿದ ಹೆಣ್ಣು ಹಾವು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಹಾವುಗಳೆಂದೂ ಜೊತೆಗಿರುವ ಸಾಮಾಜಿಕ ಜೀವಿಗಳಲ್ಲ.

ಬದಲಾಗಿ ಒಂದು ಹಾವು ಇನ್ನೊಂದು ಹಾವನ್ನು ಬಹಳ ಇಷ್ಟಪಟ್ಟು ಆಹಾರವಾಗಿ ಕಬಳಿಸುತ್ತದೆ. ದೊಡ್ಡ ಹಾವಿನಿಂದ ತಪ್ಪಿಸಿಕೊಳ್ಳುವುದೇ ಸಣ್ಣ ಹಾವಿನ ಕಷ್ಟ. ಸ್ವಜಾತಿಯ ಹಾವುಗಳನ್ನೇ ಭಕ್ಷಿಸುವುದು ಅನೇಕ ಹಾವುಗಳ ಸ್ವಭಾವ. ಗಂಡು ಹಾವಿಗೆ ಅದರ ಸಂಗಾತಿ ಅಥವಾ ಯಾವುದೇ ಹೆಣ್ಣು ಹಾವು ಇಟ್ಟ ಮೊಟ್ಟೆಗಳು ರುಚಿಕರ ಖಾದ್ಯಗಳು. ಕುಲ ಕುಲವೆಂದು ಹೊಡೆದಾಡದೇ ದಿನಕ್ಕೊಂದು ಜಾತಿ ಸಮ್ಮೇಳನ ಮಾಡುವ, ಜಾತಿಬಾಂಧವರನ್ನೇ ನಂಬಿ ಚುನಾವಣೆಗಿಳಿಯುವ ಸ್ವಜಾತಿಪ್ರಿಯರು ಮುಂದಿನ ಜನ್ಮದಲ್ಲಿ ಹಾವಾಗಿ ಹುಟ್ಟಲಿ ಎಂದು ಶಪಿಸೋಣವೇ?

ಮಂಗಗಳ ದಾಂಪತ್ಯ ಜೀವನ

ಮನುಷ್ಯರಿಗೆ ಅತಿ ಹತ್ತಿರದ ವಿವಿಧ ಮಂಗಗಳಲ್ಲಿ ಗಂಡುಗಳು ತಮ್ಮ ಮರಿಯನ್ನು ಸಂಗಾತಿಯ ಜೊತೆಯಲ್ಲಿ ಹೊತ್ತೊಯ್ಯುವ, ಅವುಗಳಿಗೆ ಆಹಾರ ನೀಡುವ ಮತ್ತು ಶತ್ರುಗಳಿಂದ ಅವುಗಳನ್ನು ಕಾಪಾಡುವ ಗುಣ ಹೊಂದಿವೆ. ಬಬೂನುಗಳು ತಾಯಿಮಂಗಕ್ಕೆ ಮರಿಯನ್ನು ಹೊತ್ತೊಯ್ಯಲು ಸಹಕರಿಸುವುದು ಮುಂದೆ ಅದನ್ನು ಕೂಡಲು ಒಲಿಸಿಕೊಳ್ಳುವುದಕ್ಕೆ ಹೊರತು ಮರಿಯ ಮೇಲಿನ ಮಮತೆಯಿಂದಲ್ಲ!. ಇದನ್ನು ಕೆಲವೊಂದು ಮೊದ್ದುಮಣಿಗಳಾದ ಪ್ರಾಣಿಪ್ರಿಯರು ಗಂಡು ಬಬೂನುಗಳು ಎಷ್ಟೊಂದು ಮಗುಪ್ರಿಯರು ಎಂದು ಉದ್ಘರಿಸಬಹುದು!. ಕೆಲವೊಂದು ಜಾತಿಯ ಮಂಗಗಳಲ್ಲಿ ಮನುಷ್ಯರಂತೆ “ಏಕಪತ್ನಿ ಪದ್ಧತಿ” ಇದ್ದರೂ ಅದು ಧೀರ್ಘಕಾಲ ಬಾಳಲ್ಲ.

