ಬೆಂಗಳೂರು: ಮಲ್ಲತ್ತಹಳ್ಳಿ ಕಲಾ ಗ್ರಾಮದಲ್ಲಿರುವ ಕನ್ನಡ ಸಾಹಿತಿಗಳ ಸಮಾಧಿಗಳಿಗೆ ಕನ್ನಡ ಸಿನಿಮಾ ನಟರಿಗೆ ಸ್ಮಾರಕ ನಿರ್ಮಿಸಿದ ಮಾದರಿಯಲ್ಲಿಯೇ ಸ್ಮಾರಕ ರೂಪ ನೀಡಬೇಕು’ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಸಲಹೆ ನೀಡಿದರು.
ಪ್ರೊ.ಜಿ.ಎಸ್. ಶಿವರುದ್ರಪ್ಪ ಮತ್ತು ಪ್ರೊ.ಯು.ಆರ್. ಅನಂತಮೂರ್ತಿ ಸಾಂಸ್ಕೃತಿಕ ಜಗತಿ ಜಂಟಿ ಕ್ರಿಯಾ ಸಮಿತಿ ಶನಿವಾರ ಮಲ್ಲತ್ತಹಳ್ಳಿ ಕಲಾಗ್ರಾಮದ ಎನ್ಎಸ್ಡಿ ಆವರಣದಲ್ಲಿರುವ ಪುಣ್ಯಭೂಮಿಯಲ್ಲಿ ಹಮ್ಮಿಕೊಂಡಿದ್ದ ಜಿ.ಎಸ್.ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವ ಹಾಗೂ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ : ಭಾರತ-ಯುಎಸ್ ವ್ಯಾಪಾರ ಒಪ್ಪಂದ ಒಂದು ‘ಸಂಪೂರ್ಣ ಶರಣಾಗತಿ’ ಸಂಯುಕ್ತ ಕಿಸಾನ್ ಮೋರ್ಚಾ ಖಂಡನೆ
ಚಿತ್ರನಟರ ರೀತಿಯಲ್ಲಿಯೇ, ಸರ್ಕಾರ ಇವುಗಳನ್ನೂ ಸ್ಮಾರಕವಾಗಿಸಿದರೆ ಇನ್ನಷ್ಟು ಮಂದಿಗೆ ಈ ತಾಣಗಳು ಪ್ರೇರಣೆಯೂ ಆಗಬಹುದು’ ‘ಸಾಹಿತಿಗಳಿಗೂ ಗೌರವ ನೀಡಬೇಕು ಎನ್ನುವ ಉದ್ದೇಶದಿಂದ ಜಿ.ಎಸ್.ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆಯನ್ನು ಕಲಾ ಗ್ರಾಮದಲ್ಲಿ ನಡೆಸಿ ಸಮಾಧಿಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು
ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಬೈರಮಂಗಲ ರಾಮೇಗೌಡ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಯೋಜನೆಗಳಿಗೆ ಅನುದಾನ ನೀಡಬೇಕು. ಕಲಾಗ್ರಾಮದಲ್ಲಿ ಜಿ.ಎಸ್. ಶಿವರುದ್ರಪ್ಪ ಅವರ ಹೆಸರಿನಲ್ಲಿ ಗ್ರಂಥಾಲಯ, ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಬೇಕು. ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ಚಾಟಿ ಬೀಸಬೇಕು’ ಎಂದು ತಿಳಿಸಿದರು.
ಜಿ.ಎಸ್. ಶಿವರುದ್ರಪ್ಪ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದ ಕವಿ ಸುಬ್ಬು ಹೊಲೆಯಾರ್ ಮಾತನಾಡಿ, ‘ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಆದರೆ ಜಿಎಸ್ಎಸ್ ಹೆಸರಿನಲ್ಲಿ ಸಮಿತಿ ಪ್ರಶಸ್ತಿ ನೀಡುವುದಾಗಿ ಹೇಳಿದಾಗ ರೋಮಾಂಚನವಾಯಿತು. ಈಗ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಹೆಮ್ಮೆ ಎನ್ನಿಸಿದೆ’ ಎಂದು ಹೇಳಿದರು.
ಗ್ರಂಥಾಲಯ ಇಲಾಖೆ ನಿವೃತ್ತ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಜಿ.ಎಲ್.ಲತಾ, ರಕ್ಷಿತ್ಕುಮಾರ್ ಅವರಿಗೆ ಪ್ರಭು ಜಯರಾಮ್ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಜಿ.ಎಸ್. ಶಿವರುದ್ರಪ್ಪ ಜನ್ಮಶತಮಾನೋತ್ಸವ ಪ್ರಯುಕ್ತ ಕಾವ್ಯ ವಾಚನ, ಗೀತೆ ಗಾಯನ ನಡೆದವು. ನಂತರ ನಡೆದ ಕವಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಮಹಾಮನೆ, ಹನುಮಂತರಾಯಪ್ಪ, ಮಂಜು ಪಾಂಡವಪುರ, ಮುರಳಿಕೃಷ್ಣ ಬೆಳಾಲು, ಲಕ್ಷಿ ಶ್ರೀನಿವಾಸ್, ರಾಜು ಪವಾರ್, ಕಾತ್ಯಾ ಮಧುಗಿರಿ ಕವನ ವಾಚಿಸಿದರು. ಎಚ್.ಲಕ್ಷ್ಮಿನಾರಾಯಣ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.
ಬಂಜಾರ ಸಂಸ್ಕೃತಿ ಭಾಷಾ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ಎ.ಆರ್.ಗೋವಿಂದಸ್ವಾಮಿ, ವಕೀಲ ಎ.ವಿ.ಶ್ಯಾಮ್ ಕುಮಾರ್, ಸಮಿತಿಯ ಕಾರ್ಯದರ್ಶಿ ಕೆ.ಎಚ್.ಕುಮಾರ್ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಯುಡಿಆರ್ನಲ್ಲಿ ಹೂತ ಸತ್ಯಗಳು, ಎಫ್ಐಆರ್ನಲ್ಲಿ ಹೊರಬರಲಿವೆಯೇ? Janashakthi Media
