ಮತದಾರರ ಪಟ್ಟಿಯ ಪರಿಷ್ಕರಣೆ ಎನ್ನುವುದು ಸಾಮಾನ್ಯವಾಗಿ ನಡೆಯುವ ಚುನಾವಣಾ ಕ್ರಿಯೆ. ಬಿಹಾರ್ ಮತ್ತು ದೇಶದ ಇತರ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision)ಯ ಹೆಸರಿನಲ್ಲಿ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಅಪಾಯದ ಬಗ್ಗೆ ಈಗಾಗಲೇ ದೊಡ್ಡ ಚರ್ಚೆಗಳು ನಡೆಯುತ್ತಿವೆ. ದೊಡ್ಡ ಪ್ರಮಾಣದ ಮತದಾರರ ಹೆಸರುಗಳು ಡಿಲಿಟ್ ಆಗುತ್ತಿರುವ ಕಾರಣ ಇದು ಮತದಾರರ ಪರಿಷ್ಕರಣೆಯೋ ಅಥವಾ ಪೌರತ್ವ ಹಕ್ಕಿನ ಪರಿಷ್ಕರಣೆಯೋ ಎಂಬು ಅನುಮಾನವೂ ಸಾರ್ವಜನಿಕರನ್ನು ಕಾಡುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದಲ್ಲಿ “ಮತದಾರರ ಪಟ್ಟಿಯ ಮ್ಯಾಪಿಂಗ್” ಎಂಬ ಹೆಸರಿನಲ್ಲಿ ಎಸ್‌ಐಆರ್ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಮ್ಯಾಪಿಂಗ್
ಗುರುರಾಜ ದೇಸಾಯಿ
“ಇಷ್ಟು ವರ್ಷಗಳಿಂದ ಮತ ಹಾಕ್ತಾ ಬಂದಿದ್ದೇವೆ. ಈ ಸಲ ಏಕೆ ನಮ್ಮ ಹೆಸರಿನ ಬಗ್ಗೆ ಸಂಶಯ?” ಬೆಂಗಳೂರು ಹೊರವಲಯದ ಕಾರ್ಮಿಕ ರಾಮು ಅವರ ಪ್ರಶ್ನೆ ಇದು. ಒಬ್ಬ ಸಾಮಾನ್ಯ ಮತದಾರನ ಆತಂಕದ ಈ ಮಾತು, ಇಂದು ಸಾವಿರಾರು ಜನರ ಧ್ವನಿಯಾಗುತ್ತಿದೆ.
ಈ ಪ್ರಶ್ನೆ ರಾಮು ಅವರದ್ದಷ್ಟೇ ಅಲ್ಲ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತದಾರರ ಪಟ್ಟಿಯ ‘ಮ್ಯಾಪಿಂಗ್’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆ, ಜನಸಾಮಾನ್ಯರ ಮನಸ್ಸಿನಲ್ಲಿ ಅನುಮಾನ ಮತ್ತು ಭಯವನ್ನು ಬಿತ್ತುತ್ತಿದೆ. ವರ್ಷಗಳಿಂದ ಮತದಾನ ಮಾಡುತ್ತಾ ಬಂದವರ ಹೆಸರೇ ಈಗ ಪರಿಶೀಲನೆಯ ಅಡಿಗೆ ಬರುತ್ತಿರುವುದು ಜನರನ್ನು ಅಸಮಾಧಾನಕ್ಕೆ ತಳ್ಳಿದೆ.
ಕಚೇರಿ ಭಾಷೆಯಲ್ಲಿ ಇದನ್ನು ತಾಂತ್ರಿಕ ಪರಿಷ್ಕರಣೆ ಎಂದು ಕರೆಯಲಾಗುತ್ತಿದೆ. ಆದರೆ ನೆಲಮಟ್ಟದಲ್ಲಿ ಈ ಪ್ರಕ್ರಿಯೆ, ಮತದಾನದ ಹಕ್ಕಿನ ಮೇಲೆಯೇ ಕೊಡಲಿಪೆಟ್ಟು ಬೀಳುತ್ತಿರುವ ಅನುಭವವನ್ನು ನೀಡುತ್ತಿದೆ. ‘ಹೆಸರು ಉಳಿಯುತ್ತದೆಯೋ ಇಲ್ಲವೋ’ ಎಂಬ ಆತಂಕ, ಇಂದು ಜನತಾಂತ್ರಿಕ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಪ್ರಶ್ನಿಸುವ ಮಟ್ಟಕ್ಕೆ ತಲುಪಿದೆ.
ಒತ್ತಡದಲ್ಲಿ ಬಿಎಲ್‌ಒಗಳು
ಮತದಾರರ ಪಟ್ಟಿಯ “ಮ್ಯಾಪಿಂಗ್” ಅನ್ನೋದು ಕಾಗದಗಳಲ್ಲಿ ತಾಂತ್ರಿಕ ಪ್ರಕ್ರಿಯೆ. ಆದರೆ ನೆಲಮಟ್ಟದಲ್ಲಿ ಅದು ಮಾನವೀಯ ಒತ್ತಡ, ಗೊಂದಲ ಮತ್ತು ಭಯವಾಗಿ ಕಾಣಿಸುತ್ತಿದೆ. ಈ ಒತ್ತಡದ ಮೊದಲ ಸಾಲಿನಲ್ಲಿ ನಿಲ್ಲಿರುವವರು ಬೂತ್ ಲೆವೆಲ್ ಅಧಿಕಾರಿಗಳು. ಸ್ಪಷ್ಟ ಆದೇಶಗಳಿಲ್ಲದೆ, ಗಡುವುಗಳ ಒತ್ತಡದೊಂದಿಗೆ, ಜನರ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಸ್ಥಿತಿಯಲ್ಲಿ ಬಿಎಲೊಗಳು ಸಿಲುಕಿದ್ದಾರೆ. ಮೇಲಿನಿಂದ ಬಂದ ಸೂಚನೆ ಮತ್ತು ಕೆಳಗಿನಿಂದ ಬಂದ ಅಸಮಾಧಾನದ ನಡುವೆ, ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯ ನಿಜವಾದ ಭಾರ ಯಾರ ಹೆಗಲ ಮೇಲೆ ಬಿದ್ದಿದೆ ಎಂಬ ಮಾತುಗಳು ಗ್ರೌಂಡ್ ರೀಪೋರ್ಟ್ ಮಾಡುವ ವೇಳಿ ಕಂಡು ಬಂದಿದೆ.