ಇನ್ನೊಬ್ಬ ಉತ್ತಮ ಸಂಗಾತಿ ದೊರೆತ ಕೂಡಲೇ ಈ ಸಂಬಂಧ ಬಿಟ್ಟು ಹೋಗುತ್ತದೆ. ಒಂದೇ ಪತ್ನಿಯ (ಪತಿ) ಯ ಜೊತೆ ಇದ್ದು ಬೋರಾಗಿ ಬೇರೆ ಹೋಗುವುದು ಮಂಗಗಳಲ್ಲಿ ಬಹಳ ಸಾಮಾನ್ಯ. ನಮ್ಮಲ್ಲಿರುವ ಹಾಗೆ ಇದು ಅಕ್ರಮ ಸಂಬಂಧವೇ ಅಲ್ಲ. ಕಾರಣಾ ಅವುಗಳೀಗೆ ಈ ಕುರಿತು ಈರ್ಶ್ಯೆ ಇಲ್ಲ. ಸದಾ ಹೊಸತನವನ್ನು ಹುಡುಕುವ ಮನುಷ್ಯ ಇತ್ತೀಚೆಗೆ ಇದನ್ನು ಚೆನ್ನಾಗಿ ರೂಢಿಸಿಕೊಂಡಿದ್ದಾನೆ. ಎಷ್ಟೆಂದರೂ ಆತ ಮಂಗಗಳ ಸಮೀಪದ ಸಂಬಂಧಿಯಲ್ಲವೇ? ಹುಟ್ಟುಗುಣ. ಘಟವಾಣಿ ಪತ್ನಿ ಅಥವಾ ಸದಾ ಸಿಡುಕು ಮೋರೆಯ ಗಂಡ ಇವರನ್ನು ಜೀವನದುದ್ದಕ್ಕೂ ಸಹಿಸಿಕೊಳ್ಳುವ ಮತ್ತು ಏಳೇಳು ಜನ್ಮಕ್ಕೂ ಈತನೇ ಅಥವಾ ಇವಳೇ ಬಾಳಸಂಗಾತಿಯಾಗಿ ಬರಲಿ ಎಂದುಕೊಳ್ಳುವ ಮತ್ತು ಈ ರೀತಿ ಹಾರೈಸುವ ಜನರನ್ನು ನೋಡಿ ಇವು ಕರುಣೆ ಪಟ್ಟು ಅಣಕಿಸಬಹುದೇನೋ? ಪಕ್ಷಿ 

ಗಂಡು ಆಸ್ಟ್ರಿಚ್ ಎಂಬ ಅಮ್ಮಾವ್ರ ಗಂಡ

ಗಂಡು ಆಸ್ಟ್ರಿಚ್ ಕಡುಕಪ್ಪು ಬಣ್ಣ ದೊಡ್ಡ ಕಣ್ಣು ಹೊಂದಿದ್ದು ಹೆಣ್ಣನ್ನು ಆಕರ್ಷಿಸಿ ಮಿಲನ ಹೊಂದುತ್ತದೆ. ಹೆಣ್ಣು ಮೊಟ್ಟೆಯನ್ನಿಟ್ಟಾಗ ಅದು ಹಗಲಿನಲ್ಲಿ ಮೊಟ್ಟೆಗಳಿಗೆ ಕಾವನ್ನು ಕೊಟ್ಟರೆ, ಗಂಡಿನದು ರಾತ್ರಿ ಪಾಳಿ. ಗಂಡು ಕಪ್ಪಗಿರುವುದರಿಂದ ರಾತ್ರಿಯಲ್ಲಿ ಕಾವಿಡುವುದು ಬೇಟೆಯ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆ ಇರುವುದರಿಂದ ಹೆಣ್ಣು ಈ ಕಾಯಕಕ್ಕೆ ಗಂಡನ್ನು ನಿಯೋಜಿಸುತ್ತದೆ. ಮೊಟ್ಟೆ ಮರಿಯಾದ ದಿನದಿಂದ ಡ್ಯಾಡಿ ಆಸ್ಟ್ರಿಚ್ ಮರಿಗಳಿಗೆ ತಿಪ್ಪೆ ಕೆದಕುವುದು, ಹುಳ ಹಿಡಿಯುವುದು ಮತ್ತು ವೈರಿಗಳಿಂದ ತಪ್ಪಿಸಿಕೊಳ್ಳುವುದು ಕಲಿಸಿಕೊಡುತ್ತದೆ.

ಅಲ್ಲದೇ ಮರಿಗಳು ಸ್ವತಂತ್ರವಾಗಿ ಈ ಕೆಲಸ ಮಾಡಿಕೊಳ್ಳಲು ಶಕ್ತರಾಗುವರೆಗೂ ಇತರ ಹೆಣ್ಣು ಆಸ್ಟ್ರಿಚ್ ಅದೆಂಥಾ ಬೆದೆಯಲ್ಲಿದ್ದರೂ ಸಹ ಆ ಕಡೆ ಕಣ್ಣು ಹಾಯಿಸಿಯೂ ನೋಡುವುದಿಲ್ಲ !. ಅಂಥಾ ಸಂತಾನ ನಿಷ್ಟೆ ಅದಕ್ಕೆ. ಇದಕ್ಕೆ ಪಕ್ಕಾ ತದ್ವಿರುದ್ಧವಾಗಿ ಹೆಣ್ಣು ಅಸ್ಟ್ರಿಚ್ ಹಾಯಾಗಿ ಎಲ್ಲಾ ಸೇವೆ ಸ್ವೀಕರಿಸುತ್ತಾ ತನ್ನ ಪಾಡಿಗೆ ತಾನಿದ್ದು ಶರೀರದಲ್ಲಿ ಕೊಬ್ಬನ್ನು ಶೇಖರಿಸಿಕೊಂಡು ಇನ್ನೊಂದು ಸಲ ಮೊಟ್ಟೆ ಇಡಲು ಮತ್ತೊಂದು ಹೊಸ ಗಂಡನ್ನು ಹುಡುಕುತ್ತಿರುತ್ತದೆ !. ನಮ್ಮ ಹೆಣ್ಣು ಮಕ್ಕಳು ’ಹೆಣ್ಣು ಆಸ್ಟ್ರಿಚ್ ಎಂಥಾ ಲಕ್ಕಿ’ ಎಂದು ಹೊಟ್ಟೆ ಉರಿದುಕೊಳ್ಳಬೇಡಿ !.  ಪಕ್ಷಿ 

ಗಂಡು ಕಿವಿ ಮತ್ತು ಎಮು ಪಕ್ಷಿಗಳು ಸಹ ಉತ್ತಮ ತಂದೆಯರು. ಅವು ಸಹ ಹೆಣ್ಣು ಇಟ್ಟ ಮೊಟ್ಟೆಯನ್ನು ಕಾದು, ಕಾವು ನೀಡಿ ಮರಿ ಮಾಡಿ ಮರಿ ಸ್ವತಂತ್ರವಾಗುವವರೆಗೆ ಜತನದಿಂದ ನೋಡಿಕೊಳ್ಳುತ್ತವೆ. ಮತ್ತೊಂದು ವಿಶೇಷವೆಂದರೆ ಅದು ಯಾವ ಗಂಡಿನಿಂದ ಜನಿಸಿದ ಫಲೀಕರಣವಾದ ಮೊಟ್ಟೆಯಿಂದ ಬಂದ ಮರಿಯಾದರೂ ಸರಿ, ಅದಕ್ಕೆ ಕಾವು ಕೊಟ್ಟು ಮರಿ ಮಾಡಿಸಿ ಅವು ಸ್ವತಂತ್ರವಾಗುವವರೆಗೂ ಸಹ ಶಿಸ್ತಿನ ಸಿಪಾಯಿಯಂತೆ ಅವುಗಳ ಕರ್ತವ್ಯ ನಿರ್ವಹಿಸುತ್ತವೆ !. ನಾನು ನನದೆಂಬ ಸ್ವಾರ್ಥವೇ ಇಲ್ಲದ “ದಡ್ಡ ಶಿಖಾಮಣಿ’ ಪಾಪದ ತಂದೆಗಳು ಅವು !. ಪಕ್ಷಿ 