ಬೆಂಗಳೂರು ಹೊರವಲಯದ ಒಂದು ಬೂತ್‌ನ ಬಿಎಲ್‌ಒ ಒಬ್ಬರು ಹೆಸರು ಹೇಳಬೇಡ ಎಂಬ ಷರತ್ತಿನ ಮೇಲೆ ಮಾತನಾಡುತ್ತಾರೆ. “ಮೇಲಿಂದ ‘ಮ್ಯಾಪಿಂಗ್ ಮಾಡಿ’ ಅಂತ ಹೇಳ್ತಾರೆ. ಆದರೆ ಹೇಗೆ, ಯಾವ ನಿಯಮದಲ್ಲಿ, ಯಾರ ಹೆಸರು ಉಳಿಸಬೇಕು–ತೆಗೆದುಹಾಕಬೇಕು ಅನ್ನೋದಕ್ಕೆ ಸ್ಪಷ್ಟ ಉತ್ತರ ಇಲ್ಲ. ದಿನಕ್ಕೆ ಇಷ್ಟು ಮನೆಗೆ ಹೋಗಬೇಕು ಅನ್ನೋ ಟಾರ್ಗೆಟ್ ಮಾತ್ರ ಇದೆ” ಎನ್ನುತ್ತಾರೆ. ಹಳೆಯ ಮತದಾರರ ಪಟ್ಟಿಯ ಪ್ರಿಂಟ್ ಔಟ್, ಹೊಸ ಡಿಜಿಟಲ್ ಡೇಟಾ, ಮತ್ತು ನೆಲಮಟ್ಟದ ವಾಸ್ತವ ಈ ಮೂರರ ನಡುವೆ ಹೊಂದಾಣಿಕೆ ಮಾಡೋದೇ ದೊಡ್ಡ ಸವಾಲಾಗಿದೆ. ತಪ್ಪಾದರೆ ತನಿಖೆ, ನೋಟಿಸ್, ಹೊಣೆಗಾರಿಕೆ ಎಲ್ಲವೂ ಬಿಎಲ್‌ಒಗಳ ಮೇಲೇ ಬೀಳುತ್ತದೆ ಅನ್ನೋ ಭಯ ಅವರ ಮಾತಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಗ್ರಾಮಗಳಿಂದ ನಗರಗಳವರೆಗೆ, ಬೂತ್ ಲೆವೆಲ್ ಅಧಿಕಾರಿಗಳು ಮನೆಮನೆಗೆ ತೆರಳಿ ಮಾಹಿತಿ ಪರಿಶೀಲಿಸುತ್ತಿದ್ದಾರೆ. “ನಾವು ಕೆಲಸ ಮಾಡ್ತಿದ್ದೇವೆ, ಆದರೆ ಯಾವ ನಿಯಮದಡಿ ಮಾಡ್ತಿದ್ದೇವೆ ಅನ್ನೋದೇ ನಮಗೆ ಸ್ಪಷ್ಟವಿಲ್ಲ,” ಎಂದು ಉತ್ತರ ಕರ್ನಾಟಕದ ಒಬ್ಬ ಬಿಎಲೊ ಬೇಸರ ವ್ಯಕ್ತಪಡಿಸುತ್ತಾರೆ. ಮೇಲಾಧಿಕಾರಿಗಳಿಂದ ದಿನಕ್ಕೊಂದು ಸೂಚನೆ ಬರುತ್ತಿದೆ, ಆದರೆ ಲಿಖಿತ ಮಾರ್ಗಸೂಚಿಗಳು ಸ್ಪಷ್ಟವಾಗಿಲ್ಲ ಎಂಬುದು ಅವರ ಅಸಮಾಧಾನ. ಹಳೆಯ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಾಣಿಕೆ ಮಾಡುವಾಗ, ವಿಳಾಸದ ಸಣ್ಣ ವ್ಯತ್ಯಾಸ, ಹೆಸರುಗಳ ಸ್ಪೆಲ್ಲಿಂಗ್, ತಂದೆ ಅಥವಾ ಪತಿಯ ಹೆಸರಿನ ವ್ಯತ್ಯಾಸಗಳು ಕಂಡು ಬರುತ್ತಿವೆ. “ಅದೇನು ಮಾಡುತ್ತಿರೋ ಗೊತ್ತಿಲ್ಲ, ಕೆಲಸಗಳು ಬೇಗ ಮುಗಿಯಬೇಕು, ಎಲ್ಲವನ್ನೂ ನೀವೆ ಸರಿಯಾಗಿ ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳು ಆದೇಶಿಸುತ್ತಾರೆ. “ತಪ್ಪಾದರೆ ಹೊಣೆ ನಮ್ಮ ಮೇಲೇ ಬರುತ್ತೆ ಅನ್ನೋ ಭಯ ಇದೆ,” ಮತದಾರ ಪಟ್ಟಿಯಲ್ಲಿ ವ್ಯತ್ಯಾಸ ಆದರೆ ಶಾಲೆಗೆ ಬಂದು ಜನ ಕೂಗಾಡಿದರೆ ಹೇಗೆ ಎಂಬ ಆತಂಕವೂ ನಮ್ಮನ್ನು ಕಾಡುತ್ತಿದೆ ಎಂಬ ಮಾತು ಬಿಎಲ್‌ಒಗಳ ಮನಸ್ಥಿತಿಯನ್ನು ಹೇಳುತ್ತದೆ.