ಮಮತಾಮಯಿ ಗಂಡು ಉಷ್ಟ್ರ ಪಕ್ಷಿ

ಉಷ್ಟ್ರ ಪಕ್ಷಿಗಳಲ್ಲಿ ಗಂಡು ತನ್ನ ಮರಿಗಳ ಬಗ್ಗೆ ಅತ್ಯಂತ ಮಮತಾಮಯಿ !. ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದ್ದ ಬದ್ದ 10 – 12 ಹೆಣ್ಣು ಉಷ್ಟ್ರಪಕ್ಷಿಗಳ 50-60 ಮೊಟ್ಟೆಗಳನ್ನು ಗುಡ್ಡೆ ಹಾಕಿಕೊಂಡು ಹಗಲಿರುಳು ಸ್ವಯಂ ಕಾವುಕೊಡುತ್ತದೆ. ಎಷ್ಟರ ಮಟ್ಟಿಗೆ ಇದು ಮರಿಗಳ ಬಗ್ಗೆ ಹುಚ್ಚನೆಂದರೆ ಇತರ ವೈರಿ ಅಥವ ತಾಯಿ ಉಷ್ಟ್ರಪಕ್ಷಿಗಳು ಹತ್ತಿರ ಬಂದರೆ ಅವುಗಳನ್ನು ಕಚ್ಚಿ ಸಾಯಿಸಲು ಹೇಸುವುದಿಲ್ಲ. ಪಕ್ಷಿ 

ಇದನ್ನೂ ಓದಿ: ಪಶು-ಪಕ್ಷಿ ಲೋಕದ ವಿಸ್ಮಯಗಳು: ಸಂಚಿಕೆ-2

ಅಂಥಾ ಪೊಸೆಸಿವ್ ನೆಸ್ ಅದಕ್ಕೆ. ತಾಯಿಯಾದರೂ ಅಷ್ಟೆ ಮರಿ ಹಾಕಿದ ಮೇಲೆ ಅವುಗಳ ಸಹವಾಸಕ್ಕೆ ಹೋಗದೇ ಹೊಟ್ಟೆ ತುಂಬಿಸಿ ಕೊಳ್ಳುತ್ತಾ ಮುಂದೆ ಅದು ಹೊಸದಾಗಿ ಇಡುವ ಮೊಟ್ಟೆಗಳನ್ನು ಫಲೀಕರಿಸಲು ಹೊಸ ಗಂಡನ್ನು ಹುಡುಕುವ ಗಡಿಬಿಡಿಯಲ್ಲಿರುತ್ತದೆ !. ಹುಡುಗಿ ಕೈಕೊಟ್ಟಳೆಂದು ವಿವಿಧ ವಿಧಾನಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಮ್ಮ ಹುಡುಗರು ಇದರಿಂದ ಜೀವನದ ಪಾಠ ಕಲಿಯಬೇಕು! ಮದುವೆಯಾಗಲು ಹೆಣ್ಣು ಸಿಕ್ಕಲ್ಲ ಎನ್ನುವ ಹಳ್ಳಿಯಲ್ಲಿರುವ ಕೃಷಿಕ ಹುಡುಗರು ಈ ಕಾಲದ ಹುಡುಗಿಯರ ಅಭಿರುಚಿಯನ್ನರಿತು ಅದನ್ನೆಲ್ಲಾ ಒದಗಿಸಿ ಅವರನ್ನು ಅವರ ವಿಧಾನದಲ್ಲಿಯೇ ಒಲಿಸಿಕೊಳ್ಳಬೇಕೇ ವಿನ: ತಹಶೀಲ್ದಾರರಿಗೆ ಅರ್ಜಿ ಕೊಡುವುದಲ್ಲ ! ಇದರ್ಂದ ಏನೂ ಪ್ರಯೋಜನವಿಲ್ಲ. ಪಕ್ಷಿ 

ನಾವು ಹೇಗೆ?

ನಮ್ಮ ಅತಿಲೋಕ ಸುಂದರಿ ಶ್ರೀದೇವಿ ಅವಳನ್ನು ವರಿಸಲು ಸಾವಿರಾರು ಸಂಖ್ಯೆಯ ಗಂಡುಗಳು ಕಾದಿದ್ದರೂ ಎಲ್ಲವನ್ನೂ ಧಿಕ್ಕರಿಸಿ ಎರಡು ಮಕ್ಕಳನ್ನು ಹೊಂದಿದ “ಅನುಭವಿ” ಗಂಡು ಬೋನಿಕಫೂರನನ್ನು ವರಿಸಿ ಆತನಿಂದ ಜಾಹ್ನವಿ ಮತ್ತು ಖುಷಿಯಂತ ಕಫೂರ ಕುಟುಂಬದ ಮಕ್ಕಳನ್ನು ಪಡೆದ ಹಾಗೆ. ನಮ್ಮ ನಿಮ್ಮೆಲ್ಲರ ಅಪ್ಪಂದಿರ ಅಥವಾ ಕೆಲ ಓದುಗರ “ಕನಸಿನ ಕನ್ಯೆ” ಸೌಂದರ್ಯರಾಶಿ ಹೇಮಾಮಾಲಿನಿ ಇಬ್ಬರು ಗಂಡು ಮಕ್ಕಳನ್ನು ಹೊಂದಿದ ಧರ್ಮೇಂದ್ರನನ್ನು. ಚುರಾಕೆ ದಿಲ್ ಮೆರಾ ಗೊರಿಯಾ ಚಲಿ…ಎಂದು ಹಾಡಿ ಕುಣಿದು ಥಳುಕು ಬಳುಕಿನ ಯುವಕರ ಎದೆ ಝಲ್ಲೆನಿಸಿದ ಯೋಗಗುರುವೆಂದೇ ಕರೆಸಿಕೊಂಡ ಒಕ್ಕಣ್ಣಿನ ಬಾಬಾ ರಾಮ ದೇವನ ಯೋಗವನ್ನು ಯಾರೂ ನೋಡದಂತೇ ಮಾಡಿದ ಕನ್ನಡತಿ ಶಿಲ್ಪಾ ಶೆಟ್ಟಿ ಮದುವೆಯಾಗಿದ್ದು ಆಗಲೆ ಮದುವೆಯಾಗಿ ಮಗನನ್ನು ಹೊಂದಿದ ರಾಜ್ ಕುಂದ್ರಾನನ್ನು. ಪಕ್ಷಿ 

“ತೂ ಚೀಜ಼್ ಬಡಿ ಹೈ ಮಸ್ತ್ ಮಸ್ತ್ ” ಎಂದು ಕುಣಿದು ಹುಡುಗರ ಎದೆ ಜಲ್ಲೆನಿಸಿದ ರವಿನಾ ಟಂದನ್ ಆರಿಸಿಕೊಂಡಿದ್ದು ಎರಡು ಚಿಕ್ಕ ಮಕ್ಕಳಿರುವ ನತಾಶಾ ಸಿಪ್ಪಿಯನ್ನು. ಶಬ್ನಾ ಅಜ್ಮಿ, ಕರಿನಾ ಕಫೂರ್, ಬಿಪಾಶಾ ಬಸು, ಲಾರಾ ದತ್ತಾ, ವಿದ್ಯಾ ಬಾಲನ್, ಪ್ರೇಮಲೋಕದ ಜೂಹಿ ಚಾವ್ಲಾ, ಕರಿಷ್ಮಾ ಕಫೂರ್ ಇವರೆಲ್ಲಾ ವರಿಸಿದ್ದು “ಅನುಭವಿ” ಸೆಕೆಂಡ್ ಹ್ಯಾಂಡ್ ಗಂಡುಗಳನ್ನು. ಹಾಗಿದ್ದರೆ ಪ್ರಾಣಿಗಳೇ ಗುಣದಲ್ಲಿ ಮೇಲು ಅನ್ನೊಣವೇ ಅಥವಾ ಮನುಷ್ಯನೂ ಸಹ ಪ್ರಾಣಿಯೇ ಆಗಿರುವುದರಿಂದ ಇದೊಂದು ಸಹಜ ಕ್ರಿಯೆ ಎಂದು ಅವರ ಪಾಡಿಗೆ ಅವರನ್ನು ಬಿಟ್ಟುಬಿಡೋಣವೇ? ಪಕ್ಷಿ 

ಮುಗಿಯದ ಕಥನ !