ಮಹಿಳಾ ಬಿಎಲೊಗಳ ಅನುಭವ ಇನ್ನೂ ಕಠಿಣ. “ಒಂದೆಡೆ ಶಾಲೆಯ ಕೆಲಸ, ಮತ್ತೊಂದೆಡೆ ಈ ಮ್ಯಾಪಿಂಗ್. ಸಮಯಕ್ಕೂ ಒತ್ತಡ, ಮನಸ್ಸಿಗೂ ಒತ್ತಡ,” ಎಂದು ಒಬ್ಬರು ಹೇಳುತ್ತಾರೆ. ಮದುವೆಯಾದ ಮಹಿಳೆಯರ ಹೆಸರು ಬದಲಾಗಿರುವುದು, ವಲಸಿಗ ಕುಟುಂಬಗಳ ದಾಖಲೆ ಕೊರತೆ ಇವೆಲ್ಲವೂ ಬಿಎಲ್‌ಒಗಳ ಮುಂದೆ ದಿನನಿತ್ಯದ ಸಂಘರ್ಷಗಳಾಗಿವೆ. “ನಾವು ನಿರ್ಧಾರ ತೆಗೆದುಕೊಳ್ಳೋ ಅಧಿಕಾರಿಗಳಲ್ಲ. ಆದರೂ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ನಾವು” ಎನ್ನುವ ಮಾತು ಹಲವು ಬಿಎಲ್‌ಒಗಳಿಂದ ಒಂದೇ ರೀತಿಯಾಗಿ ಕೇಳಿಬರುತ್ತಿದೆ.
ಇದನ್ನೂ ಓದಿ : “ಆಧುನಿಕ” ಸರಕುಗಳನ್ನು ಬಳಸುತ್ತಾರೆಂದರೆ ಬಡತನ ಇಲ್ಲವೆಂದು ಅರ್ಥವಲ್ಲ
ವಲಸೆ ಎಂಬ ವಾಸ್ತವ, ಮ್ಯಾಪಿಂಗ್ ಎಂಬ ಸಂಕಷ್ಟ
ನಗರ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ವಸಲೆಗಾರ ಕಾರ್ಮಿಕರನ್ನು ಇನ್ನಷ್ಟು ಗೊಂದಲಕ್ಕೆ ತಳ್ಳುತ್ತಿದೆ. ಕಟ್ಟಡ ಕಾರ್ಮಿಕರು, ಗೃಹ ಕೆಲಸಗಾರರು, ಬೀದಿ ವ್ಯಾಪಾರಿಗಳ ಮೇಲೆ ನೇರ ಪರಿಣಾಮ ಬೀಳುತ್ತಿದೆ. ಇವರ ಬದುಕು ಸ್ಥಳಾಂತರದ ಮೇಲೆಯೇ ನಿಂತಿದೆ. ಯಶವಂತಪುರದ ಬಳಿ ಮಹಿಳಾ ಬೀದಿಬದಿ ವ್ಯಾಪಾರಿಯೊಬ್ಬರನ್ನು ಮಾತನಾಡಿಸಿದಾಗ “ನಾವು ಎರಡು ಮೂರು ವರ್ಷಕ್ಕೊಮ್ಮೆ ಮನೆ ಬದಲಾಯಿಸ್ತೀವಿ. ಹಳೆಯ ವಿಳಾಸ ಕೇಳಿದ್ರೆ ಏನು ತೋರಿಸೋದು?” ಎಂದು ಪ್ರಶ್ನಿಸುತ್ತಾರೆ. ಹಳೆಯ ಪಟ್ಟಿಯಲ್ಲಿನ ವಿಳಾಸ ಮತ್ತು ಇಂದಿನ ಬದುಕಿನ ನಡುವಿನ ಅಂತರವೇ ಇವರಿಗೆ ದೊಡ್ಡ ಸಮಸ್ಯೆಯಾಗಿದೆ. ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳದ ಮ್ಯಾಪಿಂಗ್ ಪ್ರಕ್ರಿಯೆ, ವಸಲೆಗಾರರನ್ನು ‘ಅನುಮಾನಾಸ್ಪದ’ ವರ್ಗಕ್ಕೆ ತಳ್ಳುವ ಅಪಾಯ ಹೊಂದಿದೆ.
ನಗರಗಳಲ್ಲಿ ಕೆಲಸಕ್ಕೆ ವಲಸೆ ಬಂದ ಯುವಕರು ಮತ್ತು ಯುವತಿಯರ ಪ್ರಕರಣದಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆ ಅತ್ಯಂತ ಅಸಂವೇದನಾಶೀಲವಾಗಿ ವರ್ತಿಸುತ್ತಿದೆ. ಸಾವಿರಾರು ಕುಟುಂಬಗಳಲ್ಲಿ ಮಕ್ಕಳು ನಗರಗಳಲ್ಲಿ ನೆಲೆಸಿದ್ದಾರೆ, ಆದರೆ ತಂದೆ-ತಾಯಿಗಳು ಇನ್ನೂ ಹಳ್ಳಿಗಳಲ್ಲೇ ವಾಸಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಕುಟುಂಬದ ಹೆಸರುಗಳು ಒಂದೇ ವಿಳಾಸಕ್ಕೆ ಜೋಡನೆಯಾಗಿರುವ ಹಳೆಯ ವ್ಯವಸ್ಥೆ, ಇಂದಿನ ಎಸ್‌ಐಆರ್ ಕ್ರಿಯೆಗೆ ಹೊಂದಾಣಿಕೆಯಾಗತ್ತಿಲ್ಲ. ಇದರ ಪರಿಣಾಮವಾಗಿ “ಮನೆಯಲ್ಲಿಲ್ಲ” ಅಥವಾ “ಸ್ಥಳಾಂತರಗೊಂಡಿದ್ದಾರೆ” ಎಂಬ ಗುರುತು ಬೀಳುವ ಅಪಾಯ ಎದುರಾಗುತ್ತಿದೆ.
ಈ ಸಂದರ್ಭದಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗುವುದು ದಾಖಲೆಗಳ ವಿಚಾರದಲ್ಲಿ. ಮಕ್ಕಳ ಮತದಾರರ ಗುರುತು ನಗರ ವಿಳಾಸಕ್ಕೆ ಬಂದಿದ್ದರೆ, ಪೋಷಕರ ಹೆಸರುಗಳು ಹಳ್ಳಿಯ ಪಟ್ಟಿಯಲ್ಲಿ ಉಳಿದಿರುತ್ತವೆ. ಮ್ಯಾಪಿಂಗ್ ವೇಳೆ ಈ ವಿಭಜನೆಗೆ ಸ್ಪಷ್ಟ ಮಾರ್ಗಸೂಚಿ ಇಲ್ಲದ ಕಾರಣ, ಬಿಎಲೊಗಳು ಸ್ವಂತ ವಿವೇಕದ ಮೇಲೆ ನಿರ್ಧಾರ ತೆಗೆದುಕೊಳ್ಳುವಂತಾಗಿದೆ. ಇದರ ಪರಿಣಾಮವಾಗಿ, ಕೆಲವೆಡೆ ಮಕ್ಕಳ ಹೆಸರುಗಳು “ಅನ್‌ಮ್ಯಾಪ್ಡ್” ಆಗುತ್ತಿವೆ, ಕೆಲವೆಡೆ ಪೋಷಕರ ಹೆಸರುಗಳ ಮೇಲೆಯೇ ಸಂಶಯ ವ್ಯಕ್ತವಾಗುತ್ತಿದೆ.
ಇದರಲ್ಲಿ ತಲೆದೋರುವ ಮತ್ತೊಂದು ಸಮಸ್ಯೆ ಎಂದರೆ, ಹಳ್ಳಿಗಳಲ್ಲಿ ಇರುವ ವೃದ್ಧ ಪೋಷಕರು ತಮ್ಮ ಮಕ್ಕಳ ನಗರ ವಿಳಾಸದ ಬಗ್ಗೆ ಸಮರ್ಪಕ ಮಾಹಿತಿ ನೀಡಲು ಅಸಮರ್ಥರಾಗಿರುವುದು. “ಮಗ ಬೆಂಗಳೂರಿನಲ್ಲಿ ಇದ್ದಾನೆ” ಎಂಬುದಕ್ಕಿಂತ ಹೆಚ್ಚು ವಿವರ ಕೇಳಿದಾಗ, ದಾಖಲೆ ತೋರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ, “ಮಗ ಇಲ್ಲಿಲ್ಲ” ಎಂಬ ಸರಳ ಟಿಪ್ಪಣಿ ಮತದಾರರ ಪಟ್ಟಿಯಲ್ಲಿ ಬೀಳುತ್ತದೆ. ಇದು ಆಡಳಿತಾತ್ಮಕವಾಗಿ ಸಣ್ಣ ಟಿಪ್ಪಣಿಯಂತೆ ಕಾಣಬಹುದು, ಆದರೆ ಅದು ವ್ಯಕ್ತಿಯ ಮತದಾನದ ಹಕ್ಕಿಗೆ ನೇರವಾಗಿ ಧಕ್ಕೆ ತರುವ ಸಾಧ್ಯತೆ ಹೊಂದಿದೆ.

ಹೆಸರಿನ ಹಿಂದೆ ಓಡಾಡುತ್ತಿರುವ ಮಹಿಳೆಯರು
ಮದುವೆಯಾದ ಮಹಿಳೆಯರ ವಿಷಯದಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆ ಅತ್ಯಂತ ಗೊಂದಲಕಾರಿ ಹಾಗೂ ಅಸಮಾನತೆಯಿಂದ ಕೂಡಿದೆ. ಮದುವೆಯಾದ ನಂತರ ಮಹಿಳೆ ತಂದೆಯ ಮನೆಯಿಂದ ಗಂಡನ ಮನೆಗೆ ಸ್ಥಳಾಂತರಗೊಳ್ಳುವುದು ನಮ್ಮ ಸಮಾಜದ ಸಾಮಾನ್ಯ ವಾಸ್ತವ. ಆದರೆ ಮತದಾರರ ಪಟ್ಟಿಯ ವ್ಯವಸ್ಥೆ ಈ ವಾಸ್ತವವನ್ನು ಇನ್ನೂ ಸಂಪೂರ್ಣವಾಗಿ ಅಳವಡಿಸಿಕೊಂಡಿಲ್ಲ. ಹೀಗಾಗಿ ಅನೇಕ ಮಹಿಳೆಯರು “ಎಲ್ಲಿ ಸೇರಬೇಕು?” ಎಂಬ ಪ್ರಶ್ನೆಯಲ್ಲೇ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ.
ಹಳ್ಳಿಯಿಂದ ಹಳ್ಳಿಗೆ ಮದುವೆಯಾದ ಮಹಿಳೆಯರ ಪ್ರಕರಣದಲ್ಲಿ ಸಮಸ್ಯೆ ಇನ್ನೂ ತೀವ್ರವಾಗುತ್ತದೆ. ತಂದೆಯ ಹೆಸರು ಹಳ್ಳಿಯ ಪಟ್ಟಿಯಲ್ಲಿ ಉಳಿದಿದ್ದರೆ, ಮ್ಯಾಪಿಂಗ್ ವೇಳೆ “ಇಲ್ಲಿ ವಾಸವಿಲ್ಲ” ಎಂಬ ಟಿಪ್ಪಣಿ ಬೀಳುತ್ತದೆ. ಗಂಡನ ಹಳ್ಳಿಯಲ್ಲಿ ಹೆಸರು ಸೇರಿಸಿಕೊಳ್ಳಲು ದಾಖಲೆ ಕೇಳಲಾಗುತ್ತದೆ. ಆದರೆ ಮದುವೆ ಪ್ರಮಾಣಪತ್ರ, ವಿಳಾಸ ಪುರಾವೆ, ಹೆಸರು ಬದಲಾವಣೆ ಇತ್ಯಾದಿ ದಾಖಲೆಗಳು ಎಲ್ಲರಲ್ಲೂ ತಕ್ಷಣ ಲಭ್ಯವಿರುವುದಿಲ್ಲ. ಪರಿಣಾಮವಾಗಿ ಆ ಮಹಿಳೆ ಎರಡು ಪಟ್ಟಿಗಳಿಂದ ತಿರಸ್ಕೃತಗೊಳ್ಳುವ ಅಪಾಯಗಳು ಹೆಚ್ಚಾಗಿ ಕಾಣುತ್ತಿವೆ.
ನಗರಕ್ಕೆ ಮದುವೆಯಾಗಿ ಬಂದ ಮಹಿಳೆಯರಿಗೆ ಮತ್ತೊಂದು ಬಗೆಯ ಸಮಸ್ಯೆ ಎದುರಾಗುತ್ತದೆ. ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಮಹಿಳೆಯರಿಂದ ಶಾಶ್ವತ ವಿಳಾಸದ ದಾಖಲೆ ಕೇಳಲಾಗುತ್ತದೆ. ಆದರೆ ಬಾಡಿಗೆ ಮನೆ ಬದಲಾಗುವುದು, ಗಂಡನ ಕೆಲಸದ ಸ್ಥಳ ಬದಲಾಗುವುದು, ವಿದ್ಯುತ್ ಅಥವಾ ನೀರಿನ ಬಿಲ್‌ಗಳು ಗಂಡನ ಹೆಸರಲ್ಲಿರುವುದು, ಈ ಎಲ್ಲ ಕಾರಣಗಳಿಂದ ಮಹಿಳೆಯ ಸ್ವಂತ ವಿಳಾಸ ಪುರಾವೆ ಪ್ರಶ್ನೆಗೆ ಒಳಗಾಗುತ್ತದೆ. ಇದರ ಪರಿಣಾಮವಾಗಿ, “ತಾತ್ಕಾಲಿಕ ವಾಸ” ಎಂಬ ಗುರುತು ಬಿದ್ದು, ಮತದಾರರ ಗುರುತು ಅನಿಶ್ಚಿತವಾಗುತ್ತದೆ.
ಮಹಿಳೆಯರು ತಮ್ಮ ಹೆಸರನ್ನು ಮದುವೆಯ ನಂತರ ಬದಲಾಯಿಸಿಕೊಂಡಿರುವ ಸಂದರ್ಭಗಳಲ್ಲಿ ಮ್ಯಾಪಿಂಗ್ ಪ್ರಕ್ರಿಯೆ ಇನ್ನಷ್ಟು ಗೊಂದಲ ಸೃಷ್ಟಿಸುತ್ತದೆ. ಆಧಾರ್, ಪಾನ್, ಬ್ಯಾಂಕ್ ದಾಖಲೆಗಳಲ್ಲಿ ಹೆಸರು ಬದಲಾಗಿರಬಹುದು, ಆದರೆ ಮತದಾರರ ಪಟ್ಟಿಯಲ್ಲಿ ಹಳೆಯ ಹೆಸರು ಉಳಿದಿರಬಹುದು. ಈ ಸಣ್ಣ ಅಕ್ಷರದ ವ್ಯತ್ಯಾಸವೇ ಮ್ಯಾಪಿಂಗ್ ವೇಳೆ ದೊಡ್ಡ ಸಂಶಯಕ್ಕೆ ಕಾರಣವಾಗುತ್ತದೆ. ದಾಖಲೆಗಳ ನಡುವಿನ ಹೊಂದಾಣಿಕೆ ಇಲ್ಲ ಎಂಬ ಕಾರಣಕ್ಕೆ, ಮಹಿಳೆಯ ಮತದಾನದ ಹಕ್ಕು ಪ್ರಶ್ನಿಸಲ್ಪಡುತ್ತದೆ.
ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ, ಮದುವೆಯಾದ ಮಹಿಳೆಯರ ವಿಚಾರದಲ್ಲಿ ಅಧಿಕಾರಿಗಳು ಮತ್ತು ಬಿಎಲ್‌ಒಗಳು ಅನುಮಾನದಿಂದಲೇ ನೋಡುವ ಪ್ರವೃತ್ತಿ. “ಎಷ್ಟು ದಿನಗಳಿಂದ ಇಲ್ಲಿ ಇದ್ದೀರಾ?”, “ಶಾಶ್ವತವಾಗಿ ಇಲ್ಲೇ ಇರುತ್ತೀರಾ?” ಎಂಬ ಪ್ರಶ್ನೆಗಳು ಮಹಿಳೆಯರ ಆತಂಕವನ್ನು ಹೆಚ್ಚಿಸಿವೆ. ಪುರುಷರಿಗೆ ಈ ರೀತಿಯ ಪ್ರಶ್ನೆಗಳು ಇಲ್ಲ, ಆದರೆ ಮಹಿಳೆಯರಿಗೆ ಮಾತ್ರ ಇದೆ. ಇದು ಲಿಂಗಾಧಾರಿತ ಅಸಮಾನತೆಯ ಸ್ಪಷ್ಟ ಸೂಚಕವಾಗಿದೆ.
ಅಂಚಿನವರ ಮೇಲೆ ಹೆಚ್ಚುವರಿ ಪರೀಕ್ಷೆ
ಅಲ್ಪಸಂಖ್ಯಾತ ಪ್ರದೇಶಗಳಲ್ಲೀಗ ಮತದಾರರ ಪಟ್ಟಿಯ “ಮ್ಯಾಪಿಂಗ್” ಒಂದು ಆಡಳಿತಾತ್ಮಕ ಪ್ರಕ್ರಿಯೆಯಂತೆ ಕಾಣದೆ ಭಯದ ವಿಚಾರವಾಗಿ ಕಾಣುತ್ತಿದೆ. ಬೆಂಗಳೂರು ನಗರದಲ್ಲಿನ ಒಂದು ಮುಸ್ಲಿಂ ಬಡಾವಣೆಯಲ್ಲಿ ಮಾತನಾಡಿಸಿದಾಗ, ಹಲವರು ಒಂದೇ ಪ್ರಶ್ನೆ ಕೇಳುತ್ತಾರೆ: “ನಮ್ಮ ಹೆಸರು ಕಟ್ ಆಗಿ ಬಿಡುತ್ತಾ” ಬಿಎಲ್‌ಒಗಳು ಮನೆಗೆ ಬಂದರೆ, ಅವರನ್ನು ನೋಡಿದರೆ ಎದೆಯ ಬಾರ ಹೆಚ್ಚಾಗುತ್ತದೆ. “ಅನ್‌ಮ್ಯಾಪ್ಡ್” ಅನ್ನೋ ಪದ ಕೇಳಿದಾಗ, ಅದು ತಾಂತ್ರಿಕ ಪದವಾಗಿರದೇ, ಅಪರಾಧದ ಗುರುತಿನಂತೆ ಅನುಭವವಾಗುತ್ತಿದೆ ಎಂದು ಯುವಕರು ಹೇಳುತ್ತಾರೆ. ಅಸ್ಸಾಂ, ಪಶ್ಚಿಮ ಬಂಗಾಳದ ಅನುಭವಗಳ ನೆನಪು ಇನ್ನೂ ಜನಮನದಲ್ಲಿ ಜೀವಂತವಾಗಿರುವುದರಿಂದ, ಮತದಾರರ ಪಟ್ಟಿಯ ಈ ಪರಿಶೀಲನೆ NRC ಮಾದರಿಯ ಹೊರಗುಳಿಸುವಿಕೆಯ ಮೊದಲ ಹೆಜ್ಜೆಯಾಗಬಹುದೆಂಬ ಆತಂಕ ನೆಲಮಟ್ಟದಲ್ಲಿ ವ್ಯಾಪಕವಾಗಿದೆ.
ದಲಿತ ಕಾಲನಿಗಳಲ್ಲಿ ಸಮಸ್ಯೆ ಇನ್ನೊಂದು ರೀತಿಯದು. ಮೈಸೂರು ಜಿಲ್ಲೆಯ ಒಂದು ದಲಿತ ಕಾಲೋನಿಯಲ್ಲಿ ಹಿರಿಯ ಮತದಾರರೊಬ್ಬರನ್ನು ಮಾತನಾಡಿಸಿದಾಗ “ನಾವು 20–30 ವರ್ಷದಿಂದ ಇಲ್ಲಿ ಇದ್ದೀವಿ, ಪ್ರತಿಯೊಂದು ಚುನಾವಣೆಯಲ್ಲೂ ವೋಟ್ ಹಾಕ್ತಾ ಬಂದಿದ್ದೀವಿ. ಈಗ ವಿಳಾಸ ಮ್ಯಾಚ್ ಆಗ್ತಿಲ್ಲ ಅಂತ ಹೆಸರು ಡಿಲಿಟ್ ಮಾಡಿ ಬಿಟ್ರೆ ಹೇಗೆ?”, ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹಳೆಯ ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಿದ ಮನೆಗಳು ಈಗ ಇಲ್ಲ, ಗ್ರಾಮಗಳ ಗಡಿಗಳು ಬದಲಾಗಿವೆ, ಪಂಚಾಯಿತಿ ಹೆಸರುಗಳೇ ಬದಲಾಗಿವೆ. ಆದರೆ ಮ್ಯಾಪಿಂಗ್ ವ್ಯವಸ್ಥೆ ಈ ಬದಲಾವಣೆಗಳನ್ನು ಗುರುತಿಸೋದಿಲ್ಲ. ಇದರ ಪರಿಣಾಮವಾಗಿ, ಸ್ಥಿರವಾಗಿ ಮತದಾನ ಮಾಡುತ್ತಿದ್ದ ದಲಿತ ಮತದಾರರೇ ‘ಸಂದೇಹಾಸ್ಪದ’ ಪಟ್ಟಿಗೆ ತಳ್ಳಲ್ಪಡುವ ಸ್ಥಿತಿ ನಿರ್ಮಾಣವಾಗಿದೆ.
ಆದಿವಾಸಿ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಪಶ್ಚಿಮಘಟ್ಟದ ಅರಣ್ಯ ಅಂಚಿನ ಮತದಾರರೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದಾಗ, “ನಮ್ಮ ಮನೆ ಕಾಡಿನೊಳಗೆ, ವಿಳಾಸ ಅಂತ ಏನು ಬರೆಯಬೇಕು ಗೊತ್ತಿಲ್ಲ” ಎಂಬ ಉತ್ತರ ಸಿಗುತ್ತದೆ. ಋತುಮಾನಾಧಾರಿತ ವಲಸೆ, ಅರಣ್ಯ ಹಕ್ಕು ಕಾಯ್ದೆಯಡಿ ಗುರುತಿಸಲ್ಪಟ್ಟ ವಾಸಸ್ಥಳಗಳು, ಮತ್ತು ದಾಖಲೆಗಳ ಕೊರತೆ, ಇವೆಲ್ಲವೂ ಎಸ್‌ಐಆರ್ ಪ್ರಕ್ರಿಯೆಯ ತಾಂತ್ರಿಕ ಚೌಕಟ್ಟಿಗೆ ಹೊಂದುವುದಿಲ್ಲ. ಅನೇಕ ಆದಿವಾಸಿ ಕುಟುಂಬಗಳಿಗೆ ಜನ್ಮ ಪ್ರಮಾಣಪತ್ರವೇ ಇಲ್ಲ. ಆದರೆ ಮತದಾರರ ಪಟ್ಟಿಯ ಮ್ಯಾಪಿಂಗ್ ದಾಖಲೆಗಳನ್ನೇ ಆಧಾರ ಮಾಡಿಕೊಂಡಿರುವುದರಿಂದ, ಈ ಸಮುದಾಯಗಳು ಸಮೂಹವಾಗಿ ಮತದಾನದ ಹಕ್ಕಿನಿಂದ ಹೊರಗುಳಿಯುವ ಅಪಾಯ ಎದುರಿಸುತ್ತಿವೆ.
ಈ ಮೂರು ಸಮುದಾಯಗಳಲ್ಲಿನ ಸಂಗತಿಯನ್ನು ಗಮನಿಸಿದರೆ, ಬಡವರು, ಅಲ್ಪಸಂಖ್ಯಾತರು, ಅಂಚಿನ ಸಮುದಾಯಗಳು ಎಂದಿಗೂ ‘ಮೊದಲು ಪರಿಶೀಲನೆಗೆ ಒಳಪಡುವವರು’ ಎಂಬ ದೃಷ್ಟಿಕೋನ ಆಡಳಿತ ವ್ಯವಸ್ಥೆಯಲ್ಲಿ ಗಟ್ಟಿಯಾಗಿ ನೆಲೆಸಿದೆ. ಮ್ಯಾಪಿಂಗ್ ಪ್ರಕ್ರಿಯೆ ಈ ಮನೋಭಾವವನ್ನು ಇನ್ನಷ್ಟು ಬಲಪಡಿಸುವಂತೆ ಕಾಣುತ್ತಿದೆ. ಮತದಾರರ ಪಟ್ಟಿಯ ಶುದ್ಧೀಕರಣ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಾದದ್ದು. ಆದರೆ ನೆಲಮಟ್ಟದಲ್ಲಿ ಅದು ಅಂಚಿನವರನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸುತ್ತಿದ್ದರೆ, ಅದು ಶುದ್ಧೀಕರಣವಲ್ಲ, ಅವರನ್ನು ಹೊರಗುಳಿಸುವಿಕೆಯ ಪ್ರಕ್ರಿಯೆ ಎಂಬ ಭಾವನೆ ಜನರಲ್ಲಿ ಗಟ್ಟಿಯಾಗುತ್ತಿದೆ.

ಕರ್ನಾಟಕ ಸರ್ಕಾರದ ಮುಂದಿರುವ ಆಯ್ಕೆ ಏನು?
ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಅಥವಾ ಎಸ್‌ಐಆರ್ ವಿಚಾರ ಬಂದಾಗ, ರಾಜ್ಯ ಸರ್ಕಾರಗಳು ಒಂದು ಸ್ಪಷ್ಟ ರಾಜಕೀಯ ನಿಲುವು ತೆಗೆದುಕೊಂಡಿವೆ. “ಮತದಾನದ ಹಕ್ಕು ಆಡಳಿತಾತ್ಮಕ ಪ್ರಯೋಗವಲ್ಲ” ಎಂಬ ಸಂದೇಶವನ್ನು ಅವುಗಳು ಆರಂಭದಲ್ಲೇ ನೀಡಿವೆ. ಚುನಾವಣಾ ಆಯೋಗದ ಪ್ರಕ್ರಿಯೆಗಳಿಗೆ ಸಹಕಾರ ನೀಡುವ ಜೊತೆಗೆ, ಅಂಚಿನ ಸಮುದಾಯಗಳು ಹೊರಗುಳಿಯದಂತೆ ರಕ್ಷಿಸುವ ಹೊಣೆ ರಾಜ್ಯದದ್ದೇ ಎಂದು ಈ ಸರ್ಕಾರಗಳು ಬಹಿರಂಗವಾಗಿ ಹೇಳಿವೆ. ನೆಲಮಟ್ಟದಲ್ಲಿ ಗೊಂದಲ ಉಂಟಾದಾಗ, ‘ಮೊದಲು ಘೋಷಣೆ, ನಂತರ ಕಾರ್ಯ’ ಎಂಬ ತತ್ವವನ್ನು ಅನುಸರಿಸಿ ಆಡಳಿತಾತ್ಮಕ ಹಸ್ತಕ್ಷೇಪ ಮಾಡಿವೆ.
ಕೇರಳ ಮತ್ತು ತಮಿಳುನಾಡಿನಲ್ಲಿ, ಬಿಎಲ್‌ಒಗಳಿಗೆ ಮತ್ತು ಮತದಾರರಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುವುದು ರಾಜ್ಯದ ಪ್ರಮುಖ ಜವಾಬ್ದಾರಿಯೆಂದು ಸರ್ಕಾರಗಳು ನೋಡಿವೆ. ಮನೆಮನೆ ಪರಿಶೀಲನೆ ಆರಂಭಿಸುವ ಮೊದಲು, ಸಮಯಪಟ್ಟಿ, ಆಕ್ಷೇಪಣೆ ಸಲ್ಲಿಸುವ ಅವಕಾಶ, ಮತ್ತು ದಾಖಲೆಗಳ ಸ್ವರೂಪವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ NRC ಮಾದರಿಯ ಭಯ ಉಂಟಾದಾಗ, ರಾಜ್ಯ ಸರ್ಕಾರವೇ ಮಧ್ಯಪ್ರವೇಶ ಮಾಡಿ, ಯಾವುದೇ ಮತದಾರರ ಹೆಸರು ದಾಖಲೆ ಕೊರತೆಯಿಂದಲೇ ಕಟ್ ಆಗುವುದಿಲ್ಲ ಎಂಬ ಭರವಸೆಯನ್ನು ನೀಡಿತು. ಈ ಸ್ಪಷ್ಟ ನಿಲುವಿನಿಂದ ನೆಲಮಟ್ಟದಲ್ಲಿ ಭಯ ಕಡಿಮೆಯಾಯಿತು, ಪ್ರಕ್ರಿಯೆಯ ಮೇಲಿನ ನಂಬಿಕೆ ಉಳಿಯಿತು.
ಕರ್ನಾಟಕದಲ್ಲಿ ಈ ರೀತಿಯ ದೃಢ ನಿರ್ಧಾರ ಇನ್ನೂ ಕಾಣಿಸುತ್ತಿಲ್ಲ. ಇಲ್ಲಿ ಪ್ರಕ್ರಿಯೆ ನಡೆಯುತ್ತಿದೆ, ಆದರೆ ರಾಜ್ಯ ಸರ್ಕಾರದ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದ ಅನುಭವಗಳು ಒಂದು ಪಾಠವನ್ನು ನೀಡಿವೆ. ಮತದಾರರ ಪಟ್ಟಿಯ ಪರಿಷ್ಕರಣೆ ಚುನಾವಣಾ ಆಯೋಗದ ವಿಷಯ ಮಾತ್ರವಲ್ಲ; ಅದು ಪ್ರಜಾಪ್ರಭುತ್ವದ ರಕ್ಷಣೆಯ ಪ್ರಶ್ನೆ. ಯಾವುದೇ ಮತದಾರನು ಕೇವಲ ದಾಖಲೆ ಅಥವಾ ಮ್ಯಾಪಿಂಗ್ ದೋಷದಿಂದ ಮತದಾನ ಹಕ್ಕು ಕಳೆದುಕೊಳ್ಳುವುದಿಲ್ಲ ಎಂದು ಕರ್ನಾಟಕ ಸರ್ಕಾರ ಈಗಲಾದರೂ ಸ್ಪಷ್ಟವಾಗಿ ಹೇಳಬೇಕು, ಈ ರೀತಿಯ ದೃಢ ನಿರ್ಧಾರ ಗೊಂದಲ, ಭಯ ಮತ್ತು ಅನುಮಾನಗಳನ್ನು ನಿವಾರಿಸುವ ಮೊದಲ ಹೆಜ್ಜೆಯಾಗುತ್ತದೆ. ಜೊತೆಗೆ ಜನರ ಪ್ರಶ್ನೆಗಳಿಗೆ ಉತ್ತರಿಸಿವುದು, ಸ್ಪಷ್ಟನೆ ನೀಡುವುದು ಸರ್ಕಾರದ ಜವಬ್ದಾರಿ.
ಇದನ್ನೂ ನೋಡಿ : ಉತ್ತರ ಪ್ರದೇಶ | ಮತದಾರರ “ಪರಿಷ್ಕರಣೆಯೋ? ಹರಣವೋ? | ಗುರುರಾಜ ದೇಸಾಯಿ| Janashakthi Media #upsir