ಹೀಗೆ ಹೇಳುತ್ತಾ ಹೋದರೆ ಒಂದೇ ಎರಡೆ? ಮುಗಿಯದ ಕಥನ. ಜಗತ್ತೇ ನಿಂತಿರುವುದು ಹೆಣ್ಣಿನ ಮೇಲೆ ಎಂಬುದು ಇದರಿಂದ ಸಾಬೀತಾಗುತ್ತದೆ. ರಾಮಾಯಣ, ಮಹಾಭಾರತ ಇದರ ಮುಂದೆ ಯಾವ ಮಹಾ! ಮನುಷ್ಯರಿಗೆ ಇದೆಲ್ಲಾ ಹೋಲಿಸಿ ಗೊಂದಲ ಮಾಡಿಕೊಳ್ಳಬೇಡಿ. ಇಲ್ಲಿ (ಬಹುತೇಕ) ಹೆಣ್ಣು ಒಲಿಯುವುದು ಹಣಶಾಲಿಗೆ ಅಥವಾ ಆರ್ಥಿಕವಾಗಿ ಸದೃಢರಿಗೆ. ನಂತರ ಒಂದಿಷ್ಟು ರೂಪ, ವಿದ್ಯೆ, ಗುಣ, ಹಾಸ್ಯ ಸ್ವಭಾವ, ಪ್ರೇಮ ಇದ್ದರೆ ಅವೆಲ್ಲಾ ಬೋನಸ್. ಸಿಕ್ಸ್ ಪ್ಯಾಕ್ ಇರುವ ದೈಹಿಕ ಬಲಶಾಲಿಗೆ ಮನುಷ್ಯರಲ್ಲಿ ಹಣವಿಲ್ಲದಲ್ಲಿ ಆತನಿಗೆ ಕೊನೆಯ ಆಧ್ಯತೆ ಅಂತಾರೆ.  ಪಕ್ಷಿ 

ಗಂಡಿಗೆ ಹೆಣ್ಣು ರೂಪವತಿಯಾಗಿರಬೇಕು, ಸೌಂದರ್ಯರಾಶಿಯಾಗಿರಬೇಕು. ಜೊತೆಗೆ ಆರ್ಥಿಕ ಸಬಲೀಕರಣಕ್ಕೆ ಉದ್ಯೋಗದಲ್ಲಿದ್ದರೆ ಒಳ್ಳೆಯದು. ತಂದೆ ತಾಯಿ ಜೊತೆಗಿದ್ದರೆ ಅವರನ್ನು ಸ್ವತ: ತನ್ನ ತಂದೆತಾಯಿಯ ಹಾಗೇ ನೋಡಿಕೊಳ್ಳಬೇಕು. ಒಳ್ಳೊಳ್ಳೆ ಅಡಿಗೆ ಮಾಡಿ ಹಾಕಬೇಕು. ಇನ್ನೂ ಏನೇನೋ? ಸದ್ಯ ಇದು ಇಲ್ಲಿಯ ನಿಯಮ. ಇದಕ್ಕೆ ಅಲ್ಲೊಂದು ಇಲ್ಲೊಂದು ಭಿನ್ನತೆ ಇರಬಹುದು. ಈ ನಿಯಮಕ್ಕೆ ಹೊರತಾಗಿರುವ ಪ್ರೀತಿ ಪ್ರೇಮ ಎಂದು ಸದಾ ಹಂಬಲಿಸುವ ಭಾವನಾ ಜೀವಿಗಳೂ ಇರಬಹುದು. ಅವರಿಗೆ ಕ್ರಮೇಣ ಜೀವನದ ನೈಜತೆ ಅರಿವಾಗುವ ಹೊತ್ತಿಗೆ ಕಾಲ ಮಿಂಚಿಹೋಗಿರುತ್ತದೆ. ಹೊಂದಿಕೊಂಡು ಬದುಕಲೇಬೇಕು. ಮನುಷ್ಯರಲ್ಲಿ ಹೆಣ್ಣು ಗಂಡನ್ನು ಗಂಡು ಹೆಣ್ಣನ್ನು ಆಯ್ಕೆ ಮಾಡುವಲ್ಲಿ ಅವರ ಅಭಿರುಚಿಯ ಬಗ್ಗೆ ಅನೇಕ ಭಿನ್ನ ಭಿನ್ನ ಅಭಿಪ್ರಾಯದ ಸಮೀಕ್ಷೆಗಳಿವೆ.

ನಾನು ಪ್ರಾಣಿವೈದ್ಯನಲ್ಲವೇ? ನನಗ್ಯಾಕೆ ಮನುಷ್ಯರ ಗೊಡವೆ?

ಇದನ್ನೂ ನೋಡಿ: ಸಿದ್ದಿ, ಕುಣಬಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯತೆಯ ನೃತ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *